ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯ ನೌಕರರು ಸರ್ಕಾರದ ಎದುರು ಒಂದಾದರ ಮೇಲೊಂದರಂತೆ ಬೇಡಿಕೆಗಳನ್ನು ಇಡುತ್ತಲೇ ಇದ್ದಾರೆ. ಮೊನ್ನೆ ಮೊನ್ನೆಯಷ್ಟೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಸರ್ಕಾರಿ ನೌಕರರು ಬಳಿಕ ಸರ್ಕಾರದಿಂದ ವೇತನ ಹೆಚ್ಚಳದ ಬಂಪರ್ ಪಡೆದುಕೊಂಡಿದ್ದು ಇದೀಗ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಸಮರ ಸಾರಲು ನಿರ್ಧರಿಸಿದ್ದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 24ರಂದು ಅನಿರ್ದಿಷ್ಟಾವಧಿ ಧರಣಿಗೆ ಕರೆ ನೀಡಿದ್ದಾರೆ. ‘
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನಾಲ್ಕು ನಿಗಮಗಳ ನೌಕರರು ಈ ಪ್ರತಿಭಟನೆಗೆ ಕರೆ ನೀಡಿ ನೀಡಿದ್ದಾರೆ. ಈ ಸಂಬಂಧ ಇಂದು ಕಾರ್ಮಿಕ ಇಲಾಖೆಗೆ ಸಾರಿಗೆ ನೌಕರರು ನೋಟಿಸ್ ಕಳುಹಿಸಲಿದ್ದಾರೆ ಎನ್ನಲಾಗಿದೆ. ಇದರಿಂದ ಮಾರ್ಚ್ 24ರಂದು ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಯ ಉಂಟಾಗಲಿದೆ ಎನ್ನಲಾಗಿದೆ.
ಸಾರಿಗೆ ನೌಕರರು ಈ ಹಿಂದೆ ಎರಡು ಬಾರಿ ಮುಷ್ಕರ ನಡೆಸಲಿದ್ದಾರೆ. ರಾಜ್ಯ ಸರ್ಕಾರವು ಈ ಹಿಂದೆ ಕೊಟ್ಟಿರುವ ಬೇಡಿಕೆಗಳನ್ನು ಈಡೇರಿಸಬೇಕು. ನಮಗೆ ಅವರು ಕೊಟ್ಟ ಮಾತಿನಂತೆ ವೇತನ ಏರಿಕೆ ಮಾಡಬೇಕು ಎನ್ನುವುದು ಸಾರಿಗೆ ನೌಕರರ ಆಗ್ರಹವಾಗಿದೆ. ಮುಷ್ಕರ ಸಂಬಂಧ ಸಾರಿಗೆ ನೌಕರರಿಗೆ ಜಾಗೃತಿ ಮೂಡಿಸಲು ನಾಳೆ ಎಲ್ಲಾ ಸಾರಿಗೆ ಘಟಕಗಳಲ್ಲಿ ಸಭೆ ನಡೆಯಲಿದೆ .
ಸಾರಿಗೆ ನೌಕರರ ಬೇಡಿಕೆಗಳೇನು..?
ಇನ್ನು ಸಾರಿಗೆ ನೌಕರರ ಬೇಡಿಕೆಗಳು ಏನು ಅನ್ನೋದನ್ನು ನೋಡೋದಾದ್ರೆ , ಇವರು ಆರನೇ ವೇತನ ಆಯೋಗದ ಮಾದರಿಯಲ್ಲಿ ನಮಗೆ ವೇತನ ನೀಡುವಂತೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇದರ ಜೊತೆಯಲ್ಲಿ ಈ ಹಿಂದೆ ಮುಷ್ಕರದ ಸಮಯದಲ್ಲಿ ಪೊಲೀಸರು ಸಾರಿಗೆ ನೌಕರರ ಮೇಲೆ ಹೇರಿರುವ ಕೇಸ್ಗಳು ಹಾಗೂ ಸಾರಿಗೆ ನೌಕರರನ್ನು ವಜಾ ಅಥವಾ ಅಮಾನತು ಮಾಡಲಾದ ಆದೇಶಗಳನ್ನು ಹಿಂಪಡೆಯಬೇಕು. ಈ ಬಾರಿ ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ನಡೆಸಬೇಕು. ಎಲೆಕ್ಟ್ರಿಕ್ ಬಸ್ಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಸಾರಿಗೆ ನೌಕರರ ನೇಮಕಾತಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.