ಮಲೆನಾಡು ಹಾಗು ಕರಾವಳಿ ಭಾಗದಲ್ಲಿ ಮಳೆರಾಯನ ಆರ್ಭಟ ಶುರುವಾಗಿದ್ದು, ಆನ್ಲೈನ್ ಕ್ಲಾಸಿಗಾಗಿ ನೆಟ್ವರ್ಕ್ ಹುಡುಕಿ ಗುಡ್ಡ, ಮಟ್ಟಿ, ಮರಗಳನ್ನೇರುತ್ತಿದ್ದ ವಿದ್ಯಾರ್ಥಿಗಳಿಗೆ ಎಡಬಿಡದೆ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ. ನೆಟ್ವರ್ಕು ಸಿಗುತ್ತಿಲ್ಲ, ಪಾಠವು ಕೇಳಲಾಗುತ್ತಿಲ್ಲ. ಈಗಾಗಲೇ ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ನೆಟ್ಟಿಗರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿ ಕಳೆದ ಒಂದುವರೆ ವರ್ಷದಿಂದ ವಿದ್ಯಾರ್ಥಿಗಳ ಜತೆ ವರ್ಕ್ ಫ್ರಂ ಹೋಮ್ ಮಾಡುವವರು ನೆಟ್ವರ್ಕ್ ಸಮಸ್ಯೆ ಅನುಭವಿಸುತ್ತಿದ್ದು, ಸ್ವಂತ ವಾಹನವಿಟ್ಟುಕೊಂಡವರು ದಿನಾಲು ಪಟ್ಟಣಕ್ಕೆ ಹೋಗಿ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ. ಮತ್ತೊಂದೆಡೆ ನೆಟ್ವರ್ಕ್ ಸಮಸ್ಯೆಯಿಂದಲೇ ಅದೆಷ್ಟೋ ಜನ ಕೆಲಸ ಬಿಟ್ಟ ಉದಾಹರಣೆಗಳು ಇವೆ.
ತೀರ್ಥಹಳ್ಳಿ ತಾಲ್ಲೂಕಿನ ಹಾರೋಗೊಳಿಗೆ ಸಮೀಪದ ವಿದ್ಯಾರ್ಥಿಗಳೆಲ್ಲ ಒಂದೆಡೆ ಸೇರಿ ನೆಟ್ವರ್ಕ್ ಸಿಗುತ್ತದೆ ಎಂಬ ಕಾರಣಕ್ಕೆ ಕಾಡ ಮಧ್ಯೆ ಚಿಕ್ಕ ಚಪ್ಪರ ಹಾಕಿಕೊಂಡು ಆನ್ಲೈನ್ ಕ್ಲಾಸ್ ಕೇಳುತ್ತಿದ್ದರು. ಇದೀಗ ಮಲೆನಾಡಿನಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಅದು ಇಲ್ಲದಂತಾಗಿದೆ. ಮಳೆಯ ಮಧ್ಯೆಯೇ ಕೆಲವು ವಿದ್ಯಾರ್ಥಿಗಳು ಛತ್ರಿ ಹಿಡಿದು ನೆಟ್ವರ್ಕ್ ಹುಡುಕುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡಿಜಿಟಲೈಸೇಷನ್ ಎಂಬುವುದು ಕಳೆದ ಎರಡು ಮೂರು ವರ್ಷಗಳಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ನಡುವಿನ ಶೈಕ್ಷಣಿಕ ಅಸಮಾನತೆ ವಿಪರೀತ ಹೆಚ್ಚುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದ್ದು, ಇನ್ನೂ ಬಹುತೇಕ ಹಳ್ಳಿಗಳಲ್ಲಿ ಇಂತದ್ದೆ ಪರಿಸ್ಥಿತಿಯಿದೆ.
ಮತ್ತೊಂದೆಡೆ ಗ್ರಾಮೀಣ ಪ್ರದೇಶಗಳಲ್ಲಿ ಕರೋನಾ ಸೋಂಕು ದಿನೇ-ದಿನೇ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕೂ ಇದು ಸಮಸ್ಯೆಯಾಗಿ ಪರಿಣಮಿಸಿದೆ. ಫೋನ್ ಸಂಪರ್ಕಕ್ಕೆ ಸಿಗದ ಕಾರಣ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವುದು ಕಷ್ಟವಾಗುತ್ತಿದೆ. ಹಾಗೆಯೇ ಸೋಂಕು ಹೆಚ್ಚು ಉಲ್ಭಣಕ್ಕೂ ಕಾರಣವಾಗಿದೆ.
ಮಾರ್ಚ್ ನಲ್ಲಿ ನಡೆದ ರಾಜ್ಯ ವಿಧಾನಸಭೆ ಅಧಿವೇಶನದಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿದ್ದು, ಪಶ್ಚಿಮಘಟ್ಟಗಳ 20-30 ತಾಲೂಕುಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿದ್ದು, ನೆಟ್‌ವರ್ಕ್ ಸಿಗದೆ ಮಕ್ಕಳ ಆನ್ಲೈನ್ ಪಾಠಕ್ಕೆ ತೊಂದರೆಯಾಗಿದೆ. ಪಡಿತರ, ಜಾತಿ ಪ್ರಮಾಣಪತ್ರ ಪಡೆಯಲು ಸಮಸ್ಯೆ ಎದುರಾಗಿದ್ದು, ಇಂತಹ ಭಾಗಗಳಲ್ಲಿ ಹೆಚ್ಚುವರಿ ಮೊಬೈಲ್ ಟವರ್‌ಗಳ ಅಳವಡಿಕೆ ಮಾಡಬೇಕೆಂದು ಶಾಸಕ ಹರತಾಳು ಹಾಲಪ್ಪ ಪ್ರಸ್ತಾಪಿಸಿದ್ದರು.
ಈ ಭಾಗದಲ್ಲಿ ಹೆಚ್ಚು ಮೊಬೈಲ್ ಟವರ್‌ಗಳ ಅಳವಡಿಕೆ ವಿಚಾರ ಸಂಬಂಧ ಸಿ.ಎಂ ಯಡಿಯೂರಪ್ಪ ಅವರು ಕೇಂದ್ರದ ದೂರ ಸಂಪರ್ಕ ಸಚಿವರಿಗೆ ಪತ್ರ ಬರೆದು ಮೊಬೈಲ್ ಟವರ್‌ಗಳನ್ನು ಅಳವಡಿಸುವಂತೆ ಮನವಿ ಮಾಡಿದ್ದಾರೆ. ಆದಷ್ಟೂ ಬೇಗ ಸಮಸ್ಯೆ ಬಗೆಹರಿಸುವುದಾಗಿ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದರು. ಆದರೆ ಸಮಸ್ಯೆ ಮಾತ್ರಾ ಇನ್ನೂ ಬಗೆಹರಿದಿಲ್ಲ, ಇನ್ನಾದರು ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸಬೇಕು.
ಮಲೆನಾಡಿನ ಗುಡ್ಡಗಾಡು ಪ್ರದೇಶಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತಕ್ಷಣಕ್ಕೆ ಪರ್ಯಾಯ ವ್ಯವಸ್ಥೆ ಮಾಡುವುದು ಅವಶ್ಯಕವಾಗಿದೆ. ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಖಾಲಿಯಿರುವ ಕಟ್ಟಡದಲ್ಲಿ ವೈಫೈ ಸೌಲಭ್ಯ ಒದಗಿಸುವುದರ ಮೂಲಕ ವಿದ್ಯಾರ್ಥಿಗಳ ಆನ್ಲೈನ್ ಕ್ಲಾಸ್ಗೆ ಅನುಕೂಲ ಮಾಡಿಕೊಡವುದು ಸೂಕ್ತವೆನಿಸುತ್ತದೆ ಎಂಬುವುದು ಹಲವರ ಅಭಿಪ್ರಾಯ ಕೂಡ.