
ನಾ ದಿವಾಕರ
(ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ ಲೇಖನದ ಮುಂದುವರೆದ ಭಾಗ)
ಭಾಗ 2
ಒಂದು ಸಾರ್ವಭೌಮ ದೇಶದ ಭೌಗೋಳಿಕ ಅಖಂಡತೆಯನ್ನೂ ಉಲ್ಲಂಘಿಸಿ, ಒಳನುಗ್ಗಿ, ಆ ದೇಶದ ಸ್ಥಾಪಿತ ನಾಯಕನನ್ನು ಹತ್ಯೆ ಮಾಡುವುದು ಅಂತಾರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಷ್ಟೇ ಅಲ್ಲದೆ, ನಾಗರಿಕತೆಗೆ ಮಾಡುವ ಅಪಮಾನ. ಆದರೆ ಈ ಉಲ್ಲಂಘನೆಯನ್ನು ಪ್ರಶ್ನಿಸುವ ದನಿಗಳು ಅಂತಾರಾಷ್ಟ್ರೀಯ ಸ್ತರದಲ್ಲೇ ನಿಷ್ಕ್ರಿಯವಾಗಿರುವುದು 21ನೆ ಶತಮಾನದ ದುರಂತ. ಈಗ ಆ ದೇಶದ ಉತ್ತರಾಧಿಕಾರಿಯಾಗಿ ಆಯ್ಕೆಯಾಗುವ ವ್ಯಕ್ತಿಯನ್ನೂ ಕೊಲ್ಲುತ್ತೇವೆ ಎಂದು ಹೇಳುತ್ತಿರುವುದು ಈ ದುರಹಂಕಾರದ ಪರಮಾವಧಿ. ಆದರೆ ಮಾನವ ಸಮಾಜ ಶತಮಾನಗಳಿಂದ ರೂಢಿಸಿಕೊಂಡು ಬಂದಿರುವ ಕನಿಷ್ಠ ಮಟ್ಟದ ಸಹಾನುಭೂತಿ, ಅನುಕಂಪ ಮತ್ತು ಜೀವಪ್ರೀತಿಗೂ ಅವಕಾಶವಿಲ್ಲದ ʼ ಯುದ್ಧ ʼದ ಸಂದರ್ಭಗಳಲ್ಲಿ ಈ ದುರ್ವರ್ತನೆಗಳು ಸಹಜ ಎನಿಸಿಕೊಳ್ಳುತ್ತವೆ. ಇಲ್ಲಿ ಸೋಲು-ಸಾವು-ನೋವು ಮತ್ತು ಗೆಲುವು-ಸಂಭ್ರಮ ಇಷ್ಟೇ ಗಣನೆಗೆ ಬರುತ್ತದೆ.
ಅಮೆರಿಕ ಮತ್ತು ಇಸ್ರೇಲ್ ಕೈಗೊಂಡಿರುವ ದಂಡಯಾತ್ರೆ ಈಗಾಗಲೇ ಭವಿಷ್ಯದ ವಿಶ್ವ ಭೂಪಟವನ್ನು ಪುನಾರಚಿಸುವ ಸಾಧ್ಯತೆಗಳನ್ನು ತೋರುತ್ತಿದೆ. ಅಮೆರಿಕದ ಗುರಿ ಕೇವಲ ಇರಾನ್ ಅಥವಾ ಖಮೇನಿ ಅಲ್ಲ. ಇಸ್ರೇಲ್ ಜೊತೆಗೂಡಿ ಇಡೀ ವಿಶ್ವ ಸಮುದಾಯದ ಮೇಲೆ ತನ್ನ ಮಿಲಿಟರಿ ಪ್ರಾಬಲ್ಯವನ್ನು ಸ್ಥಾಪಿಸುವ ಮತ್ತು ತೈಲ ಸಂಪತ್ತಿನ ಮೇಲೆ ಒಡೆತನ ಸ್ಥಾಪಿಸುವ ಮಹತ್ವಾಕಾಂಕ್ಷೆ ಸ್ಪಷ್ಟವಾಗಿ ಕಾಣುತ್ತಿದೆ. ಅಪಾರ ತೈಲ ಸಂಪತ್ತನ್ನು ಹೊಂದಿರುವ ಮುಸ್ಲಿಂ, ಮಧ್ಯಪ್ರಾಚ್ಯ ದೇಶಗಳ ಪೈಕಿ ಇರಾನ್ ಮಾತ್ರವೇ ಪ್ರಬಲ ಸೈನ್ಯ, ಆಧುನಿಕ ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನವನ್ನು ಹೊಂದಿದೆ. ಹಾಗಾಗಿ ಇರಾನ್ ಸಮಾಪ್ತಿಯಾದರೆ ಸಾಮ್ರಾಜ್ಯಶಾಹಿಗೆ ಈಗಿರುವ ವಿರೋಧಿ ಶಕ್ತಿಗಳೂ ಬಹುತೇಕ ಇಲ್ಲವಾಗುತ್ತದೆ.

ವಿನಾಶಕಾರಿ ಅಸ್ತ್ರದ ಹಂಬಲ
ಹಾಗಾಗಿ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿರುವ ಸಂಗತಿಯೇ ಅಮೆರಿಕ ಮತ್ತು ಇಸ್ರೇಲ್ನ ನಿದ್ದೆಗೆಡಿಸಿದೆ. ಇಡೀ ವಿಶ್ವವನ್ನು ಕ್ಷಣಮಾತ್ರದಲ್ಲಿ ಧ್ವಂಸ ಮಾಡಬಹುದಾದ ಜೀವ ವಿರೋಧಿ, ಪರಮಾಣು ಅಸ್ತ್ರವನ್ನು ಹೊಂದಿರುವುದೇ ಒಂದು ಹೆಮ್ಮೆಯ ಸಂಗತಿಯಾಗಿರುವ ಆಧುನಿಕ ನಾಗರಿಕತೆಯಲ್ಲಿ, ಈ ವಿಧ್ವಂಸಕ ಶಕ್ತಿ ತನ್ನ ಹೊರತಾಗಿ ಮತ್ತಾರ ಬಳಿಯೂ ಇರಕೂಡದು ಎಂದು ಬಯಸುವುದು ಕ್ರೌರ್ಯದ ಸಾಂಸ್ಥೀಕರಣದಂತೆ ಕಾಣುತ್ತದೆ. ಕ್ಷಣಮಾತ್ರದಲ್ಲಿ ಸಕಲವನ್ನೂ ಸುಟ್ಟು ಬೂದಿ ಮಾಡುವ ಅಸ್ತ್ರವೊಂದನ್ನು ಸ್ವಯಂ ರಕ್ಷಣೆಗಾಗಿ ಹೊಂದಿರುವುದು, ರಾಜತಾಂತ್ರಿಕವಾಗಿ ಒಪ್ಪಿತವಾಗಿರುವ ಒಂದು ಮನೋವೈಕಲ್ಯ. ಈ ಸರ್ವನಾಶಕ ಅಸ್ತ್ರ ನಾಗರಿಕ ಜಗತ್ತಿನ ಹೆಮ್ಮೆ ಎನಿಸಿಕೊಂಡಾಗಲೇ, ಮಾನವ ಸಮಾಜ ತನ್ನ ನೈತಿಕತೆಯನ್ನು ಕಳೆದುಕೊಂಡಿತ್ತು. ಈಗ ಅವಸಾನದ ಅಂಚಿನಲ್ಲಿದೆ.
ಈ ವಿನಾಶಕಾರಿ ಅಸ್ತ್ರವೇ ಹಲವು ದೇಶಗಳಲ್ಲಿ ಸರ್ವಶಕ್ತ ಭಾವನೆಯನ್ನೂ ಮೂಡಿಸಿದ್ದು, ಆಳ್ವಿಕೆಗಳು ಅನ್ಯ ದೇಶಗಳ ಮೇಲೆ ದಾಳಿ ನಡೆಸಲು, ಭಯೋತ್ಪಾದಕ ಚಟುವಟಿಕೆಗಳನ್ನು ಪ್ರಚೋದಿಸಲು ಹಾಗೂ ವಿಭಜಕ ಸಮಾಜಘಾತುಕ ಶಕ್ತಿಗಳನ್ನು ತಯಾರು ಮಾಡಲು ಈ ಅಹಮಿಕೆಯೇ ಕಾರಣವಾಗುತ್ತದೆ. ಪಾಕಿಸ್ತಾನ, ಇಸ್ರೇಲ್, ಅಮೆರಿಕ ಮುಂತಾದ ದೇಶಗಳು ಈ ಮಾದರಿಯನ್ನೇ ಸಾರ್ವತ್ರಿಕಗೊಳಿಸುತ್ತಿವೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯಲ್ಲಿ ಮೊದಲು ಗುಂಡಿ ಒತ್ತಿದ ದೇಶ ಯಾವುದು ಎಂಬ ಪ್ರಶ್ನೆ ಉದ್ಭವಿಸುವುದೇ ಇಲ್ಲ ಏಕೆಂದರೆ ಇಷ್ಟು ಯೋಚಿಸುವ ಮುನ್ನ ಎರಡೂ ದೇಶಗಳು ಧ್ವಂಸವಾಗಿರುತ್ತವೆ. ಆದರೂ “ ನಾವು ಮೊದಲು ಪ್ರಯೋಗಿಸುವುದಿಲ್ಲ ” ಎಂಬ ಸೂತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವೀಕೃತವಾಗಿದೆ. ಇಸ್ರೇಲ್ ಮತ್ತು ಅಮೆರಿಕ ಈಗ ನಡೆಸಿರುವ ದಂಡಯಾತ್ರೆಯ ಹಿನ್ನೆಲೆಯಲ್ಲಿ ವಿಶ್ವ ಸಮುದಾಯ ಆತಂಕದಲ್ಲಿರುವುದು ಈ ಕಾರಣಕ್ಕಾಗಿಯೇ. ಇದು ಮೂರನೆ ಮಹಾಯುದ್ಧದ ಮೊದಲ ಹೆಜ್ಜೆ ಎಂಬ ವ್ಯಾಖ್ಯಾನಗಳೂ ಕೇಳಿಬರುತ್ತಿವೆ.

(ಈ ನಿಟ್ಟಿನಲ್ಲಿ ದ ಹಿಂದೂ ಪತ್ರಿಕೆಯಲ್ಲಿ ಮಾರ್ಚ್ 3 2026ರಂದು ಪ್ರಕಟವಾಗಿರುವ Israel the U.S. and a war to build a unipolar West Asia – ಸ್ಟ್ತಾನ್ಲಿ ಜಾನಿ – ಲೇಖನದ ಸಂಗ್ರಹಾನುವಾದ ಇಲ್ಲಿದೆ )
ಏಕಧೃವ ಪಶ್ಚಿಮ ಏಷ್ಯಾ ಗುರಿಯತ್ತ
ಅಮೆರಿಕ ಮತ್ತು ಇಸ್ರೇಲ್ ನಡುವೆ ನಡೆಯುತ್ತಿದ್ದ ಮಾತುಕತೆಗಳ ಮಧ್ಯಸ್ಥಿಕೆ ವಹಿಸಿದ್ದ ಒಮಾನ್ನ ವಿದೇಶಾಂಗ ಸಚಿವ ಬದರ್ ಬಿನ್ ಹಮಾದ್ ಅಲ್ ಬುಸೈದಿ, ಮಾತುಕತೆಗಳು ಫಲಪ್ರದವಾಗಲಿದೆ ಎಂದು ಫೆಬ್ರವರಿ 27ರಂದು ಹೇಳಿದ್ದರು. ಇರಾನ್ ಪರಮಾಣು ಬಾಂಬ್ ಎಂದಿಗೂ ತಯಾರಿಸುವುದಿಲ್ಲ ಮತ್ತು ಪರಮಾಣು ವಸ್ತುಗಳನ್ನು ದಾಸ್ತಾನು ಮಾಡುವುದಿಲ್ಲ ಎಂಬ ಭರವಸೆ ನೀಡಿದೆ ಎಂದು ಬುಸೈದಿ ಹೇಳಿದ್ದರು. ಮರುದಿನವೇ ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ದಾಳಿ ಆರಂಭಿಸಿದ್ದವು. ಇರಾನ್ನ ಪರಮೋಚ್ಛ ನಾಯಕ ಖಮೇನಿ ಮತ್ತಿತರ ಹಿರಿಯ ಅಧಿಕಾರಗಳನ್ನು ಹತ್ಯೆ ಮಾಡಲಾಯಿತು. ತಮ್ಮ ಮೇಲಿನ ಸಂಭಾವ್ಯ ದಾಳಿಯನ್ನು ತಪ್ಪಿಸುವ ಸಲುವಾಗಿ ಈ ಆಕ್ರಮಣ ಅಗತ್ಯವಾಯಿತು ಎಂದು ಇಸ್ರೇಲ್ ಹೇಳಿತ್ತು, ಡೊನಾಲ್ಡ್ ಟ್ರಂಪ್ ಇರಾನ್ ಜನತೆಗೆ ಆಳ್ವಿಕೆಯನ್ನು ತಾವೇ ವಹಿಸಿಕೊಳ್ಳುವಂತೆ ಕರೆ ನೀಡಿದ್ದರು. ಇರಾನ್ನಲ್ಲಿ ಆಳುವ ಪಕ್ಷವನ್ನು ಬದಲಾಯಿಸುವುದೇ ದಾಳಿಯ ಉದ್ದೇಶ ಎನ್ನುವುದು ಸ್ಪಷ್ಟವಾಗಿತ್ತು.
ಆರಂಭದ ಹಿನ್ನಡೆಗಳ ಹೊರತಾಗಿಯೂ ಇರಾನ್ ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುತ್ತಲೇ ಇದೆ. ಸಾವಿರಾರು ಜನರ ಸಾವು ಅನುಭವಿಸಿದರೂ ಸಹ ಇರಾನ್ ಇಸ್ರೇಲ್ ಮೇಲೆ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಎರಡನೆ ಮಹಾಯುದ್ಧದ ನಂತರದಲ್ಲಿ ಮೊದಲ ಬಾರಿಗೆ ಜಲಾಂತರ್ಗಾಮಿ (Submarine) ದಾಳಿ ನಡೆದಿದ್ದು, ಶ್ರೀಲಂಕಾ ಸಮೀಪ ಹಿಂದೂ ಮಹಾಸಾಗರದಲ್ಲಿ ಭಾರತದಿಂದ ಹೊರಟಿದ್ದ ಇರಾನ್ನ ಯುದ್ಧ ನೌಕೆಯನ್ನು ಧ್ವಂಸ ಮಾಡಲಾಗಿದೆ. ಈ ದಾಳಿಗೆ ನೂರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಈ ದಾಳಿ-ಪ್ರತಿದಾಳಿಯು ಅಂತಿಮವಾಗಿ ಮುಂದಿನ ಹಲವು ದಶಕಗಳ ಕಾಲ ಮಧ್ಯಪ್ರಾಚ್ಯದ ಚಿತ್ರಣವನ್ನು ಒದಗಿಸುತ್ತದೆ.
:max_bytes(150000):strip_icc()/BarackObama-799035cd446c443fb392110c01768ed0.jpg)
ಇರಾನ್ ಎಂಬ ದೈತ್ಯ ಶಕ್ತಿಯ ವಿರುದ್ಧ
ಜೂನ್ 2025ರಲ್ಲಿ ನಡೆದ 12 ದಿನಗಳ ಕದನದ ನಂತರ , ಇರಾನ್ನ ಪರಮಾಣು ಅಸ್ತ್ರ ಯೋಜನೆಯನ್ನೇ ಕೊನೆಗೊಳಿಸಲಾಗಿದೆ ಎಂದು ಟ್ರಂಪ್ ಘೋಷಿಸಿದ್ದರು. ಇದನ್ನು ಇಸ್ರೇಲ್ ಪ್ರಧಾನಿ ನೆತನ್ಯಾಹು ಚಾರಿತ್ರಿಕ ವಿಜಯ ಎಂದೂ ಬಣ್ಣಿಸಿದ್ದರು. ಹಾಗಾದರೆ ಎಂಟು ತಿಂಗಳು ಕಳೆದು, ಮತ್ತೊಮ್ಮೆ ಯುದ್ಧ ಆರಂಭಿಸಿರುವುದೇಕೆ ? ಮೂಲ ಪ್ರಶ್ನೆಗೆ ಉತ್ತರ ಇಲ್ಲಿ ಗುರುತಿಸಬಹುದು. ಇಡೀ ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ನ ಆಧಿಪತ್ಯಕ್ಕೆ ಸವಾಲಾಗಿ ನಿಲ್ಲುವ ಏಕೈಕ ಪರಿಷ್ಕರಣವಾದಿ ದೇಶ (Revisionist country) ಎಂದರೆ ಇರಾನ್ ಮಾತ್ರ. ಹಾಗಾಗಿ ಅಲ್ಲಿ ಆಡಳಿತ ಬದಲಾವಣೆ (Regime Change ) ಮಾಡುವುದು ಇಸ್ರೇಲ್ನ ಆದ್ಯತೆಯಾಗಿತ್ತು. ಬಹುತೇಕ ಅರಬ್ ರಾಷ್ಟ್ರಗಳು ಅಮೆರಿಕದ ಸೇನಾ ನೆಲೆಗಳನ್ನು ಹೊಂದಿವೆ ಮತ್ತು ಅಮೆರಿಕದ ನೆರವನ್ನು ಆಶ್ರಯಿಸಿವೆ. ಈ ಯಾವ ದೇಶಗಳೂ ಇಸ್ರೇಲ್ನೊಡನೆ ನೇರ ಸಂಪರ್ಕವನ್ನು ಸಾಧಿಸಿಲ್ಲ ಅಥವಾ ಇಸ್ರೇಲ್ನ ಸೇನಾ ಪ್ರಾಬಲ್ಯ, ಪ್ಯಾಲೆಸ್ಟೈನ್ ಸಿರಿಯಾ ಮತ್ತು ಲೆಬನಾನ್ ದೇಶಗಳ ಅತಿಕ್ರಮಣವನ್ನು ಒಪ್ಪಿಕೊಂಡಿಲ್ಲ. ಹಾಗಾಗಿ ಅತ್ಯಾಧುನಿಕ ಕ್ಷಿಪಣಿ ಯೋಜನೆಗಳನ್ನು ಹೊಂದಿರುವ ಇರಾನ್, ಇಸ್ರೇಲ್ನ ಅಸ್ತಿತ್ವಕ್ಕೆ ಅಪಾಯಕಾರಿಯಾಗಿ ಕಂಡಿತ್ತು.
2015ರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಇರಾನ್ನೊಡನೆ ಪರಮಾಣು ಒಪ್ಪಂದಕ್ಕೆ ಸಹಿ ಮಾಡಿದಾಗ, ಇರಾನ್ನ ಯೋಜನೆಯನ್ನು ನಿಷ್ಕ್ರಿಯಗೊಳಿಸುವುದೇ ಪ್ರಧಾನ ಆಲೋಚನೆಯಾಗಿತ್ತು. ತನ್ಮೂಲಕ ಪರಮಾಣು ಅಸ್ತ್ರ ಇಲ್ಲದ ಇರಾನ್ ಪಶ್ಚಿಮ ಏಷ್ಯಾದ ಪಾಲಿಗೆ ಅಪಾಯಕಾರಿಯಾಗಿ ಕಾಣುವುದಿಲ್ಲ ಎಂಬ ನಿರೀಕ್ಷೆ ಇತ್ತು . ಆದರೆ ಇಸ್ರೇಲ್ ಈ ಒಪ್ಪಂದವನ್ನು ಅನುಮೋದಿಸಿರಲಿಲ್ಲ, ಏಕೆಂದರೆ ಇಸ್ರೇಲ್ ದೃಷ್ಟಿಯಲ್ಲಿ ಇರಾನ್ನ ಪರಮಾಣು ಅಸ್ತ್ರ ಯೋಜನೆಗಿಂತಲೂ ಅದರ ಸಾಂಪ್ರದಾಯಿಕ ಶಕ್ತಿ ಅಪಾಯಕಾರಿಯಾಗಿ ಕಂಡಿತ್ತು. ಹೇಗಾದರೂ ಮಾಡಿ ಇರಾನ್ನಲ್ಲಿ ಹೊಸ ಆಳ್ವಿಕೆಯನ್ನು ಸ್ಥಾಪಿಸುವ ಮತ್ತು ಈ ಪ್ರಬಲ ರಾಜ್ಯದ ಮಿಲಿಟರಿ ಶಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸುವ ಇಸ್ರೇಲ್ನ ಮಹತ್ವಾಕಾಂಕ್ಷೆಗೆ ಈಗ ಅವಕಾಶ ಲಭಿಸುತ್ತಿದೆ.
![]()
ಇತ್ತೀಚಿನ ಅಮೆರಿಕ-ಇರಾನ್ ಮಾತುಕತೆಗಳ ಸಂದರ್ಭದಲ್ಲಿ ಇರಾನ್ನ ಕ್ಷಿಪಣಿ ಯೋಜನೆಗಳನ್ನೂ (Missile Programme) ಹಾಗೂ ಈ ಪ್ರದೇಶದಲ್ಲಿ ರಾಜ್ಯೇತರ ಸೇನಾಪಡೆಗಳಿಗೆ (Non state militias) ನೀಡುವ ಪ್ರಚೋದನೆಯನ್ನು ಒಳಗೊಳ್ಳುವಂತೆ ಇಸ್ರೇಲ್ ಒತ್ತಾಯಿಸುತ್ತಲೇ ಬಂದಿತ್ತು. ಇರಾನ್ನ ಸಂಪೂರ್ಣ ನಿಶ್ಶಸ್ತ್ರೀಕರಣ ̇(Total disarmament) ಇಸ್ರೇಲ್ನ ಪ್ರಧಾನ ಗುರಿಯಾಗಿತ್ತು. ಈ ಸೂಕ್ಷ್ಮಗಳನ್ನು ಇರಾನ್ನ ರಕ್ಷಣಾ ತಜ್ಞರು ಅರಿತಿದ್ದರಿಂದಲೇ, ಯಾವುದೇ ಕಾರಣಕ್ಕೂ ಅಮೆರಿಕದೊಡನೆ ಒಪ್ಪಂದಕ್ಕೆ ಸಹಿ ಮಾಡುವುದಿಲ್ಲ ಎಂಬ ನಿರ್ಧಾರ ತಳೆದಿತ್ತು. ಒಂದು ವೇಳೆ ಈ ಒಪ್ಪಂದ ಮಾಡಿಕೊಂಡರೂ ಮುಂದಿನ ದಿನಗಳಲ್ಲಿ ಇಸ್ರೇಲ್ ತಮ್ಮ ಮೇಲೆ ದಾಳಿ ಮಾಡುವುದು ಖಚಿತ ಎಂಬ ಅಭಿಪ್ರಾಯವನ್ನು ಇರಾನ್ನ ಭದ್ರತಾ ವಿಶ್ಲೇಷಕರೊಬ್ಬರು ವ್ಯಕ್ತಪಡಿಸಿದ್ದರು.
ಆಡಳಿತ ಬದಲಾವಣೆಯ ಆಕಾಂಕ್ಷೆ
ಹಾಗಾಗಿ ಇಸ್ರೇಲ್ ತನ್ನ ಎಲ್ಲ ಅಪೇಕ್ಷೆಗಳನ್ನು ಈಡೇರಿಸಿಕೊಳ್ಳಬೇಕಾದರೆ ಇರಾನ್ನಲ್ಲಿ ಆಡಳಿತ ಬದಲಾವಣೆ ಅನಿವಾರ್ಯವಾಗಿತ್ತು. ಇರಾಕ್, ಲಿಬ್ಯಾ ಈಗ ದುರ್ಬಲವಾಗಿವೆ. ಸಿರಿಯಾದ ನಾಯಕ ಬಶಾರ್ ಅಲ್ ಅಸಾದ್ ರಷ್ಯಾ ಆಶ್ರಯದಲ್ಲಿದ್ದಾರೆ, ಜಿಹಾದಿ ಗುಂಪು ಇಲ್ಲಿ ಆಳುತ್ತಿದೆ. ಹಿಜ್ಬೊಲ್ಲಾ ಸಂಘಟನೆ ದುರ್ಬಲವಾಗಿದೆ. ಹಮಾಸ್ ಸಂಘಟನೆಯನ್ನು ಗಾಝಾದಲ್ಲಿ ನಿರ್ವೀರ್ಯಗೊಳಿಸಲಾಗಿದೆ. ಈ ಬೆಳವಣಿಗೆಗಳ ನಡುವೆ ಅರಬ್ ರಾಷ್ಟ್ರಗಳು ಈ ಆಕ್ರಮಣಗಳನ್ನು ಖಂಡಿಸುವುದು ಬಿಟ್ಟು ಮತ್ತಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಹಾಗಾಗಿ ಇಸ್ರೇಲ್ನ ಪರಮಾಧಿಪತ್ಯಕ್ಕೆ ಸವಾಲಾಗಿ ನಿಲ್ಲುವ ಏಕೈಕ ರಾಷ್ಟ್ರ ಇರಾನ್ ಮಾತ್ರ. ಈ ದೇಶವನ್ನು ಮಣಿಸಿಬಿಟ್ಟರೆ, ಪ್ರಾದೇಶಿಕ ಆಧಿಪತ್ಯದ ಸಮೀಕರಣ ಸಂಪೂರ್ಣ ಬದಲಾಗಿ, ಅಮೆರಿಕದ ಶಾಶ್ವತ ಬೆಂಬಲ ಇರುವ ಇಸ್ರೇಲ್-ಕೇಂದ್ರಿತ ಏಕಧೃವ ಪಶ್ಚಿಮ ಏಷ್ಯಾ (Uni polar West Asia) ಸಾಧ್ಯವಾಗುತ್ತದೆ. ಇಲ್ಲಿ ಇರಾನ್ ಪ್ರಜೆಗಳ ಸ್ವಾತಂತ್ರ್ಯಕ್ಕಿಂತಲೂ ಮುಖ್ಯವಾಗಿರುವುದು ಇಸ್ರೇಲ್ನ ಭೌಗೋಳಿಕ ರಾಜಕೀಯ ಹಿತಾಸಕ್ತಿ (Geo political Interest ) .
ಇಲ್ಲಿ ಸಮಸ್ಯೆ ಎಂದರೆ ಇರಾನ್ ಅತಿ ಎತ್ತರದ ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಒಂದು ದೇಶ. ಇಸ್ರೇಲ್ಗಿಂತಲೂ 70 ಪಟ್ಟು ದೊಡ್ಡದು. ಹಾಗಾಗಿ ಏಕಾಂಗಿಯಾಗಿ ಇಸ್ರೇಲ್ ಇಲ್ಲಿ ಆಡಳಿತ ಬದಲಾವಣೆಗೆ ಪ್ರಯತ್ನಿಸಲಾಗುವುದಿಲ್ಲ. ಭೂಸೇನೆಯನ್ನು ಬಳಸಿ ಆಕ್ರಮಣ ನಡೆಸಿದರೂ ಸಹ ಇದು ಸುಲಭಸಾಧ್ಯವಲ್ಲ. ಎರಡು ವರ್ಷಗಳ ಕಾಲ ಇಸ್ರೇಲ್ ಗಾಝಾ ಪಟ್ಟಿಯ ಮೇಲೆ ಆಕ್ರಮಣ ನಡೆಸುತ್ತಿದ್ದು 70 ಸಾವಿರಕ್ಕೂ ಹೆಚ್ಚು ಜನರ ಜೀವಬಲಿ ಪಡೆದಿದೆ. ಆದಾಗ್ಯೂ ಹಮಾಸ್ ಆಡಳಿತವನ್ನು ಪದಚ್ಯುತಗೊಳಿಸಲು ಸಾಧ್ಯವಾಗಿಲ್ಲ. ಅಮೆರಿಕವನ್ನು ಹೊರತುಪಡಿಸಿ ಯಾವ ದೇಶವೂ ಇರಾನ್ ಒಳಗೆ ತನ್ನ ಭೂ ಸೇನೆಯನ್ನು ಕಳುಹಿಸಲು ಒಪ್ಪುವುದಿಲ್ಲ.

ಲಿಬ್ಯಾ ಮತ್ತು ಸಿರಿಯಾದಲ್ಲಿರುವಂತೆ ಇಲ್ಲಿನ ಆಡಳಿತವನ್ನು ವಿರೋಧಿಸುತ್ತಿರುವ ಸಶಸ್ತ್ರ ವಿರೋಧಿಗಳೂ ಇರಾನ್ನಲ್ಲಿ ಕಾಣುವುದಿಲ್ಲ. ಲಿಬ್ಯಾದಲ್ಲಿ ಆಡಳಿತ ಬದಲಾವಣೆ ಮಾಡಲು ನ್ಯಾಟೋ (NATO) ಸೇನೆಗೆ ಒಂದು ತಿಂಗಳಿಗೂ ಹೆಚ್ಚು ಕಾಲ ದಾಳಿ ನಡೆಸಿ ಕರ್ನಲ್ ಗಡಾಫಿಯನ್ನು ಸೆರೆಹಿಡಿಯಬೇಕಾಯಿತು. ಸಿರಿಯಾದಲ್ಲಿ 2012ರಲ್ಲಿ ಆರಂಭವಾದ ನಾಗರಿಕ ಅಂತರ್ಯುದ್ಧ 12 ವರ್ಷಗಳ ನಂತರ ಅಂತ್ಯವಾಗಿ ಅಸ್ಸಾದ್ ಪದಚ್ಯುತಗೊಂಡಿದ್ದ. ಇರಾನ್ನಲ್ಲಿ ಈ ರೀತಿಯ ಸಶಸ್ತ್ರ ವಿರೋಧಿ ಪಡೆಗಳು ಇರುವುದಿಲ್ಲ. ಹಾಗಾಗಿ ಜೂನ್ 2025ರಲ್ಲಿ ಮತ್ತು ಈಗ ಇಸ್ರೇಲ್ ಕ್ಷಿಪಣಿ, ಡ್ರೋನ್, ಬಾಂಬ್ ದಾಳಿಯನ್ನು ಅವಲಂಬಿಸಿದೆ. ಜೂನ್ ತಿಂಗಳ ಅಲ್ಪಾವಧಿಯ ಕದನದಲ್ಲಿ ಇರಾನ್ ಪ್ರತಿದಾಳಿ ನಡೆಸಲು ಯಶಸ್ವಿಯಾಗಿತ್ತು. ಹಾಗಾಗಿ ಕದನವಿರಾಮ ಘೋಷಿಸಬೇಕಾಯಿತು. ಈಗ ಅಮೆರಿಕದ ಸಕ್ರಿಯ ಸಹಾಯದೊಂದಿಗೆ ಇಸ್ರೇಲ್ ತನ್ನ ಮಹತ್ವಾಕಾಂಕ್ಷಿ ಯುದ್ಧವನ್ನು ಮುಂದುವರೆಸಿದೆ.
ಹುಸಿಯಾದ ನಿರೀಕ್ಷೆಗಳು
ವಿಪರ್ಯಾಸವೆಂದರೆ, ಖಮೇನೀ ಹತ್ಯೆಯಾದ ಕೂಡಲೇ ಇರಾನಿನ ಜನತೆ ರಸ್ತೆಗಿಳಿದು, ಹೊಸ ಆಡಳಿತವನ್ನು ಸ್ಥಾಪಿಸಲು ಸ್ವಯಂಪ್ರೇರಿತರಾಗಿ ಮುನ್ನುಗ್ಗುತ್ತಾರೆ, ಆಡಳಿತ ಸಂಸ್ಥೆಗಳನ್ನು ಆಕ್ರಮಿಸಿಕೊಳ್ಳುತ್ತಾರೆ ಎಂಬ ಅಮೆರಿಕ-ಇಸ್ರೇಲ್ನ ನಿರೀಕ್ಷೆ ಕೈಗೂಡಲಿಲ್ಲ. ಇರಾನ್ ಈ ದುರ್ಗಮ ಕ್ಷಣವನ್ನು ನಿರೀಕ್ಷಿಸಿದ್ದಂತೆಯೇ ಕಾಣುತ್ತಿದ್ದು ಪ್ರಬಲ ವಿರೋಧ ತೋರುತ್ತಿದೆ. ನಿರಂತರ ಪ್ರತಿದಾಳಿಯನ್ನೂ ನಡೆಸುತ್ತಿದೆ. ಇದರ ಫಲವೇ ಹಿಂದೂ ಮಹಾಸಾಗರದಲ್ಲಿ ಇರಾನ್ನ ಯುದ್ಧನೌಕೆಯ ಮೇಲೆ ಜಲಾಂತರ್ಗಾಮಿಯಿಂದ ನಡೆದಿರುವ ಭೀಕರ ದಾಳಿ. ಮತ್ತೊಂದೆಡೆ ಜೂನ್ 2025ರ ಕದನದಲ್ಲಿ ಇಸ್ರೇಲ್ ವಿರುದ್ಧ ಮಾತ್ರ ಹೋರಾಡಿದ್ದ ಇರಾನ್ ಈಗ ಮಧ್ಯಪ್ರಾಚ್ಯದ ದೇಶಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಯುಎಇನಲ್ಲಿರುವ ಫ್ರಾನ್ಸ್ನ ವಾಯು ನೆಲೆಯ ಮೇಲೆ ಸಹ ದಾಳಿ ನಡೆಸಿದೆ.
ಈಗ ಜಾಗತಿಕ ಇಂಧನ ಪೂರೈಕೆಯ ಮೂರನೆ ಒಂದರಷ್ಟು ಪ್ರಮಾಣವನ್ನು ಪೂರೈಸಲು ಬಳಕೆಯಾಗುವ, ಅರಬ್ಬೀ ಸಮುದ್ರವನ್ನು ಪರ್ಷಿಯನ್ ಕೊಲ್ಲಿ ರಾಷ್ಟ್ರಗಳಿಗೆ ಸಂಪರ್ಕಿಸುವ, ಹರ್ಮುಜ್ ಜಲಸಂಧಿ ಮಾರ್ಗವನ್ನೂ ಇರಾನ್ ಬಂದ್ ಮಾಡಿದೆ. ಯುದ್ಧ ಆರಂಭವಾದ ಎರಡೇ ದಿನಗಳಲ್ಲಿ ಇರಾನ್ ಇಡೀ ಸಂಘರ್ಷವನ್ನು ಪ್ರಾದೇಶಿಕಗೊಳಿಸಿದೆ. ಒಂದು ವೇಳೆ ಇರಾನ್ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ತೀವ್ರಗೊಳಿಸಿದರೆ, ಈ ಕೊಲ್ಲಿ ರಾಷ್ಟ್ರಗಳೂ ಯುದ್ಧದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಕೊಲ್ಲಿ ರಾಷ್ಟ್ರಗಳ ನಡುವೆ ಏರ್ಪಡುವ ದಾಳಿ-ಪ್ರತಿದಾಳಿ ವಿಶ್ವದ ಇಂಧನ ಮಾರುಕಟ್ಟೆಯ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ. ಇದು ಜಾಗತಿಕ ಆರ್ಥಿಕತೆಗೂ ಧಕ್ಕೆ ಉಂಟುಮಾಡುತ್ತದೆ.

ಯುದ್ಧ ಹೆಚ್ಚು ದಿನ ಮುಂದುವರೆದಷ್ಟೂ, ಈ ಸೇನಾ ನೆಲೆಗಳಲ್ಲಿ ಇಸ್ರೇಲ್ ಮತ್ತು ಅಮೆರಿಕ ಸಂಗ್ರಹಿಸಿರುವ ಕ್ಷಿಪಣಿಗಳ ರಕ್ಷಣಾ ಗೋಡೆಗಳು ಶಿಥಿಲವಾಗತೊಡಗುತ್ತವೆ. ಅಮೆರಿಕದ ರಕ್ಷಣಾ ತಜ್ಞರು ಈ ಆತಂಕವನ್ನು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಇರಾನ್ನ ಬ್ಯಾಲಿಸ್ಟಿಕ್ ಕ್ಷಿಪಣಿ ಸಂಗ್ರಹಾಗಾರಗಳನ್ನು ಸಂಪೂರ್ಣವಾಗಿ ನಾಶಪಡಿಸುವ ಮೂಲಕ ಆ ದೇಶದ ಉಡಾವಣಾ ನೆಲೆಗಳನ್ನು ಧ್ವಂಸ ಮಾಡುವ ಇಸ್ರೇಲ್-ಅಮೆರಿಕದ ತಂತ್ರ ವಿಫಲವಾದರೆ, ಡೊನಾಲ್ಡ್ ಟ್ರಂಪ್ ತಮ್ಮ ಯುದ್ಧ ತಂತ್ರದ ಬಗ್ಗೆ ಪುನರಾಲೋಚನೆ ಮಾಡಬೇಕಾಗುತ್ತದೆ. ಈಗಾಗಲೇ ಜಾಗತಿಕ ಮಾರುಕಟ್ಟೆ ಕುಸಿಯಲಾರಂಭಿಸಿದ್ದು, ಜಗತ್ತಿನ ಪ್ರಮುಖ ದೇಶಗಳು ಸಂಕಷ್ಟಕ್ಕೀಡಾಗುತ್ತಿವೆ.
ಯುದ್ಧದ ಅಂತ್ಯ ನೋವಿನ ಅಂತ್ಯವಲ್ಲ
ಈ ಭೀಕರ ಯುದ್ಧ ಕೊನೆಗೊಳ್ಳಬಹುದು. ಆದರೆ ಸಾವಿನ ಸರದಾರರಿಂದ ಪ್ರಯೋಗಿಸಲ್ಪಟ್ಟ ಶಸ್ತ್ರಾಸ್ತ್ರಗಳಿಗೆ ಬಲಿಯಾದ ಇರಾನ್ನ ಸಾವಿರಾರು ಪ್ರಜೆಗಳು, ಏನೂ ಅರಿಯದ 150ಕ್ಕೂ ಹೆಚ್ಚು ಶಾಲಾ ಹೆಣ್ಣುಮಕ್ಕಳು, ಈ ಮಕ್ಕಳ ತಂದೆ-ತಾಯಿಯರು, ಜಲಾಂತರ್ಗಾಮಿ ದಾಳಿಯಲ್ಲಿ ಬಲಿಯಾದ ನೂರಕ್ಕೂ ಹೆಚ್ಚು ನೌಕಾ ಸಿಬ್ಬಂದಿ ಮತ್ತು ಈ ಭೌಗೋಳಿಕ ರಾಜಕೀಯ ಕದನದ (Geo political war) ಭಾಗಿದಾರರೂ ಅಲ್ಲದೆ, ಫಲಾನುಭವಿಗಳೂ ಅಲ್ಲದೆ ತಮ್ಮ ಭವಿಷ್ಯದ ಜೀವನವನ್ನು ಅಭದ್ರತೆಯಲ್ಲೇ ಸವೆಸಬೇಕಾದ ಮೂರೂ ದೇಶಗಳ ಸಾವಿರಾರು ಸಾಮಾನ್ಯ ಜನರು ಎದುರಿಸುವ ಸಂಕಷ್ಟಗಳು ಹಾಗೂ ಈ ಸಮಾಜಗಳು ಅನುಭವಿಸುವ ಸಾವು-ನೋವು-ಯಾತನೆ-ವೇದನೆ ಮತ್ತು ಮಾನಸಿಕ ಒತ್ತಡಗಳು ಶೀಘ್ರದಲ್ಲಿ ಕೊನೆಯಾಗುವುದಿಲ್ಲ.
ಹಾಗೆಯೇ ಈ ಯುದ್ಧದಿಂದ ಮಾರುಕಟ್ಟೆಗಳು ಅನುಭವಿಸುವ ಕಷ್ಟಗಳೆಲ್ಲವೂ ಜನಸಾಮಾನ್ಯರ ಹೆಗಲಿಗೇರುತ್ತವೆ. ಕದನ ಪ್ರಿಯ ದೇಶಗಳ ಹಪಹಪಿಗೆ ಬಲಿಯಾದ ಮಕ್ಕಳ ಸಾವಿಗೂ ಶ್ರದ್ಧಾಂಜಲಿ ಸಲ್ಲಿಸಲು ಹಿಂಜರಿಯರಿಯುವ ಕ್ರೂರ ಸಮಾಜಗಳು, ಭವಿಷ್ಯದ ತಲೆಮಾರಿಗೆ ದ್ವೇಷಾಸೂಯೆಗಳ ಹೊಸ ಮಾದರಿಗಳನ್ನು ಕಟ್ಟಿಕೊಡುತ್ತವೆ. ಸಾವನ್ನು ಸಂಭ್ರಮಿಸುವ ಸಂಸ್ಕೃತಿಗಿಂತಲೂ ಅಪಾಯಕಾರಿಯಾಗುವ ಈ ಮಾದರಿಯು ಭವಿಷ್ಯದಲ್ಲಿ ಮಾನವ ಸಮಾಜವನ್ನು ಅಡ್ಡಡ್ಡಲಾಗಿ ವಿಭಜಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ. ಧಾರ್ಮಿಕ, ಮತೀಯ, ಭೌಗೋಳಿಕ, ರಾಷ್ಟ್ರೀಯ, ಪ್ರಾದೇಶಿಕ, ಭಾಷಿಕ, ಜನಾಂಗೀಯ ಹಾಗೂ ಸಾಮಾಜಿಕ ಅಸ್ಮಿತೆಗಳು ಮಾನವ ಸಮಾಜವನ್ನು ಒಂದುಗೂಡಿಸುವ ಸೇತುವೆಗಳಾಗಬೇಕು. ಆದರೆ ಸಾಮ್ರಾಜ್ಯಶಾಹಿಯ ಕ್ರೌರ್ಯ, ಬಂಡವಾಳಶಾಹಿಯ ದಾಹ, ಅಧಿಕಾರಶಾಹಿಯ ಹಂಬಲ ಇವುಗಳನ್ನೇ ವಿಭಜನೆ ಮತ್ತು ವಿಘಟನೆಯ ತಳಪಾಯಗಳನ್ನಾಗಿ ಮಾಡಿಬಿಡುತ್ತವೆ.
ಸಂವೇದನಾಶೀಲ ಮಾನವ ಸಮಾಜ ಮಾತ್ರ ಈ ಅಡಿಪಾಯವನ್ನು ಕೆಡವಿ ಹೊಸ ಜಗತ್ತನ್ನು ಕಟ್ಟಲು ಸಾಧ್ಯ. ಆ ಸಮಾಜವನ್ನು ಕಟ್ಟುವ ಮನಸ್ಸುಗಳನ್ನು ತಯಾರಿಸುವುದು ನಮ್ಮ ನೈತಿಕ ಜವಾಬ್ದಾರಿಯಾಗಬೇಕಿದೆ. ಯೋಚಿಸೋಣವೇ ?

-೦-೦-೦-೦-೦-






