ಚಂದ್ರಯಾನ-3 ಮೂಲಕ ಭಾರತ ಮಹತ್ತರ ಸಾಧನೆಯನ್ನು ಮಾಡಿದೆ. ಇಸ್ರೋ ಸಂಸ್ಥೆಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ವಿಜ್ಞಾನಿಗಳ ಈ ಸಾಧನೆ ಎಲ್ಲರಿಗೂ ಪ್ರೇರಣೆ ಆಗಿದೆ. ನರೇಂದ್ರ ಮೋದಿ ಅವರು ವಿಜ್ಞಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದನ್ನು ಗುರುತಿಸುವುದಕ್ಕಾಗಿ ಆಗಸ್ಟ್ 23 ನ್ನು ಕೇಂದ್ರ ಸಚಿವ ಸಂಪುಟ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ಎಂದು ಘೋಷಿಸಿದೆ.
ಭಾರತದ ಮೂರನೇ ಚಂದ್ರಯಾನ ಚಂದ್ರಯಾನ-3, 40 ದಿನಗಳ ಪ್ರಯಾಣದ ನಂತರ ಚಂದ್ರನ ಮೇಲ್ಮೈಯನ್ನು ತಲುಪಿತು. ಚಂದ್ರಯಾನ-3 ಮಿಷನ್‌ನ ಐತಿಹಾಸಿಕ ಯಶಸ್ಸನ್ನು ಆಚರಿಸಲು ಕೇಂದ್ರ ಸಚಿವ ಸಂಪುಟ ದೇಶದ ಜನರೊಂದಿಗೆ ಸೇರುತ್ತದೆ. ನಮ್ಮ ವಿಜ್ಞಾನಿಗಳ ಸ್ಮರಣೀಯ ಸಾಧನೆಯನ್ನು ಸಚಿವ ಸಂಪುಟವೂ ಶ್ಲಾಘಿಸುತ್ತದೆ. ಇದು ನಮ್ಮ ಬಾಹ್ಯಾಕಾಶ ಏಜೆನ್ಸಿಯ ಗೆಲುವು ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಗತಿ ಮತ್ತು ಅಭಿವೃದ್ಧಿಯ ಸಂಕೇತವಾಗಿದೆ.






