ರಾಜ್ಯ ಕಾಂಗ್ರೆಸ್ಗೆ ಸರ್ಕಾರ ರಚನೆಯ ನಂತರ, ಈಗ ಯಾರಿಗೆ ಯಾವ ಖಾತೆ ಕೊಡಬೇಕು ಎಂಬ ತಲೆಬಿಸಿ ಪ್ರಾರಂಭವಾಗಿದೆ. ಒಂದು ಹಂತದಲ್ಲಿ ನಿಂತು ನೋಡಿದಾಗ, ಕಾಂಗ್ರೆಸ್ ತಮ್ಮ ನಾಯಕರ ಆಯ್ಕೆ ಪ್ರಕ್ರಿಯೆಗೆ ತಡ ಮಾಡುತ್ತಲೇ ಬಂದಿದೆ. ಇದರ ಜೊತೆಗೆ ಖಾತೆ ಹಂಚಿಕೆ ಸೇರಿದ ಹಾಗೆ ಮುಂದಿನ ಲೋಕಸಭಾ ಚುನಾವಣೆಗೆ ಕೂಡ ತಯಾರಾಗಬೇಕಾಗಿದೆ. ಹಾಗಾಗಿ ಕಾಂಗ್ರೆಸ್ ಈಗ ಜಾಗೃತೆಯ ಹೆಜ್ಜೆಯನ್ನ ಇಡುವತ್ತ ಚಿಂತನೆ ನಡೆಸುತ್ತಿದೆ.
ಇದೇ ಕಾರಣಕ್ಕೆ ತರಾತುರಿಯಲ್ಲಿ ಕೈ ನಾಯಕರು ಖಾತೆಗಳ ಹಂಚಿಕೆಯನ್ನ ಮಾಡ್ತಾ ಇಲ್ಲ. ಇದು ನೂತನ ಕಾಂಗ್ರೆಸ್ ಶಾಸಕರ ತಳಮಳಕ್ಕೆ ಕೂಡ ಕಾರಣವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ಯಾರಿಗೆ ಯಾವ ಸ್ಥಾನ-ಮಾನಗಳನ್ನ ನೀಡಲಿದ್ದಾರೆ ಅನ್ನೋದು ಶಾಸಕರ ಕುತೂಹಲಕ್ಕೆ ಕಾರಣವಾಗಿದೆ.. ಇನ್ನುಇದರ ನಡುವೆ ಕಾಂಗ್ರೆಸ್ಗೆ ಬಹುದೊಡ್ಡ ತಲೆನೋವಾಗಿ ಕಾಡಿದ್ದು ಅಂದ್ರೆ ಅದು ವಿಧಾನಸಭಾ ಸ್ಪೀಕರ್ ಆಯ್ಕೆ ವಿಚಾರ.

ಕಳೆದ 2-3 ದಿನಗಳಿಂದ ವಿಧಾನಸಭೆಯ ಸ್ಪೀಕರ್ ಯಾರಾಗಬೇಕು ಅನ್ನೋ ಪ್ರಶ್ನೆ ಕಾಂಗ್ರೆಸ್ನ ಒಳಗೆ ಉದ್ಭವಿಸಿತ್ತು, ಮೋಸ್ಟ್ ಸೀನಿಯರ್ ಲೀಡರ್ಸ್ ಎನಿಸಿಕೊಂಡ ಆರ್.ವಿ ದೇಶಪಾಂಡೆ ಹಾಗೂ ಹೆಚ್.ಕೆ ಪಾಟೀಲ್ ಅವರ ಹೆಸರುಗಳು ಬಲವಾಗಿ ಕೇಳಿ ಬಂದಿದ್ವು. ಆದ್ರೆ ಎಷ್ಟೇ ಒತ್ತಡ ಕೇಳಿ ಬಂದ್ರು ಸ್ಪೀಕರ್ ಸ್ಥಾನವನ್ನ ಅಲಂಕರಿಸಲು ಈ ಇಬ್ಬರು ಪ್ರಮುಖ ನಾಯಕರು ಒಪ್ಪಿಕೊಳ್ಳೋದಿಲ್ಲ. ಹೀಗಾಗಿ ಸ್ಪೀಕರ್ ಆಯ್ಕೆಗೆ ಕೇಳಿ ಬಂದ ಮತ್ತೊಂದು ಹೆಸರು ಅಂದ್ರೆ ಕಾಂಗ್ರೆಸ್ನ ಮತ್ತೊಬ್ಬ ಹಿರಿಯ ನಾಯಕ ಯು.ಟಿ ಖಾದರ್,
ಇದೇ ಕಾರಣಕ್ಕೆ ಕಾಂಗ್ರೆಸ್ನ ಪ್ರಮುಖ ನಾಯಕರು ಯು.ಟಿ ಖಾದರ್ ಅವರನ್ನ ಸಂಪರ್ಕ ಮಾಡುತ್ತಾರೆ. ಮೊದಲಿಗೆ ಯು.ಟಿ ಖಾದರ್ ಕೂಡ ಸ್ಪೀಕರ್ ಆಗೋದಕ್ಕೆ ಒಪ್ಪಿಗೆ ನೀಡೋದಿಲ್ಲ ಬಳಿಕ ರಣದೀಪ್ ಸಿಂಗ್ ಸರ್ಜೇವಾಲ ಮಧ್ಯೆ ಪ್ರವೇಶಿಸಿ ಯು.ಟಿ ಖಾದರ್ ಮನವೊಲಿಸುವಲ್ಲಿ ಯಶಸ್ವಿಯಾಗ್ತಾರೆ. ಹೀಗಾಗಿ ಯು.ಟಿ ಖಾದರ್ ಇಂದು ಸ್ಪೀಕರ್ ಸ್ಥಾನಕ್ಕೆ ಅರ್ಜಿಯನ್ನ ಸಲ್ಲಿಸಿದ್ರು ಎನ್ನಲಾಗ್ತಾ ಇದೆ.
ಇದೀಗ ವಿಧಾನಸಭಾ ಸ್ಪೀಕರ್ ಹುದ್ದೆ ನೇಮಕಾತಿ ಹಿನ್ನೆಲೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್ ವಿಧಾನಸಭೆ ಕಾರ್ಯದರ್ಶಿ ಅವರ ಕೊಠಡಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದು, ಬುಧವಾರ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವರು ಉಪಸ್ಥಿತರು ಕೂಡ ಇದ್ರು.
ಇನ್ನು ನಾಮ ಪತ್ರ ಸಲ್ಲಿಕೆ ಬಳಿಕ ಮಾತನಾಡಿರುವ ಯು.ಟಿ ಖಾದರ್, ಸಂವಿಧಾನ ಬದ್ಧವಾದ ಹುದ್ದೆಯನ್ನು ಪಕ್ಷದ ಹೈಕಮಾಂಡ್ ನೀಡಿದೆ. ಅತ್ಯಂತ ಸಂತೋಷದಿಂದ ಈ ಹುದ್ದೆಯನ್ನು ಒಪ್ಪಿದ್ದೇನೆ. ಗೌರವಯುತವಾದ ಸ್ಥಾನಕ್ಕೆ ಗೌರವ ತಂದು ಕೊಡುವ ಕೆಲಸವನ್ನ ಮಾಡುತ್ತೇನೆ, ಸಚಿವ ಸ್ಥಾನ ಯಾರಿಗೂ ಬೇಕಾದರೂ ಆಗಬಹುದು. ಆದರೆ ಸಭಾಧ್ಯಕ್ಷ ಸ್ಥಾನ ಎಲ್ಲರಿಗೂ ಆಗಲು ಸಾಧ್ಯವಿಲ್ಲ. ಆಡಳಿತ ಹಾಗೂ ಪ್ರತಿಪಕ್ಷದ ಸಹಕಾರ ಪಡೆದುಕೊಂಡು ಪ್ರೀತಿಯಿಂದ, ಪಾರದರ್ಶಕವಾಗಿ ಸಭೆಯನ್ನು ನಡೆಸಿಕೊಂಡು ಹೋಗುವ ಕೆಲಸವನ್ನ ಮಾಡುತ್ತೇನೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ರು
ಇನ್ನು ಯು.ಟಿ ಖಾದರ್ ಅವರಿಗೆ ಸ್ಪೀಕರ್ ಸ್ಥಾನ ನೀಡಿ, ಕಾಂಗ್ರೆಸ್ ಪರೋಕ್ಷವಾಗಿ ಖಾದರ್ ಅವರಿಗೆ ಅನ್ಯಾಯ ಮಾಡಿದೆ ಎಂದು ಸಾಮಾಜಿಕ ಬಳಕೆದಾರರು ಬೇಸರವನ್ನ ವ್ಯಕ್ತ ಪಡಿಸಿದ್ದಾರೆ. ಸಾಕಷ್ಟು ಮಂದಿ ಯು.ಟಿ ಖಾದರ್ ಅವರು ಹಿಂದುತ್ವದ ಅಜೆಂಡಾ ಹೊಂದಿದ್ದ, ಬಿಜೆಪಿಗರ ವಿರುದ್ಧ ಅಭಿವೃದ್ಧಿಯ ಮಂತ್ರವನ್ನ ಪಠಿಸಿ ಮಂಗಳೂರಿನಲ್ಲಿ ದಿಗ್ವಿಜಯ ಸಾಧಿಸಿದ್ದ ಯು.ಟಿ ಖಾದರ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕಿತ್ತು, ಒಂದು ವೇಳೆ ನೀಡದೆ ಹೋದ್ರೆ ಬಂಡಾಯದ ಬಿಸಿ ಏಳ ಬಹುದು ಎಂಬ ಕಾರಣಕ್ಕೆ ಅವರ ಕೈಗಳನ್ನ ಕಟ್ಟಿ ಹಾಕುವ ಕೆಲಸವನ್ನ ಯಶಸ್ವಿಯಾಗಿ ಮಾಡಲಾಗಿದೆ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗ್ತಾ ಇದೆ.
ಇನ್ನು ಯು.ಟಿ ಖಾದರ್ ಕೂಡ ಕಾಂಗ್ರೆಸ್ನಲ್ಲಿ ಹಿರಿಯ ನಾಯಕ, ಹಾಗೂ ಪ್ರಭಾವಿ ಅಲ್ಪ ಸಂಖ್ಯಾತ ನಾಯಕ ಕೂಡ ಆಗಿದ್ದಾರೆ. ಈ ಹಿಂದಿನಿಂದಲೂ ಕೂಡ ಸಚಿವರಾಗಿ ಸೇವೆಯನ್ನ ಸಲ್ಲಿಸಿದ ಅನುಭವ ಅವರಿಗಿದೆ. ಜೊತೆಗೆ ಹಿಂದುತ್ವ ಮತ್ತು ಬಿಜೆಪಿಯ ಭದ್ರಕೋಟೆಯಾಗಿರುವ ಕರಾವಳಿ ಭಾಗದಲ್ಲಿ ಯು.ಟಿ ಖಾದರ್ ಅವರ ವರ್ಚಸ್ಸು ಪ್ರಬಲವಾಗಿದೆ. ಜೊತೆಗೆ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಅನ್ನು ಪ್ರಬಲವಾಗಿ ಕಟ್ಟುವ ಕೆಲಸದಲ್ಲಿ ಖಾದರ್ ತೊಡಗಿಸಿ ಕೊಂಡಿದ್ದಾರೆ. ಹೀಗಿದ್ರು ಕೂಡ ಯು.ಟಿ ಖಾದರ್ ಅವರಿಗೆ ಸಚಿವ ಸ್ಥಾನ ನೀಡದೆ ಇರೋದು ಸಹಜವಾಗಿ ಅವರ ಅಭಿಮಾನಿಗಳಿಗೆ ಬೇಸರ ಕೂಡ ಆಗಿದೆ.
ಇನ್ನು ಯು.ಟಿ ಖಾದರ್ ಅವರು ಈ ಬಾರಿಯ ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಯಲ್ಲಿ ಮುಸಲ್ಮಾನ ಅಭ್ಯರ್ಥಿಯೊಬ್ಬರು ಸ್ಪೀಕರ್ ಆಗಿ ಐತಿಹಾಸಿಕ ಕ್ಷಣಕ್ಕೆ ಕೂಡ ಸಾಕ್ಷಿಯಾಗಿದ್ದಾರೆ.