
ತುಮಕೂರು; ಕುರಿ ಮೇಯಿಸುತಿದ್ದ ವೃದ್ದನೊಬ್ಬನನ್ನು ಕೊಲೆ ಮಾಡಿ ಕುರಿಗಳನ್ನು ಕದ್ದೊಯ್ದಿದ್ದ ದುಷ್ಕರ್ಮಿಯೊಬ್ಬನನ್ನು ಪೋಲೀಸರು ಸಂತೆಯಲ್ಲೇ ಬಂಧಿಸಿರುವ ಘಟನೆ ವರದಿ ಆಗಿದೆ.

ಪಾವಗಡ ತಾಲ್ಲೂಕಿನ ಕೆ.ಟಿ.ಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ, ದೇವಲಕೆರೆ ಗ್ರಾಮದ ನರಸಿಂಹಪ್ಪ (60) ಎಂಬುವವರನ್ನು ಯಾರೋ ಕೊಲೆ ಮಾಡಿ ಕುರಿಗಳೆಲ್ಲವನ್ನೂ ಕದ್ದೊಯ್ದಿದ್ದರು.ನರಸಿಂಹಪ್ಪ ದೇವಲಕೆರೆ ಹೊರವಲಯದ ತಿಪ್ಮಪ್ಪನ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ಮೇಕೆ ಮೇಯಿಸಲು ಹೋಗಿದ್ದರು. ಈ ವೇಳೆ ಮಣಿಕಂಠ(29) ಎಂಬಾತ ಕುಡುಗೋಲಿನಿಂದ ನರಸಿಂಹಪ್ಪನ ಕುತ್ತಿಗೆ, ಎಡಗೈ ಬೆರಳು ಕತ್ತರಿಸಿ ಹತ್ಯೆ ಮಾಡಿ, ಸುಮಾರು 30 ಮೇಕೆಗಳನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿಗೆ ಹೊಡೆದುಕೊಂಡು ಹೋಗಿದ್ದನು ಎನ್ನಲಾಗಿದೆ.
ಶುಕ್ರವಾರ ಸಂಜೆಯಾದರೂ ನರಸಿಂಹಪ್ಪ ಮನೆಗೆ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಕುರಿ ಮೇಯಿಸುತಿದ್ದ ಸ್ಥಳಕ್ಕೆ ಹೋದಾಗ ಮೃತರ ಜತೆಗೇ ಕುರಿಗಳು ನಾಪತ್ತೆ ಆಗಿದ್ದವು. ಕುಟುಂಬಸ್ಥರು ಸುತ್ತಮುತ್ತಲಿನ ಗ್ರಾಮಸ್ಥರನ್ನು ವಿಚಾರಿಸಿದ್ದರು. ರಂಗಸಮುದ್ರ, ವದನಕಲ್ಲು ಮಾರ್ಗವಾಗಿ ಮೇಕೆಗಳನ್ನು ಹಿರಿಯೂರಿಗೆ ಹೊಡೆದುಕೊಂಡು ಹೋಗಿರುವ ವಿಚಾರ ಗೊತ್ತಾಗಿತ್ತು.
ಹಿರಿಯೂರಿನ ಸಂತೆಯಲ್ಲಿ ಶನಿವಾರ ಕದ್ದ ಮೇಕೆಗಳನ್ನು ಮಾರಾಟ ಮಾಡಲು ನಿಂತಿದ್ದಾಗ ಮೃತ ನರಸಿಂಹಪ್ಪ ಅವರ ಮಗ ಮಂಜುನಾಥ್ ಮೇಕೆಗಳನ್ನು ಗುರುತು ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರ ಹತ್ಯೆಯ ವಿಚಾರ ತಿಳಿದು ಬಂದಿದೆ. ಅರಸೀಕೆರೆ ಪೊಲೀಸರು ಆರೋಪಿಯನ್ನು ಅರಣ್ಯ ಪ್ರದೇಶದ ಘಟನಾ ಸ್ಥಳಕ್ಕೆ ಕರೆದೊಯ್ದು ಮೃತ ದೇಹ ಪತ್ತೆ ಮಾಡಿದ್ದಾರೆ. ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











