‘ನಮ್ಮ ರಾಜ್ಯದಲ್ಲಿ ಕೊರೋನಾ ಸಮಯದಲ್ಲಿ ಜನ ಬಹಳ ನೋವು ಅನುಭವಿಸಿದ್ದಾರೆ. ಅದರ ನಡುವೆ ರಾಜ್ಯ ಹಾಗೂ ಕೇಂದ್ರದಲ್ಲಿ ಬೆಲೆ ಏರಿಕೆಯಿಂದ ಎಲ್ಲರಿಗೂ ವಿಪರೀತ ತೊಂದರೆಯಾಗುತ್ತಿದೆ. ಇದರ ವಿರುದ್ಧ ಹೋರಾಡುವ ರಾಷ್ಟ್ರ ಹಾಗೂ ರಾಜ್ಯದ ಕಾರ್ಯಕ್ರಮಕ್ಕೂ ಮುನ್ನ ಮಾರಿಕಾಂಬ ದೇವಿಯ ಆಶೀರ್ವಾದ ಪಡೆಯಲು ಶಿರಸಿಗೆ ಆಗಮಿಸಿದ್ದೇನೆ. ಈ ದೇವಿಯ ಇತಿಹಾಸದ ಬಗ್ಗೆ ತಿಳಿದಿದ್ದೇನೆ. ನಮ್ಮ ದುಃಖವನ್ನು ದೂರಮಾಡುವ ಶಕ್ತಿ ಈ ದೇವತೆಗಿದೆ. ಹೀಗಾಗಿ ನಾಡಿನ ಜನರಿಗೆ ಎದುರಾಗಿರುವ ಆರೋಗ್ಯ ಸಮಸ್ಯೆ, ಸಂಕಟ, ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಪ್ರಾರ್ಥನೆ ಮಾಡಿ ಇಲ್ಲಿಂದ ನಮ್ಮ ಹೋರಾಟ ಆರಂಭಿಸುತ್ತಿದ್ದೇವೆ’ ಎಂದು ಮಾರಿಕಾಂಬ ದೇವಿಯ ಆಶೀರ್ವಾದ ಪಡೆಯಲು ಶಿರಸಿಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ʼಈ ಹಿಂದೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಇಲ್ಲಿಂದ ಅನೇಕ ಹೋರಾಟ ಆರಂಭಿಸಲಾಗಿತ್ತು. ಈ ವರ್ಷವನ್ನು ಹೋರಾಟದ ವರ್ಷ ಎಂದು ಪರಿಗಣಿಸಿದ್ದೇವೆ. ಪೊಲೀಸರು ಈ ಹೋರಾಟ ತಡೆಯುತ್ತಿದ್ದಾರೆ. ಬೇಕಾದರೆ ಕೇಸ್ ಹಾಕಿಕೊಳ್ಳಲಿ, ಇದು ನಮ್ಮ ಕಾರ್ಯಕ್ರಮ ಅಲ್ಲ, ಜನರ ಕಾರ್ಯಕ್ರಮ. ಜನರ ಧ್ವನಿಯಾಗಿ ಈ ಹೋರಾಟ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾದರೆ ಇತರೆ ಎಲ್ಲ ವಸ್ತುಗಳ ಬೆಲೆಯೂ ಹೆಚ್ಚತ್ತದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು, ತೆರಿಗೆ ಇಳಿಸಿ ಬೆಲೆ ಇಳಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ. ಈ ಹಿಂದೆ ಕಚ್ಛಾತೈಲದ ಬೆಲೆ ಆಧಾರದ ಮೇಲೆ ಇಂಧನ ತೈಲ ಬೆಲೆ ನಿಗದಿ ಮಾಡಬೇಕುʼ ಎಂದು ಒತ್ತಾಯಿಸಿದ್ದಾರೆ.
ʼಇಂದು ಆರೋಗ್ಯ ಸಚಿವ ಹರ್ಷವರ್ದನ್ ಅವರು ಕೇಂದ್ರ ಸಚಿವ ಸಂಪುಟದಿಂದ ಹೊರ ಬಿದ್ದಿದ್ದು, ಕೋವಿಡ್ ಸಮಯದಲ್ಲಿ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬುದಕ್ಕೆ ಇದು ಬಹು ದೊಡ್ಡ ಸಾಕ್ಷಿಯಾಗಿದೆ. ಇದು ಅವರೊಬ್ಬರ ಜವಾಬ್ದಾರಿ ಅಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಈ ಜವಾಬ್ದಾರಿ ಹೊರಬೇಕು. ಜನರಿಗೆ ಆಗಿರುವ ನೋವಿಗೆ ಸ್ಪಂದಿಸಬೇಕು. ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಈ ಜಿಲ್ಲೆಯಲ್ಲಿ 711 ಜನ ಸತ್ತಿದ್ದಾರೆ. 51,902 ಜನ ಆಸ್ಪತ್ರೆ ಸೇರಿದ್ದಾರೆ. ಇನ್ನು ಹಲವರು ಮನೆಯಲ್ಲೇ ಮೃತಪಟ್ಟಿದ್ದಾರೆ. ಹೀಗಾಗಿ ಇವರ ಮಾಹಿತಿ ಸಂಗ್ರಹಿಸಲು, ಕೋವಿಡ್ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ದೊರೆಯುವಂತೆ ಮಾಡಲು ನಮ್ಮ ಕಾರ್ಯಕರ್ತರು ಪ್ರಯತ್ನಿಸುತ್ತಾರೆ. ಈ ಮಧ್ಯೆ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದು, ಸರ್ಕಾರ ಕೇವಲ 30 ಸಾವಿರ ಎಂದು ಅಂಕಿ-ಅಂಶದಲ್ಲಿ ತೋರಿಸುತ್ತಿದೆ. ಕೋವಿಡ್ ನಿಂದ ಸತ್ತ ಎಲ್ಲರಿಗೂ ಹೈಕೋರ್ಟ್ ನಿಗದಿ ಮಾಡುವ ಪರಿಹಾರ ಸಿಗುವಂತಾಗಬೇಕು. ಸರ್ಕಾರದ ಎಲ್ಲ ಅಧಿಕಾರಿಗಳು ಮನೆ, ಮನೆಗೂ ಹೋಗಬೇಕು, ಕೋವಿಡ್ ಸಂದರ್ಭದಲ್ಲಿ ರೈತರು, ಕಾರ್ಮಿಕರು, ಸಂಪ್ರಾದಾಯಿಕ ವೃತ್ತಿದಾರರಿಗೆ ಆಗಿರುವ ನಷ್ಟದ ಬಗ್ಗೆ ಮಾಹಿತಿ ಕಲೆ ಹಾಕಬೇಕು. ನಾವು ನಮ್ಮ ಕೆಲಸ ಮಾಡುತ್ತೇವೆ. ಸರ್ಕಾರ ಕೂಡ ಅಧಿಕಾರಿಗಳ ಮೂಲಕ ಈ ಬಗ್ಗೆ ಮಾಹಿತಿ ಕಲೆ ಹಾಕಬೇಕು.ʼ ಎಂದು ಆಶಿಸಿದ್ದಾರೆ.
ಮಾತು ಮುಂದುವರೆಸಿದ ಡಿಕೆಶಿ ʼಭ್ರಷ್ಟಾಚಾರ ವಿಚಾರದಲ್ಲಿ ಸಮಗ್ರ ತನಿಖೆ ಆಗಬೇಕು. ಸರ್ಕಾರ ಎಲ್ಲ ವಿಚಾರಗಳನ್ನು ಮುಚ್ಚಿಡುತ್ತಿದೆ. ಮಂತ್ರಿಗಳ ಮೇಲೆ ಬರುವ ಆರೋಪಗಳನ್ನು ಮುಚ್ಚಿ, ಬಿ ರಿಪೋರ್ಟ್ ಸಿದ್ಧಪಡಿಸುತ್ತಿದೆ. ಆರಂಭದಿಂದಲೂ ಯಡಿಯೂರಪ್ಪ ವಿರುದ್ಧದ ಆರೋಪದಿಂದ ಇತ್ತೀಚಿನ ರೇಪ್ ಕೇಸ್ ವರೆಗೂ ಎಲ್ಲವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ. ನಮ್ಮ ಕೆಲಸದ ವಿಚಾರವಾಗಿ ನಮಗೆ ಯತ್ನಾಳ್ ಅವರ ಪ್ರಮಾಣಪತ್ರದ ಅವಶ್ಯಕತೆ ಇಲ್ಲ. ನಮ್ಮ ಪಕ್ಷ ನಮ್ಮ ಕರ್ತವ್ಯ ನಿಭಾಯಿಸುತ್ತಿದೆ. ಅವರ ಮೇಲೆ ಅವರ ಪಕ್ಷ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಪಕ್ಷದಲ್ಲಿ ಯಾವುದೇ ಬಣ ಇಲ್ಲ, ಇರೋದು ಒಂದೇ ಬಣ, ಅದು ಕಾಂಗ್ರೆಸ್ʼ ಎಂದು ಹೇಳಿದ್ದಾರೆ.
ʼನಾನು ಮೊನ್ನೆಯಿಂದ ಮಂಗಳೂರಿನಿಂದ ಕರಾವಳಿಯ ಎಲ್ಲ ಭಾಗದ ಮೀನುಗಾರರ ಸಮಸ್ಯೆ ಆಲಿಸುತ್ತಿದ್ದೇನೆ. ಒಬ್ಬ ಮೀನುಗಾರ 10 ಜನಕ್ಕೆ ಉದ್ಯೋಗ ಸೃಷ್ಟಿಸಬಲ್ಲ. ಮೀನುಗಾರ ಎಂದರೆ ಕೇವಲ ಬಲೆ ಬೀಸುವವನಲ್ಲ. ಸಹಾಯಕ, ಮೀನು ಒಣಗಿಸುವವ, ಮಾರುವವ ಎಲ್ಲರೂ ಸೇರುತ್ತಾರೆ. ಸರಕಾರದವರು ಈ ವರ್ಗದವರನ್ನು ನಿರ್ಲಕ್ಷಿಸಿದ್ದರು. ಹೀಗಾಗಿ ಅವರ ಜತೆ ಪ್ರತ್ಯೇಕವಾಗಿ ಮಾತನಾಡಿ, ಅವರ ಸಮಸ್ಯೆ ಪಟ್ಟಿ ಮಾಡಿ ಅದಕ್ಕೆ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆಸಿದ್ದೇವೆʼ ಎಂದು ತಿಳಿಸಿದ್ದಾರೆ.
ʼಹೊನ್ನಾವರದಲ್ಲೂ ದೇಶಪಾಂಡೆ ಹಾಗೂ ಇತರ ನಾಯಕರೆಲ್ಲರೂ ಜನರ ಪರವಾಗಿ ನಿಂತು, ಹೋರಾಟ ಮಾಡಿ ಅವರ ರಕ್ಷಣೆ ಮಾಡುತ್ತೇವೆ. ಸರ್ಕಾರ ಎಲ್ಲಿ ಬೇಕಾದರೂ ಬಂದರು ಮಾಡಿಕೊಳ್ಳಲಿ, ಆದರೆ ಅಲ್ಲಿನ ಜನರಿಗೆ ತೊಂದರೆ ನೀಡುವುದು ಬೇಡ. ಕೆಆರ್ ಎಸ್ ಆಣೆಕಟ್ಟು ನಿರ್ವಹಣೆ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ನನಗೆ ತಿಳಿದಿರುವ ಪ್ರಕಾರ ಈ ವಿಚಾರದಲ್ಲಿ ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ನಾನು ಮಂತ್ರಿಯಾಗಿದ್ದವರೆಗೂ ಬಿರುಕು ಬಿಟ್ಟಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿರಲಿಲ್ಲ. ಡಬಲ್ ಇಂಜಿನ್ ಸರ್ಕಾರ ಮೇಕೆದಾಟು ಹಾಗೂ ಮಹದಾಯಿ ವಿಚಾರದಲ್ಲಿ ಜನಪರ ಕೆಲಸ ಮಾಡಬೇಕು. ಮುಖ್ಯಮಂತ್ರಿಗಳು ಹೆಚ್ಚಿನ ಆಸಕ್ತಿ ವಹಿಸಿ ಈ ಯೋಜನೆಗಳನ್ನು ಆರಂಭಿಸಬೇಕು. ನಮ್ಮ ಜಾಗದಲ್ಲಿ, ನಮ್ಮ ಹಣದಲ್ಲಿ, ಯಾರ ನೀರಿನ ಪಾಲಿಗೂ ಅಡ್ಡಿಯಾಗದಂತೆ, ಯೋಜನೆ ರೂಪಿಸಿದ್ದೇವೆʼ ಎಂದು ಹೇಳಿದ್ದಾರೆ.
ಮುಂದಕ್ಕೆ ಮಾತನಾಡಿದ ಅವರು ʼಮೇಕೆದಾಟು ವಿಚಾರದಲ್ಲಿ ಕರ್ನಾಟಕ ತನ್ನ ಸ್ವಾಭಿಮಾನ ಕಳೆದುಕೊಳ್ಳಬಾರದು. ಮುಖ್ಯಮಂತ್ರಿಗಳು ತಮಿಳುನಾಡಿಗೆ ಪತ್ರ ಬರೆಯಬಾರದಿತ್ತು. ಮೇಕೆದಾಟು ಹಾಗೂ ಮಹದಾಯಿ ನಮ್ಮ ರಾಜ್ಯದಲ್ಲಿ ನಮ್ಮ ಹಕ್ಕಿನ ಯೋಜನೆ. ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದ್ದು, ಕೇಂದ್ರ ಸರ್ಕಾರವಾಗಲಿ, ತಮಿಳುನಾಡು ಸರ್ಕಾರವಾಗಲಿ ಬೇರೆಯವರಿಂದಾಗಲಿ ಅನುಮತಿ ಪಡೆಯಬೇಕಿಲ್ಲ. ಅವರ ಪಾಲು ನಾವು ಕೊಡಬೇಕು, ನಾವು ಕೊಡುತ್ತೇವೆ. ಲಸಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಗುಜರಾತಿಗೆ ಎಷ್ಟು ಲಸಿಕೆ ಹೋಗಿದೆ, ರಾಜ್ಯಕ್ಕೆ ಎಷ್ಟು ನೀಡಲಾಗಿದೆ ಎಂಬುದನ್ನು ನೋಡಿ. ಇಲ್ಲಿ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಸುಳ್ಳು ಲೆಕ್ಕ ಹೇಳುತ್ತಿದ್ದಾರೆ. ರಾಜ್ಯಕ್ಕೆ ನಿತ್ಯ 1.50 ಲಕ್ಷ ಲಸಿಕೆ ಬೇಕು ಅಂತಾ ಮನವಿ ಸಲ್ಲಿಸಿದ್ದು, ಕೇಂದ್ರ ಕೇವಲ 45 ಸಾವಿರದಷ್ಟು ನೀಡುತ್ತಿದೆ. ಜನರಿಗೆ ಲಸಿಕೆ ನೀಡುವ ವಿಚಾರದಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಆರ್.ವಿ ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

