ದೇವದಾಸಿ ಅನ್ನೋ ಅನಿಷ್ಟ ಪದ್ದತಿ ನಮ್ಮ ಸಮಾಜದಲ್ಲಿ ಸಾಮಾಜಿಕ ಪಿಡುಗು ಎಂದೇ ವ್ಯಾಖ್ಯಾನಿಸಲಾಗಿದೆ. ಚಿಕ್ಕ ವಯಸ್ಸಿನಲ್ಲೇ ಯಾವುದೋ ನಂಬಿಕೆಯ ಮೇಲೆ ಅಥವಾ ಮೂಢನಂಬಿಕೆ ಮೇಲೆ ಹೆಣ್ಣನ್ನು ದೇವದಾಸಿಯನ್ನಾಗಿ ಮಾಡಲಾಗುತ್ತಿದೆ. ಜೀವನ ಅನ್ನೋದು ಏನು ಅಂತಾ ತಿಳಿಯುವ ಮುನ್ನವೇ ಆಕೆ ದೇಹ ಮಾರಿಕೊಂಡು ಜೀವನ ನಡೆಸಬೇಕಾದಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತದೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲೂ ಬಾಳಿ ಬದುಕಿದ ದೇವದಾಸಿ ಮಹಿಳೆ, ಕೊನೆಗೆ ಇಡೀ ಸಮಾಜಕ್ಕೆ ದಾರಿ ದೀಪವಾಗುತ್ತಾಳೆ. ಸಮಾಜದ ಬಾಳಿಗೆ ಬೆಳಕಾದ ಆ ದೇವದಾಸಿ ಮಹಿಳೆಗೊಂದು ದೇವಸ್ಥಾನ ನಿರ್ಮಾಣ ಮಾಡಿ ಅಲ್ಲಿ ನಿತ್ಯ ಪೂಜೆ ಮಾಡಲಾಗುತ್ತಿದೆ.
ಹೌದು. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ದೇವದಾಸಿ ಕೆಂಚವ್ವ. ಎಲ್ಲೆಡೆ ಮಹಾತ್ಮರಿಗೆ, ಆಧ್ಯಾತ್ಮ ಸಾಧಕರಿಗೆ ಇರುವಂತೆ ಕೆಂಚಮ್ಮಳಿಗೆ ದೇಗುಲವಿದೆ. ಈ ದೇಗುಲದಲ್ಲಿ ಕೆಂಚಮ್ಮಳ ಗದ್ದುಗೆ ಕೂಡ ಇದೆ. ನೀವು ನಂಬುತ್ತಿರೋ ಇಲ್ಲವೋ ಒಂದು ಕಾಲದಲ್ಲಿ ವೇಶ್ಯೆಯಾಗಿ ಬದುಕಿನ ಎಲ್ಲ ಸುಖಭೋಗಗಳನ್ನ ಪಾದದ ಕೆಳಗೆ ಹಾಕಿ ಅನುಭವಿಸಿದ್ದ ಕೆಂಚಮ್ಮಳಿಗೆ ಇವತ್ತು ದೈವ ಸ್ವರೂಪಿಯಾಗಿದ್ದಾಳೆ.
ಪ್ರತಿ ನಿತ್ಯ ದೇವರಿಗೆ ಪೂಜೆ ಸಲ್ಲುವುದರ ಜೊತೆ ಜೊತೆಗೆ ಕೆಂಚಮ್ಮಳ ಗದ್ದುಗೆಗೂ ಪೂಜೆ ಸಲ್ಲಿಸಲಾಗುತ್ತಿದೆ. ನೋಡುವುದಕ್ಕೆ ಸ್ಪುರದೃಪಿಯಾಗಿದ್ದ ಕೆಂಚಮ್ಮ ವೃತ್ತಿಯಲ್ಲಿ ವೇಶ್ಯೆಯಾಗಿದ್ದವಳು. ದೇವದಾಸಿ ಪದ್ದತಿಗೆ ಒಳಗಾಗಿದ್ದ ಕಾರಣ ಜೀವನ ನಿರ್ವಹಣೆಗೆ ಬೇರೆ ದಾರಿ ಕಾಣದೇ ಮುಂಬೈ ಕಾಮಾಟಿಪುರದಲ್ಲಿ ದೇಹ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ದೊಡ್ಡ ದೊಡ್ಡ ಶ್ರೀಮಂತರು, ರಾಜಕಾರಣಿಗಳು ಕೆಂಚಮ್ಮಳ ಸೌಂದರ್ಯಕ್ಕೆ ಮನಸೋತ್ತಿದ್ದರು.
ವೇಶ್ಯಾವಾಟಿಕೆಯಿಂದ ಲಕ್ಷ ಲಕ್ಷ ಹಣ ಸಂಪಾದನೆ ಮಾಡಿದ್ದಳು. ಆದರೆ ಆಕೆ ಸಂಪಾದಿಸಿದರ ಹಣದಿಂದ ಐಶಾರಾಮಿ ಜೀವನ ನಡೆಸಬಹುದಿತ್ತು. ಆದರೆ ಕೆಂಚಮ್ಮ ಹಾಗೇ ಮಾಡದೇ ದೇವದಾಸಿ ಪದ್ದತಿಯಿಂದ ತಾನು ಅನುಭವಿಸಿದ ಕಷ್ಟ ಇತರರು ಅನುಭವಿಸಬಾರದು ಎಂದು ಸಂಕಲ್ಪ ಮಾಡಿದಳು. ಅದಕ್ಕಾಗಿ ಆಕೆ ದುಡಿದ ಹಣವನ್ನೆಲ್ಲ ಸಮಾಜಕ್ಕೆ ಅರ್ಪಣೆ ಮಾಡಿದಳು. ತನ್ನ ವೃತ್ತಿಯಿಂದ ಬಂದ ಲಕ್ಷಾಂತರ ಹಣದಿಂದ ಸುಖಮಯ ಜೀವನ ನಡೆಸಬಹುದಿತ್ತು. ತನ್ನ ಬಂಧು ಭಾಂಧವರಿಗೆ ಆಸ್ತಿ ಪಾಸ್ತಿ ಮಾಡಬಹುದಾಗಿತ್ತು. ಆದ್ರೆ ಕೆಂಚಮ್ಮ ಬದುಕಲ್ಲಿ ಮೈಮಾರಿ ಕೋಟಿ-ಕೋಟಿ ಸಂಪಾದಿಸಿದರು ಕೊನೆಗೆ ಶರಣಾಗಿದ್ದು ಸನ್ಯಾಸತ್ವಕ್ಕೆ!
ಕೆಂಚಮ್ಮ ಮೂಲತ ಬಾಗಲಕೋಟೆ ಜಿಲ್ಲೆ ಕೊಣ್ಣೂರದವಳು. 1882 ರಲ್ಲಿ ಜನಿಸಿದ ಕೆಂಚಮ್ಮ ಚಿಕ್ಕ ವಯಸ್ಸಿನಲ್ಲೆ ದೇವದಾಸಿ ಪದ್ದತಿಗೆ ಬಲಿಯಾದವಳು. ಕಾಖಂಡಕಿ ಗ್ರಾಮದಲ್ಲಿದ್ದ ತನ್ನ ಸಂಬಂಧಿ ಜೊತೆಗೆ ಮುಂಬೈಗೆ ತೆರಳಿ ವೇಶಾವಾಟಿಯಲ್ಲಿ ತೊಡಗಿದಳು. ಅಲ್ಲಿ ಸಾಕಷ್ಟು ಹಣ ಗಳಿಸಿದ ಕೆಂಚಮ್ಮಳಿಗೆ ಈ ವೃತ್ತಿ ಸಾಕು ಎನಿಸುತ್ತದೆ. ಆ ಹೊತ್ತಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಪವಾಡ ಪುರುಷರಾಗಿದ್ದ ಭೀಮಾನಂದ ಶ್ರೀಗಳು ಜನ ಜನಿತರಾಗಿದ್ದರು. ಮುಂಬೈ ವೇಶಾವಾಟಿಕೆ ಗೃಹ ಬಿಟ್ಟು ಕಾಖಂಡಕಿಗೆ ಬಂದಿದ್ದ ಕೆಂಚಮ್ಮ ಶ್ರೀಗಳನ್ನು ನೋಡಿ ಆಧ್ಯಾತ್ಮಿಕತೆ ಕಡೆಗೆ ಒಲವು ಹೊಂದುತ್ತಾಳೆ. ಐಶಾರಾಮಿ ಜೀವನ ಸಾಕು ಎಂದು ತನ್ನ ಬಳಿಯಿದ್ದ ಚಿನ್ನಾಭರಣ, ಹಣವನ್ನು ಸಮಾಜ ಕಾರ್ಯಕ್ಕೆ ಉಪಯೋಗಿಸಿದಳು.
ಕಾಖಂಡಕಿಯಲ್ಲಿ ತನ್ನ ಗುರುಗಳಾದ ಭೀಮಾಶಂಕರ ಸ್ವಾಮೀಜಿಗಳಿಗೆ ಗದ್ದುಗೆ ಕಟ್ಟಿಸಿದಳು. ತಾನು ಸಹ ಜೀವಂತ ಇರುವಾಗಲೇ ಗುರುಗಳ ಗದ್ದುಗೆ ಬಳಿಯಲ್ಲಿ ತನ್ನ ಸಮಾಧಿ ನಿರ್ಮಿಸಿಕೊಂಡಿದ್ದಳು. ದೇವದಾಸಿ ಕೆಂಚಮ್ಮ ಕಾಖಂಡಕಿ ಗ್ರಾಮಕ್ಕೆ ಬಂದು ನೆಲೆಸಿದ ಬಳಿಕ ಸಾಮಾಜಿಕವಾಗಿ ಹಲವು ಬದಲಾವಣೆಗೆ ಕಾರಣಳಾದಳು.
ಈ ಭಾಗದಲ್ಲಿ ದೇವದಾಸಿ ಪದ್ದತಿ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದಳು. ದೇವದಾಸಿ ಅನ್ನೋ ಅನಿಷ್ಟ ಪದ್ಧತಿಯಿಂದ ಜೀವನದಲ್ಲಿ ತಾನು ಅನುಭವಿಸಿದ ಕಷ್ಟಗಳನ್ನ ಜನರ ಮುಂದೆ ತೆರೆದಿಟ್ಟಲು. ಗ್ರಾಮದಲ್ಲಿ ಸಾಮೂಹಿಕ ವಿವಾಹಗಳ ಮೂಲಕ ದೇವದಾಸಿ ಪದ್ಧತಿ ನಿರ್ಮೂಲನೆಗೆ ಶ್ರಮಿಸಿದಳು. ಈ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂದು ಶಾಲಾ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದಳು. ಜನರಲ್ಲಿ ವೈಮಾನಿಕ ವಿಚಾರಗಳು ಬೆಳೆಯಲಿ ಅನ್ನೋ ಕಾರಣಕ್ಕೆ ಬಬಲೇಶ್ವರದಲ್ಲಿನ ಶಾಂತವೀರ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ಮಂದಿರ ನಿರ್ಮಾಣ ಮಾಡಲು ಕೈ ಜೋಡಿಸಿದಳು. ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ ಮಾಡಿದಳು. ಇಂದಿಗೂ ಶಾಂತವೀರ ಶಿಕ್ಷಣ ಸಂಸ್ಥೆಯ ಕಟ್ಟಡದ ಮೇಲೆ ದೇವದಾಸಿ ಕೆಂಚಮ್ಮಳ ಹೆಸರು ಕಾಣಬಹುದಾಗಿದೆ.
ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಕೊಡುಗೆ ಅಪಾರ
ಆಗಿನ ಕಾಲದಲ್ಲಿ ಕಾಖಂಡಕಿ ಗ್ರಾಮದಲ್ಲಿ ಶಿವನ ಮಂದಿರ, ಸಮೀಪದ ಹರಳಯ್ಯನ ಗುಂಡದಲ್ಲಿ ಸಮುದಾಯ ಭವನ, ತಿಡಗುಂದಿಯಲ್ಲಿ ತನ್ನ ಗುರುವಿನ ಮಠಕ್ಕಾಗಿ ಹತ್ತಾರು ಎಕರೆ ಜಮೀನು ಲೆಕ್ಕವಿಲ್ಲದಷ್ಟು ನೆರವಿನ ಹಸ್ತ ಚಾಚಿದಳು. ವಿಧವೆಯರಿಗೆ ಹಾಗೂ ದೇವದಾಸಿ ಪದ್ದತಿಯಿಂದ ಹೊರ ಬಂದವರಿಗೆ ಹಣ ಸಂದಾಯ ಸೇರಿದಂತೆ ಸಾಮಾಜಿಕ ಕಾರ್ಯ ಮಾಡುವ ಮೂಲಕ ಈ ಭಾಗದಲ್ಲಿ ನಿತ್ಯವೂ ಪೂಜೆಗೆ ಒಳಗಾಗುತ್ತಿದ್ದಾಳೆ. 1972 ದೇವದಾಸಿ ಕೆಂಚಮ್ಮ ಇಹಲೋಕ ತ್ಯಜಿಸಿದಳು.
ಇವತ್ತು ನಮ್ಮ ದುಡಿಮೆ, ನಮ್ಮ ಸಂಪಾದನೆ ನಮ್ಮ ಕುಟುಂಬಕ್ಕೆ ಮಾತ್ರ ವಾಗಿದೆ. ಸಂಪಾದನೆಯ ವಿಷಯದಲ್ಲಿ ಸ್ವಾರ್ಥವಾಗುವ ಪ್ರತೀ ಮನುಷ್ಯರ ಸ್ವಾರ್ಥ ಯೋಚನೆಯ ನಡುವೆ ದೇವದಾಸಿ ಕೆಂಚಮ್ಮ ಸಾಮಾಜಿಕ ಅಭಿವೃದ್ದಿಯಂತಹ ಆಲೋಚನೆಗಳು ನಿಜಕ್ಕೂ ಅದ್ಭುತ. ದೇಹ ಮಾರಿಕೊಂಡು ಊರು ಉದ್ದಾರದ ಕನಸು ಕಂಡಿದ್ದ ಕೆಂಚಮ್ಮಳ ಸಾಮಾಜಿಕ ಕಾರ್ಯ ಮೆಚ್ಚುವಂತದ್ದು.