
ಒಂದು ಕಡೆ ರಷ್ಯಾ – ಉಕ್ರೇನ್ ಯುದ್ಧ.. ಮತ್ತೊಂದು ಕಡೆ ಇಸ್ರೇಲ್ – ಹಮಾಸ್ ಫೈಟಿಂಗ್ ನಡುವೆ ಇರಾನ್ ಕೂಡ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದೆ. ಇದೇ ಸಮಯ ಬಳಸಿಕೊಂಡಿರುವ ಸಿರಿಯಾ ಬಂಡುಕೋರರು ಸಿರಿಯಾ ರಾಜಧಾನಿ ಡಮಾಸ್ಕಸ್ ವಶಕ್ಕೆ ಪಡೆದಿದ್ದಾರೆ.

ಆಂತರಿಕ ದಾಳಿ ಮತ್ತು ಹಿಂಸಾಚಾರಕ್ಕೆ ಜನ ತತ್ತರಿಸಿ ಹೋಗಿದ್ದ ಸಿರಿಯಾ, ಇಸ್ಲಾಮಿಕ್ ಬಂಡುಕೋರರ ದಾಳಿಯಿಂದ ದೊಡ್ಡ ಕ್ರಾಂತಿಯೇ ನಡೆಯುತ್ತಿದೆ. ಬಂಡುಕೋರರು ರಾಜಧಾನಿ ಡಮಾಸ್ಕಸ್ ವಶಕ್ಕೆ ಪಡೆದಿದ್ದಾರೆ. ದೇಶ ತೊರೆದ ಅಧ್ಯಕ್ಷ ಬಷರ್ ಅಲ್ ಅಸಾದ್ ಆಡಳಿತ ಕೊನೆಯಾಗಿದೆ.ಕಳೆದ 24 ವರ್ಷಗಳ ಬಳಿಕ ಅಧಿಕಾರ ತೊರೆದ ಅಧ್ಯಕ್ಷ ಬಷರ್ ಅಲ್ ಅಸಾದ್ ದೇಶ ಬಿಟ್ಟು ಪರಾರಿಯಾಗಿದ್ದಾರೆ.

ಡಮಾಸ್ಕಸ್ ಸೇರಿದಂತೆ ಸಿರಿಯಾದ ಪ್ರಮುಖ ನಗರಗಳಾದ ಹೋಮ್ಸ್, ಅಲೆಪ್ಪೋ, ಹಮಾ ಮತ್ತು ದಾರಾ ನಗರವನ್ನು ವಶಕ್ಕೆ ಪಡೆದಿರುವ ಬಂಡುಕೋರರು, ಇದು ಹೊಸ ಯುಗದ ಆರಂಭ ಎಂದು ಘೋಷಿಸಿಕೊಂಡಿದ್ದಾರೆ..ಇಂಟರ್‌ನ್ಯಾಷನಲ್ ಏರ್‌ಪೋರ್ಟ್, ಸೇನಾಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳು ಬಂಡುಕೋರರ ಹಿಡಿತದಲ್ಲಿವೆ.ಕ್ಷಿಪ್ರ ಕ್ರಾಂತಿಯಲ್ಲಿ ಬಂಡುಕೋರರು ಜಯಸಾಧಿಸಿದ ಪರಿಣಾಮ ಸಿರಿಯಾದ ಆಡಳಿತವು ಬಷರ್ ಕೈತಪ್ಪಿದೆ.
ಸಿರಿಯಾ ರಾಜಧಾನಿ ಡಮಾಸ್ಕಸ್‌ನಿಂದ ಬಷರ್ ಅಲ್ ಅಸಾದ್ ಅಜ್ಞಾತ ಸ್ಥಳಕ್ಕೆ ಪರಾರಿಯಾಗಿರುವುದಾಗಿ ವರದಿಯಾಗಿದೆ. ಟರ್ಕಿ ಬೆಂಬಲಿತ ಪಡೆಗಳ ಪ್ರಾಬಲ್ಯಕ್ಕೆ ಬೆದರಿರುವ ಸಿರಿಯಾ ಪ್ರಧಾನಿ ಮೊಹಮ್ಮದ್ ಘಾಜಿ ಅಲ್ ಜಲಾಲಿ, ಪ್ರಜೆಗಳ ಆಯ್ಕೆಗೆ ಅಧಿಕಾರ ಹಸ್ತಾಂತರಕ್ಕೆ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದಾರೆ. ನಾನು ನನ್ನ ಮನೆಯಲ್ಲಿದ್ದೇನೆ. ನಾನು ದೇಶ ಬಿಟ್ಟು ಹೋಗಿಲ್ಲ. ಜನರು ಆಯ್ಕೆ ಮಾಡುವ ನಾಯಕತ್ವಕ್ಕೆ ಅಧಿಕಾರ ಸಿಗಲಿದೆ. ನಾವು ಅಧಿಕಾರ ಹಸ್ತಾಂತರಕ್ಕೆ ಸಹಕರಿಸಲು ಸಿದ್ಧರಿದ್ದೇವೆ. ಎಲ್ಲಾ ಜನರ ಆಸ್ತಿಗಳು ಮತ್ತು ಸಂಸ್ಥೆಗಳನ್ನು ಸಂರಕ್ಷಿಸಬೇಕು ಎಂದು ಕರೆ ಕೊಟ್ಟಿದ್ದಾರೆ.




