ನರೇಶ್ ಗೋಯಲ್ ಸ್ಥಾಪಿಸಿದ ಜೆಟ್ ಏರ್ವೇಸ್ (Jet Airways) ಸಂಸ್ಥೆ ದಿವಾಳಿ ಎದ್ದು 2019ರಲ್ಲಿ ಕಾರ್ಯಾಚರಣೆ ನಿಲ್ಲಿಸಿತ್ತು. ಅದನ್ನು ಖರೀದಿಸಲು ಯುಎಇ ದೇಶದ ಎನ್ಆರ್ಐ ಮುರಾರಿ ಜಲನ್ ಮತ್ತು ಕಲ್ರಾಕ್ ಕ್ಯಾಪಿಟಲ್ ಪಾರ್ಟ್ನರ್ಸ್ನ (UAE NRI Murari Jalan and Kalrock Capital Partners) ಸಮೂಹವಾದ ಜೆಕೆಸಿ ಪ್ರಸ್ತಾಪಿಸಿತ್ತು. ನಿಗದಿತ ಸಮಯದಲ್ಲಿ ನಿಗದಿತ ಹಣ ನೀಡಬೇಕೆಂಬ ಷರತ್ತುಗಳೊಂದಿಗೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ಜೆಕೆಸಿಗೆ ಅವಕಾಶ ಕೊಟ್ಟಿತು. ಮಾಲಕತ್ವ ವರ್ಗಾವಣೆಗೆ ಅನುಮತಿ ಕೊಟ್ಟಿತು.
ಐದು ವರ್ಷದಿಂದ ನಿಲುಗಡೆ ಆಗಿರುವ ಜೆಟ್ ಏರ್ವೇಸ್ ಸಂಸ್ಥೆ ಇನ್ನು ಗತ ಇತಿಹಾಸವಾಗಲಿದೆ. ಜಲನ್ ಕಲ್ರಾಕ್ ಕನ್ಸಾರ್ಟಿಯಂಗೆ (JKC ) ಮಾಲಕತ್ವ ವರ್ಗಾವಣೆ ಮಾಡುವ ಪ್ರಯತ್ನಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆ ಹಾಕಿದೆ. ಅಷ್ಟೇ ಅಲ್ಲ, ಜೆಟ್ ಏರ್ವೇಸ್ನ ಎಲ್ಲಾ ಆಸ್ತಿಗಳನ್ನು ಮಾರುವಂತೆ ಆದೇಶ ಹೊರಡಿಸಿದೆ. ಈ ಮೂಲಕ ಜೆಟ್ ಏರ್ವೇಸ್ಗೆ ಕೋರ್ಟ್ ಅಂತಿಮ ವಿದಾಯ ಹೇಳಿದೆ. ಜೆಟ್ ಏರ್ವೇಸ್ನ ಆಸ್ತಿಗಳನ್ನು ಮಾರಲು ಬರಖಾಸ್ತುದಾರರೊಬ್ಬರನ್ನು (Liquidator) ನೇಮಿಸುವಂತೆ ಮುಂಬೈ ವಿಭಾಗದ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಗೆ ಸುಪ್ರೀಂಕೋರ್ಟ್ (Supreme Court) ಆದೇಶಿಸಿದೆ.
ಆದರೆ, ನಿರ್ಣಯದ ಪ್ಲಾನ್ ಪ್ರಕಾರ ಯಾವುದೂ ನಡೆಯುತ್ತಿಲ್ಲ. ಮಾಲಕತ್ವ ವರ್ಗಾವಣೆ ಆಗಬಾರದು ಎಂದು ನ್ಯಾಯಮಂಡಳಿ ತೀರ್ಪು ಪ್ರಶ್ನಿಸಿ ಎಸ್ಬಿಐ (SBI) ಮುಂತಾದ ಸಾಲಗಾರ ಸಂಸ್ಥೆಗಳು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದವು. ಸಾಲಗಾರರ ವಾದವನ್ನು ಒಪ್ಪಿರುವ ಕೋರ್ಟ್, ಜೆಟ್ ಏರ್ವೇಸ್ ಆಸ್ತಿಯನ್ನು ಮಾರಿ ಸಂಬಂಧ ಪಟ್ಟವರಿಗೆ ಹಂಚಲು ಆದೇಶಿಸಿದೆ. ಸಂವಿಧಾನದಲ್ಲಿರುವ ಆರ್ಟಿಕಲ್ 142 ನೀಡುವ ವಿಶೇಷಾಧಿಕಾರ ಬಳಸಿ ಸುಪ್ರೀಂ ನ್ಯಾಯಪೀಠ ಈ ಮಹತ್ವದ ತೀರ್ಮಾನ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್(Chandrachud), ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ (J B Pardivala) ಮತ್ತು ಮನೋಜ್ ಮಿಶ್ರಾ (Manoj Mishra) ಅವರು ಈ ನ್ಯಾಯಪೀಠದಲ್ಲಿದ್ದರು. ಅಕ್ಟೋಬರ್ 16ರಂದು ಈ ನ್ಯಾಯಪೀಠ ಎಲ್ಲಾ ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿತ್ತು.
ಜೆಟ್ ಏರ್ವೇಸ್ನ (Jet Airways) ಮಾಲಿಕತ್ವವನ್ನು ಪಡೆಯಲು ಜೆಕೆಸಿ ಸಂಸ್ಥೆಯು ಆರಂಭದಲ್ಲಿ 350 ಕೋಟಿ ರೂ ನೀಡುವುದೂ ಸೇರಿದಂತೆ ಒಟ್ಟಾರೆ 4,783 ಕೋಟಿ ರೂ ಹಣ ಪಾವತಿಸಬೇಕೆಂದು ನಿರ್ಣಯ ಮಾಡಲಾಗಿತ್ತು. ಆದರೆ, ಆರಂಭಿಕ ಪಾವತಿಯಾದ 350 ಕೋಟಿ ರೂ ಅನ್ನು ಜೆಕೆಸಿ ನೀಡದೇ ಇದ್ದರೂ ಮಾಲಕತ್ವ ವರ್ಗಾವಣೆಗೆ ಜೆಕೆಸಿ ಅನುಮತಿ ನೀಡಿತ್ತು. ಎಸ್ಬಿಐ ಮೊದಲಾದ ಸಾಲಗಾರರ ಗುಂಪು ಈ ನಿರ್ಧಾರವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿದ್ದವು.