ಅಖಿಲ ಭಾರತೀಯ ಸಂತ ಪರಿಷತ್ತಿನ ಹಿಮಾಚಲ ಪ್ರದೇಶ ಉಸ್ತುವಾರಿ ಯತಿ ಸತ್ಯದೇವಾನಂದ ಸರಸ್ವತಿ ಭಾರತವು ಇಸ್ಲಾಮಿಕ್ ರಾಷ್ಟ್ರವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕೆಂದು ಕರೆಕೊಟ್ಟಿದ್ದಾರೆ. ಭಾರತದಲ್ಲಿ ಮುಸ್ಲೀಮರ ಸಂಖ್ಯೆ ಹೆಚ್ಚಾಗುತ್ತಿದೆ, ಹಿಂದೂಗಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂಬ ಅರ್ಥದಲ್ಲಿ ಇಂತಹ ಹೇಳಿಕೆ ನೀಡಿದ್ದಾರೆ. ಇದಲ್ಲದೆ ‘ಮುಸ್ಲಿಮರು ಯೋಜಿತ ರೀತಿಯಲ್ಲಿ ಅನೇಕ ಮಕ್ಕಳಿಗೆ ಜನ್ಮ ನೀಡುವ ಮೂಲಕ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ’ ಎಂದು ಕೂಡ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಿಜಕ್ಕೂ ಭಾರತದಲ್ಲಿ ಮುಸ್ಲೀಮರ ಜಮಸಂಖ್ಯೆ ಹೆಚ್ಚಾಗುತ್ತಿದೆಯೇ? ಹಿಂದೂಗಳ ಜನಸಂಖ್ಯೆ ಕಡಿಮೆ ಆಗುತ್ತಿದೆಯೇ? ಎಂಬುದನ್ನು ಪರಿಶೀಲಿಸಿ ನೋಡಬೇಕು.
ಯತಿ ಸತ್ಯದೇವಾನಂದ ಸರಸ್ವತಿ ಹೇಳಿಕೆಗೆ ಯಾವುದೇ ಗಣಿತದ ಮಾದರಿಯ ಅಥವಾ ಜನಸಂಖ್ಯಾ ಶಾಸ್ತ್ರದ ಆಧಾರವಿಲ್ಲ. ಹೇಗೆಂದರೆ… 2011ರ ಜನಗಣತಿಯ ಪ್ರಕಾರ ದೇಶದಲ್ಲಿ ಹಿಂದೂಗಳು ಶೇಕಡಾ 79.80ರಷ್ಟಿದ್ದಾರೆ. ಅಂದರೆ 96.62 ಕೋಟಿ. ಮುಸ್ಲಿಮರು ಶೇಕಡಾ 14.23ರಷ್ಟಿದ್ದಾರೆ. ಅಂದರೆ 17.22 ಕೋಟಿ. ಕ್ರಿಶ್ಚಿಯನ್ನರು ಶೇಕಡಾ 2.30ರಷ್ಟಿದ್ದಾರೆ. ಅಂದರೆ 2.78 ಕೋಟಿ. ಮತ್ತು ಸಿಖ್ಖರು ಶೇಕಡಾ 1.72ರಷ್ಟಿದ್ದಾರೆ. ಅಂದರೆ 2.08 ಕೋಟಿ.
ಈ ಬಗ್ಗೆ ಪಿಟಿಐ ಜೊತೆ ಮಾತನಾಡಿರುವ ಕುಟುಂಬ ಕಲ್ಯಾಣ ಕಾರ್ಯಕ್ರಮ ಪರಿಶೀಲಿಸುವ ರಾಷ್ಟ್ರೀಯ ಸಮಿತಿಯ ಮಾಜಿ ಅಧ್ಯಕ್ಷ ದೇವೇಂದ್ರ ಕೊಠಾರಿ ಅವರು ‘ಮುಂದಿನ ಜನಗಣತಿಯಲ್ಲಿ ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯ ದರವು ಕಡಿಮೆಯಾಗಲಿದೆ’ ಎಂದು ಹೇಳಿದ್ದಾರೆ. “ಹಿಂದೂ ಜನಸಂಖ್ಯೆಯು 2021ರ ಜನಗಣತಿಯಲ್ಲಿ ಶೇಕಡಾ 80.3ಕ್ಕೆ ಹೆಚ್ಚಾಗಲಿದೆ. ಮುಸ್ಲಿಂ ಜನಸಂಖ್ಯೆಯ ಪಾಲು ಹೆಚ್ಚೆಂದರೆ ಸ್ಥಿರಗೊಳ್ಳಲಿದೆ” ಎಂದು ವಿವರಿಸಿದ್ದಾರೆ.
“ದಿ ಪಾಪ್ಯುಲೇಶನ್ ಮಿಥ್: ಇಸ್ಲಾಂ, ಫ್ಯಾಮಿಲಿ ಪ್ಲಾನಿಂಗ್ ಅಂಡ್ ಪಾಲಿಟಿಕ್ಸ್ ಇನ್ ಇಂಡಿಯಾ” ಎಂಬ ತಮ್ಮ ಪುಸ್ತಕದಲ್ಲಿ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿ ಅವರು ಹೇಳುವಂತೆ ಮುಸ್ಲಿಮರ ಜನಸಂಖ್ಯೆಯು ಭಾರತದಲ್ಲಿ ಹಿಂದೂಗಳ ಜನಸಂಖ್ಯೆಯನ್ನು ‘ಎಂದಿಗೂ’ ಮೀರಿಸಲು ಸಾಧ್ಯವಿಲ್ಲ. ಖುರೈಶಿ ಅವರು ತಮ್ಮ ಊಹೆಯನ್ನು ಬೆಂಬಲಿಸಲು ದೆಹಲಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ದಿನೇಶ್ ಸಿಂಗ್ ಮತ್ತು ಪ್ರೊ ಅಜಯ್ ಕುಮಾರ್ ಅವರ ಗಣಿತದ ಮಾದರಿಗಳನ್ನು ಉಲ್ಲೇಖಿಸಿದ್ದಾರೆ. ಸದ್ಯ ಪಿಟಿಐ ಜೊತೆ ಮಾತನಾಡಿರುವ ಖುರೈಶಿ ಅವರು ‘ಬಹಳ ಹಿಂದಿನಿಂದಲೂ ಮುಸ್ಲಿಮರು ಹಿಂದೂಗಳನ್ನು ಹಿಂದಿಕ್ಕುತ್ತಾರೆ ಎಂಬ ಅಪಪ್ರಚಾರ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ.
ಇತಿಹಾಸದ ಕಡೆ ನೋಡಿದರೆ 1951ರ ಜನಗಣತಿ ಪ್ರಕಾರ ದೇಶದಲ್ಲಿ ಇದ್ದದ್ದು 30.36 ಕೋಟಿ ಹಿಂದೂಗಳು. 2021ರಲ್ಲಿ ಹಿಂದುಗಳು 115.9 ಕೋಟಿಗೆ ಹೆಚ್ಚಾಗುವ ನಿರೀಕ್ಷೆಯಿದೆ. 1951ರಲ್ಲಿ 3.58 ಕೋಟಿ ಇದ್ದ ಮುಸ್ಲಿಮರು 2021ರ ಜನಗಣತಿ ಹೊತ್ತಿಗೆ 21.3 ಕೋಟಿಗೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. 2021ರ ಜನಗಣತಿ ಕೋವಿಡ್ ಕಾರಣದಿಂದಾಗಿ ವಿಳಂಬವಾಗಿದೆ. ಆದುದರಿಂದ ಖುರೈಶಿಯವರ ಅಭಿಪ್ರಾಯದ ಹೊರತಾಗಿಯೂ ಗಣಿತದ ಪ್ರಕಾರ ಎರಡು ಸಮುದಾಯಗಳ ಜನಸಂಖ್ಯೆಯ ಗ್ರಾಫ್ಗಳು ಎಂದಿಗೂ ಸಂದಿಸಲು ಸಾಧ್ಯವಿಲ್ಲ. ಮುಸ್ಲಿಂ ಜನಸಂಖ್ಯೆಯು ಎಂದಿಗೂ ಹಿಂದೂ ಜನಸಂಖ್ಯೆಯನ್ನು ಮೀರಿಸಲು ಸಾಧ್ಯವಿಲ್ಲ’
ಎಂಬುದು ನಿಚ್ಚಳವಾಗಿದೆ.
‘ಮುಸ್ಲಿಮರು ಹಿಂದೂಗಳಿಗಿಂತಲೂ ಹೆಚ್ಚಾಗಿಬಿಡುತ್ತಾರೆ ಎಂಬ ಆಲೋಚನೆಗಳನ್ನು ಪ್ರಚಾರ ಮಾಡುವುದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ’ ಎಂದು ಖುರೈಶಿ ಅವರು ತಮ್ಮ ಪುಸ್ತಕದ ಮುನ್ನುಡಿಯಲ್ಲಿ ಬರೆಯುತ್ತಾರೆ. ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಜನಸಂಖ್ಯಾ ಶಾಸ್ತ್ರ ವಿಭಾಗದ ಮಾಜಿ ಪ್ರಾಧ್ಯಾಪಕ ಪಿ.ಎಂ. ಕುಲಕರ್ಣಿ ಅವರು ಮಾತನಾಡಿ, ಈ ಶತಮಾನದ ಅಂತ್ಯದ ವೇಳೆಗೆ ದೇಶದಲ್ಲಿ ಮುಸ್ಲಿಂ ಜನಸಂಖ್ಯೆಯು ಶೇಕಡಾ 18-20 ರಷ್ಟಿರಬಹುದು ಎಂದು ಸಾಚಾರ್ ಸಮಿತಿಯ ವರದಿ ಹೇಳಿದೆ’ ಎಂದು ತಿಳಿಸಿದ್ದಾರೆ. ಈ ಸಂಗತಿಗಳನ್ನು ಕೂಡ ಈ ಹೊತ್ತಿನಲ್ಲಿ ಸ್ಮರಿಸಬೇಕಾಗಿದೆ.
ಭಾರತದಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ರಚಿಸಲಾದ ಸಾಚಾರ್ ಸಮಿತಿಯು 2006ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಮುಸ್ಲಿಮರಲ್ಲಿ ಹೆಚ್ಚಿನ ಫಲವತ್ತತೆಯ ಪ್ರಮಾಣ ಮತ್ತು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಸ್ವಲ್ಪ ಹೆಚ್ಚಿದ್ದರೂ ಸಹ, ಶತಮಾನದ ಅಂತ್ಯದ ವೇಳೆಗೆ ಇದು 20 ಪ್ರತಿಶತವನ್ನು ತಲುಪುವುದಿಲ್ಲ ಎಂದು ಹೇಳಿರುವುದಾಗಿ ಪಿಟಿಐ ಜೊತೆ ಮಾತನಾಡಿರುವ ಪಿ.ಎಂ. ಕುಲಕರ್ಣಿ ತಿಳಿಸಿದ್ದಾರೆ.
1,000 ವರ್ಷಗಳಲ್ಲಿ ಏನಾಗುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಆದರೆ ಭಾರತದಲ್ಲಿ ನೂರು ವರ್ಷದಲ್ಲಿ ಮುಸ್ಲಿಮರು ಹಿಂದೂಗಳನ್ನು ಮೀರಿ ಬೆಳೆಯುತ್ತಾರೆ ಎಂದು ನಿಚ್ಚಳವಾಗಿ ಹೇಳಬಹುದು ಎಂದಿದ್ದಾರೆ. ಮೇಲಾಗಿ ಹಿಂದುಗಳೂ ಸೇರಿದಂತೆ ಎಲ್ಲಾ ಸಮುದಾಯಗಳ ಮಹಿಳೆಯರಲ್ಲಿ ಮಕ್ಕಳಿಗೆ ಜನನ ನೀಡುವ ಸಾಮರ್ಥ್ಯವೂ ಕಡಿಮೆಯಾಗಿದೆ. ಹಾಗಾಗಿ ಅಖಿಲ ಭಾರತೀಯ ಸಂತ ಪರಿಷತ್ನ ಹಿಮಾಚಲ ಪ್ರದೇಶದ ಮುಖ್ಯಸ್ಥ ಯತಿ ಸತ್ಯದೇವಾನಂದ ಸರಸ್ವತಿ ಅವರ ಹೇಳಿಕೆ ಪೂರ್ಣ ಪ್ರಮಾಣದಲ್ಲಿ ಸುಳ್ಳಾಗಿದೆ.