ರಾಂಚಿ: ಕಲ್ಲಿದ್ದಲು ಸಾಗಿಸಲು ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ (NTPC) ನಿರ್ವಹಿಸುತ್ತಿದ್ದ ರೈಲು ಮಾರ್ಗದ ಹಳಿಯನ್ನು ದುರಷ್ಕರ್ಮಿಗಳು ಸ್ಫೋಟಿಸಿರುವ ಘಟನೆ ಜಾರ್ಖಂಡ್‌ನ ಸಾಹಿಬ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಹಿಬ್‌ಗಂಜ್‌ನ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಸಿಂಗ್, ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ. ಘಟನೆಯಲ್ಲಿ ಕ್ರಿಮಿನಲ್ ಗ್ಯಾಂಗ್‌ಗಳು ಭಾಗಿಯಾಗಿರುವ ಶಂಕೆ ಇದೆ ಎಂದರು.
ಸದ್ಯ ಈ ಮಾರ್ಗವು ಭಾರತೀಯ ರೈಲ್ವೆಯ ಭಾಗವಾಗಿಲ್ಲ. ಇದು ಗೊಡ್ಡಾದ ಲಾಲ್ಮಾಟಿಯಾದಿಂದ ಪಶ್ಚಿಮ ಬಂಗಾಳದ ಫರಕ್ಕಾದಲ್ಲಿರುವ ತನ್ನ ವಿದ್ಯುತ್ ಕೇಂದ್ರಕ್ಕೆ ಕಲ್ಲಿದ್ದಲು ಸಾಗಿಸುವ ಸಲುವಾಗಿ ಎನ್‌ಟಿಪಿಸಿ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಘಟನೆಯಲ್ಲಿ ಸುಮಾರು 470 ಸೆಂ.ಮೀ ಟ್ರ್ಯಾಕ್ ಸ್ಫೋಟಗೊಂಡಿದೆ. ಕೆಲ ದುಷ್ಕರ್ಮಿಗಳು ಸಾಹಿಬ್‌ಗಂಜ್‌ನಲ್ಲಿ ಸ್ಫೋಟಕಗಳನ್ನು ಇಟ್ಟು ರೈಲ್ವೆ ಹಳಿಯನ್ನು ಸ್ಫೋಟಿಸಿದ್ದಾರೆ. ವಿಚಾರ ತಿಳಿದು ಬಂದ ಬಳಿಕ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. ಈ ಬಾಂಬ್ ಸ್ಫೋಟದಲ್ಲಿ ಇದುವರೆಗೆ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ. ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯ ತಂಡವನ್ನು ಸ್ಥಳಕ್ಕೆ ಕರೆಸಲಾಗಿದೆ ಎಂದು ತಿಳಿಸಿರು.