ಭಾರತದ ಅನೇಕ ರಾಜ್ಯಗಳ ಸ್ಥಾಪನೆಯ ಹಿಂದೆ ಅಲ್ಲಿನ ಭಾಷೆ (language) ಮತ್ತು ಪ್ರಾದೇಶಿಕ ವೈಶಿಷ್ಟ್ಯಗಳ (landscapes) ಕತೆಯಿದೆ. ಆದರೆ ಭಾರತದಲ್ಲಿ ಇಲಿಗಳು (rats) ಮತ್ತು ಬಿದಿರಿನ (bamboo) ಕಾರಣಕ್ಕೆ ರಾಜ್ಯವೊಂದು ಸೃಷ್ಟಿಯಾಗಿದ್ದು ನಿಮಗೆ ಗೊತ್ತೇ? ಈ ವಾರದ ಆರಂಭಕ್ಕೊಂದು ವಿಶಿಷ್ಟ ಕತೆ ನಿಮಗಾಗಿ.
ಬಿದಿರಿನ ಗಿಡಗಳು ವಿಪರೀತಯವಾಗಿ ಬೆಳೆಯುವುದು ಇಲ್ಲಿ ಸಮಸ್ಯೆಯಲ್ಲ. ಆದರೆ ಆ ಬಿದಿರಿನ ಹೂವು ಮತ್ತು ಬೀಜ(ಅಕ್ಕಿ)ಗಳೇ ನಿಜವಾದ ಸಮಸ್ಯೆಯನ್ನು ಹುಟ್ಟು ಹಾಕುವುದು. ಈ ಬಿದಿರಕ್ಕಿ ಬೆಳೆಯುವ ವಿದ್ಯಮಾನವನ್ನು ಮೌತಮ್ (Mautam) ಎಂದು ಕರೆಯಲಾಗುತ್ತದೆ.
ಆ ಸಮಸ್ಯೆಯ ಹೆಸರು ʼಇಲಿʼ ಮೌತಮ್ ದೊಡ್ಡ ಮಟ್ಟದಲ್ಲಿ ಇಲಿಗಳ ಉಪಟಳವನ್ನು ತನ್ನ ಜೊತೆಗೆ ಹೊತ್ತು ತರುತ್ತದೆ. ಅವು ಇದ್ದಕ್ಕಿದ್ದ ಹಾಗೆ ಸಂಖ್ಯೆಯಲ್ಲಿ ಹೆಚ್ಚುತ್ತಾ ಹೋಗಿ ಎಲ್ಲೆಲ್ಲೂ ಇಲಿಗಳೇ ಕಾಣುವಂತೆ ಮಾಡುತ್ತವೆ. ಇನ್ನು ಇಲಿಗಳು ನೀಡುವ ಉಪಟಳಗಳ ಕುರಿತು ನೀವು ಕಂಡು, ಓದಿ, ಅಥವಾ ಅನುಭವಿಸಿ ತಿಳಿದಿರಬಹುದು.
ಇಲಿಗಳು ಬಿದಿರಕ್ಕಿಯೊಂದನ್ನೇ ತಿಂದಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಅವು ಇತರ ಬೆಳೆಗಳನ್ನು ಕೂಡಾ ನಾಶಗೊಳಿಸುತ್ತವೆ. ಈ ಬೆಳೆ ನಾಶದಿಂದಾಗಿ ಊರಿಗೆ ಬರಬಂದು ತಿನ್ನಲು ಏನೂ ಇಲ್ಲದ ಸ್ಥಿತಿ ಸೃಷ್ಟಿಯಾಗುತ್ತದೆ. ಜೊತೆಗೆ ರೋಗ ಹರಡುವಿಕೆಗೂ ಇವು ಕಾರಣವಾಗುತ್ತವೆ. ಮಿಜೋರಾಂನ ಹಿರಿಯರು ಈ ಭೀಕರ ಬರವನ್ನು ಕಂಡು ಅನುಭವಿಸಿದ್ದರು. ಅವರು ಈ ಅಪಾಯವನ್ನು ಅರಿತು ಈ ಕುರಿತು ಅಂದಿನ ಅಸ್ಸಾಂ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು. (ಆಗ ಮಿಜೋರಾಮ್ ಅಸ್ಸಾಂನ ಭಾಗವಾಗಿತ್ತು). ಇದೆಲ್ಲ ನಡೆದಿದ್ದು 1958ರಲ್ಲಿ.
ಆದರೆ ಇಂತಹ ಇಂತಹ ಎಚ್ಚರಿಕೆಗಳನ್ನು ನಂಬಲು ಸಿದ್ಧವಿಲ್ಲದ ಅಸ್ಸಾಂ ಸರಕಾರವು ಆ ಹಿರಿಯರನ್ನು ಹೀಗಳೆದು ಅಲ್ಲಿಂದ ಓಡಿಸಿತು. ಮತ್ತು ಅವರ ಎಚ್ಚರಿಕೆಯನ್ನು ಬುಡಕಟ್ಟು ಜನರ ಮೂಢನಂಬಿಕೆಯೆಂದು ತಳ್ಳಿಹಾಕಿತು.
ಆದರೆ ಅವರು ಹೇಳಿದ್ದು ಸುಳ್ಳಾಗಲಿಲ್ಲ. ರಾಶಿ ರಾಶಿ ಇಲಿಗಳು ಬಂದವು. ಅದರ ಬೆನ್ನಿಗೆ ಉಂಟಾದ ಬರದಿಂದ ಜನರು ಸಾಯತೊಡಗಿದರು. ಮತ್ತು ಅದಕ್ಕಿಂತಲೂ ಹೆಚ್ಚು ಸಂಪತ್ತು ನಾಶವಾಗತೊಡಗಿತು.
ಕೊನೆಗೆ ಸ್ಥಳೀಯರೇ ಈ ಸಮಸ್ಯೆಯ ವಿರುದ್ಧ ಬಡಿದಾಡಲು ನಿಂತರು. ಅಂದು ಅವರು ಈ ಇಲಿಗಳ ವಿರುದ್ಧದ ಹೋರಾಟದಲ್ಲಿ ಬರೋಬ್ಬರಿ 20 ಲಕ್ಷ ಇಲಿಗಳನ್ನು ಕೊಂದಿದ್ದರು. ಅಂದು ಒಂದು ಇಲಿ ಕೊಂದರೆ ನಲವತ್ತು ಪೈಸೆಗಳ ಬಹುಮಾನವನ್ನು ಘೋಷಿಸಲಾಗಿತ್ತು. ಜೊತೆಗೆ ಜನರೂ ತಮ್ಮ ಜೀವನೋಪಾಯಗಳ ರಕ್ಷಣೆಗಾಗಿ ಪಣತೊಟ್ಟಿದ್ದರು.
ಅಸ್ಸಾಂ ಸರ್ಕಾರದ ಈ ನಿರ್ಲಕ್ಷ್ಯವು ಲಾಲ್ಡೆಂಗಾ ಎಂಬ ಲೆಕ್ಕಪತ್ರ ಗುಮಾಸ್ತ ಮಿಜೋ ರಾಷ್ಟ್ರೀಯ ಕ್ಷಾಮ ರಂಗವನ್ನು ಕಟ್ಟಲು ಕಾರಣವಾಯಿತು.
ಈ ಕ್ಷಾಮರಂಗವು ದಿನಕಳೆದಂತೆ ಒಂದು ರಾಜಕೀಯ ಸಂಘಟನೆಯಾಗಿ ರೂಪುಗೊಂಡಿತು. ಮತ್ತು ಇದರ ಫಲಶ್ರುತಿಯಾಗಿ ಮಿಜೋ ನ್ಯಾಷನಲ್ ಫ್ರಂಟ್ ಹುಟ್ಟಿಕೊಂಡಿತು. ನಂತರ ಮಿಜೋ ನ್ಯಾಷನಲ್ ಆರ್ಮಿ ಭಾರತದಿಂದ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸತೊಡಗಿತು. 1966ರಲ್ಲಿ ಲಾಲ್ಡೆಂಗ್ ಈ ಕುರಿತು ದೊಡ್ಡ ಹೋರಾಟವನ್ನೂ ಸಂಘಟಿಸಿದರು. ಈ ಪ್ರತ್ಯೇಕವಾದಿ ಹೋರಾಟವು ಮುಂದಿನ ಎರಡು ದಶಕಗಳ ಕಾಲ ನಡೆಯಿತು
ಮುಂದೆ ಮೊದಲು ಪಾಕಿಸ್ಥಾನದಿಂದ ಸಹಾಯ ಪಡೆದ ಲಾಲ್ಡೆಂಗ್ ನಂತರ ಬಾಂಗ್ಲಾದ ಸಹಾಯ ಪಡೆದು ಭಾರತೀಯ ಸೈನ್ಯದ ಜೊತೆ ಹೋರಡುತ್ತಾ ಕೊನೆಗೆ ರಾಜಕೀಯ ನಿರಾಶ್ರಿತನಾಗಿ ಲಂಡನ್ ಸೇರಿಕೊಂಡರು.
ಕೊನೆಗೂ 1984ರ ಅಕ್ಟೋಬರ್ ತಿಂಗಳಿನಲ್ಲಿ ಶಾಂತಿ ಮಾತುಕತೆಗಳು ನಡೆಯುವಂತೆ ಕಂಡುಬಂದವು. ಆದರೆ ಲಾಲ್ಡೆಂಗ್ ಇಂದಿರಾ ಗಾಂಧಿಯವರ ಭೇಟಿಗೆಂದು ಬಂದಿದ್ದ ದಿನವೇ ಅವರ ಕಗ್ಗೊಲೆ ನಡೆತ್ತು!
ಇದಾದ ನಂತರ ಶಾಂತಿಮಾತುಕತೆ ಇನ್ನೂ ಐದು ವರ್ಷಗಳನ್ನು ತೆಗೆದುಕೊಂಡಿತು. ರಾಜೀವ್ ಗಾಂಧಿಯವರೊಡನೆ ನಡೆದ ಈ ವರ್ಷಗಳ ಚರ್ಚೆಗಳ ನಂತರ ಕೊನೆಗೂ ಶಾಂತಿ ಮಾತುಕತೆಗೆ 1987ರಲ್ಲಿ ಸಹಿ ಹಾಕಲಾಯಿತು. ಮತ್ತು ಬಿದಿರು ಮತ್ತು ಇಲಿಗಳ ಸಾಮೂಹಿಕ ಮಾರಣಹೋಮದ 30 ವರ್ಷಗಳ ನಂತರ ಮಿಜೋರಾಂ ಅಸ್ಸಾಮಿನಿಂದ ಬೇರ್ಪಟ್ಟು ಪ್ರತ್ಯೇಕ ರಾಜ್ಯವಾಗಿ ಗುರುತಿಸಲ್ಪಟ್ಟಿತು.
ಲಾಲ್ಡೆಂಗಾ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಇಂದು ಮಿಜೋರಾಂ ತನ್ನದೇ ಆದ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಹೊಂದಿರುವ ಸುಂದರ ರಾಜ್ಯ.
ಈ ರಾಜ್ಯವು 2006ರಲ್ಲಿ ಇನ್ನೊಂದು ಮೌತಮ್ ಎದುರಿಸಿತಾದರೂ ಆಗ ಸರಕಾರ ಮುನ್ನೆಚ್ಚರಿಕೆ ವಹಿಸಿ ಎಲ್ಲೆಡೆ ಅರಿಶಿನ ಮತ್ತು ಶುಂಠಿಯ ಗಿಡಗಳನ್ನು ನೆಡಿಸಿತು. ಈ ಗಿಡಗಳ ಗಡ್ಡೆಯ ಕಟು ಪರಿಮಳವು ಇಲಿಗಳನ್ನು ದೂರ ಹೊಡೆದೋಡಿಸುತ್ತದೆ. ಇದರಿಂದಾಗಿ ಈ ಬಾರಿಯ ಬರವು ಅಷ್ಟು ತೀವ್ರವಾಗಿರಲಿಲ್ಲ. ಸರಕಾರದ ಸಣ್ಣ ನಿರ್ಲಕ್ಷ್ಯವೊಂದು ಎಷ್ಟೆಲ್ಲ ಘಟನೆಗಳಿಗೆ ಕಾರಣವಾಯಿತು ನೋಡಿ. ಇತಿಹಾಸವನ್ನು ತಿರಸ್ಕಾರದಿಂದ ನೋಡುವುದು ಎಂತಹ ಕ್ರಾಂತಿಗಳಿಗೆ ಕಾರಣವಾಗಬಹುದೆನ್ನುವುದನ್ನು ಈ ಘಟನೆ ನಮಗೆ ತಳಿಸುತ್ತದೆ. ಇತಿಹಾಸವನ್ನು ಸರಿಯಾಗಿ ತಿಳಿದು ಎಚ್ಚರದಿಂದ ಬದುಕೋಣ.
ಕನ್ನಡಕ್ಕೆ: ಶಂಕರ ಎನ್. ಕೆಂಚನೂರು
ಚಿತ್ರಗಳು ಮತ್ತು ಬರಹ ಮೂಲ: A History a Day ಟ್ವಿಟರ್ ಹ್ಯಾಂಡಲ್