ಹಿಜಾಬ್ ವಿವಾದ ರಾಜ್ಯದ ಮೂಲೆಮೂಲೆಗೆ ವ್ಯಾಪಿಸಿ ಶಾಲಾಕಾಲೇಜುಗಳು ರಣಾಂಗಣಗಳಾಗಿ ಬದಲಾದ ಬಳಿಕ ಇದೀಗ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಸರ್ಕಾರ ಕೈತೊಳೆದುಕೊಂಡಿದೆ.
ಉಡುಪಿಯ ಒಂದು ಕಾಲೇಜಿನಲ್ಲಿ ಹಿಜಾಬ್ ವಿಷಯದಲ್ಲಿ ಕೆಲವು ಸಂಘಟನೆಗಳು ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಆಡಳಿತದ ನಡುವೆ ಹಸ್ತಕ್ಷೇಪ ನಡೆಸಿ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳ ಮಾತುಕತೆಯಲ್ಲಿ ಮುಗಿದುಹೋಗಬಹುದಾಗಿದ್ದ ವಿಷಯವನ್ನು ದೊಡ್ಡದು ಮಾಡಿದ ಬಗ್ಗೆಯಾಗಲೀ, ಆ ಬಳಿಕ ಹಿಜಾಬ್ ಗೆ ಪ್ರತಿಯಾಗಿ ದಿಢೀರನೇ ಕೇಸರಿ ಶಾಲುಗಳನ್ನು ಧರಿಸಿ ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗುವಂತೆ ಪ್ರಚೋದನೆ ನೀಡಿದ ಶಕ್ತಿಗಳ ವಿಷಯದಲ್ಲಾಗಲೀ, ಇದೇ ವಿವಾದವನ್ನು ಮುಂದಿಟ್ಟುಕೊಂಡು ರಾಜ್ಯವ್ಯಾಪಿ ಮುಸ್ಲಿಂ ಹೆಣ್ಣುಮಕ್ಕಳು ಸಾಮೂಹಿಕವಾಗಿ ಹಿಜಾಬ್ ಧರಿಸಿ ಕಾಲೇಜಿಗೆ ಹೋಗುವಂತೆ ಕುಮ್ಮಕ್ಕು ನೀಡಿದ ಸಂಘಟನೆಗಳ ಬಗ್ಗೆಯಾಗಲೀ ಸರ್ಕಾರ ಯಾವ ಕ್ರಮಕೈಗೊಂಡಿದೆ ಎಂಬುದು ಈಗಲೂ ನಿಗೂಢವಾಗೇ ಇದೆ.
ಅದರಲ್ಲೂ ಮುಖ್ಯವಾಗಿ ಶಿವಮೊಗ್ಗ ಸರ್ಕಾರಿ ಪ್ರಥಮದರ್ಜೆ ಕಾಲೇಜು ಗಲಭೆ, ಮಂಡ್ಯದ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯನ್ನು ಸುತ್ತುವರಿದು ಕೇಸರಿ ಶಾಲು ಬೀಸಿ ನಡೆಸಿದ ದಬ್ಬಾಳಿಕೆ ಸೇರಿದಂತೆ ಮಂಗಳವಾರ ಗಲಭೆ ನಡೆದ ಬಹುತೇಕ ಕಾಲೇಜುಗಳಲ್ಲಿ ಆಯಾ ಕಾಲೇಜಿನ ವಿದ್ಯಾರ್ಥಿಗಳಿಗಿಂತ ಎಬಿವಿಪಿ, ಪಿಎಫ್ ಐ ಮತ್ತಿತರ ಸಂಘಟನೆಗಳ ಮಂದಿಯೇ ಹೆಚ್ಚಿದ್ದರು ಎಂಬುದು ವಿದ್ಯಾರ್ಥಿಗಳ ಹೇಳಿಕೆಗಳು ಮತ್ತು ವೈರಲ್ ಆಗಿರುವ ವೀಡಿಯೋ ತುಣುಕುಗಳಲ್ಲೇ ಗೊತ್ತಾಗುತ್ತಿದೆ. ಹೀಗೆ ಕಾಲೇಜು ಆವರಣದಲ್ಲಿ ಹೋಗಿ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿ ಸಂಘರ್ಷಕ್ಕೆ ಇಳಿಸುವ ಅಧಿಕಾರ ಈ ಸಂಘಟನೆಗಳಿಗೆ ಕೊಟ್ಟವರು ಯಾರು? ಮತ್ತು ಇಂತಹ ಕಡಿಗೇಡಿ ಕೃತ್ಯದಲ್ಲಿ ಭಾಗಿಯಾಗಿರುವ ಸಂಘಟನೆಗಳು ಮತ್ತು ಹೊರಗಿನವರ ವಿರುದ್ಧ ರಾಜ್ಯ ಸರ್ಕಾರ ಯಾವ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂಬುದು ಬಹಿರಂಗವಾಗಬೇಕಿರುವ ಸಂಗತಿ.
ಹಾಗೇ, ರಾಜ್ಯದ ಮೂಲೆಮೂಲೆಯ ಕಾಲೇಜು ವಿದ್ಯಾರ್ಥಿಗಳಿಗೆ ದಿಢೀರನೇ ಕೇಸರಿ ಶಾಲೆ, ಪಗಡಿ(ಪೇಟ)ಗಳನ್ನು ಸರಬರಾಜು ಮಾಡಿದ್ದು ಯಾರು? ಎಲ್ಲಿಂದ ಮತ್ತು ಹೇಗೆ ಅತ್ಯಂತ ಅಲ್ಪ ಅವಧಿಯಲ್ಲಿ ಚಿಕ್ಕ ಚಿಕ್ಕ ಊರುಗಳಲ್ಲಿಯೂ ಸಾವಿರಾರು ಶಾಲು ಮತ್ತು ಪಗಡಿಗಳು ಸರಬರಾಜಾದವು? ಅವುಗಳನ್ನು ಹಿಂದೂ ವಿದ್ಯಾರ್ಥಿಗಳನ್ನು ಗುರುತಿಸಿ ಸರಬರಾಜು ಮಾಡಿ ಅವರು ಅವುಗಳನ್ನು ತೊಟ್ಟು ವಿರೋಧಿ ಗುಂಪಿನತ್ತ ಪ್ರಚೋದನಕಾರಿಯಾಗಿ ಘೋಷಣೆ ಕೂಗುತ್ತಾ ನುಗ್ಗಲು ಕುಮ್ಮಕ್ಕು ನೀಡಿದವರು ಯಾರು? ಹೆಣ್ಣುಮಕ್ಕಳನ್ನು ಸುತ್ತುವರಿದು ಭಯಬೀಳಿಸುವಂತೆ ಕೇಸರಿ ಶಾಲು ಬೀಸಿ ದಬ್ಬಾಳಿಕೆ ನಡೆಸಲು ಯಾರು ಪ್ರಚೋದನೆ ನೀಡಿದ್ದು? ಮತ್ತು ಅಂತವರ ಪತ್ತೆ ಮಾಡಲು ಸರ್ಕಾರ ಪೊಲೀಸರಿಗೆ ಸೂಚನೆ ನೀಡಿದೆಯೇ? ಅಥವಾ ಅವರನ್ನು ರಕ್ಷಿಸಿ ಕೇವಲ ಅಮಾಯಕ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಕಣ್ಣೊರೆಸುವ ಯತ್ನ ಮಾಡುತ್ತಿರುವುದೇಕೆ?

ಜೊತೆಗೆ, ಮಂಡ್ಯ ನಗರದ ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಟನೆಯವರು ವಿದ್ಯಾರ್ಥಿಗಳಿಗೆ ತಲಾ 300-500 ರೂ. ಹಣ ನೀಡಿ ಆಮಿಶವೊಡ್ಡಿ ಕೇಸರಿ ಶಾಲು ತೊಡಿಸಲಾಗಿದೆ ಎಂಬ ಮಾತುಗಳು ಸ್ವತಃ ವಿದ್ಯಾರ್ಥಿಗಳಿಂದಲೇ ಕೇಳಿಬಂದಿವೆ. ಅಂತಹ ಅನುಮಾನಗಳು ಕೇವಲ ಮಂಡ್ಯ ಮಾತ್ರವಲ್ಲದೆ ರಾಜ್ಯದ ವಿವಿಧ ಕಾಲೇಜುಗಳಲ್ಲಿಯೂ ಕೇಳಿಬಂದಿವೆ. ಶಿವಮೊಗ್ಗದ ಕಾಲೇಜೊಂದರಲ್ಲಿ ಅಲ್ಲಿನ ಉಪನ್ಯಾಸಕರೇ ವಿದ್ಯಾರ್ಥಿಗಳಿಗೆ ಕುಮ್ಮಕ್ಕು ನೀಡುವ ಗಂಭೀರ ಆರೋಪಗಳೂ ಕೇಳಿಬಂದಿವೆ. ಆ ಹಿನ್ನೆಲೆಯಲ್ಲಿ ಹೀಗೆ ವಿದ್ಯಾರ್ಥಿಗಳಿಗೆ ಕುಮ್ಮಕ್ಕು ನೀಡಿ, ಬೆದರಿಕೆ ಹಾಕಿ ಒಂದು ಧರ್ಮದ ಸಂಕೇತ ಎಂದು ಬಿಂಬಿಸಲಾಗುತ್ತಿರುವ ಶಾಲು ಧರಿಸುವಂತೆ ಒತ್ತಡ ಹಾಕಿದ ಬಗ್ಗೆ ಸರ್ಕಾರ ಏನು ಕ್ರಮಕೈಗೊಳ್ಳಲಿದೆ? ಎಂಬ ಪ್ರಶ್ನೆಗಳೂ ಇವೆ.
ಹಿಜಾಬ್ ವಿವಾದ ಕುರಿತು ಪ್ರಕರಣ ನ್ಯಾಯಾಲಯದಲ್ಲಿದೆ ಎಂಬುದು ನಿಜ. ಆದರೆ, ಅದು ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ಅಥವಾ ಅದನ್ನು ನಿರ್ಬಂಧಿಸಿ ಸಮವಸ್ತ್ರ ಕಡ್ಡಾಯಗೊಳಿಸುವ ಮಟ್ಟಿಗೆ ಮಾತ್ರ ಸೀಮಿತವಾದ ಪ್ರಕರಣ. ಹಾಗಾಗಿ ಆ ನ್ಯಾಯಾಲಯದ ಮುಂದಿದೆ ಎಂಬ ನೆಪವೊಡ್ಡಿ ಸರ್ಕಾರ, ಈ ಒಂದು ವಾರದಲ್ಲಿ ರಾಜ್ಯವ್ಯಾಪಿ ನಡೆದಿರುವ ಹುನ್ನಾರಗಳನ್ನು, ರಾಜಕೀಯ ಲಾಭದ ಲೆಕ್ಕಾಚಾರದ ಷಢ್ಯಂತ್ರಗಳನ್ನು ತಿಪ್ಪೆಸಾರಿಸಲಾಗದು. ಜೊತೆಗೆ ಕೆಲವೇ ಕೆಲವು ಮಂದಿಯ ರಾಜಕೀಯ ಲಾಭಕ್ಕಾಗಿ, ಒಂದು ಪಕ್ಷ ಮತ್ತು ಕೆಲವು ಸಂಘಟನೆಯ ದುರುದ್ದೇಶಕ್ಕಾಗಿ ಈವರೆಗೆ ನಡೆದಿರುವ ಹಿಂಸಾಚಾರ, ಆಗಿರುವ ನಷ್ಟ, ಸೃಷ್ಟಿಯಾಗಿರುವ ಭೀತಿ ಮತ್ತು ಆತಂಕದ ವಾತಾವರಣಕ್ಕೆ ಸರ್ಕಾರ ಯಾರನ್ನು ಹೊಣೆಗಾರರನ್ನಾಗಿ ಮಾಡುತ್ತದೆ?
ಈ ಎಲ್ಲಾ ಪ್ರಶ್ನೆಗಳ ಹಿನ್ನೆಲೆಯಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಸಂಘರ್ಷ ಮತ್ತು ಹಿಂಸಾಚಾರಗಳ ಕುರಿತು ತನಿಖೆಯಾಗಬೇಕು ಮತ್ತು ಸಾರ್ವಜನಿಕರಿಗೆ ಯಾವೆಲ್ಲಾ ವ್ಯಕ್ತಿಗಳು ಮತ್ತು ಶಕ್ತಿಗಳು ಆ ಹಿಂಸಾಚಾರಗಳ ಹಿಂದೆ ಇದ್ದರು? ಮತ್ತು ಅವರ ಅಂತಹ ಸಮಾಜದ್ರೋಹಿ ಕೆಲಸಗಳಿಗಾಗಿ ಅವರ ವಿರುದ್ಧ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಜನರಿಗೆ ತಿಳಿಸಬೇಕಿದೆ. ಅದು ಸರ್ಕಾರದ ಹೊಣೆ. ಅಲ್ಲವೇ?