• Home
  • About Us
  • ಕರ್ನಾಟಕ
Sunday, January 18, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ದಲಿತ ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು

ಪ್ರತಿಧ್ವನಿ by ಪ್ರತಿಧ್ವನಿ
August 19, 2025
in Top Story, ಜೀವನದ ಶೈಲಿ, ದೇಶ, ರಾಜಕೀಯ
0
ದಲಿತ ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು
Share on WhatsAppShare on FacebookShare on Telegram

ಒಳಮೀಸಲಾತಿ – ಚಾರಿತ್ರಿಕ ಪ್ರಮಾದವನ್ನು ಸರಿಪಡಿಸುವ ಒಂದು ಮಾರ್ಗ ಎಂಬ ಪರಿವೆ ಇರಲಿ

ADVERTISEMENT

ನಾ ದಿವಾಕರ

ಭಾಗ  2

 ಕರ್ನಾಟಕದಲ್ಲಿ ದಲಿತ ಚಳುವಳಿ ಮೂಲತಃ  ಉಗಮಿಸಿದ್ದು ನಗರ/ಪಟ್ಟಣ ಪ್ರದೇಶಗಳಲ್ಲಿ ಮತ್ತು ಶೈಕ್ಷಣಿಕ , ಸಾಮಾಜಿಕ ಮೇಲ್‌ ಚಲನೆ ಹಾಗೂ ಸಾಂಸ್ಕೃತಿಕ ಸ್ವಾಯತ್ತತೆಯನ್ನು ಪಡೆದುಕೊಂಡಿದ್ದ ಈ ಪ್ರದೇಶಗಳ ದಲಿತ ನಾಯಕರ ಮುಂದಾಳತ್ವದಲ್ಲಿ. ಮೂಲತಃ ಗ್ರಾಮೀಣ ಪ್ರದೇಶದ ದೌರ್ಜನ್ಯ, ಶೋಷಣೆ ಮತು ದಬ್ಬಾಳಿಕೆಗಳೇ ಈ ಚಳುವಳಿ ಕಾವು ಪಡೆದುಕೊಳ್ಳಲು ಕಾರಣವಾಗಿದ್ದೂ ಹೌದು. 1970ರ ದಶಕದಲ್ಲಿ ದೇಶಾದ್ಯಂತ ಪ್ರಕಟವಾಗುತ್ತಿದ್ದ ತಳಸಮುದಾಯಗಳ ನೋವು, ತಲ್ಲಣಗಳು ಹಾಗೂ ಮೇಲ್ಜಾತಿ ಸಮುದಾಯಗಳ ದಮನಕಾರಿ ಧಾರ್ಮಿಕ-ಸಾಂಸ್ಕೃತಿಕ ಮಾದರಿಗಳು ಈ ಚಳುವಳಿಯನ್ನು ರಾಜ್ಯಾದ್ಯಂತ ತಳಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಕೊಂಡೊಯ್ಯಲು ಪ್ರಚೋದನೆ ನೀಡಿದ್ದವು. ಈ ತಳಪಾಯದ ಲಕ್ಷಣವನ್ನು ಗಮನಿಸಿದಾಗ, ಇಂದಿಗೂ ಸಹ ದಲಿತ ಚಳುವಳಿಗಳಲ್ಲಿ ನಾಯಕತ್ವ ನಗರಕೇಂದ್ರಿತವಾಗಿಯೇ ಇರುವುದು ಗಮನಾರ್ಹ ಅಂಶ.

 ಆದರೆ ಈ ಆರಂಭಿಕ ನಾಯಕತ್ವದ ಪರಿಶ್ರಮ, ಸೈದ್ಧಾಂತಿಕ ಸ್ಪಷ್ಟತೆ, ಅಂಬೇಡ್ಕರ್‌ವಾದದ ತಾತ್ವಿಕ  ಗ್ರಹೀತಗಳೇ ಈ ಚಳುವಳಿಯನ್ನು ಐದು ದಶಕಗಳಿಗೂ ಹೆಚ್ಚು ಕಾಲ ಮುನ್ನಡೆಸಿಕೊಂಡು ಬಂದಿರುವುದು ವಿಶೇಷ. ಏಕೆಂದರೆ ನಾಯಕತ್ವದ ಮೂಲದ ಹೊರತಾಗಿಯೂ, ದಲಿತ ಚಳುವಳಿಯ ತಾತ್ವಿಕ ದನಿ ಮೊದಲು ತಲುಪಲಾರಂಭಿಸಿದ್ದು ಗ್ರಾಮೀಣ ಪ್ರದೇಶಗಳನ್ನು. ಬೀದರ್-ಬಳ್ಳಾರಿ-ಬೆಳಗಾವಿಯಿಂದ ದಕ್ಷಿಣದ ತುದಿ ಕೋಲಾರದವರೆಗೂ ವಿಸ್ತಿರಿಸದ ಈ ಪ್ರತಿರೋಧದ ದನಿಗಳಿಗೆ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ, ತಾತ್ವಿಕವಾಗಿ ದನಿಯಾಗಿ ನಿಂತಿದ್ದು ಈ ನಾಯಕತ್ವವೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅಂಬೇಡ್ಕರ್‌ ಅವರ ಸಾಹಿತ್ಯ ಮತ್ತು ಅವರ ತತ್ವಶಾಸ್ತ್ರೀಯ ಬೋಧನೆಗಳು ಲಿಖಿತ ರೂಪದಲ್ಲಿ ಲಭ್ಯವಿರುತ್ತಿದ್ದುದು ಬಹುಮಟ್ಟಿಗೆ ನಗರ ಪ್ರದೇಶಗಳಲ್ಲೇ ಆಗಿತ್ತು. ಹಾಗಾಗಿ ಈ ತಾತ್ವಿಕತೆಯನ್ನು ಒಂದು ಚಳುವಳಿಯಾಗಿ ರೂಪಿಸುವ ನೈತಿಕ ಜವಾಬ್ದಾರಿ, ದಲಿತರಲ್ಲೇ ಇದ್ದಂತಹ ಸುಶಿಕ್ಷಿತ, ಅಧ್ಯಯನಶೀಲ ವ್ಯಕ್ತಿಗಳ ಮೇಲಿತ್ತು.

Assembly Session : ಬಿಜೆಪಿ ನಾಯಕರಿಗೆ ಹಿಗ್ಗಾಮುಗ್ಗಾ ಜಾಡಿಸಿದ ಶಾಸಕ ಬಾಲಕೃಷ್ಣ..! #mlabalakrishna

 ಈ ಜವಾಬ್ದಾರಿಯನ್ನು ಬದ್ಧತೆಯಿಂದ, ಕಾರ್ಯಕ್ಷಮತೆಯಿಂದ ಸೈದ್ಧಾಂತಿಕ ನೆಲೆಗಳಲ್ಲಿ ಹೊರುವುದೇ ಅಲ್ಲದೆ, ಅಂಬೇಡ್ಕರ್‌ ಅವರ ಚಿಂತನೆಗಳನ್ನು ತಳಸಮಾಜದ ತಳಪಾಯಕ್ಕೆ ತಲುಪಿಸಲು ದಲಿತ ಚಳುವಳಿಯು ಅನುಸರಿಸಿದ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರಯತ್ನಗಳನ್ನು ಇಂದು ಹೆಮ್ಮೆಯಿಂದ ನೆನೆಯಬಹುದಾಗಿದೆ. ಈ ಕಾರಣಕ್ಕಾಗಿಯೇ ಐವತ್ತಾರು ಬಣಗಳಾಗಿದ್ದರೂ, ದಲಿತ ಸಮುದಾಯದ ನಡುವೆ ಒಂದು ಐಕ್ಯತೆಯ ಭಾವ, ಆಶಯ ಮತ್ತು ಕನಸು ಮತ್ತು ಸಾಧ್ಯತೆಗಳ ಸಂಭವ ಇಂದಿಗೂ ಜೀವಂತಿಕೆಯಿಂದಿದೆ. ಆದರೆ ಅಪಾರ ಜನಸ್ತೋಮವನ್ನು ಪ್ರತಿನಿಧಿಸುವ, ದೀರ್ಘಕಾಲಿಕ ಚಳುವಳಿಯನ್ನು ಕಟ್ಟುವ ಯಾವುದೇ ಹೋರಾಟದ ಮುಂಚೂಣಿ ನಾಯಕರಿಗೆ, ನಾಯಕತ್ವದ ವಿಕೇಂದ್ರೀಕರಣ, ಸಾಮುದಾಯಿಕ-ಲಿಂಗಾಧಾರಿತ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯ ಬಹಳ ಮುಖ್ಯವಾದುದು ಎಂಬ ಅರಿವು ಮೂಡದಿರುವುದು ಅಚ್ಚರಿ ಮೂಡಿಸುತ್ತದೆ. ಇಂದಿಗೂ ಯಾವುದೇ ದಲಿತ ಸಂಘಟನೆಯ ನಾಯಕತ್ವದಲ್ಲಿ ಮಹಿಳೆಯರು ಕಾಣುವುದಿಲ್ಲ. ಅಂಬೇಡ್ಕರ್‌ ಅವರ ಚಿಂತನೆಗಳಲ್ಲೇ ಇದರ ಮೂಲಸ್ಥಾಯಿ ಅಡಗಿರುವುದು ಗಮನಿಸಬೇಕಾದ ಅಂಶ.

 ನಡೆ-ನುಡಿಯ ಅಂತರಗಳು

 ತಳಮಟ್ಟದ ಕಾರ್ಯಕರ್ತರಲ್ಲಿ ಸಾಂಘಿಕ ಉತ್ಸಾಹ ಮೂಡಬೇಕೆಂದರೆ ಎರಡು ಕ್ರಿಯೆಗಳು ಒಟ್ಟಿಗೇ ನಡೆಯಬೇಕು. ಮೊದಲನೆಯದು ಸಂಘಟನೆ-ಹೋರಾಟ-ಚಳುವಳಿಯ ಗುರಿ ಮತ್ತು ಧ್ಯೇಯಗಳಿಗೆ ಆಕರವಾದ ಸೈದ್ದಾಂತಿಕ-ತತ್ವಶಾಸ್ತ್ರೀಯ ಬೌದ್ಧಿಕ ನೆಲೆ. ದಲಿತ ಚಳುವಳಿಗೆ ಇಲ್ಲಿ ಪ್ರಧಾನವಾಗಿ ಇಂದಿಗೂ ಕಾಣುವುದು ಅಂಬೇಡ್ಕರ್‌, ತದನಂತರ ಫುಲೆ, ಪೆರಿಯಾರ್‌ ಮೊದಲಾದವರು. ಈ ಸ್ತರದಲ್ಲಿ ಬೌದ್ಧಿಕವಾಗಿ ಚಿಂತನಾಧಾರೆಗಳು ತಳಮಟ್ಟದವರೆಗೂ ವ್ಯಾಪಿಸುತ್ತಿರುವ ಹಾಗೆಯೇ ಸಮಾನಾಂತರವಾಗಿ ಎಲ್ಲ ಪ್ರದೇಶಗಳಲ್ಲಿ ದ್ವಿತೀಯ ಹಂತದ, ಭವಿಷ್ಯದ ಪೀಳಿಗೆಯ ನಾಯಕತ್ವಗಳನ್ನು ಗುರುತಿಸುವುದು ಎರಡನೆಯ ಪ್ರಧಾನ ಕ್ರಿಯೆ. ಕರ್ನಾಟಕದ ದಲಿತ ಚಳುವಳಿಗಳಲ್ಲಿ ಎರಡನೆಯ ಕ್ರಿಯೆ ಸಾಕಾರವಾಗದೆ ಇರುವುದು ಇಂದಿಗೂ ಎದ್ದು ಕಾಣುವಂತಿದೆ. ಜಿಲ್ಲಾ ಮಟ್ಟದ ನಾಯಕರು ಸಹಜವಾಗಿ ಹೊರಹೊಮ್ಮುತ್ತಾರೆ ಆದರೆ ವಿಕೇಂದ್ರೀಕರಣ ಪ್ರಕ್ರಿಯೆ ಗ್ರಾಮೀಣ ಪ್ರದೇಶಕ್ಕೆ, ಪ್ರಾತಿನಿಧಿಕ ಮೌಲ್ಯಗಳೊಡನೆ ತಲುಪದೆ ಹೋದರೆ, ಚಳುವಳಿಯು ತನ್ನ ತಾರ್ಕಿಕ ಗುರಿಯನ್ನು (Goal post) ತಲುಪುವುದು ವಿಳಂಬವಾಗುತ್ತದೆ ಅಥವಾ ದುಸ್ಸಾಧ್ಯವಾಗುತ್ತದೆ.

 1970ರ ದಶಕದಲ್ಲಿ ಸರ್ವವ್ಯಾಪಿಯಾಗಿ ಹರಡಿದ ಶೋಷಿತ ಸಮುದಾಯಗಳ ಉಗ್ರ-ಮೆದು ಹೋರಾಟಗಳಿಗೆ ಸಾಹಿತ್ಯ ಮತ್ತು ಸಂಸ್ಕೃತಿಯ ನೆಲೆಯಲ್ಲಿ ದೊರೆತ ತಾತ್ವಿಕ ಬೆಂಬಲ ಮತ್ತು ಸೈದ್ಧಾಂತಿಕ ಭೂಮಿಕೆಗಳೂ ಈ ಹೋರಾಟಗಳು ವಿಸ್ತರಿಸಲು ಮುಖ್ಯ ಕಾರಣವಾಗಿದ್ದವು. ನವ್ಯ ಮತ್ತು ನವೋದಯ ಸಾಹಿತ್ಯದ ಕೆಲವರಾದರೂ ಶೋಷಿತರ ಪರ ದನಿ ಎತ್ತಿದ್ದು ಚಳುವಳಿಗೆ ಪೂರಕ ಅಂಶವಾಗಿತ್ತು. ಆದಾಗ್ಯೂ ಈ ಸಾಹಿತ್ಯ ವಲಯದಲ್ಲಿ ಕಂಡುಬಂದ ಸಂವಹನ ಕೊರತೆ, ಸಮಾಜದ ಅತ್ಯಂತ ನಿರ್ಲಕ್ಷಿತ-ಅವಕಾಶವಂಚಿತ-ಅಂಚಿನಲ್ಲಿರುವ ಯುವ ಸಮೂಹವನ್ನು ತಲುಪುವುದಕ್ಕೆ ತೊಡಕಾಗಿಯೂ ಪರಿಣಮಿಸಿತ್ತು. ಈ ಸನ್ನಿವೇಶದಲ್ಲಿ ಉಗಮಿಸಿದ ಬಂಡಾಯ ಸಾಹಿತ್ಯ ಮತ್ತು ಅದರ ತಾತ್ವಿಕ ಶಿಶುವಾಗಿ ದಲಿತ ಸಾಹಿತ್ಯ ಈ ಕೊರತೆಯನ್ನು ನೀಗಿಸುವುದರಲ್ಲಿ ಸಹಾಯಕವಾಗಿತ್ತು. ಆಗಿನ ಬಂಡಾಯ ಸಾಹಿತ್ಯದ ಕಾವು, ಮೊನಚು ಈಗ ನಿರೀಕ್ಷಿಸಲಾಗುವುದಿಲ್ಲವಾದರೂ, ಇತ್ತೀಚಿನ ಹೋರಾಟದ ಹಾಡುಗಳು ಹೆಚ್ಚಿನ ಮಟ್ಟಿಗೆ ಸ್ತುತಿಗೀತೆಗಳಾಗಿರುವುದನ್ನೂ ಸೂಕ್ಷ್ಮವಾಗಿ ಗಮನಿಸಬೇಕಿದೆ.

 ಮಹಾರಾಷ್ಟ್ರದ ದಲಿತ ಪ್ಯಾಂಥರ್‌, ಪಂಜಾಬ್‌ನ ಗದ್ದರ್‌ ಚಳುವಳಿ, 1960ರ ದಶಕದ ಅಂಚಿನಲ್ಲಿ ಉತ್ತರದಿಂದ ದಕ್ಷಿಣದವರೆಗೆ ವ್ಯಾಪಿಸಿದ ಮಾರ್ಕ್ಸ್‌ವಾದದ ಸೈದ್ಧಾಂತಿಕ ಚಿಂತನೆಗಳು, ಮಾವೋವಾದದ ರೂಪದಲ್ಲಿ ಈ ಚಿಂತನಾಧಾರೆಯು ಗ್ರಾಮೀಣ ಜನರನ್ನು, ಬುಡಕಟ್ಟು ಸಮುದಾಯಗಳನ್ನು ತಲುಪಿದ ನಂತರದಲ್ಲಿ ಅಂಬೇಡ್ಕರ್‌ ಅವರಿಂದಾಚೆಗೂ ಯೋಚಿಸುವ ಒಂದು ತಾತ್ವಿಕ ನೆಲೆಗಟ್ಟು ದಲಿತ ಚಳುವಳಿಗಳಲ್ಲೇ ನಿರ್ಮಾಣವಾಗಿತ್ತು. ಕವಿ ಸಿದ್ದಲಿಂಗಯ್ಯ ಅವರ ಮಾರ್ಕ್ಸ್‌ವಾದಿ ದೃಷ್ಟಿಕೋನ ಮತ್ತು ಅವರ ಖಡ್ಗರೂಪಿ ಲೇಖನಿಯಿಂದ ಹೊರಹೊಮ್ಮಿದ ಹೋರಾಟದ ಹಾಡುಗಳು ಇದನ್ನು ಸಾಕ್ಷೀಕರಿಸುತ್ತವೆ. ಈ ಹಂತದಲ್ಲಿ ದಲಿತ ಚಳುವಳಿಗಳು ಮತ್ತು ನಾಯಕರು ʼ ಎಲ್ಲರನ್ನೂ ಒಳಗೊಳ್ಳುವ ʼ (All Inclusive) ನೀತಿಯನ್ನು ಅನುಸರಿಸಿದ್ದಲ್ಲಿ, ಆಗ ಯುವ ಸಮೂಹವನ್ನು ತಲುಪಿದ್ದ ಎಲ್ಲ ಪುರೋಗಾಮಿ ಚಿಂತನಾಧಾರೆಗಳನ್ನೂ ದಲಿತ ಚಳುವಳಿಯ ಮುಖ್ಯವಾಹಿನಿ ಧೋರಣೆಯಾಗಿ ರೂಪಿಸುವ ಸಾಧ್ಯತೆಗಳಿದ್ದವು. ಈ ನಿಟ್ಟಿನಲ್ಲಿ ಆಗಬೇಕಾಗಿದ್ದ ಬೌದ್ಧಿಕ ಕ್ರಿಯೆಗಳು  ʼಅಧ್ಯಯನ ಶಿಬಿರʼಗಳ  ಮೂಲಕ ನಡೆದಿದ್ದರೂ ಸಹ, ಈ ಕೇಂದ್ರಗಳ ವಿಕೇಂದ್ರೀಕರಣವಾಗದೆ ಇದ್ದುದು, ಮುಂದಿನ ದಿನಗಳಲ್ಲಿ ವಿಘಟನೆಯ ಕಾರಣಗಳಲ್ಲೊಂದಾಗಿತ್ತು.

 ನಾಯಕತ್ವ ಮತ್ತು ಜವಾಬ್ದಾರಿ

 ಅಂದಿನ ದಲಿತ ನಾಯಕರಲ್ಲಿ ಸ್ಪಷ್ಟತೆ ಇತ್ತು, ಸೈದ್ಧಾಂತಿಕ ಬದ್ಧತೆ ಇತ್ತು, ಸಂಘಟನಾತ್ಮಕ ಕ್ಷಮತೆ ಇತ್ತು ಮತ್ತು ತಳಮಟ್ಟದವರೆಗೂ ತಲುಪಿ ಕಾರ್ಯಕರ್ತರನ್ನು ಸಿದ್ಧಪಡಿಸುವ ಒಂದು ಬೌದ್ಧಿಕ ಶಕ್ತಿ ಇತ್ತು. ಇದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಈ ಗುಣಲಕ್ಷಣಗಳನ್ನು ಸಾಹಿತ್ಯಕವಾಗಿ ಬಳಸಿದಷ್ಟು ಪರಿಣಾಮಕಾರಿಯಾಗಿ ಸಂಘಟನೆಯನ್ನು ಕಟ್ಟುವ ಕ್ರಿಯೆಯಲ್ಲಿ ಬಳಸಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿಯೇ ಚಿಂತನಾ ಧಾರೆಗಳ ಪ್ರಸರಣ ಮತ್ತು ಸಾಂಘಿಕ ವಿಕೇಂದ್ರೀಕರಣ ಎರಡೂ ಸಮಾನಾಂತರವಾಗಿ ಸಾಗಬೇಕಾಗುತ್ತದೆ. ದಲಿತ ಚಳುವಳಿ ಮಾದರಿಯ ಒಂದು ಪ್ರಜಾಸತ್ತಾತ್ಮಕ, ಪುರೋಗಾಮಿ, ಜನಮುಖಿ ಹೋರಾಟಗಳಲ್ಲಿ ಬಹಳ ಮುಖ್ಯವಾಗಿ ಸೃಷ್ಟಿಯಾಗಬೇಕಿರುವುದು ನಾಯಕತ್ವದ ಹಂಬಲ ಅಲ್ಲ, ಮುಂಚೂಣಿಯಲ್ಲಿ ನಿಲ್ಲುವ ಉತ್ಸಾಹ ಮತ್ತು ಸೈದ್ಧಾಂತಿಕ ಬದ್ಧತೆ. ಸ್ಥಾನ, ಅವಕಾಶ, ಸಾರ್ವಜನಿಕರಲ್ಲಿ ಗುರುತಿಸಿಕೊಳ್ಳುವ ಹಂಬಲದಿಂದ ಸೃಷ್ಟಿಯಾಗುವ ನಾಯಕತ್ವಗಳು ಕ್ರಮೇಣ, ಸ್ವಹಿತಾಸಕ್ತಿಯ ಆತ್ಮರತಕ್ಕೊಳಗಾಗಿ, ಮೌಲ್ಯಗಳನ್ನು ಕಳೆದುಕೊಳ್ಳುತ್ತವೆ. ಸ್ವ ಉತ್ಸಾಹದಿಂದ, ಅಧ್ಯಯನಶೀಲತೆಯ ನೆಲೆಯಲ್ಲಿ ಮೂಡುವ ನಾಯಕತ್ವದ ಗುಣಗಳು ಸೃಜನಶೀಲತೆಯನ್ನು ಬೆಳೆಸಿ ಭವಿಷ್ಯದ ಪೀಳಿಗೆಗೆ ಅಗತ್ಯವಾದ ನಾಯಕರನ್ನು ಬೆಳೆಸುತ್ತದೆ.

 ಈ ಸೂಕ್ಷ್ಮ ವ್ಯತ್ಯಾಸವನ್ನು ದಲಿತ ಚಳುವಳಿಯ ಆರಂಭಿಕ ನಾಯಕರು ಅರಿತಿರಲಿಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ಇದು ಅನುಷ್ಠಾನಕ್ಕೆ ಬರಲಿಲ್ಲ ಎನ್ನುವುದು ಚಾರಿತ್ರಿಕ ಸತ್ಯ. ಇದೇ ಕೊರತೆಯನ್ನು ಎಡಪಕ್ಷಗಳಲ್ಲೂ ಗುರುತಿಸಬಹುದು. ಹಾಗಾಗಿಯೇ ಎರಡೂ ಸೈದ್ಧಾಂತಿಕ ಚಳುವಳಿಗಳಲ್ಲಿ ಯುವ ನಾಯಕತ್ವ ಅಥವಾ ಎರಡನೆ ಹಂತದ ನಾಯಕತ್ವ ಬೆಳೆಯಲಿಲ್ಲ. ಇಂದಿಗೂ ಎಡಪಕ್ಷಗಳು ಮತ್ತು ಎಡಪಂಥೀಯ ಕಾರ್ಮಿಕ ಸಂಘಟನೆಗಳು ಎದುರಿಸುತ್ತಿರುವ ಸಮಸ್ಯೆ ಇದೆ ಆಗಿದೆ. ಭವಿಷ್ಯದ ಯೋಚನೆ ಮತ್ತು ಯೋಜನೆ ಎರಡೂ ಇಲ್ಲದೆ ಹೊರಹೊಮ್ಮುವ ದ್ವಿತೀಯ ಹಂತದ ನಾಯಕರಲ್ಲಿ ಸೈದ್ಧಾಂತಿಕ ಬದ್ಧತೆ-ಸ್ಪಷ್ಟತೆ ಇಲ್ಲವಾದಾಗ, ಕೆಲವು ವರ್ಷಗಳ ನಂತರ ವೈಯುಕ್ತಿಕ ಹಿತಾಸಕ್ತಿಗಳು, ವ್ಯಕ್ತಿಗತ ಬದುಕಿನ ಅಗತ್ಯತೆಗಳು ಈ ಒಂದು ಪೀಳಿಗೆಯನ್ನು ಭಿನ್ನ ಮಾರ್ಗಗಳಿಗೆ ಕರೆದೊಯ್ಯುತ್ತದೆ. ಬ್ಯಾಂಕ್‌ ನೌಕರರ ಸಂಘಟನೆಯಲ್ಲಿ 1980-90ರ ದಶಕದಲ್ಲಿ ಕೆಂಬಾವುಟದಡಿ ಹೋರಾಡುತ್ತಿದ್ದ ಈ ಸ್ತರದ ಹಲವರು ಈಗ , ಸಮಾಜವಿಮುಖಿಗಳಾಗಿ ರಿಯಲ್‌ ಎಸ್ಟೇಟ್‌, ಧಾರ್ಮಿಕ ಮಠಗಳು ಅಥವಾ ಔದ್ಯಮಿಕ ಹಿತಾಸಕ್ತಿಗಳಿಗೆ ಒಳಗಾಗಿರುವುದನ್ನು ನಿದರ್ಶನವಾಗಿ ನೋಡಬಹುದು.

Siddaramaiah: ಬೆಂಗಳೂರು ಗ್ರಾಮಾಂತರ,ಕೋಲಾರ ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ ಮೀಟಿಂಗ್‌.!  #mla #congress

 ದಲಿತ ಚಳುವಳಿಯಲ್ಲಿ ಇದು ಭಿನ್ನ ಆಯಾಮವನ್ನು ಪಡೆದುಕೊಂಡಿತ್ತು. 1980ರಲ್ಲಿ ಕರ್ನಾಟಕದಲ್ಲಿ ಉಗಮಿಸಿದ ಹೊಸ ರಾಜಕೀಯ ಚಿಂತನೆಗಳು ಮತ್ತು ಅಧಿಕಾರ ರಾಜಕಾರಣವನ್ನು ಆಕ್ರಮಿಸಿಕೊಂಡ ರಾಜಕೀಯ ಪಕ್ಷಗಳು ಮೂಲತಃ ಸಮಾಜವಾದ-ಸಮತಾವಾದ ಇತ್ಯಾದಿ ತಾತ್ವಿಕ ನೆಲೆಗಳಲ್ಲೇ ಇದ್ದರೂ ಸಹ ಅಂತಿಮವಾಗಿ, ದಲಿತ ಚಳುವಳಿಯ ದೃಷ್ಟಿಯಿಂದ ನೋಡಿದಾಗ ಈ ರಾಜಕೀಯ ಉದಯ, ಒಟ್ಟಾರೆ ಚಳುವಳಿಯ ಅವನತಿಯ ಮೊದಲ ಮೆಟ್ಟಿಲಾಗಿ ಪರಿಣಮಿಸಿದ್ದನ್ನು ಈಗ ಮರುವಿಮರ್ಶೆ ಮಾಡಬೇಕಿದೆ. ತಾತ್ವಿಕ ನೆಲೆಯಲ್ಲಿ ದಲಿತ ಚಳುವಳಿಗಳು ಭೂ ಹೋರಾಟಗಳಿಗೆ ವಿಮುಖವಾಗಿ, ಸಾಂವಿಧಾನಿಕ ಸವಲತ್ತುಗಳನ್ನು ಪಡೆಯಲು ಒತ್ತಾಯಿಸುವ ಗುಂಪುಗಳಾಗಿ ವಿಘಟಿತವಾದದ್ದನ್ನು ಪ್ರಾಮಾಣಿಕವಾಗಿ ಮರುಪರಿಷ್ಕರಣೆ ಒಡ್ಡಬೇಕಿದೆ. ಸಹಜವಾಗಿಯೇ ಇದು ಮೇಲ್‌ ಸ್ತರದ ನಾಯಕರಲ್ಲಿ, ಅಧಿಕಾರ ಕೇಂದ್ರಗಳಿಗೆ ನಿಕಟವಾಗುವ ಅಥವಾ ಆಪ್ತವಾಗುವ ಹಂಬಲ ಸೃಷ್ಟಿಸಿದರೆ, ತಳಮಟ್ಟದ ಕಾರ್ಯಕರ್ತರಲ್ಲಿ ಭವಿಷ್ಯದ ಚಳುವಳಿಗಿಂತಲೂ ವರ್ತಮಾನದ ಅನುಕೂಲತೆಗಳು ಪ್ರಥಮ ಆದ್ಯತೆ ಪಡೆಯುತ್ತವೆ.

 ಒಡೆದು ಆಳುವ ಕುಟಿಲ ನೀತಿ ಬ್ರಿಟೀಷರ ಬಳುವಳಿ ಎಂಬ ಮಿಥ್ಯೆಯಿಂದ ಹೊರಬಂದು ನೋಡಿದಾಗ, ಸ್ವತಂತ್ರ ಭಾರತದ ಆಳುವ ವರ್ಗಗಳೂ ಸಹ ಇದೇ ತಂತ್ರವನ್ನು ತಮ್ಮ ಸ್ವ-ಹಿತಾಸಕ್ತಿಗಾಗಿ ಪ್ರಯೋಗಿಸುತ್ತಾ ಬಂದಿರುವುದನ್ನು ಕಾಣಲು ಸಾಧ್ಯ. ಕರ್ನಾಟಕದ ಮಟ್ಟಿಗೆ ಜನತಾ ಪಕ್ಷ ಉದಯಿಸಿದ ನಂತರದಲ್ಲಿ ಇದು ವ್ಯವಸ್ಥಿತವಾಗಿ ನಡೆದ ಒಂದು ಬೆಳವಣಿಗೆ. ಈ ಹಂತದಲ್ಲಿ ಆರಂಭವಾದ ದಲಿತ ಚಳುವಳಿಯ ವಿಘಟನೆ ಇಂದಿಗೂ ನಿಂತಿಲ್ಲ. (ಇತ್ತೀಚೆಗಷ್ಟೇ ಉಡುಪಿಯಲ್ಲಿ ಹೊಸ ಬಣ ಉದಯಿಸಿದೆ). ಈ ಬೆಳವಣಿಗೆಯ ರಾಜಕೀಯ ಆಯಾಮವನ್ನು ನೋಡುವುದಕ್ಕಿಂತಲೂ ಮುಖ್ಯವಾಗಿ ಗಮನಿಸಬೇಕಿರುವುದು, ದಲಿತ ಚಳುವಳಿಗಳಲ್ಲಿ ಆರಂಭದಲ್ಲೇ ಇದ್ದಂತಹ ಸೈದ್ಧಾಂತಿಕ ಒಳಬಿರುಕುಗಳು (Fault lines) ಮತ್ತು ವ್ಯಕ್ತಿನಿಷ್ಠ ಚಿಂತನೆಗಳು. (Subjetive Thoughts). ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ದಲಿತ ಸಂಘಟನೆಗಳು ವಾರ್ಷಿಕ ಅಧ್ಯಯನ ಶಿಬಿರಗಳನ್ನು ನಡೆಸಿ, ತಳ ಸಮಾಜದ ಯುವ ಸಮೂಹದಲ್ಲಿ ಸೈದ್ಧಾಂತಿಕ ಅರಿವು, ಸಾಮೂಹಿಕ ಪ್ರಜ್ಞೆ ಮೂಡಿಸುವ ಪ್ರಯತ್ನಗಳನ್ನೂ ನಡೆಸಿವೆ. ( ಕಳೆದ ಹಲವು ವರ್ಷಗಳಲ್ಲಿ ಈ ಬೌದ್ಧಿಕ ಕ್ರಿಯೆ ಅಪರೂಪವಾಗಿರುವುದು ಗಮನಿಸಬೇಕಾದ ಅಂಶ).

 ತಾತ್ವಿಕ ನೆಲೆಯ ಬೌದ್ಧಿಕ ವಿಸ್ತರಣೆ

 ಪಾಲೋ  ಫ್ರೈರಿ ತನ್ನ Pedagogy of the Oppressed ಕೃತಿಯಲ್ಲಿ ಒಂದು ಕಡೆ ಹೀಗೆ ಹೇಳುತ್ತಾನೆ : “ಯಾವುದೇ ಸಾಮಾಜಿಕ-ರಾಜಕೀಯ ಆಂದೋಲನಗಳಲ್ಲಿ ನಾಯಕತ್ವದ ನೆಲೆಯಲ್ಲಿ ನಿಂತು ಕಾರ್ಯಕರ್ತರಲ್ಲಿ ಚಳುವಳಿಯ ಗುರಿ, ಧ್ಯೇಯ, ಉದ್ದೇಶ ಮತ್ತು ತಾತ್ವಿಕ ತಳಹದಿಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳು ಅಗತ್ಯ. ಆದರೆ ಈ ಬೌದ್ಧಿಕ ಕ್ರಿಯೆಯು ಬೋಧನೆ-ಕಲಿಕೆಯ ಮಾದರಿಯಲ್ಲಿ ಇರಕೂಡದು. ಮುಂದೆ ಕುಳಿತಿರುವ ಸಾಮಾನ್ಯ ಕಾರ್ಯಕರ್ತರಿಗೆ  ಯಾವ ಅರಿವೂ ಇಲ್ಲ, ನಾಯಕರಾದ-ಚಿಂತಕರಾದ ನಮ್ಮಲ್ಲಿ ಇರುವ ಬೌದ್ಧಿಕ ಸರಕು, ಅರಿವು, ಇತಿಹಾಸ ಪ್ರಜ್ಞೆ ಮತ್ತು ಭವಿಷ್ಯದ ಕಾಳಜಿಗಳನ್ನು, ಅವರ ತಲೆಯಲ್ಲಿ ತುಂಬುತ್ತಿದ್ದೇವೆ ಎಂಬ ಮನೋಭಾವ ನಾಯಕತ್ವಗಳಲ್ಲಿ ಇರಕೂಡದು. ಹಾಗೇನಾದರೂ ಇದ್ದರೆ, ಶಿಬಿರಾರ್ಥಿಗಳಲ್ಲಿ ಇರಬಹುದಾದ ಸ್ವಾನುಭವದ ಅಥವಾ ಅನುಭಾವದ ಅರಿವು ಹೊರಬರಲಾಗದೆ ವ್ಯರ್ಥವಾಗಿಬಿಡುತ್ತದೆ. ಈ ಕ್ಲಾಸ್‌ ರೂಮ್‌ ಕಾರ್ಯವೈಖರಿಯನ್ನು ಬಿಟ್ಟು, ಅವರೊಡನೆ ನಿರಂತರ ಸಂವಾದಿಸುವ ಮೂಲಕ, ಹೊಸ ಹೆಜ್ಜೆಗಳಿಗೆ ದಿಕ್ಸೂಚಿ ನೀಡುವುದು ಆದ್ಯತೆಯಾಗಬೇಕು” (ಇದು ಯಥಾವತ್‌ ಅನುವಾದ ಅಲ್ಲ, ಫ್ರೇರಿ ಅವರ ತಾತ್ವಿಕ ಒಳನೋಟದ ಭಾವ ಸಂಗ್ರಹ ).

 ಸ್ವತಂತ್ರ ಭಾರತದಲ್ಲಿ ರೂಪುಗೊಂಡ ಎಲ್ಲ ಜನ ಚಳುವಳಿಗಳಲ್ಲೂ, ಎಡಪಂಥೀಯ, ಸಮಾಜವಾದಿ, ಕಮ್ಯುನಿಸ್ಟ್‌ ಪಕ್ಷಗಳು, ದಲಿತ ಚಳುವಳಿಗಳು, ಆದಿವಾಸಿ ಹೋರಾಟಗಳು, ಕಾರ್ಮಿಕ ಸಂಘಟನೆಗಳು, ಎಲ್ಲ ಸ್ತರಗಳಲ್ಲೂ ಮೇಲೆ ಹೇಳಿದಂತಹ ಮಾದರಿಯನ್ನು ಅನುಸರಿಸಲು ಸಾಧ್ಯವಾಗದಿರುವುದನ್ನು ನಿರಾತಂಕವಾಗಿ ಗುರುತಿಸಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ದಲಿತ ಚಳುವಳಿಗೆ ʼದಲಿತ್‌ ಪ್ಯಾಂಥರ್‌ʼ ಮತ್ತು ಅಂಬೇಡ್ಕರ್‌ ಅವರ ಸ್ವಾತಂತ್ರ್ಯಪೂರ್ವ ಹೋರಾಟಗಳ ಹೊರತಾಗಿ ಇತರ ಸಿದ್ಧಮಾದರಿಗಳಿರಲಿಲ್ಲ. ಈ ಒಂದು ನ್ಯೂನತೆಯೇ ದಲಿತ ಚಳುವಳಿಗಳ ವಿಘಟನೆ ಅಥವಾ ಛಿದ್ರೀಕರಣಕ್ಕೆ ಮೂಲ ಕಾರಣ ಎಂದು ನಿಸ್ಸಂಶಯವಾಗಿ ಹೇಳಬಹುದು. ಹಾಗಾಗಿ ಇಲ್ಲಿ ಆರಂಭಿಕ ನಾಯಕತ್ವವನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕಿಂತಲೂ, ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ರೂಪಿಸಿದ್ದಂತಹ ಒಂದು ಸಮಾಜದ ಪ್ರಭಾವವನ್ನು ಗುರುತಿಸುವುದು ಸಮಂಜಸ ಎನಿಸುತ್ತದೆ.

ಈ ನ್ಯೂನತೆ ಅಥವಾ ವೈಫಲ್ಯಕ್ಕೆ ಆರಂಭಿಕ ಹಂತದ ನಾಯಕತ್ವವನ್ನೇ ದೂಷಿಸಲಾಗುವುದಿಲ್ಲ. ಇಂತಹ ಸೂಕ್ಷ್ಮಗಳು ವ್ಯಕ್ತಿಗತವಾಗಿಯೇ ಆಗಲೀ, ಸಂಘಟನಾತ್ಮಕವಾಗಿ ಆಗಲೀ ಅನುಭವದಿಂದಲೇ ಅರಿವಾಗುವುದು. ಅಥವಾ ಪೂರ್ವನಿದರ್ಶನಗಳಿರಬೇಕು. ಆದರೆ 1980-ರ ಆದಿಯಲ್ಲಿ ದಲಿತ ಚಳುವಳಿಗಳು ವಿಘಟನೆಯ ಪರ್ವಕ್ಕೆ ತೆರೆದುಕೊಂಡಾಗ ಇದು ಹೊಳೆಯಬೇಕಿತ್ತು. ಅಧ್ಯಯನ ಶಿಬಿರಗಳಲ್ಲಿ ಕಾರ್ಯಕರ್ತರಿಗೆ ಅಂಬೇಡ್ಕರ್‌ ಅವರ ದಾರ್ಶನಿಕ ಚಿಂತನೆಗಳನ್ನು ರವಾನಿಸುವುದರೊಂದಿಗೇ ವರ್ತಮಾನದ ವಾಸ್ತವಗಳ ನೆಲೆಯಲ್ಲಿ ಅವುಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂದು ಅರ್ಥಮಾಡಿಸುವುದು ನಾಯಕತ್ವದ ಜವಾಬ್ದಾರಿಯಾಗಿತ್ತು. ಇದು ಸಾಹಿತ್ಯಕವಾಗಿ ಸಾಧ್ಯವಾದದ್ದು, ಸಾಂಘಿಕವಾಗಿ, ಸಾಂಸ್ಥಿಕವಾಗಿ ಸಾಧ್ಯವಾಗಲಿಲ್ಲ. ಇಂದಿಗೂ ಈ ಮಾದರಿಯನ್ನು ನಾವು ಅನುಸರಿಸುತ್ತಿಲ್ಲ. ಇತಿಹಾಸದಲ್ಲೇ ಹುದುಗಿ Versus ಗಳಲ್ಲಿ ಮುಳುಗಿಹೋಗಿದ್ದೆವೆ. (ಗಾಂಧಿ vs ಅಂಬೇಡ್ಕರ್‌ vs ಮಾರ್ಕ್ಸ್‌ vs ಲೋಹಿಯಾ ಇತ್ಯಾದಿ).

 ಪಲ್ಲಟದ ಸೂಕ್ಷ್ಮ ತರಂಗಗಳು

 ದಲಿತ ಚಳುವಳಿಗಳ ವಿಘಟನೆಗೆ ಮತ್ತು ನಿರಂತರ ಛಿದ್ರೀಕರಣಕ್ಕೆ ಆಳುವ ವರ್ಗಗಳ, ರಾಜಕೀಯ ಪಕ್ಷಗಳ ಕಾರ್ಯತಂತ್ರಗಳು (Machinations) ಎಷ್ಟು ಕಾರಣವೋ ಅಷ್ಟೇ ಮಟ್ಟಿಗೆ ಕಾರಣ ಈ ಬೌದ್ಧಿಕ-ಸಾಂಘಿಕ ವೈಫಲ್ಯಗಳು ಅಥವಾ ತಪ್ಪು ಹೆಜ್ಜೆಗಳು. ಇದನ್ನು ಸರಿಪಡಿಸಿ ಛಿದ್ರವಾದ ದಲಿತ ಚಳುವಳಿಗಳನ್ನು, ಭಿನ್ನ ಬಣಗಳನ್ನು ಒಂದುಗೂಡಿಸುವ ಪ್ರಯತ್ನಗಳು ಅಲ್ಲಲ್ಲಿ ನಡೆದಿದ್ದರೂ, ಗಂಭೀರವಾದ ಹೆಜ್ಜೆಗಳನ್ನು ಗುರುತಿಸಲಾಗುವುದಿಲ್ಲ. ವಿಷಯಾಧಾರಿತವಾಗಿ, ವಿವಾದಗಳ ಹಿನ್ನೆಲೆಯಲ್ಲಿ, ಅಂಬೇಡ್ಕರ್‌ ಅವರನ್ನು ಅಪಮಾನಿಸಿದ ಸಂದರ್ಭಗಳಲ್ಲಿ ಕಂಡಂತಹ ರಾಜ್ಯವ್ಯಾಪಿ ಐಕ್ಯತೆ ಮತ್ತು ಐಕಮತ್ಯ ತಾತ್ಕಾಲಿಕವಾಗಿಯೇ ಪರ್ಯವಸಾನ ಹೊಂದಿರುವುದನ್ನು ಇತ್ತೀಚಿನವರೆಗೂ ಕಂಡಿದ್ದೇವೆ.  ಯುವ ಸಮೂಹವನ್ನು, ವಿಶೇಷವಾಗಿ ಮಿಲೆನಿಯಂ ಸಮಾಜವನ್ನು ಈ ನಿಟ್ಟಿನಲ್ಲಿ ಭಿನ್ನ ಆಲೋಚನೆಗಳಿಗೆ ತೆರೆದುಕೊಳ್ಳುವಂತೆ ಮಾಡುವ ಬೌದ್ಧಿಕ ಪ್ರಯತ್ನಗಳು ವಿರಳಾತಿವಿರಳ ಎನ್ನಬಹುದು.

Assembly Session : ಬಿಜೆಪಿ ನಾಯಕರಿಗೆ ಹಿಗ್ಗಾಮುಗ್ಗಾ ಜಾಡಿಸಿದ ಶಾಸಕ ಬಾಲಕೃಷ್ಣ..! #mlabalakrishna

 ಸಂಘಟನೆಗಳ ಐಕ್ಯತೆಗಿಂತಲೂ ಆಲೋಚನಾ ಕ್ರಮದ , ಸಮಕಾಲೀನ ಚಿಂತನೆಗಳ ಐಕ್ಯತೆ ಹೆಚ್ಚು ಮುಖ್ಯವಾಗಬೇಕಿತ್ತು. ಆಗಿದ್ದರೆ ಸಾಂಘಿಕ ಐಕ್ಯತೆ ಸಹಜವಾಗಿ ನಡೆಯುತ್ತಿತ್ತು. ಗಂಭೀರವಾಗಿ ಪರಿಶೀಲಿಸಬೇಕಾದ ಮತ್ತೊಂದು ಅಂಶ ಎಂದರೆ ಈ ಹಿಂದಿನ ವಿಘಟನೆಗಳು ಸಂಭವಿಸಿದ್ದು ಎಡ-ಬಲದ ಆಧಾರದಲ್ಲಿ ಅಲ್ಲ. ಬಹುಮಟ್ಟಿಗೆ ವ್ಯಕ್ತಿ ಪ್ರತಿಷ್ಠೆಯ ಅಥವಾ ಚಳುವಳಿಯು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಇದ್ದ ಭಿನ್ನ ಮತಗಳ ನೆಲೆಯಲ್ಲಿ. ತಮ್ಮ ಸಂಘಟನೆಯ ಮುಂದೆ ದಲಿತ ಗುಂಪುಗಳು – ಅಂಬೇಡ್ಕರ್‌ವಾದಿ – ಎಂದು ನಮೂದಿಸುವುದು ಚೋದ್ಯದಂತೆ ಕಂಡರೂ ಅದು ಕಟು ಸತ್ಯ ಅಲ್ಲವೇ ? ಆದರೆ ಈಗ ಒಳಮೀಸಲಾತಿ ವಿವಾದದ ನೆಲೆಯಲ್ಲಿ ರಾಜ್ಯದ ದಲಿತ ಚಳುವಳಿಯಲ್ಲಿ ಮೂಡಿರುವ ಒಡಕು ಅಥವಾ ಬಿರುಕು ಅಥವಾ ಎದ್ದಿರುವ ಗೋಡೆ, ಕೆಲವು ಆರಂಭಿಕ ನಾಯಕರನ್ನು ಮೌಖಿಕವಾಗಿ ಒಂದಾಗಿಸಿದ್ದರೂ, ಎಡ-ಬಲ ಸಿದ್ಧಾಂತಗಳ ನೆಲೆಯಲ್ಲಿ ಮತ್ತಷ್ಟು ಗಟ್ಟಿಯಾಗಿದೆ.

 ಅಂಬೇಡ್ಕರ್‌ ಪ್ರತಿಪಾದಿಸಿದ ಒಳಗೊಳ್ಳುವಿಕೆಯ ತತ್ವವನ್ನೂ ಮರೆತು, ಸವಲತ್ತು ಪಡೆದವರೇ ತಮ್ಮ ಹಕ್ಕುಗಳನ್ನು ರಕ್ಷಿಸಲು ಹೋರಾಡುತ್ತಿರುವುದು, ಈವರೆಗೂ ಏನೂ ಪಡೆಯದೆ ಇರುವ ಬಹುದೊಡ್ಡ ಸಮಾಜದತ್ತ ನೋಡಲು ನಿರಾಕರಿಸುತ್ತಿರುವುದು ಈ ವಿಭಜನೆಯ ಪ್ರಧಾನ ಅಂಶ. ಇರುವುದೆಲ್ಲವೂ ತನಗೇ ಬೇಕು ಅಥವಾ ತನಗೇ ಹೆಚ್ಚಿನ ಪಾಲು ಬೇಕು ಎಂದು ಹೇಳುವುದು ಎಷ್ಟರ ಮಟ್ಟಿಗೆ ಅಂಬೇಡ್ಕರ್‌ ತತ್ವಗಳಿಗೆ ವಿರುದ್ಧವೋ ಅಷ್ಟೇ ವಿರುದ್ದವಾಗಿರುವುದು ಇಲ್ಲದವರಿಗೆ ನೀಡುವುದನ್ನು ನಿರಾಕರಿಸುವ ಅಥವಾ ತಡೆಗಟ್ಟುವ ಆಲೋಚನಾ ಕ್ರಮ. ಈ ವಸ್ತುನಿಷ್ಠ ನೆಲೆಯಲ್ಲಿ ದಲಿತ ಚಳುವಳಿಯಲ್ಲಿ, ಜಾತಿ-ಉಪಜಾತಿಗಳ ನಡುವೆ ಮತ್ತು ದಲಿತ ಬಣಗಳ ನಡುವೆ ಮೂಡಿರುವ ದೊಡ್ಡ ಕಂದಕವನ್ನು ವೈಚಾರಿಕ ನೆಲೆಯಲ್ಲಿ ನಿಕಷಕ್ಕೊಡ್ಡಬೇಕಿದೆ. ಇದು ನಿರ್ಣಾಯಕ ಕಾಲ ಎಂಬ ವಾಸ್ತವವನ್ನು ಗ್ರಹಿಸದೆ ಹೋದರೆ, ಬಹುಶಃ ದಲಿತ ಚಳುವಳಿಯ ಆರಂಭಿಕ ಕನಸುಗಳು ಕನಸಾಗಿಯೇ ಉಳಿಯವು ಸಂಭವವೇ ಹೆಚ್ಚು ಎಂಬ ಅಪಾಯವನ್ನು ಅರಿತು ಮುನ್ನಡೆಯಬೇಕಿದೆ.

 (ವಿಘಟನೆಯ ಕಾರಣ-ರೂಪ ಮತ್ತು ಭವಿಷ್ಯ ಮುಂದಿನ ಭಾಗದಲ್ಲಿ)

ಮುಂದುವರೆಯುತ್ತದೆ.

Tags: class 10 political parties in one shotdemocracy and diversity class 10 cbse in hindidemovracy and diversity in hindieditorial analysis of the hinduhow to do well in boardsliteraturetheoriesncert civics class 10 in hindipolitical parties in one shotpolitical parties in one shot for boards 2021system of kinship in indiathe hindu analysisthe hindu newspaper today
Previous Post

ವಿಷ್ಣುದಾದಾರ ಅಮೃತ ಮಹೋತ್ಸವದಂದು ಸ್ಮಾರಕಕ್ಕೆ ಅಡಿಗಲ್ಲು..ಕಿಚ್ಚನ ಬರ್ತಡೇಗೆ ಬ್ಲ್ಯೂಪ್ರಿಂಟ್ ಅನಾವರಣ

Next Post

ವಿಪಕ್ಷ ಶಾಸಕರಿಗೆ ಕೋಪದಿಂದಲೇ ಸಮಾಧಾನವಾಗಿರಿ

Related Posts

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
0

ಬಿಗ್‌ ಬಾಸ್‌ ಕನ್ನಡ ಸೀಸನ್‌ 12(Bigg Boss Kannada 12) ಕಾರ್ಯಕ್ರಮ ಪ್ರಾರಂಭವಾದ ದಿನದಿಂದಲೇ ಗಿಲ್ಲಿ ನಟ(Gilli Nata) ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ತಮ್ಮ...

Read moreDetails
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

January 17, 2026
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

January 17, 2026
Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

January 17, 2026
Next Post

ವಿಪಕ್ಷ ಶಾಸಕರಿಗೆ ಕೋಪದಿಂದಲೇ ಸಮಾಧಾನವಾಗಿರಿ

Recent News

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್
Top Story

ಕಲ್ಟ್ ಸಿನಿಮಾದ ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ: ಕ್ಷಮೆ ಕೇಳಿದ ನಟ ಝೈದ್ ಖಾನ್

by ಪ್ರತಿಧ್ವನಿ
January 17, 2026
Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?
Top Story

Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

25 ಲಕ್ಷ ರೂ.ಲಂಚ: ಅಬಕಾರಿ ಡಿಸಿಯೇ ಟ್ರ್ಯಾಪ್

January 17, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

January 17, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada