ಈಗ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಉತ್ತರ ಪ್ರದೇಶ (Uttar Pradesh), ಉತ್ತರಖಂಡಾ (UttarKhand), ಗೋವಾ (Goa), ಮಣಿಪುರ (Manipur) ಮತ್ತು ಪಂಜಾಬ್ (Punjab) ರಾಜ್ಯಗಳ ಪೈಕಿ ಬಿಜೆಪಿ ನಾಲ್ಕು ಕಡೆ (ಪಂಜಾಬ್ ಹೊರತುಪಡಿಸಿ) ಅಧಿಕಾರದಲ್ಲಿದೆ. ನಾಲ್ಕು ಕಡೆ ಅಧಿಕಾರ ಉಳಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಬಿಜೆಪಿಗೆ ಗೊತ್ತಿದೆ. ಆದರೆ ಇತ್ತೀಚೆಗೆ ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲೂ ಮರಳಿ ಅಧಿಕಾರಕ್ಕೆ ಪಡೆಯುವುದು ಸುಲಭವಾಗಿ ಉಳಿದಿಲ್ಲ. ಇದು ಬಿಜೆಪಿಯ ಚಿಂತೆಯಾದರೆ, ಬಿಜೆಪಿ (BJP) ಸೋಲುತ್ತಿದೆ ಎಂಬ ಸುಳಿವು ಸಿಗುತ್ತಿದ್ದಂತೆ ಪ್ರಾದೇಶಿಕ ಪಕ್ಷಗಳು ಸಕ್ರೀಯವಾಗಿವೆ. ಒಂದೆಡೆ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್ ಅವರು ಎನ್‌ಸಿಪಿ ನಾಯಕ ಶರದ್ ಪವರ್ (sharad pawar) ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು (uddhav thackeray) ಭೇಟಿ ಮಾಡಿದ್ದಾರೆ. ಇನ್ನೊಂದೆಡೆ ಎರಡು ವರ್ಷದ ಬಳಿಕ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (Prasant Kishor) ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರನ್ನು ಭೇಟಿ ಮಾಡಿದ್ದಾರೆ.
ಹಲವು ವಿಷಯಗಳಲ್ಲಿ ಕೇಂದ್ರ ಸರ್ಕಾರಕ್ಕೆ (Central Goverment) ಪ್ರತ್ಯಕ್ಷ-ಪರೋಕ್ಷ ಬೆಂಬಲ ನೀಡಿದ್ದ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್ (KCR) ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ಬಗ್ಗೆ ಕಿಡಿಕಾರತೊಡಗಿದ್ದಾರೆ. ನರೇಂದ್ರ ಮೋದಿ ಇತ್ತೀಚೆಗೆ ಹೈದರಾಬಾದಾದಿಗೆ ಬಂದಿದ್ದಾಗ ಚಂದ್ರಶೇಖರ್ ರಾವ್ ಮುಖ್ಯಮಂತ್ರಿಯಾಗಿ ಶಿಷ್ಟಾಚಾರದ ಪ್ರಕಾರ ಸ್ವಾಗತ ಕೋರಲೂ ಹೋಗಿರಲಿಲ್ಲ. ಅಲ್ಲದೆ ಕೇಂದ್ರ ಸರ್ಕಾರ ತೆಲಂಗಾಣಕ್ಕೆ ಅರ್ಹವಾಗಿ ಸಿಗಬೇಕಾದ ಅನುದಾನವನ್ನೂ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಂತರ ಎನ್‌ಸಿಪಿ ನಾಯಕ ಶರದ್ ಪವರ್ ಹಾಗೂ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆಯನ್ನು ಭೇಟಿ ಮಾಡಿದ್ದಾರೆ.
ಇದು ತೃತೀಯ ರಂಗ ಬಲಪಡಿಸುವ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ. ಆದರೆ ಒಂದು ಸಮಸ್ಯೆ ಇದೆ. ಚಂದ್ರಶೇಖರ್ ರಾವ್ ಕಾಂಗ್ರೇಸೇತರ (Congress) ರಂಗ ರಚನೆ ಮಾಡಬೇಕು ಎಂಬ ಉದ್ದೇಶ ಹೊಂದಿದ್ದರೆ ಎನ್‌ಸಿಪಿ ನಾಯಕ ಶರದ್ ಪವರ್ ಹಾಗೂ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಸದ್ಯ ಕಾಂಗ್ರೆಸ್ ಬಿಟ್ಟು ಬಿಜೆಪಿ ವಿರುದ್ಧ ಹೋರಾಡಲು ಸಿದ್ದರಿಲ್ಲ. ದೇಶಾದ್ಯಂತ ಬಿಜೆಪಿಗೆ ಕಾಂಗ್ರೆಸ್ ಮಾತ್ರವೇ ಪರ್ಯಾಯವಾಗಲು ಸಾಧ್ಯ ಎಂದು ಎನ್‌ಸಿಪಿ ಮತ್ತು ಶಿವಸೇನೆಗಳು ನಂಬಿವೆ. ಚಂದ್ರಶೇಖರ್ ಮತ್ತು ಉದ್ಧವ್ ಠಾಕ್ರೆ ಭೇಟಿ ಬಳಿಕ ಮಾತನಾಡಿರುವ ಶಿವಸೇನೆಯ ವಕ್ತಾರ ಸಂಜಯ್ ರಾವತ್, ‘ನಾವು ಕಾಂಗ್ರೆಸ್ ಬಿಟ್ಟು ಹೊಸ ರಂಗ ಕಟ್ಟುವ ಬಗ್ಗೆ ಯಾವಾಗಲೂ ಹೇಳಿಲ್ಲ’ ಎಂದಿದ್ದಾರೆ. ಒಟ್ಟಿನಲ್ಲಿ ‘ವಿಪಕ್ಷಗಳು ಒಂದುಗೂಡಬೇಕೆಂಬ’ ಪ್ರಯತ್ನವಂತೂ ನಡೆಯುತ್ತಿದೆ.
ಇನ್ನೊಂದೆಡೆ ಜೆಡಿಯು (JDU) ಉಪಾಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿದ ಎರಡು ವರ್ಷಗಳ ನಂತರ ಶನಿವಾರ ದೆಹಲಿಯಲ್ಲಿ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಇದು ರಾಷ್ಟ್ರ ರಾಜಕಾರಣದಲ್ಲಿ ಸಣ್ಣ ಸಂಚಲನ ಸೃಷ್ಟಿಸಿದೆ. ಭೇಟಿಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಶಾಂತ್ ಕಿಶೋರ್ ‘ಇದು ಸೌಜನ್ಯದ ಭೇಟಿ’ ಎಂದು ಹೇಳಿದ್ದಾರೆ. ನಿತೀಶ್ ಕುಮಾರ್ ಕೂಡ ಹಾಗೇ ಪ್ರತಿಕ್ರಿಯಿಸಿದ್ದಾರೆ. ಆದರೆ ಇದು ‘ಸೌಜನ್ಯದ ಭೇಟಿ’ ಮಾತ್ರವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಈ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಯು ನಾಯಕರು ‘ನಿತೀಶ್ ಕುಮಾರ್ ಈಗ ಬಿಜೆಪಿ ಜೊತೆಗೆ ಸುಮಧುರವಾದ ಮತ್ತು ಆಳವಾದ ಸಂಬಂಧ ಹೊಂದಿದ್ದಾರೆ. ಅವರನ್ನು ಬಿಜೆಪಿ ಸಖ್ಯ ಬಿಡಿಸುವುದು ಅಸಾಧ್ಯದ ಮಾತು’ ಎಂದು ಹೇಳಿದ್ದಾರೆ. ಅಲ್ಲದೆ ಪ್ರಶಾಂತ್ ಕಿಶೋರ್ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿಲ್ಲ ಎಂದು ದೂರಿದ್ದಾರೆ. ಇನ್ನೊಂದೆಡೆ ಪ್ರಶಾಂತ್ ಕಿಶೋರ್ ಆಪ್ತರು ಕೂಡ ‘ಬಿಜೆಪಿ ವಿರೋಧಿ ರಂಗದಲ್ಲಿ ಈಗ ನಿತೀಶ್ ಕುಮಾರ್ ಗೆ ಜಾಗ ಇಲ್ಲ. ಅವರು ಸಿಎಎ ಆಂದೋಲನದ ಬಗ್ಗೆ ಮೌನ ವಹಿಸಿದ ನಂತರ ಮುಸ್ಲಿಂ ಸಮುದಾಯದ (Muslim Community) ವಿಶ್ವಾಸ ಕಳೆದುಕೊಂಡಿದ್ದಾರೆ’ ಎಂದು ಹೇಳುತ್ತಾರೆ. ಹೀಗೆ ಸದ್ಯಕ್ಕೆ ಪರಸ್ಪರ ‘ಅಸಾಧ್ಯತೆಯ’ ಮಾತುಗಳು ಕೇಳಿಬರುತ್ತಿವೆ.
2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಜೊತೆಯಾಗುವುದರ ಹಿಂದೆ ಪ್ರಶಾಂತ್ ಕಿಶೋರ್ ಶ್ರಮವಿತ್ತು. ನಂತರ ಪ್ರಶಾಂತ್ ಕಿಶೋರ್ ಎರಡೂ ಪಕ್ಷಗಳ ಸಮನ್ವಯ ಸಾಧಿಸಿ ಪ್ರಚಾರ ತಂತ್ರ ಎಣೆದಿದ್ದರು. ಮಹಾಮೈತ್ರಿಕೂಟದ ಸೀಟು ಹಂಚಿಕೆಯ ಜವಾಬ್ದಾರಿಯನ್ನೂ ನಿರ್ವಹಿಸಿದ್ದರು. ಆಗ ಪ್ರಶಾಂತ್ ಕಿಶೋರ್ ಅಸಾಧ್ಯವಾದುದನ್ನು ಸಾಧ್ಯ ಮಾಡಿದ್ದರು. ಈಗಲೂ ಅಂಥದ್ದೇ ಸಂಭವಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಮಾರ್ಚ್ 10ರಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಇನ್ನಷ್ಟು ರಾಜಕೀಯ ಚಟುವಟಿಕೆಗಳು ನಡೆಯಲಿವೆ. ಸದ್ಯ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿರುವ ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ ನಿಲುವು ಬದಲಾಗಬಹುದು. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡುತ್ತದೆ. ಅದಾದ ಮೇಲೆ ಕಾಂಗ್ರೆಸ್ ಅನ್ನು ಒಳಗೊಂಡ ವಿಪಕ್ಷಗಳ ಮೈತ್ರಿಕೂಟ ಅಥವಾ ಕಾಂಗ್ರೆಸ್ ಹೊರತುಪಡಿಸಿದ ಪ್ರತಿಪಕ್ಷಗಳ ಪಾಳೆಯ, ಎರಡರಲ್ಲಿ ಯಾವುದು ಎನ್ನುವುದು ಗೊತ್ತಾಗಲಿದೆ.