ಸಿನಿಮಾದಲ್ಲಿ ನಾವು ನೋಡುವ ಹೀರೋಗಳು ಪರದೆಯ ಮೇಲೆ ಎತ್ತರವಾಗಿ, ಆಕರ್ಷಕವಾಗಿ ಕಾಣುತ್ತಾರೆ. ಆದರೆ, ಈ ಪರ್ಫೆಕ್ಟ್ ಲುಕ್ ಹಿಂದೆ ಕ್ಯಾಮೆರಾ ತಂತ್ರಜ್ಞಾನ ಮಾತ್ರವಲ್ಲ, ಒಂದು ಸರಳ ಮರದ ಪೆಟ್ಟಿಗೆಯ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ. ಅದೇ ‘ಆಪಲ್ ಬಾಕ್ಸ್’ (Apple Box).
ಸಿನಿಮಾ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಶೂಟಿಂಗ್ ಸೆಟ್‌ನಲ್ಲಿ ಇಂದಿಗೂ ಅನಿವಾರ್ಯವಾಗಿ ಬಳಸುವ ಸಾಧನಗಳಲ್ಲಿ ಆಪಲ್ ಬಾಕ್ಸ್ ಪ್ರಮುಖವಾದುದು. ಬೆಳ್ಳಿತೆರೆಯಲ್ಲಿ ಕಾಣುವ ಅದ್ಭುತ ದೃಶ್ಯಗಳ ಹಿಂದೆ ಈ ಪುಟ್ಟ ಮರದ ಪೆಟ್ಟಿಗೆಯ ಪಾತ್ರ ಬಹಳ ದೊಡ್ಡದು.

ಆಪಲ್ ಬಾಕ್ಸ್ ಎಂದರೇನು?
ಆಪಲ್ ಬಾಕ್ಸ್ ಎನ್ನುವುದು ಸಿನಿಮಾ ಹಾಗೂ ಫೋಟೋಗ್ರಫಿ ಶೂಟಿಂಗ್‌ಗಳಲ್ಲಿ ಬಳಸುವ ಗಟ್ಟಿಮುಟ್ಟಾದ ಮರದ ಪೆಟ್ಟಿಗೆ. ಹಾಲಿವುಡ್‌ನಲ್ಲಿ ಹಿಂದೆ ಸೇಬು ಸಾಗಿಸಲು ಬಳಸುತ್ತಿದ್ದ ಮರದ ಪೆಟ್ಟಿಗೆಗಳನ್ನು ಶೂಟಿಂಗ್‌ನಲ್ಲಿ ಬಳಸಲು ಆರಂಭಿಸಿದ್ದರಿಂದ ಇದಕ್ಕೆ ‘ಆಪಲ್ ಬಾಕ್ಸ್’ ಎಂಬ ಹೆಸರು ಬಂದಿದೆ.
ಇವು ಸಾಮಾನ್ಯವಾಗಿ ಫುಲ್, ಹಾಫ್, ಕ್ವಾರ್ಟರ್ ಮತ್ತು ಪ್ಯಾನ್‌ಕೇಕ್ ಎಂಬ ನಾಲ್ಕು ಗಾತ್ರಗಳಲ್ಲಿ ಲಭ್ಯವಿರುತ್ತವೆ. ನೆಲ ಸಮತಟ್ಟಾಗಿಲ್ಲದಿದ್ದಾಗ ಕ್ಯಾಮೆರಾ ಟ್ರೈಪಾಡ್, ಲೈಟಿಂಗ್ ಉಪಕರಣಗಳನ್ನು ಸಮತೋಲನದಲ್ಲಿಡಲು, ನಿರ್ದೇಶಕರು ಅಥವಾ ತಂತ್ರಜ್ಞರು ಕುಳಿತುಕೊಳ್ಳಲು ಸಹ ಇವು ಉಪಯೋಗವಾಗುತ್ತವೆ.

ನಟರ ಎತ್ತರ ಹೆಚ್ಚಿಸಲು ಹೇಗೆ ಬಳಸುತ್ತಾರೆ?
ಆಪಲ್ ಬಾಕ್ಸ್‌ನ ಅತ್ಯಂತ ಜನಪ್ರಿಯ ಬಳಕೆ ಎಂದರೆ ನಟರ ಎತ್ತರವನ್ನು ಫ್ರೇಮ್‌ಗೆ ಹೊಂದಿಸುವುದು. ಹೀರೋ ಅಥವಾ ನಟಿ ಸಹ-ನಟರಿಗಿಂತ ಕಡಿಮೆ ಎತ್ತರ ಹೊಂದಿದ್ದರೆ, ಅವರನ್ನು ಈ ಬಾಕ್ಸ್ ಮೇಲೆ ನಿಲ್ಲಿಸಿ ಕ್ಯಾಮೆರಾ ಫ್ರೇಮ್ ಅನ್ನು ಸಮತೋಲನಗೊಳಿಸಲಾಗುತ್ತದೆ.ಟಾಲಿವುಡ್‌ನ ಹಲವು ನಟರಾದ ಎನ್‌ಟಿಆರ್ ಹಾಗೂ ಅಲ್ಲು ಅರ್ಜುನ್ ಅವರ ಸಿನಿಮಾಗಳಲ್ಲೂ ಈ ತಂತ್ರ ಬಳಸಲಾಗಿದೆ ಎನ್ನಲಾಗುತ್ತದೆ.
ಆಶ್ಚರ್ಯವೆಂದರೆ, ಸುಮಾರು 6 ಅಡಿ 2 ಇಂಚು ಎತ್ತರದ ಪ್ರಭಾಸ್ ಅವರಿಗೂ ಆಪಲ್ ಬಾಕ್ಸ್ ಬಳಸಲಾಗಿದೆ. ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಬಾಹುಬಲಿ ಸಿನಿಮಾದಲ್ಲಿ ಕಾಲಕೇಯ ಪಾತ್ರಧಾರಿ ಪ್ರಭಾಸ್‌ಗಿಂತಲೂ ಎತ್ತರವಾಗಿದ್ದ ಕಾರಣ, ಕೆಲವು ದೃಶ್ಯಗಳಲ್ಲಿ ಫ್ರೇಮ್ ಸಮತೋಲನಕ್ಕಾಗಿ ಪ್ರಭಾಸ್ ಅವರನ್ನು ಆಪಲ್ ಬಾಕ್ಸ್ ಮೇಲೆ ನಿಲ್ಲಿಸಿ ಚಿತ್ರೀಕರಿಸಲಾಗಿತ್ತು ಎಂದು ಹೇಳಲಾಗುತ್ತದೆ.
ಅಷ್ಟೇ ಅಲ್ಲ, ಪ್ರಭಾಸ್ ಅಭಿನಯದ ‘ದಿ ರಾಜಾ ಸಾಬ್’ ಚಿತ್ರದ ಕೆಲವು ದೃಶ್ಯಗಳಲ್ಲಿ ನಾಯಕಿ ನಿಧಿ ಅಗರ್ವಾಲ್ ಅವರಿಗೂ ಇದೇ ಬಾಕ್ಸ್ ಬಳಸಲಾಗಿದೆ ಎಂದು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಕ್ಲೋಸ್‌ಅಪ್, ರೊಮ್ಯಾಂಟಿಕ್ ಹಾಗೂ ಸಂಭಾಷಣೆಯ ದೃಶ್ಯಗಳಲ್ಲಿ ನಟ-ನಟಿಯರ ಎತ್ತರ ಸಮತೋಲನವಾಗಿರಬೇಕಾದರೆ ಆಪಲ್ ಬಾಕ್ಸ್ ಅತ್ಯಗತ್ಯ. ಕ್ಯಾಮೆರಾ ಆಂಗಲ್, ದೃಶ್ಯದ ಸೌಂದರ್ಯ ಹಾಗೂ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಪ್ರತಿಯೊಂದು ಫ್ರೇಮ್ ಮೂಡಿಬರಲು ಈ ಸರಳ ಮರದ ಪೆಟ್ಟಿಗೆ ಮಹತ್ವದ ಪಾತ್ರ ವಹಿಸುತ್ತದೆ.
ಹೊರಗಿನಿಂದ ನೋಡಲು ಸಾಮಾನ್ಯ ಮರದ ಪೆಟ್ಟಿಗೆಯಂತೆ ಕಂಡರೂ, ಸಿನಿಮಾ ಮೇಕಿಂಗ್‌ನಲ್ಲಿ ಆಪಲ್ ಬಾಕ್ಸ್ ನಿಜಕ್ಕೂ ‘ಮೌನ ಹೀರೋ’ ಎಂದರೆ ತಪ್ಪಾಗಲಾರದು.






