
ಪಹಲ್ಗಾಮ್ನ ದಾಳಿಕೋರರನ್ನು ಸದೆಬಡಿಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಚಿವ ಎಂ ಬಿ ಪಾಟೀಲ್ ಒತ್ತಾಯ ಮಾಡಿದ್ದಾರೆ. ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿರುವ ದಾಳಿ ಅತ್ಯಂತ ಹೇಯ ಮತ್ತು ಹೇಡಿತನದ ಕೃತ್ಯವಾಗಿದೆ. ಇದಕ್ಕೆ ಕಾರಣರಾದ ಉಗ್ರಗಾಮಿಗಳನ್ನು ಯಾವ ಮುಲಾಜೂ ಇಲ್ಲದೆ ಸದೆಬಡಿಯುವ ಕೆಲಸ ಆಗಬೇಕು. ಉಗ್ರಗಾಮಿಗಳಿಗೆ ಯಾವುದೇ ಧರ್ಮ, ಜಾತಿ, ಸಂಸ್ಕೃತಿ ಏನೂ ಇಲ್ಲ. ಅಮಾಯಕರ ಹತ್ಯೆ ಅಮಾನುಷ ಕೃತ್ಯ. ಅವರನ್ನು ಹತ್ತಿಕ್ಕಬೇಕಷ್ಟೆ. ಇದಕ್ಕೆ ಪಾಕಿಸ್ತಾನದ ಬೆಂಬಲವಿದ್ದರೆ ಆ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕಾಶ್ಮೀರದಲ್ಲಿ ಇತ್ತೀಚೆಗೆ ಪರಿಸ್ಥಿತಿ ಸಹಜವಾಗಿತ್ತು. ಅಲ್ಲಿಯ ಜನರು ಕೂಡ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಕೊಂಡು ಸಂತಸದಿಂದ ಇದ್ದರು. ಹೀಗಾಗಿ, ಕೇಂದ್ರ ಸರಕಾರವು ಸೇನಾಪಡೆಗಳನ್ನು ಸ್ವಲ್ಪ ಮಟ್ಟಿಗೆ ಹಿಂತೆಗೆದುಕೊಂಡಿತ್ತು. ಉಗ್ರಗಾಮಿಗಳು ಇದರ ದುರ್ಲಾಭ ಪಡೆದುಕೊಂಡು ಈ ಬರ್ಬರ ಕೃತ್ಯ ಎಸಗಿದ್ದಾರೆ. ಕೇಂದ್ರವು ಈಗ ಪುನಃ ಮತ್ತಷ್ಟು ಸೇನಾಪಡೆಯನ್ನು ಕಾಶ್ಮೀರದಲ್ಲಿ ನಿಯೋಜಿಸಬೇಕು. ಈ ದುರಂತದಲ್ಲಿ ರಾಜ್ಯದ ಇಬ್ಬರು ಅಸುನೀಗಿದ್ದಾರೆ. ಅವರ ಕುಟುಂಬಗಳಿಗೆ ಸರಕಾರ ಎಲ್ಲಾ ನೆರವು ನೀಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಚಿವ ಸಂತೋಷ್ ಲಾಡ್ ಅವರನ್ನು ಕಾಶ್ಮೀರಕ್ಕೆ ಕಳಿಸಿಕೊಟ್ಟು, ತ್ವರಿತವಾಗಿ ಸ್ಪಂದಿಸಿದ್ದಾರೆ ಎಂದಿದ್ದಾರೆ.
ಕಾಶ್ಮೀರದಲ್ಲಿ ಉಗ್ರರ ದಾಳಿ ಬಗ್ಗೆ ಹಾವೇರಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾತನಾಡಿದ್ದು, ದೇಶದಲ್ಲಿ 2 ಝೆಂಡಾ, ಭಾರತದ್ದೂ ಮತ್ತೆ ಕಾಶ್ಮೀರದ್ದೊಂದು ಬೇರೆ ಬೇರೆ. ದೇಶದಲ್ಲಿ ಆಗುವಂತಹ ಕಾನೂನು ಯಾವುದು ಅಲ್ಲಿ ಕಾಶ್ಮೀರದಲ್ಲಿ ಜಾರಿ ಆಗತ್ತೀರಲಿಲ್ಲ.. ಕಾಶ್ಮೀರದಲ್ಲಿ ಪೊಲೀಸರು ಮತ್ತು ಸೈನಿಕರ ರುಂಡವನ್ನ ಕತ್ತರಿಸ್ತಿದ್ದರು. ಆರ್ಟಿಕಲ್ 370 ಜಾರಿ ಮಾಡಿರೋದು ಮೋದಿಯವರ ಐತಿಹಾಸಿಕ ನಿರ್ಣಯ. ಕಾಶ್ಮೀರದಲ್ಲಿ 370 ತೆಗೆದ ಮೇಲೆಯೂ ಶಾಂತಿಯುತವಾಗಿತ್ತು. ಇವಾಗ ಪಾಕಿಸ್ತಾನದವರೂ ಹತಾಶೆಗೊಂಡಿದ್ದಾರೆ. ಇನ್ಮೇಲೆ ಕಾಶ್ಮೀರದಲ್ಲಿ ಪಾಕಿಸ್ತಾನದವರಿಗೆ ಭವಿಷ್ಯವಿಲ್ಲ ಅಂತಾ.

ಕಾಶ್ಮೀರವನ್ನ ಮೋದಿಯವರು ಸಿಕ್ಕಾಪಟೆ ಡೆವಲಪ್ಮೆಂಟ್ ಮಾಡಿದ್ದಾರೆ. ಭಾರತದಿಂದ ಕಾಶ್ಮೀರವನ್ನ ವಾಪಸ್ ತೆಗೆದುಕೊಳ್ಳಲು ಆಗಲ್ಲ ಎಂಬ ಭಯವಿದೆ. ಕೆಲವೇ ದಿನಗಳಲ್ಲಿ ಬಲೂಚಿಸ್ತಾನ ಕೂಡ ಭಾರತದ ಭಾಗವಾಗುತ್ತದೆ. ಪಾಕಿಸ್ತಾನ ನಾಲ್ಕು ಭಾಗಗಳು ಆಗ್ತದೆ ಎಂಬ ಭಯ ಬಂದಿದೆ. ಕಾಶ್ಮೀರದಲ್ಲಿ ಸೈನಿಕರು ಗೌರವಯುತ ಸೇವೆ ಮಾಡಲು ಕಾರಣ ನರೇಂದ್ರ ಮೋದಿಯವರು. ಒಂದು ಘಟನೆಯಿಂದ ಕೇಂದ್ರ ಸರಕಾರದ ಭದ್ರತಾ ವೈಫಲ್ಯ ಎನ್ನಲು ಸಾಧ್ಯವಿಲ್ಲ. ಭಯೋತ್ಪಾದಕರು ಪೊಲೀಸ್ ಡ್ರೆಸ್ನಲ್ಲಿ ಬಂದು ಹತ್ಯೆ ಮಾಡಿದ್ದಾರೆ. ಸಾಮಾನ್ಯ ಜನರಿಗೆ ಹೇಗೆ ಗುರುತು ಸಿಗಬೇಕು..? ಕಾಶ್ಮೀರವನ್ನ ಸಂಪೂರ್ಣವಾಗಿ ಕೇಂದ್ರಾಡಳಿತ ಪ್ರದೇಶವಾಗಿ ಮಾಡಲಿ ಎಂದು ಆಗ್ರಹ ಮಾಡಿದ್ದಾರೆ.

ಕಾಶ್ಮೀರದಲ್ಲಿ ಯಾವ ಮುಖ್ಯಮಂತ್ರಿಯೂ ಬ್ಯಾಡ. ಅಂಡಮಾನ್ನಂತೆ ಕಾಶ್ಮೀರವನ್ನು ಕೇಂದ್ರದ ಕಂಟ್ರೋಲ್ನಲ್ಲಿ ಇರಬೇಕು ಎಂದಿರುವ ಯತ್ನಾಳ್, ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರಾಡಳಿತ ಅವಶ್ಯಕತೆಯಿದೆ. ಪಂಡಿತರು ನೆಲೆ ಉರಿದ ಬಳಿಕ ಚುನಾವಣೆ ಮಾಡಬೇಕಿತ್ತು. ಅಗ್ನಿಪಥ ಮೂಲಕ 5 ವರ್ಷ ದೇಶ ಸೇವೆ ಮಾಡ್ತಿದ್ದರೂ ಇದರ ಉದ್ದೇಶ ಹಳ್ಳಿಯಲ್ಲೂ ಸೈನಿಕರನ್ನು ತಯಾರಿ ಮಾಡೋದು.. ಇಸ್ರೇಲ್ನಲ್ಲಿ ಹುಟ್ಟಿದ ಕೂಡಲೇ ಮಿಲಿಟರಿ ಟ್ರೈನಿಂಗ್ ಆಗಬೇಕು. 50 ಪರ್ಸೆಂಟ್ ಮುಸ್ಲಿಂ ಇದ್ದಲ್ಲಿ ದಂಗೆ ಗ್ಯಾರಂಟಿ. ಅದನ್ನು ರಕ್ಷಣೆ ಮಾಡಲು ಅಗ್ನಿಪಥ ಬೇಕಿದೆ. ಅಗ್ನಿಪಥಗೆ ಕಾಂಗ್ರೆಸ್ ಸೇರಿ ಜಾತ್ಯತೀತ ನಾಯಕರು ವಿರೋಧ ಮಾಡಿದ್ದರು. ನರೇಂದ್ರ ಮೋದಿಯವರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಈ ಹತ್ಯೆ ಸೇಡನ್ನ 270 ಜನ ಭಯೋತ್ಪಾದಕ ಕೊಲ್ಲುವ ಮೂಲಕ ತಿರಿಸಿಕೊಳ್ತಾರೆ ಎಂದಿದ್ದಾರೆ.