ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪೊಲೀಸರು, ಆರೋಪಿಗಳಿಗೆ ರಾತ್ರಿ ಊಟಕ್ಕೆ ದೊನ್ನೆ ಬಿರಿಯಾನಿ ನೀಡಿದ್ದಾರೆ.
ದರ್ಶನ್ ಹಾಗೂ ಟೀಂನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ್ ನೀಡಿದೆ. ಹೀಗಾಗಿ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ (Darshan) ಹಾಗೂ ಸಹಚರರು ಇದ್ದಾರೆ. ಉಳಿದ ಮೊದಲ ರಾತ್ರಿ ಠಾಣೆಗೆ ಹೊರಗಡೆಯಿಂದ 10ಕ್ಕೂ ಹೆಚ್ಚು ದೊನ್ನೆ ಬಿರಿಯಾನಿ ತರಸಲಾಗಿದೆ. ಈ ರಾಜ ಮರ್ಯಾದೆಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾಗೌಡಗೆ ಅಶ್ಲೀಲ ಮೆಸೆಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ರೇಣುಕಾ ಸ್ವಾಮಿ ಎಂಬುವವರನ್ನು ಹತ್ಯೆ ಮಾಡಿದ ಆರೋಪದಲ್ಲಿ ದರ್ಶನ್, ಪವಿತ್ರಾ ಗೌಡ, ವಿ. ವಿನಯ್, ಆರ್. ನಾಗರಾಜು, ಎಸ್. ಪ್ರದೋಶ್, ಎಂ. ಲಕ್ಷ್ಮಣ್, ಕೆ. ಪವನ್, ನಂದೀಶ್, ದೀಪಕ್ ಕುಮಾರ್, ಕಾರ್ತಿಕ್, ನಿಖಿಲ್ ನಾಯಕ್, ರಾಘವೇಂದ್ರ ಅಲಿಯಾಸ್ ರಾಘು, ಕೇಶವಮೂರ್ತಿ ಅರೆಸ್ಟ್ ಆಗಿದ್ದಾರೆ. ಸದ್ಯ ಎಲ್ಲರನ್ನೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಇನ್ನೊಂದೆಡೆ ರೇಣುಕಾಸ್ವಾಮಿ ಅವರ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ. ಅವರು 5 ತಿಂಗಳ ಗರ್ಭಿಣಿಯಾಗಿದ್ದು, ಪತಿಯ ಸಾವಿನ ಸುದ್ದಿ ತಿಳಿದು ಕಂಗಾಲಾಗಿದ್ದಾರೆ. ‘ನಮ್ಮ ಮನೆಯವರ ಸಾವಿಗೆ ನ್ಯಾಯ ಕೊಡಿಸಿ. ನಾನು ಮದುವೆ ಆಗಿ 1 ವರ್ಷ ಆಗಿದೆ. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಲಿ ಎಂದು ಗೋಳಾಡಿದ್ದಾರೆ.
ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ರೇಣುಕಾ ಸ್ವಾಮಿಯನ್ನು ದರ್ಶನ್ ಮತ್ತು ಗ್ಯಾಂಗ್ ಅಪಹರಿಸಿತ್ತು. ನಂತರ ಹತ್ಯೆ ಮಾಡಿ ರಾಜಕಾಲುವೆಗೆ ಎಸೆಯಲಾಗಿದೆ ಎಂಬ ಆರೋಪವಿದೆ. ‘ಕೇವಲ ವಿಚಾರಣೆ ಸಲುವಾಗಿ ಮಾತ್ರ ದರ್ಶನ್ ಅವರನ್ನು 6 ದಿನಗಳ ಕಾಲ ಕಸ್ಟಡಿಗೆ ನೀಡಿದ್ದಾರೆ. ಪ್ರತಿ ದಿನ ವಕೀಲರನ್ನು ಭೇಟಿ ಮಾಡಿಸಬೇಕು ಹಾಗೂ ಪ್ರತಿ 2 ದಿನಕ್ಕೆ ತನಿಖೆಯ ವಿವರವನ್ನು ಕೋರ್ಟ್ ಗೆ ಸಲ್ಲಿಸಬೇಕು ಎಂದು ಜಡ್ಜ್ ಸೂಚಿಸಿದ್ದಾರೆ ಎನ್ನಲಾಗಿದೆ.