ದೆಹಲಿ; ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಜಿ 20 ಶೃಂಗಸಭೆ ನಡೆಯುತ್ತಿದ್ದು ವಿಶ್ವದ ಪ್ರಮುಖ ನಾಯಕರು ದೆಹಲಿಯತ್ತ ಆಗಮಿಸಿದ್ದಾರೆ. ಇನ್ನು ಇಂದು ಪ್ರಮುಖ ನಾಯಕರನ್ನ ಕೇಂದ್ರ ಸರ್ಕಾರ ಸ್ವಾಗತ ಮಾಡಿದೆ.
ಇನ್ನು ಜಾಗತಿಕ ಒಳಿತಿನಲ್ಲಿ ಭಾರತ ಹಾಗೂ ಅಮೆರಿಕ ಸ್ನೇಹದ ಪಾತ್ರ ಮಹತ್ವದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು,
ನಮ್ಮಿಬ್ಬರ ನಡುವೆ ಫಲಪ್ರದ ಚರ್ಚೆ ನಡೆಯಿತು ಎಂದು ಉಲ್ಲೇಖಿಸಿದ್ದಾರೆ. ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಬೈಡನ್ ಅವರು ನವದೆಹಲಿಗೆ ಆಗಮಿಸಿದ್ದಾರೆ. ದೆಹಲಿ ತಲುಪಿದ ನಂತರ ಬೈಡನ್ ಅವರು ನೇರವಾಗಿ ಪ್ರಧಾನಿ ಮೋದಿ ನಿವಾಸಕ್ಕೆ ತಲುಪಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.
‘ಜೋ ಬೈಡನ್ ಅವರನ್ನು 7, ಲೋಕ ಕಲ್ಯಾಣ್ ಮಾರ್ಗಕ್ಕೆ ಸ್ವಾಗತಿಸಿದ್ದಕ್ಕೆ ಸಂತೋಷವಾಗಿದೆ. ನಮ್ಮ ಸಭೆಯು ಬಹಳ ಫಲಪ್ರದವಾಗಿತ್ತು. ಭಾರತ ಮತ್ತು ಅಮೆರಿಕ ನಡುವಿನ ಆರ್ಥಿಕ ಮತ್ತು ಜನರಿಂದ ಜನರ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಹಲವಾರು ವಿಷಯಗಳನ್ನು ನಾವು ಚರ್ಚಿಸಲು ಸಾಧ್ಯವಾಯಿತು.
ಉಭಯ ರಾಷ್ಟ್ರಗಳ ನಡುವಿನ ಸ್ನೇಹವು ಜಾಗತಿಕ ಒಳಿತನ್ನು ಹೆಚ್ಚಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದು ಮೋದಿ ಎಕ್ಸ್ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ