ಬೆಂಗಳೂರು: ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (SIR) ಕಾರ್ಯವು ಈಗಾಗಲೇ ಅಧಿಕೃತವಾಗಿ ಆರಂಭವಾಗಿದೆ ಈಗಾಗಲೇ ರಾಜ್ಯದ ಹಲೆವೆಡೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದ್ದು, ಸರ್ಕಾರಿ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಪಡೆಯುತ್ತಿದ್ದಾರೆ. ಈ ನಡುವೆಯೇ ಇದೀಗ ರಾಮನಗರದಲ್ಲಿ ಕಾನೂನು ಬಾಹಿರವಾಗಿ ಬಿ.ಎಲ್.ಓ. ಅಧಿಕಾರಿಗಳು ಟಿಪ್ಪುನಗರದ ಕಲ್ಯಾಣ ಮಂಟಪವೊಂದರಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಈ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, SIR ಪ್ರಕ್ರಿಯೆಗೆ ನಿರ್ದಿಷ್ಟ ನಿಯಮಗಳು ಮತ್ತು ಮಾರ್ಗಸೂಚಿಗಳಿವೆ. ಅವುಗಳ ಪ್ರಕಾರವೇ ಕಾರ್ಯನಿರ್ವಹಿಸಬೇಕು. ಮನೆ ಮನೆಗೆ ಹೋಗಿ ಮಾಹಿತಿ ಸಂಗ್ರಹಿಸುವುದನ್ನು ಬಿಟ್ಟು, ಸಮುದಾಯ ಭವನಗಳಲ್ಲಿ ಪ್ರಕ್ರಿಯೆ ನಡೆಸಲಾಗುತ್ತಿದ್ದರೆ, ಅದು ನಿಯಮ ಉಲ್ಲಂಘನೆಯಾಗಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಯಾವುದೇ ನಾಗರಿಕನ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಪ್ರತಿಯೊಂದು ಕಾರ್ಯವೂ ಸಂವಿಧಾನಬದ್ಧವಾಗಿ ನಡೆಯಬೇಕು ಎಂದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ರಾಜ್ಯದ ಪ್ರತಿ ಬೂತ್‌ಗಳನ್ನು ವೈಯಕ್ತಿಕವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ಸ್ಥಳೀಯ ನಾಯಕರು ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ಈ ರೀತಿ ಮಾಡಿರಬಹುದು. ಚುನಾವಣಾ ಆಯೋಗವು ಈ ವಿಷಯವನ್ನು ಗಮನಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.






