
ಒಳಮೀಸಲಾತಿ – ಚಾರಿತ್ರಿಕ ಪ್ರಮಾದವನ್ನು ಸರಿಪಡಿಸುವ ಒಂದು ಮಾರ್ಗ ಎಂಬ ಪರಿವೆ ಇರಲಿ
ನಾ ದಿವಾಕರ
ಭಾಗ 3
2023ರ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಕರ್ನಾಟಕದ ದಲಿತ ಚಳುವಳಿಗಳ ಮುಂದೆ ಇದ್ದ ಒಂದು ಆದ್ಯತೆ ಎಂದರೆ ಬಿಜೆಪಿಯನ್ನು ಸೋಲಿಸುವುದು, ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು. ಅನಿವಾರ್ಯ ಏಕೆಂದರೆ ಇಲ್ಲಿ ಪರ್ಯಾಯ ರಾಜಕೀಯ ಪಕ್ಷ ಅಥವಾ ಶಕ್ತಿ ಇಲ್ಲದಿರುವ ಕಾರಣಕ್ಕಾಗಿ. ಈ ಮುನ್ನ ಲೇಖನದ ವ್ಯಾಖ್ಯಾನಗಳಲ್ಲಿ ಹೇಳಿರುವ ಸೈದ್ಧಾಂತಿಕ-ತಾತ್ವಿಕ ಕಾರಣಗಳು ಹಾಗೂ ಸಂಘಟನಾತ್ಮಕ ವೈಫಲ್ಯಗಳ ಒಂದು ಪರಿಣಾಮವನ್ನು ಗುರುತಿಸಬಹುದಾದರೆ, ಅದು “ ದಲಿತ ರಾಜಕಾರಣ ” ಎಂಬ ಒಂದು ಉದಾತ್ತ ಗುರಿಯನ್ನು ಸಾಧಿಸಲಾಗದೆ ಇರುವುದು. ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಹೊರತಾಗಿ ಈ ಹಾದಿಯಲ್ಲಿ ಅನ್ಯ ದಿಕ್ಕುಗಳು ಕಾಣಲಾಗುವುದಿಲ್ಲ. ಆದರೆ ಬಿಎಸ್‌ಪಿ ತನ್ನ ರಾಜಕೀಯ ಬಾಹುಗಳನ್ನು ಚಾಚಲು ವಿಫಲವಾಗಿರುವುದರಿಂದ, ಇದು ಕರ್ನಾಟಕದ ಶೋಷಿತ ಸಮುದಾಯಗಳಿಗೆ ರಾಜಕೀಯ ಪರ್ಯಾಯವಾಗಿ ಕಾಣಲು ಸಾಧ್ಯವಾಗಿಲ್ಲ.
ತಾತ್ವಿಕ ನೆಲೆಯಲ್ಲಿ ನೋಡಿದಾಗ, ಬಿಎಸ್‌ಪಿ ಅಂಬೇಡ್ಕರ್‌ವಾದವನ್ನು ಅಥವಾ ಅಂಬೇಡ್ಕರ್ ಅವರ ರಾಜಕೀಯ ಚಿಂತನೆಗಳನ್ನು ಅಳವಡಿಸಿಕೊಂಡು, ಬುದ್ಧಪ್ರಜ್ಞೆಯನ್ನು ತಳಸಮಾಜದಲ್ಲಿ ಮೂಡಿಸುವ ಪ್ರಯತ್ನ ನಡೆಸುತ್ತಿರುವುದಾದರೂ, ಸಮಕಾಲೀನ ರಾಜಕಾರಣಕ್ಕೆ ಬೇಕಾದ ಆರ್ಥಿಕ ಚಿಂತನೆ, ಸಾಂಸ್ಕೃತಿಕ ಒಳನೋಟ ಮತ್ತು ಸಾಮಾಜಿಕ ಸೂಕ್ಷ್ಮತೆಗಳನ್ನು ರೂಢಿಸಿಕೊಳ್ಳುವುದರಲ್ಲಿ ಹಿಂದೆ ಉಳಿದಿರುವುದು ಮೇಲ್ನೋಟಕ್ಕೆ ಕಾಣುವಂತಹ ವಾಸ್ತವ. ಅಂಬೇಡ್ಕರ್ ಅವರ ದಾರ್ಶನಿಕ ಚಿಂತನೆಗಳನ್ನು ಅನುಸರಿಸುವುದು ಅಥವಾ ಅನುಕರಿಸುವುದು ಒಂದು ಹಂತದವರೆಗೂ ಅನಿವಾರ್ಯವೇನೋ ಹೌದು, ಆದರೆ ಇದರಿಂದಾಚೆಗೆ ವರ್ತಮಾನದ ಸಮಾಜಕ್ಕೆ, ವಿಶೇಷವಾಗಿ ಮಿಲೆನಿಯಂ ಯುವ ಸಮೂಹಗಳಿಗೆ ಇದನ್ನೂ ದಾಟಿದ ಹಲವು ವಾಸ್ತವಗಳನ್ನು ಮನದಟ್ಟು ಮಾಡುವ ಅವಶ್ಯಕತೆ ಇರುವುದನ್ನು ನಿರ್ಲಕ್ಷಿಸಲಾಗುವುದಿಲ್ಲ.

ನವ ಉದಾರವಾದದ ಒಳಸೂಕ್ಷ್ಮಗಳು
ಇದರಲ್ಲಿ ಬಹಳ ಮುಖ್ಯವಾಗಿ ಗಮನಿಸಬಹುದಾದ ಅಂಶಗಳೆಂದರೆ ನವ ಉದಾರವಾದಿ ಆರ್ಥಿಕತೆ ಮತ್ತು ಅದು ಶೋಷಿತ ತಳಸಮುದಾಯಗಳ ಮೇಲೆ ಉಂಟುಮಾಡುತ್ತಿರುವ ಭೀಕರ ಪರಿಣಾಮಗಳು. ಅಂಬೇಡ್ಕರ್ ಅವರ ತಾತ್ವಿಕ ನಿಲುವುಗಳನ್ನೇ ಆಧರಿಸಿದಾಗ ನಮಗೆ ಅಲ್ಲಿ ಸಮಸಮಾಜದ ಸ್ಥಾಪನೆಯೊಂದಿಗೇ, ಆಡಳಿತಾತ್ಮಕವಾಗಿ ಸಮಾಜವಾದಿ ನೀತಿಗಳು ಮುಖ್ಯವಾಗಿ ಕಾಣುತ್ತವೆ. ಆದರೆ ವರ್ತಮಾನದ ಡಿಜಿಟಲ್ ಬಂಡವಾಳಶಾಹಿ ಆರ್ಥಿಕತೆಯ ವಾತಾವರಣದಲ್ಲಿ ಸಂಪನ್ಮೂಲಗಳ ಸಮಾನ ವಿತರಣೆ, ಸಂಪತ್ತಿನ ಸಮಾನ ಹಂಚಿಕೆ ಹಾಗೂ ಉತ್ಪಾದನಾ ಮೂಲಗಳ ಸಾರ್ವಜನಿಕ ಸ್ವರೂಪವನ್ನು ಕಾಪಾಡುವ ಬಗೆ ಹೇಗೆ ಎಂದು ಯೋಚಿಸದೆ ಹೋದರೆ, ಬಹುಶಃ ಅಂಬೇಡ್ಕರ್ ಕನಸಿನ ಸಮಾಜವಾದ ಅಲಂಕಾರಿಕ ಘೋಷಣೆಯಾಗಿ ಉಳಿದುಬಿಡುತ್ತದೆ. ಇದು ಸಾಕಾರಗೊಳ್ಳಬೇಕಾದರೆ, ಪ್ರಸ್ತುತ ಆಳುವ ವರ್ಗಗಳು ಅನುಸರಿಸುತ್ತಿರುವ ಆರ್ಥಿಕ ನೀತಿಗಳನ್ನು, ಬೃಹದಾರ್ಥಿಕ ಆರ್ಥಿಕ ಚಿಂತನೆಗಳನ್ನು (Macro Economic thoughts) ಪುನರ್ ನಿರ್ವಚಿಸಬೇಕಾದ ಅಗತ್ಯತೆ ಖಂಡಿತವಾಗಿಯೂ ಇದೆ.
ಇದು ಸಾಧ್ಯವಾಗಬೇಕಾದರೆ ʼ ದಲಿತ ರಾಜಕಾರಣ ʼ ಅಥವಾ ಬಹುಜನ ರಾಜಕಾರಣದ ತಾತ್ವಿಕ ನೆಲೆಗಳಲ್ಲಿ ಬಂಡವಾಳಶಾಹಿ-ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯನ್ನು ಕುರಿತಂತೆ ಸ್ಪಷ್ಟ ಸೈದ್ಧಾಂತಿಕ ನಿಲುವು ಅವಶ್ಯವಾಗಿ ಇರಬೇಕಾಗುತ್ತದೆ. ಸಾಂವಿಧಾನಿಕ ಸವಲತ್ತು-ಸೌಲಭ್ಯಗಳಿಂದಾಚೆಗೆ ನೋಡದೆ ಹೋದರೆ ಈ ನಿಲುವು ಸಾಧ್ಯವಾಗುವುದೂ ಇಲ್ಲ. ಏಕೆಂದರೆ ಇಂದಿಗೂ ಈ ಸವಲತ್ತುಗಳಿಂದ ವಂಚಿತವಾಗಿರುವ ಶೋಷಿತ ಸಮುದಾಯದ ಕೋಟ್ಯಂತರ ಮಂದಿ ನಮ್ಮ ನಡುವೆ ಇದ್ದಾರೆ. ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಒಳಮೀಸಲಾತಿ ಪರ ಮತ್ತು ವಿರೋಧಿ ಹೋರಾಟಗಳು ಇದನ್ನೇ ಸೂಚಿಸುತ್ತವೆ. ಈ ವಂಚಿತ ಸಮುದಾಯಗಳ ನಡುವೆ ನಿಂತು ಯೋಚಿಸಿದಾಗ, ಅಂಬೇಡ್ಕರ್ ರೂಪಿಸಿದ ಮೀಸಲಾತಿ ನೀತಿಗಳು ಜಾತಿಗಳಲ್ಲಿ ವರ್ಗಗಳನ್ನು ಸೃಷ್ಟಿಸುವ ಒಂದು ಸೇತುವೆಯಾಗಿದೆಯೇ ಹೊರತು, ಎಲ್ಲ ಶೋಷಿತ ಸಮಾಜಗಳನ್ನೂ ಒಳಗೊಳ್ಳಬಹುದಾದ ಹೆದ್ದಾರಿ ಆಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಸಾಂವಿಧಾನಿಕ ನೆಲೆಯಲ್ಲಿ ಅಂತರಗಳು
ಹಾಗಾಗಿ ಸಾಂವಿಧಾನಿಕ ಫಲಾನುಭವಿ ವರ್ಗವೊಂದು ಶೋಷಿತರ ನಡುವೆಯೇ ಹುಟ್ಟಿಕೊಂಡಿದ್ದು, ಒಂದು ನೆಲೆಯಲ್ಲಿ ಸೈದ್ಧಾಂತಿಕವಾಗಿ ಯಥಾಸ್ಥಿತಿವಾದಿಗಳಾಗಿರುವುದನ್ನು ಗುರುತಿಸಬಹುದು. ಈ ಗುಂಪು ದಲಿತರಲ್ಲೇ ಎಡ-ಬಲ ಎಂದು ವರ್ಗೀಕರಿಸಿ ನೋಡಿದರೂ ಸಹ, ತಮಗಿಂತಲೂ ಕೆಳಗಿನ ಅಥವಾ ಆರ್ಥಿಕವಾಗಿ ಹಿಂದುಳಿದ, ಮೀಸಲಾತಿಯನ್ನೂ ಒಳಗೊಂಡಂತೆ, ಸಂವಿಧಾನದ ಸವಲತ್ತುಗಳಿಂದ ವಂಚಿತವಾಗಿರುವ ಬೃಹತ್ ಜನಸಂಖ್ಯೆಯ ಕಡೆ, ನೋಡದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದು ಇಡೀ ದಲಿತ ಚಳುವಳಿಯಲ್ಲಿ ಗುರುತಿಸಬಹುದಾದ ಒಂದು ಲಕ್ಷಣ ಮತ್ತು ನ್ಯೂನತೆ. ಈ ಕಾರಣದಿಂದಲೇ ಕರ್ನಾಟಕದಲ್ಲಿ ಐದು ದಶಕಗಳ ನಿರಂತರ ಸಂಘರ್ಷ, ಹೋರಾಟಗಳ ಹೊರತಾಗಿಯೂ ʼದಲಿತ ಕಾರಣ ʼ ಒಂದು ತಾತ್ವಿಕ ರೂಪ ಪಡೆಯದೆ ಇರುವುದನ್ನು ಸಹ ಗುರುತಿಸಬೇಕಿದೆ. ಇದರ ಕಾರಣಗಳನ್ನು ಶೋಧಿಸುವ ಪ್ರಯತ್ನಗಳು ನಡೆದಿರುವುದೋ ಇಲ್ಲವೋ ಎನ್ನುವುದಕ್ಕಿಂತಲೂ, ಫಲಾನುಭವಿ ವರ್ಗಗಳು ಅಧಿಕಾರ ರಾಜಕಾರಣದೊಂದಿಗೆ ಹೊಂದಿರುವ ನಿಕಟ ಸಂಬಂಧಗಳು ಈ ಶೋಧನೆಗೆ ಅಡ್ಡಗೋಡೆಯಾಗಿ ಪರಿಣಮಿಸಿರುವುದು ವಾಸ್ತವ.

ಇಲ್ಲಿ ಮುಂದುವರೆದ ಫಲಾನುಭವಿ ವರ್ಗಗಳಿಗೆ ದೊರೆಯುವ ಸಾಮಾಜಿಕ ಅಂತಸ್ತು-ಸ್ಥಾನಮಾನ, ರಾಜಕೀಯ ಪ್ರಾತಿನಿಧ್ಯ ಮತ್ತು ಸಾಂಸ್ಕೃತಿಕ ಅವಕಾಶಗಳು ಸಾಂಘಿಕ ನೆಲೆಯಲ್ಲಿ ಅಸ್ತಿತ್ವವಾದವನ್ನು ಪ್ರಚೋದಿಸಿದರೆ, ಸಾಂಸ್ಥಿಕವಾಗಿ ನಿರ್ಲಿಪ್ತತೆಯನ್ನು ಬೆಳೆಸುತ್ತದೆ. ಹಾಗಾಗಿಯೇ ಅಂಬೇಡ್ಕರ್‌ವಾದವನ್ನು ಸಂಕುಚಿತಗೊಳಿಸಿ, ಕೇವಲ ಸಾಂವಿಧಾನಿಕ ಸವಲತ್ತು ಅಥವಾ ಅವಕಾಶಗಳಿಗೆ ಸೀಮಿತಗೊಳಿಸಿರುವುದರಿಂದ, ಅಂಬೇಡ್ಕರ್ ಅವರ ಸೈದ್ಧಾಂತಿಕ ಆಲೋಚನೆಗಳಲ್ಲಿ ಬಹಳ ಮುಖ್ಯವಾಗಿ ಕಾಣುವ ಮಹಿಳಾ ಪ್ರಾತಿನಿಧ್ಯ ಮತ್ತು ಎಲ್ಲರನ್ನೂ ಒಳಗೊಳ್ಳುವ-ಎಲ್ಲರೊಡನೆ ಹಂಚಿಕೊಂಡು ಬಾಳುವ ತತ್ವಗಳು ಹಿಂದಕ್ಕೆ ಸರಿದಿವೆ. ಅಂಬೇಡ್ಕರ್ ಅವರನ್ನು ಆರಾಧಿಸುವ ಒಂದು ಅತಿರೇಕದ ಸಂಸ್ಕತಿಯೂ ಸಹ ಎಲ್ಲ ಸಂಘಟನೆಗಳಲ್ಲೂ ನೆಲೆ ಮಾಡಿರುವುದರಿಂದ, ಸಹಜವಾಗಿಯೇ ಅವರ ಮೂಲ ಚಿಂತನೆಗಳಿಂದಾಚೆಗೆ ನೋಡುವ ಒಂದು ವಿಧಾನವನ್ನು ಅಳವಡಿಸಿಕೊಳ್ಳುವುದು ಸಾಧ್ಯವಾಗಿಲ್ಲ.
ಶೋಷಿತರಷ್ಟೇ ಅಲ್ಲದೆ, ಎಡಪಂಥೀಯ ಕಾರ್ಮಿಕ ಹೋರಾಟಗಳಲ್ಲೂ ಸಹ ಈಗಾಗಲೇ ಫಲಾನುಭವಿಗಳಾಗಿರುವವರು ಹೋರಾಟ ಮತ್ತು ಚಳುವಳಿಗಳ ಮುಂದಾಳತ್ವ ವಹಿಸಿದಾಗ, ಸಹಜವಾಗಿಯೇ ಒಂದು ಹಂತದಲ್ಲಿ ಪರಿಸ್ಥಿತಿಯೊಡನೆ ರಾಜಿಯಾಗುವ, ಸರ್ಕಾರಗಳೊಡನೆ ಹೊಂದಾಣಿಕೆಯನ್ನು ಬಯಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇದೇ ಮುಂದಾಳತ್ವವನ್ನು ಕೊಂಚ ಮಟ್ಟಿಗಾದರೂ ಅವಕಾಶವಂಚಿತರಿಗೆ ನೀಡಿದಾಗ, ಹೋರಾಟಗಳು ತಾರ್ಕಿಕ ಅಂತ್ಯ ತಲುಪಿ, ಅಂತಿಮ ನ್ಯಾಯವನ್ನು ಗಳಿಸುವ ನಿಟ್ಟಿನಲ್ಲಿ ಯಶಸ್ವಿಯಾಗುವ ಸಾಧ್ಯತೆಗಳಿರುತ್ತವೆ. ಕಳೆದ ಮೂರು-ನಾಲ್ಕು ದಶಕಗಳಲ್ಲಿ ಬಹುತೇಕ ಹೋರಾಟಗಳು ತಾರ್ಕಿಕ ಅಂತ್ಯ ತಲುಪದೆ, ಉದ್ದೇಶಿತ ಗುರಿ ಮುಟ್ಟದೆಯೇ ಅಂತ್ಯ ಕಂಡಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಈ ಒಳಸೂಕ್ಷ್ಮವೂ ಕಂಡುಬರುತ್ತದೆ. ಮುಂದಿನ ದಿನಗಳಲ್ಲಿ ಶೋಷಿತರ ಮತ್ತು ಜನಪರ ಹೋರಾಟಗಳು ಈ ದಿಕ್ಕಿನಲ್ಲಿ ಯೋಚಿಸಬೇಕಿದೆ.

ಚಳುವಳಿಗಳ ಆದ್ಯತೆ ಮತ್ತು ವಾಸ್ತವ
ಹಾಗೆ ನೋಡಿದ್ದಲ್ಲಿ ದಲಿತ ಸಮಾಜವನ್ನೂ ಒಳಗೊಂಡಂತೆ, ಇಡೀ ಸಮಾಜದಲ್ಲಿ ಬೇರೂರಿರುವ ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಲಕ್ಷಣಗಳ ವಿರುದ್ಧ ನಿರ್ದಿಷ್ಟ ಗುರಿಯೊಂದಿಗೆ ಹೋರಾಡುವುದು ದಲಿತ ಚಳುವಳಿಗಳ ಆದ್ಯತೆಯಾಗಬಹುದಿತ್ತು. ಇದರ ಪರಿಣಾಮ, ಇಂದಿಗೂ ಸಹ ದಲಿತ ಸಂಘಟನೆಗಳಲ್ಲಿ ಆಂತರಿಕವಾಗಿ ಅಥವಾ ಬಾಹ್ಯ ಚಟುವಟಿಕೆ-ಹೋರಾಟಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಕಲ್ಪನೆಗೆ ಚಾಲನೆ ದೊರೆತಿಲ್ಲ. ಅಂಬೇಡ್ಕರ್ ಜಯಂತಿಯನ್ನು ಆಚರಿಸುವ ಸಾವಿರಾರು ಕಾರ್ಯಕ್ರಮಗಳಲ್ಲಿ ಈ ಕೊರತೆಯನ್ನು ಸ್ಪಷ್ಟವಾಗಿ ಕಾಣಬಹುದು. ವಿಶಾಲ ಸಮಾಜದಲ್ಲಿರುವಂತೆಯೇ, ದಲಿತ ಸಮಾಜದಲ್ಲೂ ಸಹ ಅತಿ ಹೆಚ್ಚು ಅವಕಾಶವಂಚಿತರಾಗಿರುವುದು, ಸೌಲಭ್ಯವಂಚಿತರಾಗಿರುವುದು ಮಹಿಳಾ ಸಮೂಹವೇ ಎನ್ನುವುದನ್ನು ಅರ್ಥಮಾಡಿಕೊಳ್ಳಲು ವಿಶೇಷ ರಾಕೆಟ್ ತಂತ್ರಜ್ಞಾನದ ಅರಿವಾಗಲೀ, ಸಂಶೋಧನೆಯಾಗಲೀ ಬೇಕಿಲ್ಲ.
ಇದರ ಪರಿಣಾಮ, ಮಹಿಳಾ ಪ್ರಾತಿನಿಧ್ಯದ ಕೊರತೆ ಎದ್ದು ಕಾಣುವುದಷ್ಟೇ ಅಲ್ಲದೆ, ದಲಿತ ಸಮಾಜಗಳ ಒಳಗೇ ಪರಸ್ಪರ ಸಾಮಾಜಿಕ ಬಹಿಷ್ಕಾರ ಹೇರುವ, ಮಹಿಳೆಯರನ್ನು ಅಧೀನರಾಗಿ ನೋಡುವ ಹಾಗೂ ಮೇಲಂತಸ್ತಿನ ಸಮಾಜದಲ್ಲಿ ಊಳಿಗಮಾನ್ಯ ಗುಣಗಳನ್ನು ಅಳವಡಿಸಿಕೊಳ್ಳುವ ವಿದ್ಯಮಾನಗಳನ್ನು ಗುರುತಿಸಬಹುದು. ಇದರ ಮತ್ತೊಂದು ಪರಿಣಾಮವನ್ನು ದಲಿತ ಮಹಿಳೆಯರ ಆರ್ಥಿಕ ದುಸ್ಥಿತಿಯಲ್ಲಿ ಅಥವಾ ಹಿಂದುಳಿಯುವಿಕೆಯಲ್ಲಿ ಕಾಣಬಹುದು. ನವ ಉದಾರವಾದಿ ಆರ್ಥಿಕ ನೀತಿಗಳಿಗೆ ಬಲಪಂಥೀಯ ಚಿಂತನೆಗಳು ಮುಕ್ತವಾಗಿ ತೆರೆದುಕೊಂಡಿರುವುದರಿಂದ, ಮಹಿಳೆಯನ್ನು ಗೃಹಬಂಧಿಯನ್ನಾಗಿ ಮಾಡುವ ಸಾಂಪ್ರದಾಯಿಕ ಆಲೋಚನೆಗಳಿಗೆ ಇಂದಿಗೂ ಸಹ ಮುಕ್ತ ಅವಕಾಶ ಲಭಿಸುತ್ತಿದೆ. ಆರೆಸ್ಸೆಸ್ ನಾಯಕರು ಮಹಿಳೆಯನ್ನು ಸಂಪ್ರದಾಯಗಳ ಕಟ್ಟುಪಾಡುಗಳಲ್ಲಿ ನಿರ್ಬಂಧಿಸುವಂತಹ ಮಾತುಗಳನ್ನಾಡುತ್ತಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ.

ವರ್ತಮಾನದ ರಾಜಕೀಯ ಪರಿಸರದಲ್ಲಿ
ಈ ತಾತ್ವಿಕ ಕಾರಣಗಳಿಂದಾಗಿಯೇ ಅಂಬೇಡ್ಕರ್ ಕನಸಿನ ʼದಲಿತ ರಾಜಕಾರಣʼ ಕೈಗೂಡಲು ಸಾಧ್ಯವಾಗಿಲ್ಲ. ದಲಿತರು ರಾಜಕೀಯ ಹಕ್ಕುಗಳನ್ನು ಪಡೆಯುವುದೆಂದರೆ, ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಚುನಾಯಿತರಾಗುವುದಕ್ಕೆ ಸೀಮಿತವಾಗಿದೆ. ಸಹಜವಾಗಿಯೇ ಈ ಚುನಾವಣಾ ಪ್ರಕ್ರಿಯೆಯಲ್ಲಿ ದಲಿತ ಸಮುದಾಯಗಳು ಬೂರ್ಷ್ವಾ ರಾಜಕೀಯ ಪಕ್ಷಗಳನ್ನೇ ಅವಲಂಬಿಸಬೇಕಾಗುತ್ತದೆ. ಕಾಂಗ್ರೆಸ್ ಆಗಲೀ, ಬಿಜೆಪಿಯಾಗಲೀ, ಇನ್ನಿತರ ಯಾವುದೆ ರಾಜಕೀಯ ಪಕ್ಷಗಳಲ್ಲೂ ಸಹ ಮಹಿಳಾ ಪ್ರಾತಿನಿಧ್ಯವನ್ನು ಪ್ರಧಾನವಾಗಿ ಗುರುತಿಸಲಾಗುವುದಿಲ್ಲ. ಎಡಪಕ್ಷಗಳಲ್ಲೂ, ಎಡಪಂಥೀಯ ಕಾರ್ಮಿಕ ಸಂಘಟನೆಗಳಲ್ಲೂ ಈ ಕೊರತೆ ಢಾಳಾಗಿ ಕಾಣುತ್ತದೆ. ಇದೇ ತಾತ್ವಿಕ ನೆಲೆಗಳನ್ನು ಒಪ್ಪಿಕೊಂಡು, ಸಾಮಾಜಿಕ ಮೇಲ್ ಚಲನೆ ಪಡೆದಿರುವಂತಹ ದಲಿತ ಸಮುದಾಯಗಳು, ಅಧಿಕಾರ ರಾಜಕಾರಣದ ಒಂದು ಭಾಗವಾಗಿವೆ. ಇಲ್ಲಿಯೂ ಸಹ ಸಚಿವ ಸಂಪುಟದಿಂದ ಮುಖ್ಯಮಂತ್ರಿ, ಪ್ರಧಾನಮಂತ್ರಿಯ ಹುದ್ದೆಯವರೆಗೂ ಪಕ್ಷಗಳ ಪುರುಷಪ್ರಧಾನ ಹೈಕಮಾಂಡ್‌ಗಳನ್ನೇ ಅವಲಂಬಿಸುವುದು ಅನಿವಾರ್ಯವಾಗುತ್ತದೆ.
ಈ ರಾಜಕೀಯ ಪರಿಸರದಲ್ಲಿ ಈಗಾಗಲೇ ಪಕ್ಷಗಳ ಒಳಗೆ ಒಂದು ಪ್ರಬಲ ಶಕ್ತಿ ಕೇಂದ್ರವಾಗಿ ರೂಪುಗೊಂಡಿರಬಹುದಾದ ದಲಿತ ಶಾಸಕರು/ಸಂಸದರು, ತಮ್ಮ ವೈಯುಕ್ತಿಕ ಕುಟುಂಬದ ಮಹಿಳಾ ಸದಸ್ಯರನ್ನು ರಾಜಕೀಯವಾಗಿ ಮೇಲೆತ್ತುವ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಆದರೆ ಇದು ಸಮಾಜದಲ್ಲಿ ಈಗಾಗಲೇ ಇರುವಂತಹ ಲಿಂಗತಾರತಮ್ಯಗಳನ್ನು, ಪ್ರಾತಿನಿಧ್ಯದ ಕೊರತೆಯನ್ನು ನೀಗಿಸಲಾಗುವುದಿಲ್ಲ . ಶೋಷಿತರ ಪ್ರತಿನಿಧಿಗಳಾಗಿ ಈ ಚುನಾಯಿತ ನಾಯಕರು, ನವ ಉದಾರವಾದದ ಆರ್ಥಿಕ ನೀತಿಗಳನ್ನಾಗಲೀ, ಕಾರ್ಮಿಕ ಸಂಹಿತೆಗಳನ್ನಾಗಲೀ ವಿರೋಧಿಸುವುದಿಲ್ಲ. ಈ ನೀತಿಗಳಿಂದ ಅತಿ ಹೆಚ್ಚು ಬಾಧಿತರಾಗಿರುವ ದಲಿತ ಸಮುದಾಯಗಳು ಸಹಜವಾಗಿ ರಾಜಕೀಯೇತರ ಕಾರ್ಮಿಕ ಸಂಘಟನೆಗಳನ್ನೆ ಅವಲಂಬಿಸಬೇಕಾಗುತ್ತದೆ. ದಲಿತ ರಾಜಕಾರಣ ಒಂದು ಪರ್ಯಾಯ ರಾಜಕೀಯ ಶಕ್ತಿಯಾಗಿ ರೂಪುಗೊಂಡಿದ್ದಲ್ಲಿ, ಈ ಸಮಸ್ಯೆಗಳನ್ನು ಸಮರ್ಪಕವಾಗಿ ಎದುರಿಸಲು ಸಾಧ್ಯವಾಗುತ್ತಿತ್ತು. ಇದಕ್ಕಿಂತಲೂ ಮುಖ್ಯವಾಗಿ, ಆರ್ಥಿಕ ನೀತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದಿತ್ತು.

ದಿವಂಗತ ಕಾನ್ಷಿರಾಮ್ ಅವರು ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸುವಾಗ ಇದ್ದ ಉದ್ದೇಶವೂ ಇದೇ ಆಗಿತ್ತು. ಆದರೆ ಈಗ ಬಿಎಸ್‌ಬಿ ಒಂದು ಆರ್ಥಿಕ ಪ್ರಣಾಳಿಕೆಯನ್ನೇ ರೂಪಿಸಿಲ್ಲ ಎನ್ನುವುದು ಚುನಾವಣೆಗಳ ಸಂದರ್ಭದಲ್ಲಿ ಎದ್ದು ಕಾಣುತ್ತದೆ. ವಿಶಾಲ ದಲಿತ ಚಳುವಳಿಯ ದೃಷ್ಟಿಯಿಂದ ನೋಡಿದಾಗ, ಈ ಸೈದ್ಧಾಂತಿಕ ಕೊರತೆಯೇ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಗೆ ದಲಿತ ಸಮುದಾಯಗಳನ್ನು ಆಕರ್ಷಿಸಲು ಹಾಗೂ ಸಂಘಟನೆಗಳ ನಡುವೆ ಬಿರುಕುಗಳನ್ನು ಸೃಷ್ಟಿಸಲು ಸುಲಭವಾಗುತ್ತದೆ. ಇದರ ಒಂದು ಆಯಾಮವನ್ನು ಈಗಿನ ಒಳಮೀಸಲಾತಿ ವಿವಾದ ಸೃಷ್ಟಿಸಿರುವ ಬಿರುಕುಗಳಲ್ಲಿ ಗುರುತಿಸಬಹುದು. ಈಗ ಕರ್ನಾಟಕದಲ್ಲಿ ದಲಿತ ಸಮಾಜದ ಎಡಗೈ-ಬಲಗೈ ಸಮುದಾಯಗಳ ನಡುವೆ ಸೃಷ್ಟಿಯಾಗಿರುವ ಕಂದಕಕ್ಕೆ ತತ್ವ ಸಿದ್ಧಾಂತಗಳಿಗಿಂತಲೂ ಮೂಲ ಕಾರಣ ಇರುವುದು ಸಾಂವಿಧಾನಿಕ ಅವಕಾಶ/ಸವಲತ್ತುಗಳ ಹಂಚಿಕೆ ಮತ್ತು ವಿತರಣೆಯಲ್ಲಿ.
ದನಿಯಿಲ್ಲದ ಶೋಷಿತರ ಕಡೆಗೆ
ಈ ಬಿರುಕು ತೀವ್ರವಾಗುತ್ತಾ ದೊಡ್ಡ ಗೋಡೆಗಳಾಗಿ ಏಳುತ್ತಿರುವುದಕ್ಕೆ ಕಾರಣ, ತಪ್ಪಿಹೋಗುವ ಸಾಂವಿಧಾನಿಕ ಅವಕಾಶಗಳು ಮತ್ತು ಸಂವಿಧಾನ ನೀಡುವಂತಹ ಸವಲತ್ತುಗಳಿಂದ ವಂಚಿತರಾಗುತ್ತಿರುವುದು. ಮೂಲತಃ ಒಳಮೀಸಲಾತಿಯಂತಹ ಸವಲತ್ತು ಏಕೆ ದಲಿತ ಸಮುದಾಯವನ್ನು ಅಡ್ಡಡ್ಡಲಾಗಿ ಸೀಳುತ್ತಿದೆ ? ಈ ಪ್ರಶ್ನೆಗೆ ಉತ್ತರವನ್ನು ನವ ಉದಾರವಾದಿ ಆರ್ಥಿಕ ನೀತಿಗಳಲ್ಲಿ ಮತ್ತು ಅದನ್ನು ಮುಕ್ತವಾಗಿ ಅನುಮೋದಿಸಿ, ಅನುಸರಿಸುವ ದಲಿತ ರಾಜಕಾರಣಿಗಳಲ್ಲಿ, ಇದರ ವಿರುದ್ಧ ಹೋರಾಟಗಳನ್ನು ರೂಪಿಸದ ದಲಿತ ಚಳುವಳಿಗಳಲ್ಲಿ ಹಾಗೂ ಸಂಘಟನೆಗಳ ನಾಯಕರ ಹಿಂಜರಿಕೆಯಲ್ಲಿ. ಜಾಗತೀಕರಣದ ಆರಂಭದ ದಿನಗಳಲ್ಲಿ ಇದನ್ನು ದಲಿತರ ಪಾಲಿಗೆ ಸ್ವರ್ಗದ ಬಾಗಿಲು ತೆರೆಯುವ ಅವಕಾಶ ಎಂದು ಬಣ್ಣಿಸಿದ ದಲಿತ ಚಿಂತಕರೂ ನಮ್ಮ ನಡುವೆ ಇದ್ದರು. ಆಗ ಆನಂದ್ ತೇಲ್ತುಂಬ್ಡೆ Globalisation and the Dalits (ಇದನ್ನು ನಾನು ಅನುವಾದಿಸಿದ್ದೇನೆ –ಜಾಗತೀಕರಣ ಮತ್ತು ದಲಿತರು- ಲಡಾಯಿ ಪ್ರಕಾಶನದಲ್ಲಿ ಲಭ್ಯ- https://www.bookbrahma.com/book/jagateekaran-mattu-dalitaru#google_vignette) ಕೃತಿಯನ್ನು ರಚಿಸಿದಾಗ ಅವರ ವಿದ್ವತ್ತನ್ನೂ ಲೆಕ್ಕಿಸದೆ ಆತನನ್ನು ಎಡಪಂಥೀಯ, ಮಾರ್ಕ್ಸ್‌ವಾದಿ, ದಲಿತ ವಿರೋಧಿ ಎಂದು ಖಂಡಿಸಿದ್ದನ್ನೂ ನೋಡಿದ್ದೇವೆ.
ಆದರೆ ಈಗ ಕರ್ನಾಟಕದಲ್ಲಿ ಮತ್ತು ಇತರ ರಾಜ್ಯಗಳಲ್ಲೂ ಎದ್ದಿರುವ ಜಾತಿ ಸಮೀಕ್ಷೆಯ ಕೂಗು, ಒಳಮೀಸಲಾತಿಯ ಆಗ್ರಹಗಳು ತೇಲ್ತುಂಬ್ಡೆ ಅವರ ವಾದವನ್ನು ಪುಷ್ಟೀಕರಿಸಿವೆ. ಒಳಮೀಸಲಾತಿಯ ತುರ್ತು ಉದ್ಭವಿಸಿರುವುದೇ ಸರ್ಕಾರಗಳು ಹೊಸ ಆರ್ಥಿಕ ನೀತಿಗಳ ಅನುಸಾರ, ಸರ್ಕಾರಿ ನೌಕರಿಯನ್ನು ಕಡಿತಗೊಳಿಸುತ್ತಿರುವುದು, ಶಿಕ್ಷಣವನ್ನು ಕಾರ್ಪೋರೇಟ್ ವಾಣಿಜ್ಯೀಕರಣಗೊಳಿಸುತ್ತಿರುವುದು ಮತ್ತು ಶೋಷಿತರಿಗೆ ಇದ್ದಂತಹ ಅವಕಾಶಗಳನ್ನೂ, ಸ್ಕಾಲರ್‌ಷಿಪ್ ಮುಂತಾದ ಸೌಲಭ್ಯಗಳನ್ನೂ ಕಿತ್ತುಕೊಳ್ಳುತ್ತಿರುವುದು. ರೋಹಿತ್ ವೇಮುಲ ನಮ್ಮ ನಡುವೆ ದುರಂತ ದಂತಕತೆಯಾಗಿ ನಿಂತಿದ್ದಾರೆ. ಈಗಲಾದರೂ ದಲಿತ ಚಳುವಳಿಗಳು ನವ ಉದಾರವಾದದ ವಿರುದ್ಧ ದನಿ ಎತ್ತುವುದಷ್ಟೇ ಅಲ್ಲದೆ, ಶೋಷಿತರನ್ನು ಒಗ್ಗೂಡಿಸುವುದರ ಬಗ್ಗೆ ಗಂಭೀರ ಆಲೋಚನೆ ಮಾಡಬೇಕಿದೆ.
ದುರದೃಷ್ಟವಶಾತ್, ಒಳಮೀಸಲಾತಿ ಹೋರಾಟಗಳು ಈಗಾಗಲೇ ವಿಘಟಿತವಾಗಿರುವ ದಲಿತ ಸಮಾಜವನ್ನು ಮತ್ತಷ್ಟು ಛಿದ್ರಗೊಳಿಸುತ್ತಿದೆ. ದಲಿತ ಚಳುವಳಿ ಹುಟ್ಟಿ ಬೆಳೆದ ಕಾಲದಲ್ಲಿ ಇನ್ನೂ ಜೀವ ತಳೆಯದಿದ್ದ ಯುವ ಸಮೂಹ ಇಂದು, ವರ್ತಮಾನದ ಬಿರುಕುಗಳ ನಡುವೆ ನಿಂತು ದೇವನೂರು, ರಾಮಯ್ಯ ಅವರಂತಹ ನಾಯಕರನ್ನು ಅಲ್ಲಗಳೆಯುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿಯಾಗುತ್ತದೆ. ಆಗ ಈ ನಾಯಕರು ಮತ್ತು ಅವರ ಸಹವರ್ತಿಗಳು ಒಂದಾಗಿ ಎಲ್ಲರನ್ನು ಒಳಗೊಂಡು ಒಂದು ವಿರಾಟ್ ಹೋರಾಟವನ್ನು ಕಟ್ಟದೆ ಹೋಗಿದ್ದರೆ, ʼ ಬರುತಿಹೆವು ನಾವು ಬರುತಿಹೆವು ʼ ಎನ್ನುತ್ತಾ, ʼಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ʼ ಇರುವುದನ್ನು ಮನದಟ್ಟು ಮಾಡದೆ ಇದ್ದಿದ್ದರೆ, ಬಹುಶಃ ಇಂದು ಅವಕಾಶವಂಚಿತ ದಲಿತ ಸಮುದಾಯದ ದನಿ ಅಧಿಕಾರ ರಾಜಕಾರಣದಲ್ಲಿ ಲೀನವಾಗಿ ಮರೆಯಾಗಿಹೋಗುತ್ತಿತ್ತು.

ಮುಂದಿನ ಹಾದಿ ,,,,,
ಆ ನಾಯಕರನ್ನು ವೈಭವೀಕರಿಸುವ ಅಗತ್ಯವಿಲ್ಲ, ಆಗಿನ ಮುಂಚೂಣಿ ನಾಯಕರು ತಮ್ಮ ಸಾಮಾಜಿಕ ಆದ್ಯತೆ, ನೈತಿಕ ಕರ್ತವ್ಯ ಮತ್ತು ಅಂಬೇಡ್ಕರ್ ಕಂಡ ಕನಸನ್ನು ಸಾಕಾರಗೊಳಿಸುವ ಬದ್ಧತೆಯಿಂದ , ಕತ್ತಲಲ್ಲಿದ್ದವರಿಗೆ ಬೆಳಕು ತೋರಿ ಈಗ ನೇಪಥ್ಯಕ್ಕೆ ಸರಿದಿದ್ದಾರೆ. ಅವರು ತೋರಿದ ಹಾದಿಯನ್ನು ಮರು ವಿಮರ್ಶೆ ಮಾಡುತ್ತಾ, ಪರಿಷ್ಕರಿಸುತ್ತಾ, ನಡೆದ ತಪ್ಪುಗಳನ್ನು ಸರಿಪಡಿಸುತ್ತಾ, ಭವಿಷ್ಯದ ಹಾದಿಯನ್ನು ಸುಗಮಗೊಳಿಸುವುದು ಈ ಪೀಳಿಗೆಯ ಕರ್ತವ್ಯ. ಅವರ ತಪ್ಪುಗಳು ನಮಗೆ ಚರಿತ್ರೆಯ ಪಾಠಗಳಾಗಬೇಕು, ಅವರ ಸರಿಯಾದ ನಡೆನುಡಿ ನಮಗೆ ಭವಿಷ್ಯದ ಪಂಜುಗಳಾಗಬೇಕು. ಈ ನಿಟ್ಟಿನಲ್ಲಿ ಆಲೋಚನೆ ಮಾಡಬೇಕಾದ ಹೊತ್ತಿನಲ್ಲಿ, ಎಡಗೈ-ಬಲಗೈ ವಿಭಜನೆಯನ್ನು ಮತ್ತಷ್ಟು ಹಿಗ್ಗಿಸುತ್ತಾ, ಶೋಷಿತರ ನಡುವೆ ಇರುವ ಬಿರುಕುಗಳನ್ನು ಕಂದಕಗಳನ್ನಾಗಿ ಮಾಡುವ ಪ್ರಯತ್ನಕ್ಕೆ ಅಂತ್ಯ ಹಾಡಬೇಕಿದೆ.
ಕರ್ನಾಟಕದಲ್ಲಿ ʼ ದಲಿತ ರಾಜಕಾರಣ ʼ ಏಕೆ ಸಾಕಾರಗೊಂಡಿಲ್ಲ ಎನ್ನುವುದಕ್ಕೆ ಈ ಚರಿತ್ರೆಯ ನಡಿಗೆಯೇ ಸಾಕ್ಷಿ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಗಾಢವಾಗಿರುವ ಜಾತಿ ಪ್ರಜ್ಞೆಯನ್ನು ಮತ್ತಷ್ಟು ವಿಘಟನೆಯಾಗದೆ ಕಾಪಾಡಬೇಕಾದರೆ, ʼ ವರ್ಗಪ್ರಜ್ಞೆ ʼಯನ್ನು ಮತ್ತಷ್ಟು ಆಳಕ್ಕಿಳಿಸುವ ಸೈದ್ಧಾಂತಿಕ ಪ್ರಯೋಗ ಮತ್ತು ಪ್ರಯತ್ನಗಳು ಆಗಬೇಕಿದೆ. ಇದು ವರ್ತಮಾನದ ಶೋಷಿತ ಸಮುದಾಯ ಮತ್ತು ಅದನ್ನು ಪ್ರತಿನಿಧಿಸುವ ಎಲ್ಲ ದಲಿತ ಸಂಘಟನೆಗಳ-ಚಳುವಳಿಗಳ ಆದ್ಯತೆಯಾಗಬೇಕಿದೆ. ವರ್ಗಪ್ರಜ್ಞೆ ಎಂದ ಕೂಡಲೇ ಸಹಜವಾಗಿ ಮಾರ್ಕ್ಸ್ ನೆನಪಾಗುತ್ತಾನೆ. ಆದರೆ ಮಾರ್ಕ್ಸ್‌ವಾದದ ನಿರಾಕರಣೆ ಭವಿಷ್ಯದ ತಲೆಮಾರಿಗೆ ಉಪಯುಕ್ತವುದಿಲ್ಲ. ಮಾರ್ಕ್ಸ್ ಪ್ರತಿಪಾದಿಸಿದ ವೈಜ್ಞಾನಿಕ ಸಮಾಜವಾದ, ಗತಿತಾರ್ಕಿಕ ಭೌತವಾದ (Dialectical Materialism) ಮತ್ತು ಅಂಬೇಡ್ಕರ್ ಪ್ರತಿಪಾದಿಸಿದ ಜಾತಿ ಪ್ರಜ್ಞೆಯ ಸಾಮಾಜಿಕ ಚಿಂತನಾ ಧಾರೆಗಳನ್ನು ಸಮಾನ ನೆಲೆಯಲ್ಲಿ ನಿಷ್ಕರ್ಷೆಗೊಳಪಡಿಸುವ ಮೂಲಕ ಭವಿಷ್ಯದ ಬಾಗಿಲನ್ನು ತೆರೆಯಬೇಕಿದೆ.

( ಒಳಮೀಸಲಾತಿ ಸೃಷ್ಟಿಸಿದ ಕಂದಕಗಳನ್ನು ಮುಚ್ಚುವುದು ಹೇಗೆ, ಮುಂದಿನ ಕೊನೆಯ ಭಾಗದಲ್ಲಿ )
ಮುಂದುವರೆಯುತ್ತದೆ ,,,,,,,
-೦-೦-೦-