ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾದ ಕೂಡಲೇ ಮಾಡಿದ ಮೊದಲ ಕೆಲಸ ಈ ಹಿಂದೆ ಸಚಿವಾಲಯದಲ್ಲಿದ್ದ ಸಿಬ್ಬಂದಿಯನ್ನು ಬೇರೆಡೆ ವರ್ಗಾಯಿಸಿದ್ದರು. ಈ ಹಿಂದೆ ಜೆಡಿಎಸ್- ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಇ.ವಿ.ರಮಣರೆಡ್ಡಿ ಅವರನ್ನು ನೇಮಕ ಮಾಡಲಾಗಿತ್ತು. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಅವರೇ ಮುಂದುವರೆದಿದ್ದರು. ಇದೀಗ ಅವರನ್ನು ಸಿಎಂ ಸಚಿವಾಲಯದಿಂದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಸಚಿವ ಆರ್.ಅಶೋಕ್ ಅವರಿಗೆ ಆಪ್ತರಾಗಿದ್ದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಯಾಗಿದ್ದ ಮಂಜುನಾಥ್ ಪ್ರಸಾದ್ ಅವರನ್ನು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಮಂಜುನಾಥ್ ಪ್ರಸಾದ್ ಕೊರೋನಾ ಎರಡನೇ ಅಲೆಯ ವೇಳೆಯಲ್ಲಿ ರಾಜಕೀಯ ವಲಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಾದ ಹೆಸರು. ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸ್ಥಾನದಿಂದ ರಾಜ್ಯ ವಿಪತ್ತು ನಿರ್ವಹಣೆ ಇಲಾಖೆಯ ಹೆಚ್ಚುವರಿ ಹೊಣೆ ವಹಿಸಿಕೊಂಡು ಕೋವಿಡ್ ನಿಯಂತ್ರಣ ವಿಚಾರದಲ್ಲಿ ಕೈಗೊಂಡ ಹಲವು ನಿರ್ಧಾರಗಳು ಹಿಂದಿನ ಸರ್ಕಾರದಲ್ಲಿ ಎಲ್ಲರ ಗಮನ ಸೆಳೆದಿದ್ದವು. ಅದರಲ್ಲೂ ಮುಖ್ಯವಾಗಿ ಕಂದಾಯ ಸಚಿವರಾಗಿದ್ದ ಆರ್ ಅಶೋಕ್ ತೆಗೆದುಕೊಂಡರು ಎನ್ನಲಾಗಿದ್ದ ಒಂದು ನಿರ್ಧಾರ ಯಡಿಯೂರಪ್ಪ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಏನೆಂದರೆ, ಸೋಂಕಿನಿಂದ ಮೃತಪಟ್ಟವರ ಅಸ್ಥಿಯನ್ನು ಗೌರವಯುತವಾಗಿ ಧಾರ್ಮಿಕ ನೆಲೆಗಟ್ಟಿನಲ್ಲೇ ಸಂಸ್ಕಾರ ನಡೆಸುವ ನಿರ್ಧಾರ ಅದಾಗಿತ್ತು. ವಾಸ್ತವದಲ್ಲಿ ಇದು ಮಂಜುನಾಥ್ ಪ್ರಸಾದ್ ಎಂಬ ಹಿರಿಯ ಆಡಳಿತಾಧಿಕಾರಿಯ ಬುದ್ಧಿವಂತಿಕೆಯಾಗಿತ್ತು.
ಬಿಬಿಎಂಪಿಯಲ್ಲಿ 3 ವರ್ಷಗಳಿಗೂ ಹೆಚ್ಚು ಕಾಲ ಆಯುಕ್ತರಾಗಿ ಯಶಸ್ವಿಯಾಗಿ ಆಡಳಿತ ನಡೆಸಿ ನಗರದ ಹಲವು ಸಮಸ್ಯೆ, ಸವಾಲುಗಳನ್ನು ಚಾಕಚಕ್ಯತೆಯಿಂದ ನಿರ್ವಹಿಸಿದ್ದರು. ಬೆಂಗಳೂರಿನ ಎಂಟು ವಲಯಗಳನ್ನು ಒಂದೇ ರೀತಿ ಮುನ್ನಡೆಸಿಕೊಂಡು, ಎಲ್ಲಾ ವಿಭಾಗದ ವಿಶೇಷ ಆಯುಕ್ತರನ್ನು ಹಾಗೂ ಜಂಟಿ ಆಯುಕ್ತರು ಸೇರಿದಂತೆ ಸಿಬ್ಬಂದಿಗಳನ್ನು ಗಣನೆಗೆ ತೆಗೆದುಕೊಂಡೇ ಕೆಲಸ ಮಾಡಿದ್ದರು. ಅಲ್ಲದೇ ಕೊರೋನಾ ಮೊದಲನೇ ಅಲೆ ಸಮುದಲ್ಲಿ ಮೊಬೈಲ್ ಟೆಸ್ಟಿಂಗ್ ಸೆಂಟರ್ಗಳನ್ನು ನಗರದ ಅಲ್ಲಲ್ಲಿ ನಿಯೋಜಿಸಿ ಕೊರೋನಾ ಮಟ್ಟಹಾಕುವಲ್ಲಿ ಶ್ರಮಿಸಿದ್ದರು. ಪಾಲಿಕೆಯ ಈ ನಡೆ ವಾಸ್ತವದಲ್ಲಿ ನಗರದ ಕರೋನಾ ಪ್ರಮಾಣ ಎಷ್ಟು ಎಂದು ಗೊತ್ತುಮಾಡುವಲ್ಲಿ ಯಶಸ್ವಿಯಾಗಿತ್ತು.
ಬಹುಶಃ ಇದೆಲ್ಲವೂ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಸಚಿವಾಲಯ ಪ್ರಧಾನ ಕಾರ್ಯದರ್ಶಿಯಾಗಿ ಎನ್.ಮಂಜುನಾಥ್ ಪ್ರಸಾದ್ ಅವರನ್ನು ಆಯ್ಕೆ ಮಾಡಲು ಪ್ರಮುಖ ಕಾರಣ ಎನ್ನಲಾಗಿದೆ. ಈ ಜವಾಬ್ದಾರಿ ಜೊತೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹೆಚ್ಚುವರಿ ಹೊಣೆಯನ್ನು ನೀಡಲಾಗಿದೆ. ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಹೆಸರೂ ಕೂಡ ಸಿಎಂ ಪ್ರಧಾನ ಕಾರ್ಯದರ್ಶಿ ಹುದ್ದೆಯ ರೇಸ್ ನಲ್ಲಿ ಪ್ರಬಲವಾಗಿ ಕೇಳಿಬಂದಿತ್ತು. ಆದರೆ ಅಂತಿಮವಾಗಿ ಮಂಜುನಾಥ್ ಪ್ರಸಾದ್ ರನ್ನು ರಾಜ್ಯ ಸರ್ಕಾರ ಈ ಪ್ರಭಾವಿ ಹುದ್ದೆಗೆ ನೇಮಕ ಮಾಡಿದೆ. ರಾಕೇಶ್ ಸಿಂಗ್ ಪ್ರಸ್ತುತ ಬಿಬಿಎಂಪಿ ಆಡಳಿತಾಧಿಕಾರಿ, ನಗರಾಭಿವೃದ್ಧಿ ಹಾಗೂ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ನಮ್ಮ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯನ್ನು ನಿಭಾಯಿಸಿದ್ದು ಇತ್ತೀಚೆಗಷ್ಟೆ ಆ ಸ್ಥಾನಕ್ಕೆ ಐಎಎಸ್ ಅಧಿಕಾರಿ ಅಂಜುಮ್ ಪರ್ವೇಜ್ ಅವರನ್ನು ನಿಯೋಜಿಸಲಾಗಿತ್ತು.