3ನೇ ವಿಶ್ವಯುದ್ಧ ಶುರುವಾಗುವ ಎಲ್ಲಾ ಲಕ್ಷಗಳು ಕಾಣಿಸುತ್ತಿವೆ. ಈಗಾಗಲೇ ಒಂದೂವರೆ ವರ್ಷದಿಂದ ರಷ್ಯಾ ಹಾಗು ಉಕ್ರೇನ್ ದೇಶಗಳ ನಡುವೆ ಯುದ್ಧ ನಡೆಯುತ್ತಿದ್ದು, ಇದೀಗ ಇಸ್ರೇಲ್ ಹಾಗು ಪ್ಯಾಲೆಸ್ಟೀನ್ ನಡುವೆ ಯುದ್ಧ ಘೋಷಣೆ ಆಗಿದೆ. ಇಂದು ಬೆಳಗ್ಗೆ 6.30ರ ಸುಮಾರಿಗೆ ಗಾಜಾದಿಂದ ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡಲಾಗಿದೆ. ಬರೋಬ್ಬರಿ 5 ಸಾವಿರಕ್ಕೂ ಹೆಚ್ಚು ರಾಕೆಟ್ ದಾಳಿ ನಡೆಸಿದ್ದು, ಇಸ್ರೇಲ್‌ನಲ್ಲಿ ಭಾರೀ ಹಾನಿಯಾಗಿದೆ. ಸೇನಾ ಸಿಬ್ಬಂದಿಗಳು ಸೇರಿದಂತೆ 40 ಜನರು ಸಾವನ್ನಪ್ಪಿದ್ದು, 250ಕ್ಕೂ ಹೆಚ್ಚು ಮಂದಿ ಗಾಯಗೊಂದಿದ್ದಾರೆ. ಇಸ್ರೇಲ್ ಆಕ್ರಮಿತ ಗಾಜದಿಂದಲೇ ಇಸ್ರೇಲ್ ಮೇಲೆ ದಾಳಿ ನಡೆದಿದ್ದು, ಇಸ್ರೇಲ್ ಕೂಡ ಅಧಿಕೃತವಾಗಿ ಯುದ್ಧ ಘೋಷಣೆ ಮಾಡಿದೆ.
ಹಮಾಸ್ ಉಗ್ರ ಸಂಘಟನೆಯೋ..? ಯೋಧರ ತಂಡವೋ..?
ಗಾಜಾ ಪಟ್ಟಿ ಪ್ರದೇಶ ಪ್ಯಾಲಸ್ಟೀನ್‌ಗೆ ಸೇರಿದ್ದು ಅನ್ನೋದು ಹಮಾಸ್ ಸಂಘಟನೆವಾದ. ಇಸ್ರೇಲ್ ಆಕ್ರಮಿತ ಗಾಜಾ ಪಟ್ಟಿಯನ್ನು ವಶಕ್ಕೆ ಪಡೆಯಬೇಕು, ನಾವು ಪ್ಯಾಲೆಸ್ಟೀನ್‌ಗೆ ಸೇರಿದವರು ಎಂದು ಹಮಾಸ್ ಸಂಘಟನೆ ಹೋರಾಟ ನಡೆಸುತ್ತಲೇ ಇದೆ. ಆದರೆ ಹಮಾಸ್ ಸಂಘಟನೆ ಉಗ್ರರು ಎಂದು ಇಸ್ರೇಲ್ ಘೋಷಣೆ ಮಾಡಿದೆ. ಹಮಾಸ್ ಉಗ್ರರನ್ನು ಪ್ಯಾಲೆಸ್ಟೀನ್ ಯೋಧರು ಎನ್ನುತ್ತದೆ. ಇದೀಗ ಪ್ಯಾಲೆಸ್ಟೀನ್ ಬೆಂಬಲಿತ ಹಮಾಸ್ ಉಗ್ರರ ದಾಳಿಯನ್ನು ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಖಂಡಿಸಿವೆ. ಆದರೆ ಇರಾನ್ ಮಾತ್ರ ಪ್ಯಾಲೆಸ್ಟೀನ್ ಯೋಧರ ಕಾರ್ಯ ಶ್ಲಾಘನಾರ್ಹ. ಹಮಾಸ್ ಕಾರ್ಯಾಚರಣೆ ಜೊತೆಗೆ ನಾವಿದ್ದೇವೆ. ಪ್ಯಾಲಸ್ಟೀನ್ ಹಾಗು ಜೆರುಸಲೆಮ್ ಸ್ವತಂತ್ರವಾಗಲು ನಮ್ಮ ಬೆಂಬಲವಿದೆ ಎಂದು ಇರಾನ್ ಪರಮೋಚ್ಚ ನಾಯಕ ಅಲಿ ಖಮೇನಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಹಮಾಸ್ ವಿರುದ್ಧ ನೇತನ್ಯಾಹು ಕಿಡಿ, ಧ್ವಂಸ ಮಾಡುವ ಎಚ್ಚರಿಕೆ..
ಉಗ್ರರನ್ನು ಸದೆ ಬಡಿಯುವ ಪ್ರತಿಜ್ಞೆ ಮಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಇಸ್ರೇಲಿ ಪ್ರಜೆಗಳಿಗೆ ಕರೆ ನೀಡಿದ್ದು, ಇದು ಉಗ್ರರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ ಮಾತ್ರವಲ್ಲ. ಗಾಜಾದಲ್ಲಿ ಉಗ್ರರ ವಿರುದ್ಧ ನಡೆಯುತ್ತಿರುವ ಯುದ್ಧ. ಶೀಘ್ರದಲ್ಲೇ ನಾವು ಉಗ್ರರ ವಿರುದ್ಧ ಪ್ರತಿಕಾರ ತೀರಿಸಿಕೊಳ್ತೇವೆ. ಇಸ್ರೇಲ್ ಹಾಗೂ ಇಸ್ರೇಲ್ ನಾಗರಿಕರನ್ನ ಗುರಿಯಾಗಿಸಿ ಹಮಾಸ್ ಉಗ್ರರು ದಾಳಿ ಶುರು ಮಾಡಿದ್ದಾರೆ. ಈ ಕೃತ್ಯಕ್ಕೆ ಹಮಾಸ್ ಉಗ್ರರು ಭಾರೀ ಬೆಲೆ ತೆರಬೇಕಾಗುತ್ತದೆ. ಈ ಯುದ್ಧವನ್ನು ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಬೆಂಜಮಿನ್ ನೇತನ್ಯಾಹು ತಿಳಿಸಿದ್ದಾರೆ. ಅಲ್ಲಿವರೆಗೂ ಬಾಂಬ್ ಶೆಲ್ಟರ್ಗಳಲ್ಲಿ ರಕ್ಷಣೆ ಪಡೆಯಬೇಕು. ಜೊತೆಗೆ ಉಗ್ರರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಬಾರದು ಎಂದು ತನ್ನ ಪ್ರಜೆಗಳಿಗೆ ಇಸ್ರೇಲ್ ಕಟ್ಟಪ್ಪಣೆ ಹೊರಡಿಸಿದೆ.
ನಾವು ಸೋಲುವ ಮಾತೇ ಇಲ್ಲ ಎಂದಿರುವ ಗಾಜಾ ಉಗ್ರರು..
ಗಾಜಾ ಪಟ್ಟಿ ಬಿಟ್ಟುಕೊಡಲು ನಾವು ರೆಡಿಯಿಲ್ಲ ಎಂದು ಹಮಾಸ್ ಉಗ್ರರು ಘೋಷಣೆ ಮಾಡಿದ್ದಾರೆ. ಜೊತೆಗೆ ಕೆಲವು ಸಾರ್ವಜನಿಕರನ್ನ ಒತ್ತೆಯಾಳಾಗಿ ಇಟ್ಟುಕೊಳ್ಳಲಾಗಿದೆ. ಜೊತೆಗೆ ಕೆಲವು ಇಸ್ರೇಲ್ ಸೈನಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡು ಇಸ್ರೇಲ್ ವಿರುದ್ಧ ಹಮಾಸ್ ಗುಡುಗುತ್ತಿದೆ. ಇಸ್ರೇಲ್ ಒಳಗೆ ನುಗ್ಗಿರೋ ಹಮಾಸ್ ಉಗ್ರರು, ಕೆಲವು ಸೈನಿಕರನ್ನ ಅಪಹರಣ ಮಾಡಿದ್ದಾರೆ. ರಸ್ತೆ ರಸ್ತೆಗಳಲ್ಲಿ ಸುತ್ತುತ್ತಿರುವ ಹಮಾಸ್ ಉಗ್ರಪಡೆ, ಕೈಗೆ ಸಿಕ್ಕವರನ್ನು ಕೊಲ್ಲುವುದು, ಕಿಡ್ನ್ಯಾಪ್ ಮಾಡುವ ಕೆಲಸ ಮಾಡುತ್ತಿದೆ. ವಾಹನಗಳು ಬೆಂಕಿಗೆ ಆಹುತಿ ಆಗಿವೆ. ಇನ್ನು ಯಾವುದೇ ಉಗ್ರ ಬೆದರಿಕೆ ಬಗ್ಗೆ ವಾಟ್ಸ್ ಆ್ಯಪ್ ಸೇರಿದಂತೆ ಜಾಲತಾಣದಲ್ಲಿ ಪೋಸ್ಟ್ ಹಾಕಬೇಡಿ, ವೀಡಿಯೋ ಶೇರ್ ಮಾಡಬೇಡಿ. ವದಂತಿಗಳನ್ನು ಹರಡಬೇಡಿ ಎಂದು ಇಸ್ರೇಲ್ ಪ್ರಧಾನಿ ಸಚಿವಾಲಯ ತಿಳಿಸಿದೆ.
ಇಸ್ರೇಲ್ ಗೆಲ್ಲುತ್ತೆ, ಭಾರತೀರಿಯರು ಎಚ್ಚೆರಿಕೆ ವಹಿಸಲು ಕರೆ..
ಹಮಾಸ್ ಉಗ್ರ ಸಂಘಟನೆ ಕೃತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಜೊತೆಗೆ ಈ ರೀತಿಯ ಸಂಕಷ್ಟದ ಸಮಯದಲ್ಲಿ ನಾವು ಇಸ್ರೇಲ್ ಜೊತೆಗೆ ಒಟ್ಟಾಗಿ ನಿಲ್ಲುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಇನ್ನು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಕಟಣೆ ಹೊರಡಿಸಿದ್ದು, ಇಸ್ರೇಲ್‌ನಲ್ಲಿರುವ ಭಾರತೀಯ ಪ್ರಜೆಗಳು ಜಾಗರೂಕತೆಯಿಂದ ಇರಬೇಕು, ಸುರಕ್ಷತಾ ಮಾನದಂಡಗಳನ್ನು ಅನುಸರಿಸಬೇಕು ಎಂದು ತಿಳಿಸಿದೆ. ಜೊತೆಗೆ ಅನಗತ್ಯ ಸಂಚಾರ ಮಾಡಬೇಡಿ, ಅಗತ್ಯ ಬಿದ್ದರೆ ಕರೆ ಮಾಡುವಂತೆ ಸಹಾಯವಾಣಿ ಹಾಗು ಇಮೇಲ್ ವಿಳಾಸ ಬಿಡುಗಡೆ ಮಾಡಿದೆ. ಸಹಾಯವಾಣಿ ಸಂಖ್ಯೆ +97235226748 ಹಾಗು ಇ-ಮೇಲ್ ವಿಳಾಸ consl.telaviv@mea.gov.in ಇದಾಗಿದೆ. ಭಾರತ ಇಸ್ರೇಲ್ ಪ್ರಜೆಗಳ ಪರವಾಗಿ ಬೆಂಬಲ ವ್ಯಕ್ತಪಡಿಸಿದೆ.