ಪ್ರಣಂ ದೇವರಾಜ್ (Pranam Devaraj) – ಖುಷಿ ರವಿ (Khushi Ravi) ಅಭಿನಯದ ಈ ಚಿತ್ರ ಆಗಸ್ಟ್ 22 ರಂದು ತೆರೆಗೆ .

ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು (Srikanth Hunasur) ನಿರ್ದೇಶನದ ಹಾಗೂ ಡೈನಾಮಿಕ್ ಸ್ಟಾರ್ ದೇವರಾಜ್ (Dynamic Star Devaraj) ಅವರ ದ್ವಿತೀಯ ಪುತ್ರ ಪ್ರಣಂ ದೇವರಾಜ್ ನಾಯಕನಾಗಿ ಹಾಗೂ “ದಿಯಾ” ಖ್ಯಾತಿಯ ಖುಷಿ ರವಿ ನಾಯಕಿಯಾಗಿ ನಟಿಸಿರುವ “S/O ಮುತ್ತಣ್ಣ” ಚಿತ್ರಕ್ಕಾಗಿ ಯೋಗರಾಜ್ ಭಟ್ (Yogaraj Bhat) ಅವರು ಬರೆದಿರುವ, ಸಂಜಿತ್ ಹೆಗ್ಡೆ (Sanjeeth Hegde) ಹಾಡಿರುವ ಹಾಗೂ ಸಚಿನ್ ಬಸ್ರೂರ್ (Sachin Basrur) ಸಂಗೀತ ನೀಡಿರುವ “ಮಿಡ್ ನೈಟ್ ರಸ್ತೆಯಲ್ಲಿ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಬಿಡುಗಡೆಯಾದ ತಕ್ಷಣದಿಂದಲೇ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಮ್ಮ ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಇಂದು ಎರಡನೇ ಹಾಡು ಬಿಡುಗಡೆಯಾಗಿದೆ. ಮೊದಲು ಹಾಡು “ಕಮ್ಮಂಗಿ ನನ್ ಮಗನೇ” ಸಹ ಮೆಚ್ಚುಗೆ ಪಡೆದುಕೊಂಡಿದೆ. ಇಂದು ಬಿಡುಗಡೆಯಾಗಿರುವ “ಮಿಡ್‌ನೈಟ್ ರಸ್ತೆಯಲ್ಲಿ” ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ. ಯೋಗರಾಜ್ ಭಟ್ ಅವರು ಬರೆದಿದ್ದಾರೆ. ಉಳಿದ ಎರಡು ಹಾಡುಗಳು ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್ ಮಾಹಿತಿ ನೀಡಿದರು.

ಪುರಾತನ ಫಿಲಂಸ್ ಸಂಸ್ಥೆ ಎಸ್ ಆರ್ ಕೆ ಫಿಲಂಸ್ ಸಹಯೋಗದೊಂದಿಗೆ ನಿರ್ಮಾಣ ಮಾಡಿರುವ ಈ ಚಿತ್ರ ಅಪ್ಪ – ಮಗನ ಬಾಂಧವ್ಯದ ಕುರಿತಾದ ಕಥಾಹಂದರ ಹೊಂದಿದೆ. ರಂಗಾಯಣ ರಘು (Rangayana Raghu) ಹಾಗೂ ಪ್ರಣಂ ದೇವರಾಜ್ ಅಪ್ಪ – ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖುಷಿರವಿ ಈ ಚಿತ್ರದ ನಾಯಕಿ. ಸಚಿನ್ ಬಸ್ರೂರ್ ಅವರ ಸಂಗೀತ ಸಂಯೋಜನೆಯ ನಾಲ್ಕು ಹಾಡುಗಳು ತುಂಬಾ ಚೆನ್ನಾಗಿದೆ. ಈಗ ಬಿಡುಗಡೆಯಾಗಿರುವ ಎರಡು ಹಾಡುಗಳನ್ನು ಯೋಗರಾಜ್ ಭಟ್ ಅವರೆ ಬರೆದಿದ್ದಾರೆ. ಅಂದುಕೊಂಡ ಹಾಗೆ ಚಿತ್ರವನ್ನು ಪೂರ್ಣಗೊಳಿಸಲು ಚಿತ್ರತಂಡದ ಸಹಕಾರವೇ ಕಾರಣ. ಇನ್ನೂ ಈ ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ವಾರಣಾಸಿಯಲ್ಲಿ ನಡೆದಿದೆ. ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡಿದ್ದ ಡೈನಾಮಿಕ್ ಸ್ಟಾರ್ ದೇವರಾಜ್, ಇತ್ತೀಚಿಗೆ ಸಿನಿಮಾ ನೋಡಿ ಪ್ರಶಂಸೆ ನೀಡಿದ್ದು ಬಹಳ ಖುಷಿಯಾಗಿದೆ ಎಂದು ನಿರ್ದೇಶಕ ಶ್ರೀಕಾಂತ್ ಹುಣಸೂರು ತಿಳಿಸಿದರು.

ನಿರ್ದೇಶಕರು ಕಥೆ ಹೇಳಿದ ರೀತಿಯೇ ಬಹಳ ಚೆನ್ನಾಗಿತ್ತು ಎಂದು ಮಾತನಾಡಿದ ನಾಯಕ ಪ್ರಣಂ ದೇವರಾಜ್, ಇದೊಂದು ತಂದೆ – ಮಗನ ಬಾಂಧವ್ಯದ ಚಿತ್ರ. ಜೊತೆಗೆ ಪ್ರೇಮ ಕಥಾನಕವೂ ಹೌದು. ಈ ಚಿತ್ರದ ವಿಶೇಷವೆಂದರೆ ಇದರಲ್ಲಿ ಸಾಹಸ ಸನ್ನಿವೇಶಗಳಿಲ್ಲ. ನಿರ್ದೇಶಕರೂ ಮಾಡಿಕೊಂಡಿರುವ ಕಥೆ, ಚಿತ್ರಕಥೆ ಬಹಳ ಸೊಗಸಾಗಿದೆ. ರಂಗಾಯಣ ರಘು ಅವರಿಂದ ಸಾಕಷ್ಟು ಕಲಿತಿದ್ದೇನೆ. ಸಚಿನ್ ಬಸ್ರೂರ್ ಸಂಗೀತ ಸಂಯೋಜನೆಯಲ್ಲಿ ಸಂಜಿತ್ ಹೆಗ್ಡೆ ಹಾಡಿರುವ ಈ “ಮಿಡ್ ನೈಟ್ ರಸ್ತೆಯಲ್ಲಿ” ಸಾಂಗ್ ಅಂತೂ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ. ಧನಂಜಯ್ ಮಾಸ್ಟರ್ ನೃತ್ಯ ನಿರ್ದೇಶನ ಕೂಡ ಹಾಡಿಗೆ ಪೂರಕವಾಗಿದೆ. ಏಳುವರೆ ವರ್ಷಗಳ ನಂತರ ನನ್ನ ಸಿನಿಮಾ ಆಗಸ್ಟ್ 22 ರಂದು ಬಿಡುಗಡೆಯಾಗುತ್ತಿದೆ. ಅವಕಾಶ ನೀಡಿದ ಪುರಾತನ ಫಿಲಂಸ್ ಸಂಸ್ಥೆಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ಎಲ್ಲರು ಚಿತ್ರ ನೋಡಿ. ಪ್ರೋತ್ಸಾಹಿಸಿ ಎಂದರು.

ನಾನು ಈ ಚಿತ್ರದಲ್ಲಿ ವೈದ್ಯೆ. ಸಾಕ್ಷಿ ನನ್ನ ಪಾತ್ರದ ಹೆಸರು. ಒಂದೊಳ್ಳೆ ಚಿತ್ರದಲ್ಲಿ ನಟಿಸಿದ ಖುಷಿಯಿದೆ ಎಂದು ಮಾತನಾಡಿದ ನಾಯಕಿ ಖುಷಿ ರವಿ, ಇದು ನಾನು ನಾಯಕಿಯಾಗಿ ನಟಿಸಿರುವ ಏಳನೇ ಚಿತ್ರ. ಬೇರೆ ಭಾಷೆಗಳಲ್ಲಿ ನನಗೆ ಅವಕಾಶ ಸಿಗುತ್ತಿದೆ. ಆದರೆ ಕನ್ನಡದಲ್ಲಿ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಹಾಡಿನ ನೃತ್ಯ ನಿರ್ದೇಶನದ ಬಗ್ಗೆ ಧನು ಮಾಸ್ಟರ್, ಛಾಯಾಗ್ರಹಣದ ಕುರಿತು ಛಾಯಾಗ್ರಾಹಕ ಸ್ಕೇಟಿಂಗ್ ಕೃಷ್ಣ ಮಾಹಿತಿ ನೀಡಿದರು. ಸಂಕಲನಕಾರ ಹರೀಶ್ ಕೊಮ್ಮೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಸಂಜಿತ್ ಹೆಗ್ಡೆ “ಮಿಡ್ ನೈಟ್ ರಸ್ತೆಯಲ್ಲಿ” ಹಾಡನ್ನು ವೇದಿಕೆಯ ಮೇಲೂ ಸುಮಧುರವಾಗಿ ಹಾಡಿದರು.