ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಗಳ ಸಾಲದ ಬಗ್ಗೆ ನೀಡಿರುವ ಅಂಕಿಅಂಶಗಳು ಮತ್ತು ಕರ್ನಾಟಕ ಸರ್ಕಾರ ಬಜೆಟ್ ಪುಸ್ತಕದಲ್ಲಿ ನೀಡಿರುವ ಅಂಕಿಅಂಶಗಳಲ್ಲಿ ವ್ಯತ್ಯಾಸ ಇದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯ ಬಿಜೆಪಿ ಸರ್ಕಾರದ ಬಜೆಟ್ ಕುರಿತಾಗಿ ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಅವರು ಮಾತನಾಡಿದರು.
ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದ ಸಾಲ 6 ಲಕ್ಷದ 18 ಸಾವಿರ ಕೋಟಿಗಿಂತ ಹೆಚ್ಚಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದ್ದರೆ, ರಾಜ್ಯ ಸರ್ಕಾರ 5 ಲಕ್ಷದ 64 ಸಾವಿರ ಕೋಟಿ ಆಗುತ್ತದೆ ಎಂದಿದ್ದಾರೆ. ಇವರೆಡರ ನಡುವಿನ ವ್ಯತ್ಯಾಸ 53,472 ಕೋಟಿ ರೂ. ಇಬ್ಬರಲ್ಲಿ ಯಾರು ಸುಳ್ಳು ಮಾಹಿತಿ ನೀಡಿದ್ದಾರೆ ಗೊತ್ತಿಲ್ಲ. ಈ ವ್ಯತ್ಯಾಸ ಸತ್ಯವೇ ಆಗಿದ್ದರೆ ಅನೇಕ ಅಂಕಿಅಂಶಗಳು ಕೂಡ ವ್ಯತ್ಯಾಸ ಆಗುತ್ತದೆ. ರಾಜ್ಯ ಸರ್ಕಾರ ಮಾಡಿರುವ ಸಾಲ ಜಿಎಸ್‌ಡಿಪಿಯ 24.20% ಇದೆ, ಇದು ವಿತ್ತೀಯ ಹೊಣೆಗಾರಿಕೆ ನೀತಿಯ ಮಾನದಂಡಗಳ ಒಳಗಿದೆ ಎಂದಿದ್ದಾರೆ. ಕೇಂದ್ರ ಸರ್ಕಾರದ ಲೆಕ್ಕದಂತೆ ಸಾಲ ಹೆಚ್ಚಾದರೆ 26% ಗಿಂತ ಹೆಚ್ಚಾಗುತ್ತದೆ. 2018ರ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಲೆಕ್ಕದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ ಎಂದು ತಿಳಿಸಿದರು.
ನನಗಿರುವ ಮಾಹಿತಿ ಪ್ರಕಾರ ಕಾರ್ಮಿಕರಿಗೆ ಕಾರ್ಮಿಕ ಕಲ್ಯಾಣ ನಿಧಿಯಿಂದ ಹಣ ನೀಡಿದ್ದಾರೆ, ಇದು ಸರ್ಕಾರದಿಂದ ಕೊಡುವ ಹಣ ಅಲ್ಲ. ಅದನ್ನು ಕಳೆದರೆ ಕೊರೊನಾ ನಿರ್ವಹಣೆಗೆ ಸರ್ಕಾರ ಖರ್ಚು ಮಾಡಿರುವುದು 9,000 ಇರಬಹುದು. ಇದರಲ್ಲೂ ಲಂಚ ಹೊಡೆಯಲಾಗಿದೆ. ಪ್ರವಾಹಕ್ಕೆ 6,000 ಕೋಟಿ ಹಣ ಖರ್ಚಾಗಿದೆ. ಒಟ್ಟು 15,000 ಕೋಟಿ ಹಣ ಖರ್ಚಾಗಿರಬಹುದು. ಬಜೆಟ್ ಗಾತ್ರ 2,89,000 ಕೋಟಿ. ಮುಂದಿನ ವರ್ಷಕ್ಕೆ 3 ಲಕ್ಷದ 9 ಸಾವಿರ ಕೋಟಿ ಆಗಿದೆ. ಪ್ರವಾಹ ಮತ್ತು ಕೊರೊನಾದಿಂದ ಸಾಲ ಮಾಡಬೇಕಾಗಿ ಬಂದಿದೆ ಎಂಬುದು ಸೂಕ್ತ ಕಾರಣವಾಗಲಾರದು ಎಂದು ಹೇಳಿದರು.
ಪ್ರತೀ ವರ್ಷ ಸಹಾಯಧನವನ್ನು, ವೇತನಾನುದಾನವನ್ನು, ಪಿಂಚಣಿಯನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ ಮಾಡುವುದನ್ನು ಸರ್ಕಾರ ಕಡಿಮೆ ಮಾಡುತ್ತಲೇ ಬಂದಿದೆ. ಕೃಷಿ, ಪಶು ಸಂಗೋಪನೆ, ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ನೀಡುತ್ತಿರುವ ಅನುದಾನವೂ ಕಡಿಮೆಯಾಗಿದೆ. ಇಲಾಖೆಗಳಿಗೆ ನೀಡುವ ಅನುದಾನ ಕಡಿಮೆಯಾಗುತ್ತಿದೆ, ಬಜೆಟ್ ಗಾತ್ರ ಹೆಚ್ಚಾಗುತ್ತಿದೆ. ರಾಜ್ಯ ಅಭಿವೃದ್ಧಿ ಆಗುವುದು ಹೇಗೆ? ಎಂದು ಪ್ರಶ್ನಿಸಿದರು.
ತಾಂಡಗಳು, ಮಜರೆಗಳು, ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಮಾಡಿದ್ದು ನಾವು. ಕಾಗೋಡು ತಿಮ್ಮಪ್ಪನವರು ಕಂದಾಯ ಸಚಿವರಾಗಿದ್ದಾಗ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ, ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಮಾಡಿದ್ದೆವು. ಉಳುವವನೆ ಭೂಮಿಯ ಒಡೆಯ ಮಾದರಿಯಲ್ಲಿ ವಾಸಿಸುವವನೆ ಮನೆಯೊಡೆಯ ಎಂಬ ಕಾನೂನನ್ನು 27-03-2017ರಲ್ಲಿ ಮಾಡಿದ್ವಿ. ಈಗ ಪ್ರಧಾನಿ ಮೋದಿ ಅವರನ್ನು ಕರೆದುಕೊಂಡು ಬಂದು ಹಕ್ಕು ಪತ್ರ ಕೊಡಿಸಿ ಕಾನೂನು ನಾವು ಮಾಡಿದ್ದು ಎಂದು ಕೆಲಸದ ಶ್ರೇಯ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಮುಂದಿನ ವರ್ಷದ ಕೊನೆಗೆ 5.65 ಲಕ್ಷ ಕೋಟಿ ಸಾಲ ಆಗಲಿದೆ. ಅಸಲು ಮತ್ತು ಬಡ್ಡಿ ರೂಪದಲ್ಲಿ 56,000 ಕೋಟಿ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಸಾಲ ಯಾಕೆ ಹೆಚ್ಚಾಗಿದೆ ಎಂದರೆ 40% ಕಮಿಷನ್ ನಿಂದ. 100 ರೂಪಾಯಿಯ ಒಂದು ಯೋಜನೆಯಲ್ಲಿ 40 ರೂಪಾಯಿ ಕಮಿಷನ್ ಗೆ ಹೋದರೆ, 18% ಜಿಎಸ್’ಟಿ, ಗುತ್ತಿಗೆದಾರರ ಲಾಭ 20% ಆದರೆ ಉಳಿಯುವುದು 22 ರೂಪಾಯಿ. ಹೀಗಾದರೆ ದುಡ್ಡು ಖಾಲಿಯಾಗುತ್ತದೆ, ಗುಣಮಟ್ಟದ ಕೆಲಸ ಆಗಲ್ಲ ಎಂದರು.
ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯಲ್ಲಿ ನಮಗೆ ದೊಡ್ಡ ಅನ್ಯಾಯವಾಗುತ್ತಿದೆ. 2017-18ರಲ್ಲಿ ಕೇಂದ್ರ ಸರ್ಕಾರದಿಂದ ನಮಗೆ ಬರುವ ನಮ್ಮ ತೆರಿಗೆ ಪಾಲು 31,752 ಕೋಟಿ. 2022-23ರಲ್ಲಿ 34,596 ಕೋಟಿ, ಮುಂದಿನ ವರ್ಷ 37,252 ಕೋಟಿ ಬರಲಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಬರುವ ಹಣ 2017-18ರಲ್ಲಿ 12,389 ಕೋಟಿ ಇತ್ತು. 2022-23ರಲ್ಲಿ 12,391 ಕೋಟಿ. ಮುಂದಿನ ವರ್ಷಕ್ಕೆ 13,005 ಕೋಟಿ. ನಮಗೆ ಒಟ್ಟು ನಮ್ಮ ತೆರಿಗೆ ಪಾಲು, ಕೇಂದ್ರದ ಸಹಾಯಧನ ಸೇರಿ 50,257 ಕೋಟಿ. 2017-18ರಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ 24,42,000 ಕೋಟಿ. ಆಗ ರಾಜ್ಯಕ್ಕೆ ಹಂಚಿಕೆಯಾದ ತೆರಿಗೆ 35,895 ಕೋಟಿ. ಕೇಂದ್ರ ನೀಡಿದ್ದ ಅನುದಾನ 16,082 ಕೋಟಿ. ಒಟ್ಟು 51,977 ಕೋಟಿ ಬಂದಿತ್ತು. 2019-20ರಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ 27,86,349 ಕೋಟಿ. ಆಗ ರಾಜ್ಯಕ್ಕೆ ಹಂಚಿಕೆಯಾದ ತೆರಿಗೆ 30,919 ಕೋಟಿ. ಕೇಂದ್ರ ನೀಡಿದ್ದ ಅನುದಾನ 19,839 ಕೋಟಿ. ಒಟ್ಟು 50,758 ಕೋಟಿ. ಕೇಂದ್ರದ ಬಜೆಟ್ ಗಾತ್ರ 3 ಲಕ್ಷ ಕೋಟಿ ಹೆಚ್ಚಾದರೂ ರಾಜ್ಯಕ್ಕೆ ಸಿಕ್ಕ ಅನುದಾನ ತುಂಬ ಕಡಿಮೆಯಿದೆ.
ಈ ವರ್ಷದ ಕೇಂದ್ರದ ಬಜೆಟ್ ಗಾತ್ರ 45,03,097 ಕೋಟಿ ಇದೆ. ನಮಗೆ ಬರುವ ತೆರಿಗೆ ಪಾಲು 37,252 ಕೋಟಿ. ಕೇಂದ್ರದಿಂದ ಬರುವ ಅನುದಾನ 13,005 ಕೋಟಿ. ಒಟ್ಟು 50,257 ಕೋಟಿ. ಕೇಂದ್ರದ ಬಜೆಟ್ ಸುಮಾರು 20 ಲಕ್ಷ ಕೋಟಿ ಹೆಚ್ಚಾಗಿದೆ ಆದರೆ ರಾಜ್ಯಕ್ಕೆ ಬರುವ ಅನುದಾನ ಕಡಿಮೆ ಆಗಿದೆ. ಮಾತೆತ್ತಿದರೆ ನಮ್ಮದು ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ, ಆದರೆ ನಿಜವಾಗಿ ನಮಗೆ ಈ ಸರ್ಕಾರದಿಂದ ಅನ್ಯಾಯ ಆಗಿರುವುದು ಹೆಚ್ಚು. ಇದರಿಂದಾಗಿ ಸಾಲ ಹೆಚ್ಚಾಗಿದೆ. ಕನಿಷ್ಠ 1 ಲಕ್ಷದ 4 ಸಾವಿರ ಕೋಟಿ ರಾಜ್ಯಕ್ಕೆ ಬರಬೇಕಿತ್ತು. 50,000 ಕೋಟಿ ಅಷ್ಟೆ ಬರುತ್ತಿದೆ. 14ನೇ ಹಣಕಾಸು ಆಯೋಗದಲ್ಲಿ ನಮಗೆ 42% ಪಾಲು ನೀಡಿದ್ದರು. ಇದನ್ನೇ ಲೆಕ್ಕ ಹಾಕಿದರೆ ನಮಗೆ 2 ಲಕ್ಷ ಕೋಟಿ ಬರಬೇಕು.
ಅವೈಜ್ಞಾನಿಕ ಜಿಎಸ್’ಟಿ ಜಾರಿ ಮಾಡಿರುವುದು ಸಾಲ ಹೆಚ್ಚಾಗಲು ಕಾರಣಗಳಲ್ಲಿ ಒಂದು. ಜಿಎಸ್’ಟಿ ಬರುವ ಮೊದಲು 14% ನಮ್ಮ ತೆರಿಗೆ ಬೆಳವಣಿಗೆ ಇತ್ತು. ಈಗ ಮುಖ್ಯಮಂತ್ರಿಗಳು 26% ತೆರಿಗೆ ಬೆಳವಣಿಗೆ ಇದೆ ಎಂದಿದ್ದಾರೆ ಆದರೆ ಸಾಲ 77,750 ಕೋಟಿ ಮಾಡಿದ್ದಾರೆ. ರಾಜ್ಯದಿಂದ ವಸೂಲಾಗುವ ತೆರಿಗೆ 2023-24ರಲ್ಲಿ ಸುಮಾರು 4 ಲಕ್ಷದ 72 ಸಾವಿರ ಕೋಟಿ. ನಮಗೆ ಬರುವುದು 50,000 ಕೋಟಿ ಮಾತ್ರ. ನಮಗೆ ಕೊಡಬೇಕಿದ್ದ ಹಣವನ್ನು ಬೇರೆ ರಾಜ್ಯಗಳಿಗೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ 2014 ಮಾರ್ಚ್ ವರೆಗೆ ಇದ್ದ ರಾಷ್ಟ್ರೀಯ ಹೆದ್ದಾರಿ 6,177 ಕಿ.ಮೀ. 2022ರ ಮಾರ್ಚ್ ನಲ್ಲಿ 7656 ಕಿ,ಮೀ. ಕಳೆದ 9 ವರ್ಷದಲ್ಲಿ ಮಾಡಿರುವ ಹೆದ್ದಾರಿ 1479 ಕಿ.ಮೀ. ಬಸವರಾಜ ಬೊಮ್ಮಾಯಿ ಅವರು 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡ ನಂತರ ಇಲ್ಲಿಯವರೆಗೆ 64,512 ಕೋಟಿ ರೂ ವೆಚ್ಚದಲ್ಲಿ 6,715 ಕಿ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ನಾನು ಸುಳ್ಳು ಲೆಕ್ಕ ಹೇಳುತ್ತಿದ್ದಾರೆ ಎಂದಿದ್ದು ಎಂದರು.
ಕೇಂದ್ರದ ವಿಶ್ವೇಶ್ವರ ಟೂಡು ಅವರು ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಈ ತಿಂಗಳ 9ನೇ ತಾರೀಖು ಉತ್ತರ ನೀಡಿದ್ದು, 2019ರಲ್ಲಿ ರಾಜ್ಯ ಸರ್ಕಾರ ಸಲ್ಲಿಸಿರುವ ಡಿಪಿಆರ್ ಅನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಅಂಗೀಕಾರ ಮಾಡಿಲ್ಲ ಎಂದು ಹೇಳಿದ್ದಾರೆ. ಎತ್ತಿನಹೊಳೆ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸಿಡಬ್ಲ್ಯುಸಿ ಅವರು ಕೇಳಿದ ಮಾಹಿತಿಯನ್ನು ನೀಡಿಲ್ಲ ಎಂಬ ಕಾರಣಕ್ಕೆ ಯೋಜನೆಯ ಮನವಿಯನ್ನೇ ತೆಗೆದುಹಾಕಿದ್ದಾರೆ. ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆ, ನಮಗೆ ಯಾವ ಮಾಹಿತಿಯನ್ನು ನೀಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಳಸಾ ಬಂಡೂರಿ ಯೋಜನೆಗೆ ಪರಿಸರ ಅನುಮತಿ ಮತ್ತು ಅರಣ್ಯ ಅನುಮತಿ ಸಿಕ್ಕಿಲ್ಲ. ರಾಜ್ಯ ಸರ್ಕಾರದ ತಪ್ಪುಗಳಿಂದಾಗಿ ಅನೇಕ ಯೋಜನೆಗಳು ಜಾರಿಯಾಗಿಲ್ಲ. ಭದ್ರಾ ಮೇಲ್ದಂಡೆಗೆ 5300 ಕೋಟಿ ಅನುದಾನ ನೀಡಿದ್ದಾರೆ, ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿಲ್ಲ ಎಂದು ಹರಿಹಾಯ್ದರು.
ಪಸ್ತುತ ಬಜೆಟ್ ಸಾಲದ ಸುಳಿಯಲ್ಲಿ ರಾಜ್ಯವನ್ನು ಸಿಕ್ಕಿಸಿದೆ. 4 ವರ್ಷದಲ್ಲಿ 3 ಲಕ್ಷದ 22 ಸಾವಿರ ಕೋಟಿ ಸಾಲ ಮಾಡಿದ್ದಾರೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಬಜೆಟ್ ನ ಎಲ್ಲಿಯೂ ಬದ್ಧ ಖರ್ಚು ಎಷ್ಟಾಗಿದೆ ಎಂದು ಹೇಳಿಲ್ಲ. ಈ ಬಜೆಟ್ ರೈತರು, ಬಡವರು, ಮಕ್ಕಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ವರ್ಗಗಳ ಜನರ ವಿರೋಧಿಯಾಗಿದೆ. ಹಾಗಾಗಿ ಈ ಬಜೆಟ್ ಅನ್ನು ತೀವ್ರವಾಗಿ ವಿರೋಧ ಮಾಡುತ್ತೇನೆ ಎಂದು ತಿಳಿಸಿದರು.