ಮಂಡ್ಯ: ಶಾಸಕರ ಖರೀದಿ ಬಗ್ಗೆ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಭಾರೀ ಸಂಚಲನ ಮೂಡಿಸಿತ್ತು. 50 ಶಾಸಕರಿಗೆ ತಲಾ 50 ಕೋಟಿ ಹಣ ಕೊಡುವುದಕ್ಕೆ ಬಿಜೆಪಿ ಮುಂದಾಗಿತ್ತು ಎಂದಿದ್ದರು. ಇದೀಗ ಮಂಡ್ಯದಲ್ಲಿ ಶಾಸಕ ರವಿ ಗಾಣಿಗ ಮಾತನಾಡಿ 50 ಕೋಟಿ ಅಲ್ಲ 100 ಕೋಟಿ ಆಫರ್ ಮಾಡಿದ್ರು ಅನ್ನೋ ಅಂಶವನ್ನು ಬಿಚ್ಚಿಟ್ಟಿದ್ದಾರೆ. ಅದಕ್ಕೂ ಮಿಗಿಲಾಗಿ ಶಾಸಕರ ಭೇಟಿ ಮಾಡಿದ ವೇಳೆಯ ಆಡಿಯೋ, ವಿಡಿಯೋ ಕೂಡ ರೆಕಾರ್ಡ್ ಇದೆ. ಸಮಯ ಸಂಧರ್ಭ ನೋಡಿ ಬಿಜೆಪಿಗೆ ಸಂಬಂಧಿಸಿದ ವಿಡಿಯೋ, ಆಡಿಯೋ ಬಿಡ್ತೀವಿ ಅಂತಾನೂ ತಿಳಿಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಮಂಡ್ಯ ಕಾಂಗ್ರೆಸ್ ಶಾಸಕ ಗಾಣಿಗ ರವಿಕುಮಾರ್ ಸ್ಫೋಟಕ ಮಾಹಿತಿ ನೀಡಿದ್ದು, 50 ಶಾಸಕರ ಖರೀದಿಗೆ 50 ಕೋಟಿ ಆಫರ್ ವಿಚಾರವಾಗಿ ಮುಖ್ಯಮಂತ್ರಿಗಳು ಹೇಳಿರುವುದರಲ್ಲಿ ಸತ್ಯ ಇದೆ. ನಮ್ಮ MLA ಗಳನ್ನ ವಿರೋಧ ಪಕ್ಷದವರು ಎಲ್ಲಿ ಭೇಟಿ ಮಾಡಿದ್ರು? ಎಲ್ಲಿ ಸ್ಪೀಕರ್ ಹಾಕಿದ್ರು, ಯಾವ ಗೆಸ್ಟ್ ಹೌಸ್ಗೆ ಬಂದಿದ್ರು? ಯಾವ ಏರ್ಪೋರ್ಟ್ನಲ್ಲಿ ಸಿಕ್ಕಿದ್ರು.? ಯಾವ ಹೋಟೆಲ್ನಲ್ಲಿ ಬಂದು ಭೇಟಿ ಮಾಡಿದ್ರು ಅನ್ನೋದರ ವಿಡಿಯೋ, ಆಡಿಯೋ ರೆಕಾರ್ಡ್ ಇದೆ. ಅದನ್ನ ಮುಖ್ಯಮಂತ್ರಿಗಳ ಗಮನಕ್ಕೆ ತಂದು ವಿಡಿಯೋ ತೋರಿಸಿದ್ದೇವೆ ಎಂದಿದ್ದಾರೆ.
ತಲಾ 50 ಕೋಟಿಗೆ 50 ಶಾಸಕರನ್ನು ಖರೀದಿ ಮಾಡಲು ಬಂದಿದ್ದರು. ಆದರೂ ನಮ್ಮ ಕಾಂಗ್ರೆಸ್ ಶಾಸಕರು ಯಾರು ಕೂಡ ಬಿದ್ದಿಲ್ಲ ಅನ್ನೋದು ಕೂಡ ಸತ್ಯ. ಸಮಯ, ಗಳಿಗೆ ನೋಡಿ ಬಿಜೆಪಿಯ ವಿಡಿಯೋ, ಆಡಿಯೋ ಬಿಡ್ತೀವಿ ಜೊತೆಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಅಂತಾನೂ ಹೇಳಿದ್ದಾರೆ. ಮುಡಾ ತನಿಖೆಯನ್ನು ಡೈವರ್ಟ್ ಮಾಡಲು ಸಿಎಂ ಈ ವಿಚಾರ ಎತ್ತಿಕೊಂಡಿದ್ದಾರೆ ಎನ್ನುವ ವಿರೋಧ ಪಕ್ಷಗಳ ಮಾತಿಗೂ ಟಾಂಗ್ ಕೊಟ್ಟಿರುವ ಶಾಸಕ ರವಿ ಗಣಿಗ, ಮುಡಾ ವಿಚಾರದಲ್ಲಿ ತನಿಖೆಗೆ ಸಿಎಂ ಸಹಕರಿಸಿದ್ದಾರೆ. ಏನು ಡೈವರ್ಟ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಕಳ್ಳನ ಮನಸ್ಸು ಉಳ್ಳು ಉಳ್ಳಗೆ ಅಂತ ವಿರೋಧ ಪಕ್ಷದವರಿಗೆ ಭಯ ಶುರುವಾಗಿದೆ. ವಿರೋಧ ಪಕ್ಷದಲ್ಲಿದ್ದಾಗ ಯೋಗೇಶ್ವರ್ ಕೂಡ ಮಾತನಾಡಿದ್ರು. ಚುನಾವಣಾ ಸಂದರ್ಭದಲ್ಲಿ ನನ್ನ ಹೆಸರು ಹೇಳಿದ್ಯಾ ಅಂದ್ರು. ಅವರು ಯಾರನ್ನ ಭೇಟಿ ಮಾಡಿದ್ರು ಬಿಜೆಪಿಯವರು 50 ಕೋಟಿ ಅಲ್ಲ 100 ಕೋಟಿ ಆಫರ್ ಕೊಟ್ಟಿದ್ದಾರೆ. ಬಿಜೆಪಿಯವರಿಗೆ ದುಡ್ಡಿಗೆ ಬೆಲೆ ಇಲ್ಲ. ಮೋದಿ, ಅಮಿತ್ ಷಾ, ಯಡಿಯೂರಪ್ಪ ಅವರಿಗೂ ದುಡ್ಡಿಗೆ ಬೆಲೆ ಇಲ್ಲ. ಅಶೋಕ್, ರಮೇಶ್ ಜಾರಕಿಹೋಳಿ, ಯತ್ನಾಳ್ಗೂ ದುಡ್ಡಿನ ಬೆಲೆ ಗೊತ್ತಿಲ್ಲ ಎಂದಿರುವ ಶಾಸಕ ರವಿ ಗಣಿಗ, ಬಿಜೆಪಿ ಅವರಿಗೆ ಅಧಿಕಾರದಲ್ಲಿರಬೇಕು ಅವರು ಮಾಡಿದ ಹಗರಣಗಳನ್ನು ಮುಚ್ಚಬೇಕು ಅಷ್ಟೆ ಉದ್ದೇಶ ಎಂದಿದ್ದಾರೆ.