ಬೆಂಗಳೂರು: ಉಪ ಕುಲಪತಿ ಹುದ್ದೆ 5 ಕೋಟಿಗೆ ಮಾರಾಟ ಆಗುತ್ತಿದೆ ಎಂದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಉಪ ಕುಲಪತಿ ಹುದ್ದೆಗೆ ಲಂಚ ನೀಡಬೇಕು ಎಂದು ಹೇಳಿಕೆ ನೀಡಿರುವ ಬಿಜೆಪಿ ನಾಯಕರು ಅನುಭವ ಹೊಂದಿರುವ ವಿದ್ಯಾವಂತರು. ಹೀಗಿದ್ದರೂ ಇಡಿ, ಐಟಿ, ಸಿಬಿಐ, ಲೋಕಾಯುಕ್ತ ಸಂಸ್ಥೆಗಳು ಏನು ಮಾಡುತ್ತಿವೆ? ಎಂದು ಪ್ರಶ್ನೆ ಮಾಡಿದ ಅವರು, ಈ ವಿಷಯದ ಬಗ್ಗೆ ರಾಜ್ಯಪಾಲರು ಹಾಗೂ ಅವರ ಕಚೇರಿ ಮೇಲೆ ಆರೋಪ ಮಾಡಲು ಆಗುವುದಿಲ್ಲ. ಏಕೆಂದರೆ ಉಪ ಕುಲಪತಿಗಳ ಹೆಸರನ್ನು ಸರ್ಕಾರ ಶಿಫಾರಸ್ಸು ಮಾಡಿದರೆ ರಾಜ್ಯಪಾಲರು ನೇಮಕ ಮಾಡುತ್ತಾರೆ. ಹೀಗಾಗಿ ಈ ವಿಷಯದಲ್ಲಿ ರಾಜ್ಯಪಾಲರು ಹಾಗೂ ಅವರ ಕಚೇರಿ ಬಗ್ಗೆ ಆರೋಪಿಸುವುದು ಸರಿಯಲ್ಲ ಎಂದರು.
ಆದರೆ ಸರ್ಕಾರದಲ್ಲಿ ಯಾರಿಗೆ ಈ ಹಣ ತಲುಪಿದೆ? ಮಂತ್ರಿಗಳಿಗೆ ತಲುಪಿದೆಯೋ? ಅಧಿಕಾರಿಗಳಿಗೆ ತಲುಪಿದೆಯೋ? ಎಂಬುದು ಚರ್ಚೆ ಆಗಬೇಕು. ಹೀಗಾಗಿ ವಿಧಾನ ಪರಿಷತ್ನಲ್ಲಿ ಈ ವಿಚಾರವನ್ನ ಪ್ರಸ್ತಾಪ ಮಾಡಲಾಗಿದೆ. ಕೂಡಲೇ ಲೋಕಾಯುಕ್ತ, ಇಡಿ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. ನಮ್ಮ ಮೇಲೆ ದಾಳಿ ಮಾಡಿ ತನಿಖೆ ಮಾಡುವವರು ಇವರ ಹೇಳಿಕೆ ವಿಚಾರದಲ್ಲೂ ತನಿಖೆ ಮಾಡಬೇಕು. ಸಿಬಿಐನವರು ನನ್ನ ಜತೆ ವ್ಯವಹಾರ ಇಟ್ಟುಕೊಂಡವರಿಗೆಲ್ಲ ನೊಟೀಸ್ ನೀಡಿ ವಿಚಾರಣೆ ಮಾಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಚರ್ಚೆ ಆಗಬೇಕು ಎಂದು ಆಗ್ರಹಿಸಿದ್ದಾರೆ.