“ಮುಸ್ಲಿಂ ಮಹಿಳೆಯನ್ನು ತನ್ನ ಮಗ, ಸಹೋದರರು, ತಂದೆ, ಚಿಕ್ಕಪ್ಪ, ಮತ್ತು ಪತಿ, ಇತರ ಹತ್ತಿರದ ಸಂಬಂಧಿಕರು ಮಾತ್ರ ನೋಡಲು ಅನುಮತಿಸಲಾಗಿದೆ. ಆಕೆ ಪ್ರಾರ್ಥನೆ ಮಾಡಲು ಮಸೀದಿಗೆ ಹೋಗಲು ಸಾಧ್ಯವಿಲ್ಲ. ಆಕೆ ಮನೆಯಿಂದ ಹೊರಗೆ ಹೋಗಬೇಕಾದರೆ ಬುರ್ಕಾ ಧರಿಸಬೇಕು. ಈ ಬುರ್ಕಾಧಾರಿ ಮಹಿಳೆ ಬೀದಿಗಳಲ್ಲಿ ಹೋಗುವುದು ಭಾರತದಲ್ಲಿ ನೋಡಬಹುದಾದ ಅತ್ಯಂತ ಭಯಾನಕ ದೃಶ್ಯ, ಮುಸ್ಲಿಮರು ಹಿಂದೂಗಳ ಎಲ್ಲಾ ಸಾಮಾಜಿಕ ಕಳಂಗಳನ್ನು ಹೊಂದಿದ್ದಾರೆ, ಮಾತ್ರವಲ್ಲ, ಹಿಂದೂಗಳಿಗಿಂತ ಇನ್ನೂ ಹೆಚ್ಚಿನ ಅನಾಚಾರಗಳನ್ನು ಹೊಂದಿದ್ದಾರೆ. ಮುಸ್ಲಿಮ್ ಮಹಿಳೆಯರಿಗೆ ಕಡ್ಡಾಯವಾದ ಪರ್ದಾ ವ್ಯವಸ್ಥೆಯು ಇಂತಹ ಅನಾಚಾರಗಳಲ್ಲಿ ಒಂದು. ಬುರ್ಖಾ ಪದ್ಧತಿಯಿಂದಾಗಿ ಹೊರಗಿನ ಪ್ರಪಂಚದಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿರುವ ಮುಸ್ಲಿಂ ಮಹಿಳೆಯರು ಸಂಕುಚಿತ ದೃಷ್ಟಿಕೋನ ಹೊಂದುತ್ತಾರೆ. ಮತ್ತು ನಿರ್ಬಂಧಿತರಾಗಿರುವ ಅವರು ತಮ್ಮ ಮನಸ್ಸನ್ನು ಕೌಟುಂಬಿಕ ಕಲಹಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.. ಅವರು ಯಾವುದೇ ಹೊರಗಿನ ಚಟುವಟಿಕೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲದ ಕಾರಣ ಗುಲಾಮಿ ಮನಸ್ಥಿತಿ ಮತ್ತು ಕೀಳರಿಮೆಯಿಂದ ಬಳಲುತ್ತಾರೆ. ಪರ್ದಾ ಮಹಿಳೆಯರು ಅಸಹಾಯಕರಾಗುತ್ತಾರೆ, ಅಂಜುಬುರುಕರಾಗುತ್ತಾರೆ . ಭಾರತದಲ್ಲಿ ಪರ್ದಾ ಸಮಸ್ಯೆಯ ಅಗಾಧತೆ ಮತ್ತು ಗಂಭೀರತೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.” ಎಂದು ಭಾರತೀಯ ಸಂವಿಧಾನದ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರು 1945ರಲ್ಲಿ ಬರೆದ Pakistan or the Partition of India ಎಂಬ ಪುಸ್ತಕದ ಈ ಭಾಗವನ್ನು ಆಯ್ದು ಉಲ್ಲೇಖಿಸಿರುವ ರೀತಿಯು ತೀರ್ಪಿನಲ್ಲಿ ಸಾಂದರ್ಭಿಕ ತಳಹದಿಯ ಅನುಪಸ್ಥಿತಿಯನ್ನು ತೋರಿಸುತ್ತದೆ.
ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ಎಂಬ ಎರಡು ಮೂಲಭೂತವಾದಿ ಶಕ್ತಿಗಳ ಪೈಪೋಟಿಯನ್ನು ಪರಿಶೀಲಿಸುವ ದ್ವಿ ರಾಷ್ಟ್ರ ಸಿದ್ಧಾಂತದ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಈ ಪುಸ್ತಕ ಬರೆದಿದ್ದರು. ನ್ಯಾಯಾಲಯವು ಹಿಜಾಬ್ ಪ್ರಕರಣಕ್ಕೆ ಆ ಪುಸ್ತಕದಿಂದ ಉಲ್ಲೇಖಿಸಲು ಆಯ್ಕೆಮಾಡಿರುವುದು ದುರಂತ.
ಆ ಕಾಲಘಟ್ಟದಲ್ಲಿ ಅಂಬೇಡ್ಕರ್ ಓರ್ವ ಶ್ರೇಷ್ಟ ಸಮಾಜ ಸುಧಾರಕರೂ, ಬುದ್ಧಿಜೀವಿಯೂ ಆಗಿದ್ದರು ಎನ್ನುವುದಕ್ಕೆ ಯಾವುದೇ ಅನುಮಾನವಿಲ್ಲ. ಆದರೆ, ಪರ್ದಾ ವಿಷಯದಲ್ಲಿ ಅವರ ಈ ಅಭಿಪ್ರಾಯವು ಸಮಸ್ಯೆಗಳಿಂದ ಕೂಡಿದೆ. ಇದಲ್ಲದೆ, ಕಟ್ಟಾ ಅಂಬೇಡ್ಕರ್ ವಾದಿಗಳು ಕೂಡಾ ಅಂಬೇಡ್ಕರ್ ರನ್ನು ಮುಸ್ಲಿಂ ವಿಮೋಚನೆಯ ವಿಷಯದಲ್ಲಿ ಪರಿಣಿತ ಎಂದು ಒಪ್ಪಲು ಹಿಂಜರಿಯುತ್ತಾರೆ.
ಜಾಗತಿಕ ಇಸ್ಲಾಮೋಫೋಬಿಯಾ ಮತ್ತು ಭಾರತದಲ್ಲಿ ಉಗ್ರ ಹಿಂದುತ್ವದ ಪ್ರವರ್ಧಮಾನಕ್ಕೆ ಬಂದಿರುವ ಈ ಕಾಲದಲ್ಲಿ, ಅಸಂಖ್ಯಾತ ಮುಸ್ಲಿಂ ಮಹಿಳೆಯರು ಹಿಜಾಬ್ ಅನ್ನು ತಮ್ಮ ಸಾಂಸ್ಕೃತಿಕ ಸಂಕೇತವಾಗಿ ಮತ್ತು ಪ್ರತಿರೋಧದ ಸಂಕೇತವಾಗಿ ಮರುಶೋಧಿಸಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಯುವ ಮುಸ್ಲಿಂ ವಿದ್ಯಾರ್ಥಿನಿಯರು ಅಸಹಾಯಕರು ಅಥವಾ ಅಂಜುಬುರುಕರು ಅಲ್ಲ. ಕೀಳರಿಮೆಯಿಂದ ಬಳಲುತ್ತಿರುವವರು ಅಥವಾ ಸಂಕುಚಿತ ದೃಷ್ಟಿಕೋನದವರು ಇಲ್ಲವೇ ನಿರ್ಬಂಧಿತರೂ ಅಲ್ಲ.
ಅವರು ಎಬೋವ್-ಎವರೇಜ್ ವಿದ್ಯಾರ್ಥಿಗಳು. ಇಂಗ್ಲಿಷ್ ಸೇರಿದಂತೆ ಕನಿಷ್ಟ ಮೂರು ಭಾಷೆಗಳನ್ನು ಸುಲಲಿತವಾಗಿ ಮಾತನಾಡಬಲ್ಲವರು. ಅವರ ಸಹಪಾಠಿಗಳು ಮತ್ತು ಶಿಕ್ಷಕರು (ಹಿಜಾಬ್ ವಿಷಯದಲ್ಲಿ) ಅವರನ್ನು ಅತಿರೇಕಿಗಳೆನ್ನುತ್ತಾರೆ. ಅಂಬೇಡ್ಕರ್ ತಮ್ಮ ಪುಸ್ತಕದಲ್ಲಿ ವಿವರಿಸುವ ರೀತಿಯ ಕರುಣಾಜನಕ ಜೀವಿಗಳಲ್ಲ ಅವರು. ಅಂಬೇಡ್ಕರ್ ಅವರನ್ನು ಉಲ್ಲೇಖಿಸುವ ಮೂಲಕ ಹಿಜಾಬ್ ವಿಚಾರದಲ್ಲಿ ನ್ಯಾಯಧೀಶರು ʼನೈತಿಕʼ ಜವಾಬ್ದಾರಿಯ ಸ್ಥಾನ ಹೊರಲು ಯತ್ನಿಸುತ್ತದೆ. ಆದರೆ ಮುಸ್ಲಿಂ ಮಹಿಳೆಯರನ್ನು ಬೆಂಬಲಿಸುವ ಮತ್ತು ಮುಸ್ಲಿಂ ಸಮಾಜದ ಮೇಲೆ ತೀರ್ಪು ನೀಡುವ ಉತ್ಸುಕತೆಯಲ್ಲಿ, ಅದೇ ಪುಸ್ತಕದಲ್ಲಿ ಬರುವ ಇತರೆ ಓದದೆ ಪುಟ ತಿರುವಿದೆ.
ಅದೇ ಪುಸ್ತಕ ಪುಟಸಂಖ್ಯೆ 163 ರಲ್ಲಿ, ಸಾವರ್ಕರ್ ಮತ್ತು ಅವರ ಹಿಂದೂ ರಾಷ್ಟ್ರದ ಸಿದ್ಧಾಂತದ ಬಗ್ಗೆ ಅಂಬೇಡ್ಕರ್ ಕಟುವಾದ ವಿಮರ್ಷೆ ಮಾಡುತ್ತಾರೆ. ಇದು ಈ ಕಾಲಕ್ಕೆ ಮತ್ತು ನಿರ್ದಿಷ್ಟವಾಗಿ ಹಿಜಾಬ್ ಪ್ರಕರಣಕ್ಕೆ ತುಂಬಾ ಪ್ರಸ್ತುತವಾಗಿದೆ:
“ಮಿ. ಸಾವರ್ಕರ್ ಅವರು ಇತಿಹಾಸದ ದೊಂದಿಗೆ ವರ್ತಮಾನದ ಕಡೆಗೂ ಹೆಚ್ಚು ಗಮನ ಹರಿಸಿದರೆ, ಅವರು ತಮ್ಮ ‘ಹಿಂದೂ ಧರ್ಮಕ್ಕೆ ಸಲಹೆ ನೀಡುತ್ತಿರುವಂತಹ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ನಿರ್ಬಂಧಿಸಿದ್ದಕ್ಕಾಗಿ ಹಳೆಯ ಆಸ್ಟ್ರಿಯಾ ಮತ್ತು ಹಳೆಯ ಟರ್ಕಿ ನಾಶವಾಯಿತು ಅನ್ನುವುದು ಅವರು ತಿಳಿಯುತ್ತಿದ್ದರು.”
“ ಸ್ವರಾಜ್ಯವನ್ನು ಸ್ಥಾಪಿಸುವುದು, ಇದರಲ್ಲಿ ಒಂದೇ ಸಂವಿಧಾನದ ಅಡಿಯಲ್ಲಿ ಎರಡು ರಾಷ್ಟ್ರಗಳು ಇರುತ್ತವೆ, ಇದು ದೊಡ್ಡ ರಾಷ್ಟ್ರವು ಚಿಕ್ಕ ರಾಷ್ಟ್ರವನ್ನು ತನ್ನ ಅಧೀನದಲ್ಲಿ ಹಿಡಿದಿಡಲು ಅವಕಾಶ ನೀಡುತ್ತದೆ. ಸಾವರ್ಕರ್ ರೂಪಿಸಿದ ಸ್ವರಾಜ್ಯ ಕಲ್ಪನೆಯು ಹಿಂದೂಗಳಿಗೆ ಮುಸ್ಲಿಮರ ಮೇಲೆ ಅಧಿಕಾರವನ್ನು ನೀಡುತ್ತದೆ. ಆ ಮೂಲಕ ಆಳಬೇಕಾದ ಜನಾಂಗ ಎಂಬ ಅವರ ದುರಭಿಮಾನ ಮತ್ತು ಅಹಂ ಅನ್ನು ತೃಪ್ತಿಪಡಿಸುತ್ತದೆ. ಆದರೆ, ಮುಸ್ಲಿಮರು ಎಂದಿಗೂ ಅಂತಹ ಪರ್ಯಾಯ ವ್ಯವಸ್ಥೆಗೆ ಮಣಿಯುವುದಿಲ್ಲ. ಹಾಗಾಗಿ ಹಿಂದೂಗಳಿಗೆ ಸ್ಥಿರ ಮತ್ತು ಶಾಂತಿಯುತ ಭವಿಷ್ಯವನ್ನು ಅದು ಎಂದಿಗೂ ಖಚಿತಪಡಿಸುವುದಿಲ್ಲ.” ಎಂದು ಅಂಬೇಡ್ಕರ್ ವಿಶ್ಲೇಷಿಸುತ್ತಾರೆ.
ಹಿಂದೂ ಸಾಮ್ರಾಜ್ಯದ ರಚನೆಯ ಕಾರ್ಯರೂಪದ ಹಿನ್ನೆಲೆಯಲ್ಲಿ ಹಿಜಾಬ್ ವಿರೋಧಿ ಆಂದೋಲನಗಳನ್ನು ನೋಡಲು ನ್ಯಾಯಾಲಯವು ವಿಫಲವಾಗಿದೆ. ಸಾವರ್ಕರ್ ವಾದಿಗಳು ಇಂದು ಅಧಿಕಾರದಲ್ಲಿದ್ದಾರೆ. ಅವರು ಮುಸ್ಲಿಮರ ಸಾಂಸ್ಕೃತಿಕ ಮತ್ತು ಧಾರ್ಮಿಕ ಗುರುತನ್ನು ಕಿತ್ತೊಗೆಯುವ ಮೂಲಕ ಹಿಂದೂ ಪ್ರಾಬಲ್ಯವನ್ನು ಸ್ಥಾಪಿಸುವ ಯೋಜನೆಯಲ್ಲಿದ್ದಾರೆ. ಆದರೆ ಸಾವರ್ಕರ್ ಅವರ ಅನುಯಾಯಿಗಳ ‘ಹಿಂದುತ್ವ’ ಯೋಜನೆಗೆ ಮಣಿಯದಿರಲು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಒಂದು ಅಸ್ತ್ರವಾಗಿದೆ ಎಂಬ ಸೂಕ್ಷ್ಮತೆಯನ್ನು ನ್ಯಾಯಾಧೀಶರು ಹೊಂದಿಲ್ಲ.
50 ವರ್ಷಗಳ ಹಿಂದೆ ಸಂವಿಧಾನ ಶಿಲ್ಪಿಯು ಪರ್ದಾ ಕುರಿತು ಹೇಳಿರುವ ಅಂಶವು, ಸ್ತ್ರಿ ವಿಮೋಚನೆ ಸಂಧರ್ಭದಲ್ಲಿ, ನಿರ್ದಿಷ್ಟವಾಗಿ ಮುಸ್ಲಿಂ ಮಹಿಳೆಯರಿಗೆ ಮಾತ್ರವಲ್ಲದೆ ಎಲ್ಲಾ ಮಹಿಳೆಯರ ಮುಸುಕು, ಶಾಲು ಮೊದಲಾದವುಗಳೊಂದಿಗೆ ಕೂಡಾ ಅನ್ವಯಿಸುವ ವಾದಕ್ಕೆ ಕೂಡಾ ಅವಕಾಶವಿದೆ.
ಮುಸ್ಲಿಂ ಮಹಿಳೆಯರ ಸಂರಕ್ಷಕನಾಗುವ ಆತುರದಲ್ಲಿರುವ ನ್ಯಾಯಾಧೀಶರು ಮುಸ್ಲಿಂ ಮಹಿಳೆಯರ ರಾಜಕೀಯ ಪ್ರತಿಪಾದನೆಯನ್ನು, ಅವರ ವ್ಯಾಖ್ಯಾನಗಳ ಉತ್ಸಾಹವನ್ನು ಗುರುತಿಸಲು ವಿಫಲರಾಗಿದ್ದಾರೆ ಎಂಬುದು ವಿಪರ್ಯಾಸ. ಮುಸ್ಲಿಂ ಯುವತಿಯರಲ್ಲಿನ ಪ್ರತಿರೋಧದ ಕೆಚ್ಚು ಮತ್ತು ಅವರ ಧೈರ್ಯವಂತಿಕೆ ಹಾಗೂ ಬುದ್ಧಿವಂತಿಕೆಯನ್ನು ಅವರು ಸಾರ್ವಜನಿಕವಾಗಿ ಮಾತನಾಡುವುದನ್ನು ನೋಡಿದ ಯಾರಿಗಾದರೂ ಅರ್ಥವಾಗುತ್ತದೆ.
ಹಿಜಾಬ್ ಮುಸ್ಲಿಂ ಮಹಿಳೆಯರ ದಬ್ಬಾಳಿಕೆಯ ಸಂಕೇತವಾಗಿದೆ ಎಂಬ ಅಭಿಪ್ರಾಯವನ್ನು ತೆಗೆದುಕೊಳ್ಳುವ ಮೂಲಕ, ಬಲಪಂಥೀಯ ಹಿಂದೂ ಬಹುಸಂಖ್ಯಾತ ಪಕ್ಷವಾದ ಬಿಜೆಪಿಯು ಮುಸ್ಲಿಂ ಮಹಿಳೆಯರನ್ನು ಮೂಲಭೂತವಾದಿಗಳ ಹಿಡಿತದಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ಅಸಂಬದ್ಧ ವಾದಕ್ಕೆ ನ್ಯಾಯಾಲಯವು ಅಧಿಕೃತತೆಯನ್ನು ನೀಡಿತು. ಈ ದೃಷ್ಟಿಕೋನವು ಹಿಜಾಬಿ ವಿದ್ಯಾರ್ಥಿನಿಯರನ್ನು ಬೆಂಬಲಿಸುವ ಮುಸ್ಲಿಂ ರಾಜಕೀಯ ಸಂಘಟನೆಗಳ ಮೇಲೆ ನ್ಯಾಯಾಲಯವು ತೀವ್ರವಾಗಿ ಇಳಿಯಲು ಆಧಾರವನ್ನು ಸಿದ್ಧಪಡಿಸಿತು.
Also Read : ಹಿಂದೂ ರಾಷ್ಟ್ರದ ಯೋಜನೆಗೆ ಮುಂದಡಿಯೇ ಹಿಜಾಬ್ ತೀರ್ಪು? – ಭಾಗ : 1
ಹಿಜಾಬ್ ವಿವಾದವು ಆರಂಭವಾಗಿರುವ ವಿಧಾನವು ಸಾಮಾಜಿಕ ಅಸ್ಥಿರತೆ ಮತ್ತು ಅಶಾಂತಿ ಸೃಷ್ಟಿಸಲು ಕೆಲವು ‘ಕಾಣದ ಕೈಗಳು’ ಕೆಲಸ ಮಾಡುತ್ತಿವೆ ಎಂಬ ವಾದಕ್ಕೆ ಅವಕಾಶ ನೀಡುತ್ತದೆ. ಹೆಚ್ಚು ನಿರ್ದಿಷ್ಟಪಡಿಸುವ ಅಗತ್ಯವಿಲ್ಲ. ನಡೆಯುತ್ತಿರುವ ಪೊಲೀಸ್ ತನಿಖೆಯ ಮೇಲೆ ಪರಿಣಾಮ ಬೀರುದಂತೆ ಪ್ರತಿಕ್ರಿಯೆ ನೀಡುತ್ತಿದ್ದೇವೆ. ಮುಚ್ಚಿದ ಕವರ್‌ನಲ್ಲಿ ಒದಗಿಸಲಾದ ಪೊಲೀಸ್ ದಾಖಲೆಗಳ ಪ್ರತಿಗಳನ್ನು ಪರಿಶೀಲಿಸಿ ನಾವು ಹಿಂದಿರುಗಿಸಿದ್ದೇವೆ. ಈ ವಿಷಯದ ಬಗ್ಗೆ ಪರಿಣಾಮಕಾರಿ ತನಿಖೆಗಾಗಿ ನಡೆಸಿ, ಅಪರಾಧಿಗಳನ್ನು ಕಾನೂನು ಅಡಿಗೆ ತರಲು ಯಾವುದೇ ವಿಳಂಬ ಮಾಡಬಾರದು ಎಂದು ಕೋರ್ಟ್ ಹೇಳಿದೆ.
ಆ ಮೂಲಕ, ಇಸ್ಲಾಮಿಕ್ ಮೂಲಭೂತವಾದಿಗಳು ವಿವಾದ ಉಂಟುಮಾಡಿ ಅಶಾಂತಿ ಸೃಷ್ಟಿಸಿದ್ದಾರೆ ಎಂಬ ರಾಜ್ಯ ಸರ್ಕಾರದ ಹೇಳಿಕೆಯನ್ನು ನ್ಯಾಯಾಲಯವು ಪ್ರಶ್ನಾತೀತವಾಗಿ ತೆಗೆದುಕೊಂಡಿರುವುದು ಎಂಬುದು ಸ್ಪಷ್ಟವಾಗಿದೆ.
” ಈ ರಿಟ್ ಅರ್ಜಿಯನ್ನು ಭಾರತದ ಸಂವಿಧಾನದ 226 ನೇ ವಿಧಿಯ ಅಡಿಯಲ್ಲಿ ಸಲ್ಲಿಸಲಾಗಿದೆ. ಕರ್ನಾಟಕ ರಾಜ್ಯವು ಕರ್ನಾಟಕ ಶಿಕ್ಷಣ ಕಾಯಿದೆ 1983 ರ ಅಡಿಯಲ್ಲಿ 5.2.2022 ರಂದು ಸರ್ಕಾರಿ ಆದೇಶವನ್ನು ಹೊರಡಿಸಿದ ಬಳಿಕ ದೇಶದಾದ್ಯಂತ ನಡೆಯುತ್ತಿರುವ ಬೃಹತ್ ಆಂದೋಲನದಲ್ಲಿ ಭಾರತವನ್ನು ಇಸ್ಲಾಮೀಕರಣಗೊಳಿಸಲು ಸೌದಿ ಅರೇಬಿಯಾದ ವಿಶ್ವವಿದ್ಯಾನಿಲಯಗಳಿಂದ ಧನಸಹಾಯ ಪಡೆದಿರುವ PFI, SIO, CFI, ಜಮಾತ್-ಎ-ಇಸ್ಲಾಮಿನಂತಹ ಮೂಲಭೂತ ಇಸ್ಲಾಮಿಕ್ ಸಂಘಟನೆಗಳ ಕೈವಾಡ ಇದೆಯೇ ಎಂದು ಸಮಗ್ರ ತನಿಖೆ ನಡೆಸಲು ಈ ನ್ಯಾಯಾಲಯವು ಸೂಕ್ತವೆಂದು ಪರಿಗಣಿಸಬಹುದಾದ ಸಿಬಿಐ/ಎನ್‌ಐಎ/ ಅಥವಾ ಇತರ ತನಿಖಾ ಸಂಸ್ಥೆಗೆ ನಿರ್ದೇಶಿಸಲು ಕೋರುತ್ತಿದ್ದೇವೆ.” ಎಂದು ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿತ್ತು.
ಕಾನೂನುಬದ್ಧ ಮುಸ್ಲಿಂ ರಾಜಕೀಯ ಸಂಘಟನೆಗಳನ್ನು ಸರ್ಕಾರವು ಭೀಕರವಾಗಿ ಬಿಂಬಿಸುವಾಗ ವಿಮರ್ಶಾತ್ಮಕವಾಗಿ ನೋಡುವ ಯಾವುದೇ ಪ್ರಯತ್ನವನ್ನು ನ್ಯಾಯಾಲಯ ಮಾಡುವುದಿಲ್ಲ.
ಸಾಮಾಜಿಕ ಅಶಾಂತಿ ಸೃಷ್ಟಿಸುವ ಕಾಣದ ಕೈಗಳನ್ನು ನ್ಯಾಯಾಲಯ ಗ್ರಹಿಸಬಹುದಾದರೆ, ಬಹಿರಂಗವಾಗಿ ಅಶಾಂತಿ ಸೃಷ್ಟಿಸುತ್ತಿರುವ ಹಿಂದುತ್ವದ ಗುಂಪುಗಳನ್ನು ಅದು ಯಾಕೆ ಗಂಭೀರವಾಗಿ ಗ್ರಹಿಸಿಲ್ಲ?
ಹಿಜಾಬ್ ವಿರೋಧಿ ಆಂದೋಲನದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗಳು, ಕೇಸರಿ ಶಾಲುಗಳ ವಿತರಣೆ ಮತ್ತು ಯುವ ಹಿಂದೂ ವಿದ್ಯಾರ್ಥಿಗಳ ಪ್ರಚೋದನೆಗಳು ನ್ಯಾಯಾಧೀಶರನ್ನು ವಿಚಲಿತಗೊಳಿಸಿದಂತೆ ತೋರುತ್ತಿಲ್ಲ. ಸರ್ಕಾರದ ಷಡ್ಯಂತ್ರಕ್ಕೆ ನ್ಯಾಯಾಲಯವು ಮನ್ನಣೆ ನೀಡುವುದರೊಂದಿಗೆ, ಮುಸ್ಲಿಂ ರಾಜಕೀಯ ಸಂಘಟನೆಯು ಹಿಜಾಬ್ ಧರಿಸಲು ಬಯಸುವ ಮುಸ್ಲಿಂ ಮಹಿಳೆಯರಿಗೆ ಬೆಂಬಲ ನೀಡುವುದು ಕಾನೂನುಬಾಹಿರವೇ ಎಂದು ಕೇಳಬೇಕಾಗಿದೆ.
ಕೋರ್ಟ್ ಉಲ್ಲೇಖಿಸಿದ ಅಂಬೇಡ್ಕರ್ ಅವರ ಅದೇ ಪುಸ್ತಕದ ಅದೇ ಅಧ್ಯಾಯದಲ್ಲಿ, ಅಂಬೇಡ್ಕರ್ ಅವರು ಹೀಗೆ ಹೇಳುತ್ತಾರೆ:
“ಭಾರತೀಯ ಮುಸಲ್ಮಾನರಲ್ಲಿ ಬದಲಾವಣೆಯ ಮನೋಭಾವದ ಅನುಪಸ್ಥಿತಿಯ ಕಾರಣಕ್ಕಾಗಿ ಅವರು ಭಾರತದಲ್ಲಿ ವಿಶಿಷ್ಟ ಸ್ಥಾನವನ್ನು ಹುಡುಕಬೇಕು ಎಂದು ನನಗೆ ತೋರುತ್ತದೆ. ಹಿಂದೂ ಪ್ರಧಾನವಾಗಿರುವ ಸಾಮಾಜಿಕ ವಾತಾವರಣದಲ್ಲಿ ಅವರು ಇದ್ದಾರೆ. ಆ ಹಿಂದೂ ಪರಿಸರ ಯಾವಾಗಲೂ ಮೌನವಾಗಿ, ಆದರೆ ಖಚಿತವಾಗಿ ಅವರ ಮೇಲೆ ಕ್ರಮೇಣ ಅತಿಕ್ರಮಿಸುತ್ತಿದೆ. ಇದು ತನ್ನನ್ನು ಅಮುಸ್ಲಿಮರನ್ನಾಗಿಸುತ್ತಿದೆ ಎಂದು ಮುಸ್ಲಿಮರು ಭಾವಿಸಲು ಕಾರಣವಾಗುತ್ತದೆ, ಇದರ ವಿರುದ್ಧ ರಕ್ಷಣೆಯಾಗಿ, ಇಸ್ಲಾಮಿಕ್ ಆಗಿರುವ ಎಲ್ಲವನ್ನೂ ಸಮಾಜಕ್ಕೆ ಸಹಾಯಕವೋ ಅಥವಾ ಹಾನಿಕಾರಕವೋ ಎಂದು ಪರಿಶೀಲನೆ ಕೂಡಾ ಮಾಡದೆ ಸಂರಕ್ಷಿಸಲು ತೊಡಗುತ್ತಾರೆ. ಎರಡನೆಯದಾಗಿ, ಹಿಂದೂ ಪ್ರಧಾನವಾಗಿರುವ ಭಾರತದ ರಾಜಕೀಯ ವಾತಾವರಣದಲ್ಲಿ ಮುಸ್ಲಿಮರು ಇದ್ದಾರೆ. ಇದೂ ಅವರು ನಿಗ್ರಹಿಸಲ್ಪಡಬಹುದು ಎಂದು ಅವರು ಭಾವಿಸುವಂತೆ ಮಾಡುತ್ತದೆ “
ಕರ್ನಾಟಕದ ಉಚ್ಚ ನ್ಯಾಯಾಲಯವು ಮುಸ್ಲಿಮರಲ್ಲಿರುವ ಈ ಆತಂಕದ, ಭಯದ ಭಾವನೆಯನ್ನು ಬಗೆ ಹರಿಸಲು ಮತ್ತು ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದಲ್ಲಿ ಪರಿಚಯಿಸಿದ ಸಾಮಾಜಿಕ ಒಳಗೊಳ್ಳುವಿಕೆಯ ತತ್ವಗಳನ್ನು ಅನ್ವಯಿಸಲು ಐತಿಹಾಸಿಕ ಅವಕಾಶವನ್ನು ಹೊಂದಿತ್ತು.
ಅಂತಹ ಒಂದು ವಿಧಾನವು ಮುಸ್ಲಿಂ ಮಹಿಳೆಯರಿಗೆ ಹೆಚ್ಚಿನ ಭಾವನಾತ್ಮಕ ಮತ್ತು ಸಾಂಕೇತಿಕ ಮೌಲ್ಯವನ್ನು ಹೊಂದಿರುವ ಉಡುಪನ್ನು ಮುಸ್ಲಿಂ ಮಹಿಳೆಯರ ಶಿಕ್ಷಣದ ಮಾರ್ಗದಲ್ಲಿನ ಅಡೆತಡೆಗಳನ್ನು ತೆಗೆದುಹಾಕುವ ಮಾರ್ಗಗಳನ್ನು ಅನ್ವೇಷಿಸಲು ನ್ಯಾಯಾಧೀಶರಿಗೆ ಅವಕಾಶ ನೀಡುತ್ತದೆ ಅಂತಹ ಒಂದು ವಿಧಾನವು ಮುಸ್ಲಿಂ ಮಹಿಳೆಯರಿಗೆ ಹೆಚ್ಚಿನ ಭಾವನಾತ್ಮಕ ಮತ್ತು ಸಾಂಕೇತಿಕ ಮೌಲ್ಯವನ್ನು ಹೊಂದಿರುವ ಉಡುಪನ್ನು ಸಮಂಜಸವಾದ ಸೌಕರ್ಯಗಳನ್ನು ಮಾಡುವ ಅರ್ಥವನ್ನು ಹೊಂದಿದ್ದರೂ ಸಹ, ಮುಸ್ಲಿಂ ಮಹಿಳೆಯರ ಶಿಕ್ಷಣದ ಮಾರ್ಗದಲ್ಲಿನ ಅಡೆತಡೆಗಳನ್ನು ತೆಗೆದುಹಾಕುವ ಮಾರ್ಗಗಳನ್ನು ಅನ್ವೇಷಿಸಲು ನ್ಯಾಯಾಧೀಶರಿಗೆ ಅವಕಾಶ ನೀಡುತ್ತದೆ. ಅವರ ಶಿಕ್ಷಣವನ್ನು ಸಕ್ರಿಯಗೊಳಿಸುವ ಬದಲು, ಕರ್ನಾಟಕದಾದ್ಯಂತ ಸಾವಿರಾರು ಮುಸ್ಲಿಂ ಮಹಿಳೆಯರು ತರಗತಿಗಳಿಂದ ದೂರ ಉಳಿಯಲು ಕಾರಣವಾದ ನ್ಯಾಯಾಲಯದ ತೀರ್ಪು ವ್ಯತಿರಿಕ್ತವಾದ ಪರಿಣಾಮವನ್ನು ಬೀರಿದೆ.
ಮೂಲ: ದಿ ನ್ಯೂಸ್ ಮಿನಿಟ್