
ದೆಹಲಿಯಲ್ಲಿ ಬಿಜೆಪಿ ಮತ್ತೆ ರಾಜ್ಯಭಾರ ಮಾಡೋಕೆ ಬರೋಬ್ಬರಿ 27 ವರ್ಷ ಬೇಕಾಯ್ತು. ಕೇಂದ್ರಾಡಳಿತ ಪ್ರದೇಶವಾಗಿದ್ದ ದೆಹಲಿಯಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದಾಗ ಗೆದ್ದು ಬೀಗಿದ್ದ ಬಿಜೆಪಿ, ಆ ಬಳಿಕ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. 27 ವರ್ಷಗಳ ಬಳಿಕ ಇದೀಗ ಮತ್ತೆ ಗೆಲುವು ಪಡೆದಿದೆ.. ಆಮ್ ಆದ್ಮಿ ಪಕ್ಷವನ್ನ ಮಕಾಡೆ ಮಲಗಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ವಿಜಯ ಪತಾಕೆ ಹಾರಿಸಿದೆ.. ದೆಹಲಿಯಲ್ಲಿ ಆಮ್ ಆದ್ಮಿಗಳನ್ನು ನೆಲಕಚ್ಚಿಸಿ ಬಿಜೆಪಿ ಗೆದ್ದು ಬೀಗಿದೆ..

ಫೆಬ್ರವರಿ 5ರಂದು ಚುನಾವಣೆ ನಡೆದಾಗ ಚುನಾವಣೋತ್ತರ ಸಮೀಕ್ಷೆಗಳೆಲ್ಲಾ ಈ ಸಲ ಬಿಜೆಪಿಯೇ ಅಧಿಕಾರಕ್ಕೆ ಬರುತ್ತೆ ಅಂತ ಅಂಕಿ ಅಂಶಗಳನ್ನ ಕೊಟ್ಟಿದ್ದವು. ಆದರೆ ಸಮೀಕ್ಷೆಗಳನ್ನು ಮಸಾಜ್ ಅಂಡ್ ಸ್ಪಾ ಕಂಪನಿಗಳು ಮಾಡಿವೆ. ಸಮೀಕ್ಷೆ ಅಂಕಿ ಅಂಶಗಳು ಸುಳ್ಳಾಗುತ್ತವೆ ಎಂದು ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಕಿಡಿಕಾರಿತ್ತು.. ಆದದೆ ಸಮೀಕ್ಷೆಗಳ ಲೆಕ್ಕಾಚಾರವೇ ನಿಜವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 27 ವರ್ಷಗಳ ಬಳಿಕ ಬಿಜೆಪಿಗೆ ಜನರು ಭರ್ಜರಿ ಗೆಲುವು ಕೊಟ್ಟಿದ್ದಾರೆ.
ಅರವಿಂದ ಕೇಜ್ರಿವಾಲ್ ಬಿಜೆಪಿಯ ಪರ್ವೇಶ್ ಸಾಹೀಬ್ ಸಿಂಗ್ ಎದುರು 4089 ಮತಗಳಿಂದ ಸೋಲು ಕಂಡಿದ್ದಾರೆ. ಮನೀಶ್ ಸಿಸೋಡಿಯಾ ಬಿಜೆಪಿಯ ತರ್ವೀಂದರ್ ಸಿಂಗ್ ಎದುರು ಕೇವಲ 675 ಮತಗಳಿಂದ ಸೋಲುಂಡಿದ್ದಾರೆ. ಸತ್ಯೇಂದ್ರ ಜೈನ್ ಬಸ್ತಿ ಕ್ಷೇತ್ರದಲ್ಲಿ 20 ಸಾವಿರದ 998 ಮತಗಳಿಂದ ಸೋಲುಂಡಿದ್ದು, ಮಾಲ್ವಿಯಾ ನಗರದಲ್ಲಿ ಎಎಪಿ ಸೋಮನಾಥ ಭಾರ್ತಿ 2131 ಮತಗಳಿಂದ ಸತೀಶ್ ಎದುರು ಸೋತಿದ್ದಾರೆ. ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲಿ ಶಿಖಾ ರಾಯ್ ಎದುರು 3188 ಮತಗಳಿಂದ ಎಎಪಿ ನಾಯಕ ಸೌರಭ್ ಭಾರದ್ವಾಜ್ ಸೋಲಿಗೆ ಶರಣಾಗಿದ್ದಾರೆ.

ಬಹುತೇಕ ಎಲ್ಲಾ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದಿದ್ದವು. ಅಂಕಿ ಅಂಶಗಳೂ ಕೂಡ ಹೆಚ್ಚುಕಡಿಮೆ ಇದೇ ಮಟ್ಟದಲ್ಲಿದ್ದವು. ಈಗಾಗಗಿ ಆಮ್ ಆದ್ಮಿ ಪಾರ್ಟಿ ಮಾಡಿದ್ದ ಆರೋಪ ಸುಳ್ಳು ಎನ್ನುವಂತೆ ಫಲಿತಾಂಶ ಹೊರಬಿದ್ದಿದೆ. ಫಲಿತಾಂಶದ ಬಗ್ಗೆ ಕಾಂಗ್ರೆಸ್ ಇಲ್ಲೀವರೆಗೂ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದೆ. ಆದರೆ ಕಾಂಗ್ರೆಸ್ಗೆ ಆಮ್ ಆದ್ಮಿ ಸೋಲಿಸಿದ ಕೀರ್ತಿ ಸಲ್ಲಲೇ ಬೇಕು ಎನ್ನುತ್ತಿವೆ ರಾಜಕೀಯ ವಿಶ್ಲೇಷಣೆ.