ಬೆಂಗಳೂರು: ನೋಂದಾಯಿತ ಕಟ್ಟಡ ಕಾರ್ಮಿಕರ ಆರೋಗ್ಯ ಕಾಪಾಡಲು ನಡೆಸುವ ಪ್ರಿವೆಂಟಿವ್ ಹೆಲ್ತ್ ಕೇರ್ ಯೋಜನೆಯಡಿ ಪರೀಕ್ಷೆಗಳನ್ನು ನಿಯಮಾನುಸಾರ ನಡೆಸಲಾಗುತ್ತದೆ. ಅಕ್ರಮ ನಡೆದಿರುವ ದೂರುಗಳಿದ್ದರೆ ತನಿಖೆ ನಡೆಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್(Minister Santosh Lad) ಭರವಸೆ ನೀಡಿದರು.

ವಿಧಾನಸಭೆಯ ಕಲಾಪದಲ್ಲಿ ಶಿರಹಟ್ಟಿ ಮತಕ್ಷೇತ್ರದ ಶಾಸಕರಾದ ಚಂದ್ರು ಎಸ್. ಲಮಾಣಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಪ್ರಿವೆಂಟಿವ್ ಹೆಲ್ತ್ ಕೇರ್ ಯೋಜನೆಯಡಿ ಗದಗ ಜಿಲ್ಲೆಗೆ ಹತ್ತು ಕೋಟಿ ಅನುದಾನ ನೀಡಲಾಗಿದೆ. ಕ್ಷೇತ್ರವಾರು ಐದು ಸಾವಿರ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಬೇಕು ಎಂಬ ಆದೇಶ ಇದೆ. ಪರೀಕ್ಷೆ ನಡೆಸದೆ ಸುಳ್ಳು ವರದಿ ನೀಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದೇನೆ ಎಂದು ಶಾಸಕ ಚಂದ್ರು ಎಸ್. ಲಮಾಣಿ ಹೇಳಿದರು.

ಇದಕ್ಕೆ ಉತ್ತರಿಸಿದ ಸಚಿವ ಸಂತೋಷ್ ಲಾಡ್ ಅವರು, ಪ್ರಿವೆಂಟಿವ್ ಹೆಲ್ತ್ ಕೇರ್ ಯೋಜನೆಯಡಿ ಎಷ್ಟು ಜನರಿಗೆ ಪರೀಕ್ಷೆ ನಡೆಸಲಾಗಿದೆ ಎಂಬ ಎಲ್ಲ ಸಮಗ್ರ ಮಾಹಿತಿ ಇದೆ. ಕಾರ್ಮಿಕ ಕಾರ್ಡ್ ಇಲ್ಲದಿದ್ದರೆ ಪರೀಕ್ಷೆಗೆ ಅವಕಾಶ ಇಲ್ಲ. ದೂರಿನ ಬಗ್ಗೆ ನಿರ್ದಿಷ್ಟವಾಗಿ ಕೇಳಿದರೆ ವಿವರ ನೀಡಲಾಗುವುದು. ಪರೀಕ್ಷೆಗೆ ಇಡೀ ರಾಜ್ಯದಲ್ಲಿ ಟೆಂಡರ್ ಆಗಿದೆ. ನಿಮ್ಮ ತಾಲೂಕಿನಲ್ಲಿ ಎಷ್ಟು ಪರೀಕ್ಷೆ ಮಾಡಲಾಗಿದೆ ಎಂಬ ಎಲ್ಲ ವಿವರವನ್ನು ಒದಗಿಸಲಾಗುವುದು ಎಂದು ಹೇಳಿದರು.

ಪ್ರಿವೆಂಟೀವ್ ಹೆಲ್ತ್ ಕೇರ್ ಅಡಿ ವರ್ಷಕ್ಕೆ ಎಷ್ಟು ಜನಕ್ಕೆ ತಪಾಸಣೆ ಮಾಡಬೇಕು ಎಂದು ಟೆಂಡರ್ ಕರೆಯುತ್ತೇವೆ. ಟೆಂಡರ್ ಮಾನದಂಡವನ್ನು ಯಾರು ಪೂರೈಸುತ್ತಾರೋ ಅವರಿಗೆ ಟೆಂಡರ್ ನೀಡುತ್ತೇವೆ. ಇಲ್ಲಿ ಎಲ್ಲವನ್ನೂ ನಿಯಮದ ಪ್ರಕಾರವೇ ಮಾಡಲಾಗುತ್ತದೆ ಎಂದು ವಿವರಿಸಿದರು. ಚಿಕಿತ್ಸೆಗಾಗಿ ಇಎಸ್‌ಐ ಆಸ್ಪತ್ರೆಗೆ ಮಾನ್ಯತೆ ನೀಡಲು ಮಾನದಂಡಗಳಿವೆ. ಖಾಸಗಿ ಆಸ್ಪತ್ರೆಗಳನ್ನು ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರದ ನಿಯಮ ಇದೆ. ಯಾವ ಆಸ್ಪತ್ರೆ ನಿಯಮಾನುಸಾರ ಇದೆಯೋ ಅದನ್ನು ಆಯ್ಕೆ ಮಾಡಲಾಗುವುದು ಎಂದು ಶಾಸಕರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.












