1.52 ನಿಮಿಷಗಳ ವೈರಲ್ ವೀಡಿಯೊದಲ್ಲಿ ಮುಖ ಮುಚ್ಚಿಕೊಂಡ ಉಗ್ರಗಾಮಿಯೊಬ್ಬರು “ನಮ್ಮ ದಾಳಿಯ ಉದ್ದೇಶ ಬಹಳ ಸ್ಪಷ್ಟವಾಗಿತ್ತು. ಇದು ಬಲೂಚಿಸ್ತಾನದಿಂದ ತಕ್ಷಣವೇ ಹಿಂದೆ ಸರಿಯುವಂತೆ ಚೀನಾ ಮತ್ತು ಪಾಕಿಸ್ತಾನಕ್ಕೆ (Pakistan) ಸರಳ ಮತ್ತು ಸ್ಪಷ್ಟ ಸಂದೇಶವಾಗಿದೆ” ಎಂದು ಹೇಳುತ್ತಿರುವುದು ಕಂಡುಬರುತ್ತದೆ.

ಮಾರ್ಚ್ 11 ರಂದು ಆಯಕಟ್ಟಿನ ಬೋಲನ್ ಕಣಿವೆಯಲ್ಲಿ ಕ್ವೆಟ್ಟಾ-ಪೇಶಾವರ್ಗೆ ತೆರಳುತ್ತಿದ್ದ ಜಾಫರ್ ಎಕ್ಸ್ಪ್ರೆಸ್ ರೈಲನ್ನು ಬಲೂಚಿಸ್ತಾನ್ (Jaffer Express Train in Baluchistan) ಲಿಬರೇಶನ್ ಆರ್ಮಿ (BLA) ಎಂಬ ಉಗ್ರಗಾಮಿ ಗುಂಪು ಅಪಹರಿಸಿತ್ತು. ರೈಲಿನಲ್ಲಿ 200 ಭದ್ರತಾ ಸಿಬ್ಬಂದಿ ಸೇರಿದಂತೆ 450 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಸಾಕಷ್ಟು ಪ್ರಯತ್ನದ ನಂತರ, ಪಾಕಿಸ್ತಾನಿ ಸೇನೆಯು ಸುಮಾರು 200 ಪ್ರಯಾಣಿಕರನ್ನು ರಕ್ಷಿಸಿದೆ ಮತ್ತು 50 ದಾಳಿಕೋರರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಆದಾಗ್ಯೂ, ಬಿಎಲ್ಎ ಇನ್ನೂ 150 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರನ್ನು ಸೆರೆಯಲ್ಲಿಟ್ಟುಕೊಂಡಿದೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ.
1.52 ನಿಮಿಷಗಳ ವೈರಲ್ ವೀಡಿಯೊದಲ್ಲಿ ಮುಖ ಮುಚ್ಚಿಕೊಂಡ ಉಗ್ರಗಾಮಿಯೊಬ್ಬರು “ನಮ್ಮ ದಾಳಿಯ ಉದ್ದೇಶ ಬಹಳ ಸ್ಪಷ್ಟವಾಗಿತ್ತು. ಇದು ಬಲೂಚಿಸ್ತಾನದಿಂದ ತಕ್ಷಣವೇ ಹಿಂದೆ ಸರಿಯುವಂತೆ ಚೀನಾ ಮತ್ತು ಪಾಕಿಸ್ತಾನಕ್ಕೆ (China and Pakistan) ಸರಳ ಮತ್ತು ಸ್ಪಷ್ಟ ಸಂದೇಶವಾಗಿದೆ” ಎಂದು ಹೇಳುತ್ತಿರುವುದು ಕಂಡುಬರುತ್ತದೆ. ತಮ್ಮ ನಾಯಕ ಜನರಲ್ ಅಸ್ಲಾಂ ಬಲೂಚ್ (Aslam Baluch) ಕಳುಹಿಸಿದ ಸಂದೇಶಕ್ಕೆ ಚೀನಾ ಪ್ರಾಮುಖ್ಯತೆ ನೀಡಲಿಲ್ಲ, ಇದು ದಾಳಿಗೆ ಕಾರಣವಾಯಿತು ಎಂದು ಆ ವ್ಯಕ್ತಿ ಹೇಳಿದ್ದಾರೆ.

ಫೇಸ್ಬುಕ್ ಬಳಕೆದಾರರು (Facebook Users) ಈ ವೀಡಿಯೊವನ್ನು ಮಾರ್ಚ್ 12, 2025 ರಂದು ಹಂಚಿಕೊಂಡು, ‘‘ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ನಿನ್ನೆ 100 ಪಾಕಿಸ್ತಾನ ಸೈನಿಕರ ಸಹಿತ 400 ಜನರಿದ್ದ ರೈಲನ್ನು ಅಪಹರಿಸಿತ್ತು.. ಆರು ಜನ ಸೈನಿಕರನ್ನು ಹತ್ಯೆ ಮಾಡಿತ್ತು. ನಂತರ ಪಾಕಿಸ್ತಾನ ಸೇನೆ ಎಲ್ಲಾ 27 ಬಂಡುಕೋರರನ್ನು ಹತ್ಯೆ ಮಾಡಿ ಪ್ರಯಾಣಿಕರನ್ನು ಬಿಡುಗಡೆ ಮಾಡಿತ್ತೆಂದು ಸುದ್ದಿಯಾಗಿತ್ತು. ಇದೀಗ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ ಆತ್ಮಾಹುತಿ ತಂಡವಾದ ಮಜೀದ್ ಬ್ರಿಗೇಡ್ ಬಲೂಚಿಸ್ತಾನದ ತಂಟೆಗೆ ಬರದಂತೆ ಪಾಕಿಸ್ತಾನ ಮತ್ತು ಚೀನಾಗೆ ಎಚ್ಚರಿಕೆ ಕೊಟ್ಟಿದೆಯಂತೆ… ಪರಿಸ್ಥಿತಿ ಬಿಗಡಾಯಿಸುವ ಲಕ್ಷಣ ಕಂಡುಬರುತ್ತಿದೆ…’’ ಎಂದು ಬರೆದುಕೊಂಡಿದ್ದಾರೆ.
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ನೋಡಬಹುದು.
ಹಾಗೆಗೆ ಕನ್ನಡ ಪ್ರಸಿದ್ಧ ಡಿಜಿಟಲ್ ಮಾಧ್ಯಮ ಕನ್ನಡ ಪ್ರಭ ಕೂಡ ಮಾರ್ಚ್ 12, 2025 ರಂದು ಇದೇ ವೀಡಿಯೊವನ್ನು ಹಂಚಿಕೊಂಡು ‘‘ಬದುಕುವ ಆಸೆ ಇದ್ದರೆ ಬಲೂಚಿಸ್ತಾನದಿಂದ ಹಿಂದೆ ಸರಿಯಿರಿ: ಚೀನಾ ಮತ್ತು ಪಾಕಿಸ್ತಾನಕ್ಕೆ BLA ಖಡಕ್ ಎಚ್ಚರಿಕೆ’’ ಎಂದು ಸುದ್ದಿ ಪ್ರಕಟಿಸಿದೆ.
Fact Check: ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2019ರ ವೀಡಿಯೊ ಆಗಿದ್ದು, 2025ರ ಜಾಫರ್ ಎಕ್ಸ್ಪ್ರೆಸ್ ಅಪಹರಣಕ್ಕೆ ಸಂಬಂಧವಿಲ್ಲ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಪಾಕಿಸ್ತಾನದ ಮಾಧ್ಯಮ CSCR.pk ಜುಲೈ 9, 2019 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿರುವುದು ಕಂಡುಬಂತು. ಜುಲೈ 2 ರಂದು, ಯುನೈಟೆಡ್ ಸ್ಟೇಟ್ಸ್ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಅನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಬ್ರಾಂಡ್ ಮಾಡಿತು ಎಂಬ ಮಾಹಿತಿ ಇದರಲ್ಲಿದೆ. ಈ ಮೂಲಕ ಇದು 2025ರ ಜಾಫರ್ ಎಕ್ಸ್ಪ್ರೆಸ್ ಅಪಹರಣಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಯಿತು.
ಹಾಗೆಯೆ ರಿವರ್ಸ್ ಇಮೇಜ್ ಸರ್ಚ್ನಲ್ಲಿ ನಮಗೆ ಮೇ 20, 2019 ರಂದು ಎಕ್ಸ್ನಲ್ಲಿ ಪೋಸ್ಟ್ ಮಾಡಲಾದ ವೈರಲ್ ವೀಡಿಯೊದ ವಿಸ್ತೃತ ಆವೃತ್ತಿ ಸಿಕ್ಕಿದೆ. 2 ನಿಮಿಷ 20 ಸೆಕೆಂಡುಗಳ ಈ ವೀಡಿಯೊಗೆ, ‘‘ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಿಮಗೆ ಬಲೂಚಿಸ್ತಾನ ತೊರೆಯಲು ಇನ್ನೂ ಸಮಯವಿದೆ, ಇಲ್ಲದಿದ್ದರೆ ಬಲೂಚ್ ಪುತ್ರರು ಮತ್ತು ಪುತ್ರಿಯರಿಂದ ನೀವು ಎಂದಿಗೂ ಮರೆಯಲಾಗದ ಪ್ರತೀಕಾರವನ್ನು ನೋಡುತ್ತೀರಿ. ಬಿಎಲ್ಎ ಮಜೀದ್ ಬ್ರಿಗೇಡ್ ಕಮಾಂಡರ್ ಹೊಸದಾಗಿ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ಬೆದರಿಕೆ ಹಾಕಿದ್ದಾರೆ’’ ಎಂದು ಶೀರ್ಷಿಕೆ ನೀಡಲಾಗಿದೆ.
ಈ ಎಕ್ಸ್ ಕ್ಲಿಪ್ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಕ್ಲಿಪ್ನ ದೀರ್ಘ ಆವೃತ್ತಿಯ ಆರಂಭಿಕ ಕೆಲವು ಫ್ರೇಮ್ಗಳಲ್ಲಿ, ಬಿಎಲ್ಎ ನಾಯಕ, “ನಮ್ಮ ಆತ್ಮತ್ಯಾಗ ತಂಡ ಮಜೀದ್ ಬ್ರಿಗೇಡ್ ಗ್ವಾದರ್ನಲ್ಲಿರುವ ಪರ್ಲ್ ಕಾಂಟಿನೆಂಟಲ್ ಹೋಟೆಲ್ ಮೇಲೆ ದಾಳಿ ಮಾಡಿ ಪಾಕಿಸ್ತಾನ ಮತ್ತು ಚೀನಾ ಎರಡಕ್ಕೂ ಭಾರೀ ನಷ್ಟವನ್ನುಂಟುಮಾಡಿತು…” ಎಂದು ಹೇಳುತ್ತಾರೆ. ವೀಡಿಯೊದ ಆರಂಭದಲ್ಲಿ ಮತ್ತು 0:46 ಸೆಕೆಂಡ್ ವೇಳೆ ಹೋಟೆಲ್ ಮೇಲೆ ನಡೆಸಿದ ದಾಳಿಯ ಬಗ್ಗೆ ಎರಡು ಬಾರಿ ಉಲ್ಲೇಖಿಸುವುದನ್ನು ಕೇಳಬಹುದು.
ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್ನಲ್ಲಿ ಹೋಟೆಲ್ ಮೇಲೆ ಬಿಎಲ್ಎ (BLA) ನಡೆಸಿದ ದಾಳಿಯ ಕುರಿತು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿ ಇಮೇಜ್ ಸೆಕ್ಷನ್ನಲ್ಲಿ ಹುಡುಕಿದ್ದೇವೆ. ಆಗ ಮೇ 19, 2019 ರಂದು ದಿ ಬಲೂಚಿಸ್ತಾನ್ ಪೋಸ್ಟ್ ವೈರಲ್ ವೀಡಿಯೊದ ದೃಶ್ಯಗಳಿಗೆ ಹೋಲುವ ಸ್ಕ್ರೀನ್ಶಾಟ್ನೊಂದಿಗೆ ಪ್ರಕಟಿಸಿದ ಸುದ್ದಿ ನಮಗೆ ಸಿಕ್ಕಿತು.

ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಬಲೂಚ್ ಲಿಬರೇಶನ್ ಆರ್ಮಿಯ ಮಜೀದ್ ಬ್ರಿಗೇಡ್ನ ನಾಲ್ವರು ಸದಸ್ಯರು ಗ್ವಾದರ್ನಲ್ಲಿರುವ ಪಂಚತಾರಾ ಹೋಟೆಲ್ಗೆ ನುಗ್ಗಿ 26 ಗಂಟೆಗಳ ಕಾಲ ಪಾಕಿಸ್ತಾನಿ ಕಮಾಂಡೋಗಳೊಂದಿಗೆ ನಡೆದ ಮುಖಾಮುಖಿಯ ಕೆಲವೇ ದಿನಗಳಲ್ಲಿ ಈ ವೀಡಿಯೊ ಬಿಡುಗಡೆಯಾಗಿದೆ. ಮೇ 11 ರಂದು ಗ್ವಾದರ್ನಲ್ಲಿರುವ ಐಷಾರಾಮಿ ಹೋಟೆಲ್ನಲ್ಲಿ ನಡೆದ ಮಾರಕ ದಾಳಿಯು ಬೀಜಿಂಗ್ನ ಆಯಕಟ್ಟಿನ ಆಳ ಸಮುದ್ರ ಬಂದರು ಸೇರಿದಂತೆ ಪಾಕಿಸ್ತಾನದಲ್ಲಿ ಪ್ರಮುಖ ಅಭಿವೃದ್ಧಿ ಅಭಿಯಾನದ ಸುತ್ತಲಿನ ಭದ್ರತಾ ಕಳವಳಗಳನ್ನು ತೀವ್ರಗೊಳಿಸಿದೆ’’ ಎಂಬ ಮಾಹಿತಿ ಇದರಲ್ಲಿದೆ.
ANI ಕೂಡ ಮೇ 19, 2019 ರಂದು ‘‘ಅಧ್ಯಕ್ಷ ಜಿನ್ಪಿಂಗ್ ನಿಮಗೆ ಬಲೂಚಿಸ್ತಾನ ತೊರೆಯಲು ಇನ್ನೂ ಸಮಯವಿದೆ ಎಂದು ಬಿಎಲ್ಎಯ ಮಜೀದ್ ಬ್ರಿಗೇಡ್ ಚೀನಾ, ಪಾಕ್ಗೆ ಬೆದರಿಕೆ ಹಾಕಿದೆ’’ ಎಂಬ ಶೀರ್ಷಿಕೆಯೊಂದಿಗೆ ಈ ಕುರಿತು ಸುದ್ದಿ ಪ್ರಕಟಿಸಿದೆ. ಇದರಲ್ಲಿ ಕೂಡ ‘‘ಲೂಚ್ ಲಿಬರೇಶನ್ ಆರ್ಮಿಯ ಮಜೀದ್ ಬ್ರಿಗೇಡ್ನ ನಾಲ್ವರು ಸದಸ್ಯರು ಗ್ವಾದರ್ನಲ್ಲಿರುವ ಪಂಚತಾರಾ ಹೋಟೆಲ್ಗೆ ನುಗ್ಗಿ 26 ಗಂಟೆಗಳ ಕಾಲ ಪಾಕಿಸ್ತಾನ ಮತ್ತು ಕಮಾಂಡೋಗಳೊಂದಿಗೆ ಯುದ್ಧ ಮಾಡಿದ ಎಂಟು ದಿನಗಳ ನಂತರ ಈ ವೀಡಿಯೊ ಬಿಡುಗಡೆಯಾಗಿದೆ’’ ಎಂದು ಬರೆಯಲಾಗಿದೆ.
ಮೇ 2019 ರಲ್ಲಿ ಗ್ವಾದರ್ನಲ್ಲಿರುವ ಪರ್ಲ್ ಕಾಂಟಿನೆಂಟಲ್ ಹೋಟೆಲ್ ಮೇಲಿನ ದಾಳಿಯ ಕೆಲವು ದಿನಗಳ ನಂತರ ಈ ವೀಡಿಯೊ ಬಿಡುಗಡೆ ಆಗಿದೆ ಎಂದು ಅದೇ ವೈರಲ್ ವೀಡಿಯೊದ ಸ್ಕ್ರೀನ್ಶಾಟ್ ಅನ್ನು ಒಳಗೊಂಡಿರುವ ವರದಿಗಳನ್ನು ನೀವು ಓದಬಹುದು.
ಹಾಗೆಯೆ ಮೇ 2019 ರಲ್ಲಿ ಗ್ವಾದರ್ನಲ್ಲಿರುವ ಪರ್ಲ್ ಕಾಂಟಿನೆಂಟಲ್ ಹೋಟೆಲ್ನಲ್ಲಿ ನಡೆದ ದಾಳಿಯ ಕುರಿತ ವರದಿಯನ್ನು ಓದಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಗ್ವಾದರ್ ಹೋಟೆಲ್ (Gwadar Hotel) ದಾಳಿಯ ನಂತರ ಬಿಎಲ್ಎ ನಾಯಕರೊಬ್ಬರು ಚೀನಾ ಮತ್ತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ 2019 ರ ವೀಡಿಯೊವನ್ನು 2025 ರ ಜಾಫರ್ ಎಕ್ಸ್ಪ್ರೆಸ್ ಅಪಹರಣಕ್ಕೆ ಸಂಬಂಧಿಸಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಪ್ರತಿಧ್ವನಿ ಖಚಿತವಾಗಿ ಹೇಳುತ್ತದೆ.
ಈ Fact Check ಅನ್ನು News Fact ರವರು ಪ್ರಕಟಿಸಿದ್ದಾರೆ ಮತ್ತು ಶಕ್ತಿ ಕಲೆಕ್ಟೀವ್ ನ ಭಾಗವಾಗಿ News Fact ರವರಿಂದ ಮರುಪ್ರಕಟಿಸಲಾಗಿದೆ.