ಲಕ್ನೋ:ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಶಾಲೆಯೊಂದರ ಪ್ರಾಂಶುಪಾಲರು 50 ಕ್ಕೂ ಹೆಚ್ಚು ಮಕ್ಕಳನ್ನು ಸುಡುಬಿಸಿಲಿನಲ್ಲಿ ಕೂರಿಸಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಪೋಷಕರು ಶುಲ್ಕ ಪಾವತಿಸದ ಕಾರಣ ಕೋಪಗೊಂಡ ಪ್ರಾಂಶುಪಾಲರು ಶಾಲೆಯ ಮುಖ್ಯ ಗೇಟ್ನ ಹೊರಗೆ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸುಡುವ ಬಿಸಿಲಿನಲ್ಲಿ ಕುಳಿತುಕೊಳ್ಳುವಂತೆ ಮಾಡಿದರು.
ಅಲ್ಲದೇ ಇದರ ವೀಡಿಯೋ ಮಾಡಿ ಬಳಿಕ ಪೋಷಕರಿಗೆ ಎಚ್ಚರಿಕೆ ಕೂಡ ನೀಡಲಾಗಿದೆ. ಸದ್ಯ ಸಿದ್ಧಾರ್ಥನಗರದ ಇಟಾವಾದಲ್ಲಿರುವ ಶ್ಯಾಮರಾಜಿ ಪ್ರೌಢಶಾಲೆಯ ಅವಮಾನಕರ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಎರಡು ನಿಮಿಷಗಳ ವೈರಲ್ ವೀಡಿಯೊದಲ್ಲಿ, ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಶಾಲೆಯ ಗೇಟ್ ಹೊರಗೆ ಗುಂಪಾಗಿ ಕುಳಿತಿರುವುದನ್ನು ಕಾಣಬಹುದು. ಹೊಲಗಳ ಮಧ್ಯೆ ವಿದ್ಯಾರ್ಥಿಗಳು ತಮ್ಮ ಗುರುತು ಮರೆಮಾಚಲು ಹಾಗೂ ಮುಜುಗರ ತಪ್ಪಿಸಲು ಮುಖ ಮುಚ್ಚಿಕೊಂಡಿದ್ದಾರೆ.
ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪತ್ರಕರ್ತರು ಪ್ರಾಂಶುಪಾಲ ತ್ರಿಪಾಠಿ ಅವರನ್ನು ಸಂಪರ್ಕಿಸಿದಾಗ, ಯಾರಿಗಾದರೂ ಕೆಟ್ಟ ಭಾವನೆ ಇದ್ದರೆ ಕ್ಷಮಿಸಿ. ಪ್ರತಿ ವಿದ್ಯಾರ್ಥಿಯ 10,000 ರೂ.ನಿಂದ ಲಕ್ಷದವರೆಗೆ ಶುಲ್ಕ ಬಾಕಿಯಿದೆ. ವಿದ್ಯಾರ್ಥಿಗಳನ್ನು ಬಿಸಿಲಿನಲ್ಲಿ ಕೂರಿಸಲು ನಾನು ಇಷ್ಟಪಡಲ್ಲ. ಆದರೆ ಎರಡು ನಿಮಿಷಗಳ ಕಾಲ ವೀಡಿಯೋ ಚಿತ್ರೀಕರಣಕ್ಕಾಗಿ ಇದನ್ನು ಮಾಡಲಾಗಿದೆ. ನಾವು ಪೋಷಕರಿಗೆ ಹಲವಾರು ಬಾರಿ ಜ್ಞಾಪನೆ ಮಾಡಿದ್ದೇವೆ, ಆದರೆ ನಮಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಒಂದು ಅಥವಾ ಎರಡು ತಿಂಗಳಲ್ಲಿ ಶುಲ್ಕವನ್ನು ಪಾವತಿಸುವುದಾಗಿ ಪೋಷಕರು ಹೇಳುತ್ತಾರೆ, ಆದರೆ ಕೆಲವು ವಿದ್ಯಾರ್ಥಿಗಳು ನಾಲ್ಕು ವರ್ಷಗಳಿಂದ ಶುಲ್ಕವನ್ನು ಪಾವತಿಸಿಲ್ಲ. ನಾನು ಮಾಹಿತಿಯನ್ನು ಹಂಚಿಕೊಳ್ಳಲು ಪೋಷಕರ ವಾಟ್ಸಾಪ್ ಗ್ರೂಪ್ನಲ್ಲಿ ಈ ವೀಡಿಯೊವನ್ನು ಹಾಕಿದ್ದೇನೆ. ಆದರೆ ಕೆಲವು ಪೋಷಕರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ದೂರಿದರು.
ಇನ್ನು ಈ ಸಂಬಂಧ ಅಲ್ಲಿನ ಇನ್ಸ್ಪೆಕ್ಟರ್ ಪ್ರತಿಕ್ರಿಯಿಸಿ, ವೈರಲ್ ಆಗಿರುವ ವಿಡಿಯೋ ತನ್ನ ಗಮನಕ್ಕೆ ಬಂದಿದೆ. ಇದೊಂದು ನಾಚಿಕೆಗೇಡಿನ ಸಂಗತಿಯಾಗಿದೆ. ನಾವು ಶಾಲೆಯನ್ನು ನೋಂದಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ತನಿಖೆಯ ನಂತರ ಮುಂದಿನ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.