ಮನುವಾದದ ಅಣಿಮುತ್ತುಗಳು ಯತ್ನಾಳರ ಬಾಯಿಯಿಂದ ಉದುರಿವೆ, ಇದು ಯತ್ನಾಳರ ಮಾತುಗಳಷ್ಟೇ ಅಲ್ಲ RSS ನ ಅಂತರಂಗದ ಧೋರಣೆ.

ದಲಿತರಿಗೆ ಪುಷ್ಪಾರ್ಚನೆಗೆ ಅಧಿಕಾರವಿಲ್ಲ,
ದಲಿತರಿಗೆ ನೀರು ಕುಡಿಯುವ ಅಧಿಕಾರವಿಲ್ಲ,
ದಲಿತರಿಗೆ ಆಡಳಿತದ ಅಧಿಕಾರವಿಲ್ಲ,
ದಲಿತರಿಗೆ ಶಿಕ್ಷಣ ಪಡೆಯುವ ಅಧಿಕಾರವಿಲ್ಲ,
ದಲಿತರಿಗೆ ವ್ಯವಹಾರ ನಡೆಸುವ ಅಧಿಕಾರವಿಲ್ಲ,
ದಲಿಗರಿಗೆ ಬದುಕುವ ಅಧಿಕಾರವೂ ಇಲ್ಲ.
ಇದು ಮನುವಾದಿಗಳ ಅಂತರಂಗ, ಬಹಿರಂಗ ಎಲ್ಲವೂ..

ದಲಿತರು ಹಿಂದೂ ಧರ್ಮದ ವ್ಯಾಪ್ತಿಯೊಳಗಿಲ್ಲವೇ?
- ಇದೇ ಧೋರಣೆಯಿಂದಲೇ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮುರವರನ್ನು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಿಂದ ಹೊರಗಿಟ್ಟಿದ್ದಲ್ಲವೇ?
- ಇದೇ ಧೋರಣೆಯಿಂದಲೇ ಮಾಜಿ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರಿಗೆ ದೇವಾಲಯದ ಪ್ರವೇಶಕ್ಕೆ ನಿರಾಕರಿಸಿದ್ದಲ್ಲವೇ?
- ಈ ಶೋಷಣೆಯ ಧೋರಣೆಗಾಗಿಯೇ ಅಲ್ಲವೇ ಬಾಬಾ ಸಾಹೇಬರು ಹಿಂದುವಾಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯುವುದಿಲ್ಲ ಎಂದಿದ್ದು?

ಬಾಬಾ ಸಾಹೇಬರ ಸಂವಿಧಾನದ ಕಾಲಘಟ್ಟದಲ್ಲೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ದಲಿತರ ಬಗ್ಗೆ ಈ ಪರಿ ತಿರಸ್ಕಾರವಿರುವಾಗ ಹಿಂದಿನ ವ್ಯವಸ್ಥೆ ದಲಿತರೆಡೆಗೆ ಇನ್ನೆಷ್ಟರ ಮಟ್ಟಿಗೆ ಕ್ರೂರವಾಗಿದ್ದಿರಬಹುದು.
ಸಾಮಾಜಿಕ ವ್ಯವಸ್ಥೆಯಲ್ಲಿ ಧಾರ್ಮಿಕ ಬಣ್ಣ ಲೇಪಿಸಿ ಒಂದು ವರ್ಗದ ಮನುಷ್ಯರನ್ನು ನಿಷ್ಕೃಷ್ಟವಾಗಿ ಕಾಣುತ್ತಿರುವಾಗ ಹಿಂದೂ ಧರ್ಮದಲ್ಲಿ ಯಾವ ಶ್ರೇಷ್ಠತೆಯನ್ನು ಹುಡುಕುತ್ತೀರಿ? ದಲಿತರನ್ನು ಹೊರಗಿಟ್ಟು ಅದ್ಯಾವ ಬಾಯಿಯಲ್ಲಿ ನಾವೆಲ್ಲ ಹಿಂದೂ ನಾವೆಲ್ಲ ಒಂದು ಎನ್ನುತ್ತಾರೆ?

ಹಿಂದೂ ಧರ್ಮದಲ್ಲಿ ಅಸಮಾನತೆ ಇದೆ ಎಂದು ಶ್ರೀ ಸಿದ್ದರಾಮಯ್ಯನವರು ಹೇಳಿದಾಗ ಬಾಯಿ ಬಡಿದುಕೊಂಡಿದ್ದ ಬಿಜೆಪಿ ನಾಯಕರು ಯತ್ನಾಳರ ಮಾತಿಗೆ ಮೌನವಾಗಿರುವುದೇಕೆ?
BJP ನಾಯಕರ ಕಣ್ಣು, ಕಿವಿ, ಬಾಯಿಗಳಿಗೆ ಬೀಗ ಹಾಕಿಕೊಂಡಿರುವುದೇಕೆ?
