ನಗರದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾದ ಕಾರಣ, ಬೆಂಗಳೂರು ನಗರದ 6 – 9 ನೇ ತರಗತಿಗಳನ್ನು ಸ್ಥಗಿತಗೊಳಿಸಲು ರಾಜ್ಯಸರ್ಕಾರ ನಿರ್ಧರಿಸಿದೆ. ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ತಿಳಿಸಿದ್ದಾರೆ.
6 ರಿಂದ 9 ನೇ ತರಗತಿಗೆ ವಿದ್ಯಾಗಮನ ಮತ್ತು ಭೌತಿಕ(ಆಫ್ಲೈನ್) ತರಗತಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು, ಪರಿಸ್ಥಿತಿಯನ್ನು ಸಿಎಂ ಯಡಿಯೂರಪ್ಪ ಅವರಿಗೆ ವಿವರಿಸಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕಳೆದ ವಾರದಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೂ ಮಕ್ಕಳ ಆರೋಗ್ಯ ದೃಷ್ಟಿಯಿಂದ 6ರಿಂದ 9ರ ವರೆಗಿನ ತರಗತಿಗಳನ್ನು ಮುಚ್ಚುವಂತೆ ಸೂಚಿಸಿತ್ತು, ಈ ನಿಟ್ಟಿನಲ್ಲಿ ಮುಂದಿನ ಅಧಿಸೂಚನೆ ಬರುವುವವರೆಗೂ ಈ ತರಗತಿಗಳನ್ನು ತೆರೆಯಲಾಗುವುದಿಲ್ಲ ಎಂದಿದ್ದಾರೆ.
ಸೋಂಕು ಹೆಚ್ಚಳದಿಂದ ನಗರದಲ್ಲಿ ಈಗಾಗಲೇ ಅನೇಕ ಖಾಸಗಿ ಶಾಲೆಗಳು ಆಫ್ಲೈನ್ ಕ್ಲಾಸ್ನಿಂದ, ಆನ್ಲೈನ್ ಕ್ಲಾಸ್ ಮೊರೆ ಹೋಗಿವೆ. 6 – 9 ನೇ ತರಗತಿಯ ಪರೀಕ್ಷೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ನಿರ್ದೇಶನ ನೀಡುತ್ತೇವೆಂದು ಹೇಳಿದ್ದಾರೆ.

ನಗರದಲ್ಲಿ ಎಸ್ಎಸ್ಎಲ್ಸಿ, ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ಗೆ ಎಂದಿನಂತೆ ಭೌತಿಕ (ಆಫ್ಲೈನ್) ತರಗತಿಗಳು ಮುಂದುವರೆಯಲಿವೆ. ಆದರೆ, ಹಾಜರಾತಿ ಕಡ್ಡಾಯವಲ್ಲ, ಇಲಾಖೆ ಹೊರಡಿಸಿದ ವೇಳಾಪಟ್ಟಿಗೆ ಅನುಗುಣವಾಗಿ ಪರೀಕ್ಷೆ ನಡೆಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಈ ಆದೇಶ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಭೌತಿಕ ತರಗತಿ ಸ್ಥಗಿತಗೊಳಿಸಬೇಕಾಗಿ ಬಂದರೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.