ಜಾಗತೀಕರಣೋತ್ತರ ಆರ್ಥಿಕ ಇತಿಹಾಸದ ಕರಾಳ ಅಧ್ಯಾಯವೆಂದೇ ಆರ್ಥಿಕ ತಜ್ಞರು ಬಣ್ಣಿಸುವ “ಅಪನಗದೀಕರಣ” ಜಾರಿಯಾಗಿ ನವೆಂಬರ್ 8ಕ್ಕೆ ಐದು ವರ್ಷ ಪೂರ್ಣಗೊಳ್ಳುತ್ತಿದೆ. ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರುವುದಾಗಿ ಹೇಳಿಕೊಂಡು ಅಧಿಕಾರ ಗ್ರಹಿಸಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಅತಿ ದೊಡ್ಡ ಆರ್ಥಿಕ ತಪ್ಪು ಹೆಜ್ಜೆ ಎಂದರೆ ಅಪನಗದೀಕರಣ ನಿರ್ಧಾರ. ಐದು ವರ್ಷಗಳ ಹಿಂದೆ ನರೇಂದ್ರ ಮೋದಿ ಸರ್ಕಾರ ಮಾಡಿದ ತಪ್ಪಿನ ಶಿಕ್ಷೆಯನ್ನು ಈಗಲೂ ದೇಶದ ಕೋಟ್ಯಂತರ ಜನರು ಅನುಭವಿಸುತ್ತಲೇ ಇದ್ದಾರೆ.
ಮೋದಿ ಸರ್ಕಾರದ ತಪ್ಪು ನಿರ್ಧಾರವು ಇಡೀ ದೇಶದ ಆರ್ಥಿಕತೆ ಕುಸಿದಿದ್ದಲ್ಲದೇ ಕೋಟ್ಯಂತರ ಅಸಂಘಟಿತ ವಲಯದ ಕಾರ್ಮಿಕರ ಉದ್ಯೋಗವನ್ನೂ ಕಸಿದಿತ್ತು. ಆಗ ಕಳೆದುಕೊಂಡ ಉದ್ಯೋಗವನ್ನು ಇನ್ನೂ ದಕ್ಕಿಸಿಕೊಳ್ಳಲಾಗದೇ ಅದೆಷ್ಟೋ ಜನ ನಗರ ತೊರೆದಿದ್ದಾರೆ. ಹುಟ್ಟೂರಿನಲ್ಲೂ ಬದುಕು ಕಟ್ಟಿಕೊಳ್ಳಲಾಗದೇ ಅತಂತ್ರರಾಗಿದ್ದಾರೆ. ಆಗ ಬದುಕು ಕಳೆದುಕೊಂಡ ಕೋಟ್ಯಂತರ ರಸ್ತೆಬದಿ ವ್ಯಾಪಾರಿಗಳು, ಸಣ್ಣ, ಮಧ್ಯಮವರ್ಗದ ವ್ಯಾಪಾರಿಗಳು ನಷ್ಟದ ಸಂಕೋಲೆಯಿಂದ ಹೊರಬರಲಾಗದೇ ನರಳುತ್ತಲೇ ಇದ್ದಾರೆ.
ಆರ್ಥಿಕತೆ ನಿಖರ ಮಾಹಿತಿಗಳನ್ನೇ ನೀಡದ ಕೇಂದ್ರ ಸರ್ಕಾರವು ದೇಶದ ಆರ್ಥಿಕತೆಯು ನಾಗಲೋಟದಲ್ಲಿ ಸಾಗುತ್ತಿದೆ ಎಂಬುದನ್ನು ಬಿಂಬಿಸುವ ಹತಾಶ ಪ್ರಯತ್ನ ನಡೆಸುತ್ತಿದೆ. ಸರ್ಕಾರ ಪ್ರಕಟಿಸುವ ಅಂಕಿಅಂಶಗಳೆಲ್ಲವನ್ನು ಅನುಮಾನದಿಂದಲೇ ಇಡೀ ಆರ್ಥಿಕ ತಜ್ಞ ವಲಯ ನೋಡುತ್ತಿದೆ. ಅಪನಗದೀಕರಣ ಮತ್ತು ತರಾತುರಿಯಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಿಂದಾದ ಆರ್ಥಿಕ ನಷ್ಟದ ಹೊಣೆಯನ್ನು ಕರೋನಾದ ಹೆಗಲಿಗೇರಿಸಿರುವ ಕೇಂದ್ರ ಸರ್ಕಾರ ನಿತ್ಯವೂ ಅಗತ್ಯ ವಸ್ತುಗಳ ಮೇಲಿನ ಬೆಲೆಯನ್ನು ಹೆಚ್ಚಿಸುತ್ತಲೇ ಇದೆ.
ಅಪನಗದೀಕರಣ ಜಾರಿ ಮಾಡಿ ಐದು ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಗಮನ ಸೆಳೆಯುತ್ತಿರುವ ಸಂಗತಿಗಳೆಂದರೆ ನಿತ್ಯವೂ ಏರುತ್ತಿರುವ ಇಂಧನ ಮತ್ತು ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ. ಬೆಲೆ ಏರಿಕೆಯನ್ನು ಅತ್ಯಂತ ಲಘುವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರದ ಧೋರಣೆ ನೇರವಾಗಿಯೇ ಜನರನ್ನು ಗೇಲಿ ಮಾಡುವಂತಿದೆ.
ಅಪನಗದೀಕರಣದ ಉದ್ದೇಶಿತ ಗುರಿ ಈಡೇರಿಲ್ಲ ಎಂಬುದನ್ನು ಕಾಲಕಾಲಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್, ಖುದ್ದು ಕೇಂದ್ರ ಸರ್ಕಾರದ ಸಾಂಖ್ಯಿಕ ಇಲಾಖೆ, ಅಲ್ಲದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ರೇಟಿಂಗ್ ಏಜೆನ್ಸಿಗಳು ಮತ್ತು ಜಾಗತಿಕ ಸಂಸ್ಥೆಗಳಾದ ವಿಶ್ವ ಬ್ಯಾಂಕ್ ಮತ್ತು ಏಷಿಯಾ ಅಭಿವೃದ್ಧಿ ಬ್ಯಾಂಕ್ ಗಳು ತಿಳಿಸಿವೆ.
ಕಪ್ಪು ಹಣವನ್ನು ಮೂಲೋತ್ಪಾದನೆ ಮಾಡುವ, ಆ ಮೂಲಕ ತೆರಿಗೆ ವ್ಯವಸ್ಥೆ ಸುಧಾರಿಸುವ, ತೆರಿಗೆ ಸಂಗ್ರಹ ಹೆಚ್ಚಿಸುವ ಭಯೋತ್ಪಾದನಾ ಕೃತ್ಯಗಳಿಗೆ ಹರಿದುಹೋಗುವ ಹಣ ನಿಯಂತ್ರಿಸುವ ಮೂಲ ಆಶಯದೊಂದಿಗೆ ಜಾರಿಗೆ ತಂದ ಅಪನಗದೀಕರಣದ ಉದ್ದೇಶಿತ ಗುರಿ ಈಡೇರಿಲ್ಲ. ಅಪನಗದೀಕರಣ ಜಾರಿಯ ಆರಂಭದಲ್ಲಿಯೇ ಎಡವಿದ ಸರ್ಕಾರವು ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಉಮೇದಿನಿಂದ ದೇಶದಲ್ಲಿ ನಗದು ಹರಿವನ್ನು ನಿಯಂತ್ರಿಸುವ, ಡಿಜಿಟಲ್ ಆರ್ಥಿಕತೆ ತರುವ ಹೊಸ ಹೊಸ ಕನಸುಗಳನ್ನು ಬಿತ್ತಿತ್ತು.
ಇಡೀ ದೇಶದಲ್ಲಿ ನಗದು ಕೊರತೆಯುಂಟಾಗಿ ಜನರ ಬದುಕು ಬರ್ಬರವಾಗಿತ್ತು. ಬ್ಯಾಂಕಿಂಗ್ ವ್ಯವಸ್ಥೆ ಹಲವು ತಿಂಗಳ ಕಾಲ ಬರೀ ರದ್ದಾದ ನಗದು ಸಂಗ್ರಹಿಸುವಷ್ಟಕ್ಕೆ ಸೀಮಿತಗೊಂಡಿತು. ನಗದಿಗಾಗಿ ಸಾಲುಗಟ್ಟಿನಿಂತ ನೂರಾರು ಅಮಾಯಕ ಭಾರತೀಯರು ಪ್ರಾಣ ತೆತ್ತರು. ಅದೆಷ್ಟೋ ಪೋಷಕರು ತಮ್ಮ ಮಕ್ಕಳ ಮದುವೆ ಮಾಡಲಾಗದೇ ಅಸಹಾಯಕರಾಗಿ ಆತ್ಮಹತ್ಯೆಗೆ ಶರಣಾದರು. ಆರ್ಥಿಕ ವ್ಯವಸ್ಥೆ ಎಷ್ಟು ಅಧ್ವಾನವಾಗಿತ್ತೆಂದರೆ, ಅಪನಗದೀಕರಣದ ನೂರು ದಿನಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಮತ್ತು ಆರ್ಬಿಐ ನಗದು ಸಾಗಣೆ, ಹಂಚಿಕೆ ವಿತರಣೆ, ನಗದು ಮಿತಿ ಇತ್ಯಾದಿಗಳ ಹೆಸರಿನಲ್ಲಿ ನೂರಕ್ಕೂ ಹೆಚ್ಚು ನಿಯಮಗಳನ್ನು ಜಾರಿಗೆ ತಂದು, ಮಾರ್ಪಾಡು ಮಾಡಿದ್ದವು.
ಆಗ ಮುಚ್ಚಿದ ಅದೆಷ್ಟೋ ಬೀದಿಬದಿಯ ಪೆಟ್ಟಿಗೆ ಅಂಗಡಿಗಳು ಇನ್ನೂ ಬಾಗಿಲನ್ನೇ ತೆಗೆದಿಲ್ಲ. ಅದೆಷ್ಟೋ ದರ್ಶಿನಿ ಮಾದರಿಯ ಪುಟ್ಟಪುಟ್ಟ ಹೋಟೆಲ್ ಗಳು ಬಾಗಿಲು ತೆಗೆದಿಲ್ಲ. ಕೂಲಿ ಕೆಲಸ ಕಳೆದುಕೊಂಡು ಹುಟ್ಟೂರಿಗೆ ಹೋದವರು ವಾಪಾಸು ಬಂದಿಲ್ಲ. ಅಪನಗದೀಕರಣದಿಂದಾದ ಅಲ್ಪಕಾಲೀನ ಅನಾಹುತಗಳು ಮತ್ತು ನಷ್ಟಗಳ ಮಾಹಿತಿಯನ್ನು ಸರ್ಕಾರದಲ್ಲಿ ಸ್ಥಾನಮಾನ ಪಡೆದ ಆರ್ಥಿಕತಜ್ಞರು ತಿರುಚಿದರು. ಬೃಹತ್ ಪ್ರಮಾಣದ ಸುದ್ಧಿರೂಪದ ಜಾಹಿರಾತು ಪಡೆಯುತ್ತಿರುವ ಮಾಧ್ಯಮಗಳೂ ತಿರುಚಿದವು. ಅಪನಗದೀಕರಣದ ಮಧ್ಯಮ ಮತ್ತು ದೀರ್ಘ ಕಾಲೀನ ಪರಿಣಾಮಗಳ ಬಗ್ಗೆ ವಿಶ್ಲೇಷಿಸುವ ಹೊತ್ತಿಗೆ ಕೊರೊನಾ ಅಪ್ಪಳಿಸಿತು. ಇಡೀ ದೇಶದ ಆರ್ಥಿಕ ಸಂಕಷ್ಟವನ್ನೆಲ್ಲ ಕೊರೊನಾ ಹೆಗಲಿಗೇರಿಸಿದ ಕೇಂದ್ರ ಸರ್ಕಾರ ಈಗ ಬೆಲೆ ಏರಿಕೆಯ ಮೂಲಕ ಸುಲಿಗೆ ಮಾಡುತ್ತಿದೆ.
ಅಪನಗದೀಕರಣ ಜಾರಿ ಮಾಡುವ ಅಗತ್ಯವೇ ಇರಲಿಲ್ಲ ಎಂಬ ಸತ್ಯ ಇಡೀ ದೇಶದ ಜನತೆಗೆ ಅರಿವಾದರೂ ಆಡಳಿತಾರೂಢರು ಮಾತ್ರ ತಾವು ಮಾಡಿದ್ದೇ ಸರಿ ಎಂಬಂತೆ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾ ಭಂಡತನ ಪ್ರದರ್ಶಿಸುತ್ತಿದ್ದಾರೆ.
ಜಿಡಿಪಿ ಶೇ.2 ರಷ್ಟು ಕುಸಿತ ಕಂಡಿದ್ದರಿಂದಾಗಿ ದೇಶದ ಒಟ್ಟಾರೆ ಆರ್ಥಿಕ ನಷ್ಟವು ವಾರ್ಷಿಕ ಮೂರು ಲಕ್ಷ ಕೋಟಿ ರುಪಾಯಿಗಳು. ಈ ಐದು ವರ್ಷಗಳ ಅವಧಿಯಲ್ಲಿ ಆರ್ಥಿಕತೆಯು ಅಪನಗದೀಕರಣಪೂರ್ವ ಮಟ್ಟಕ್ಕೆ ಏರಿಲ್ಲವಾದ್ದರಿಂದ ಪ್ರತಿ ವರ್ಷವೂ ಆಜುಬಾಜು 2.5- 3.5 ಲಕ್ಷ ಕೋಟಿ ರುಪಾಯಿಗಳಷ್ಟು ನಷ್ಟವಾಗುತ್ತಲೇ ಇದೆ. ಅಂದರೆ, ಅಪನಗದೀಕರಣದಿಂದ ಇದುವರೆಗೂ ಆಗಿರುವ ನಷ್ಟ 15 ಲಕ್ಷ ಕೋಟಿ ರುಪಾಯಿಗಳು.
ಈ ನಷ್ಟವನ್ನೆಲ್ಲ ತುಂಬಿಕೊಳ್ಳಲು ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿನ ಹೆಚ್ಚುವರಿ ಲಾಭಾಂಶ, ನವರತ್ನ ಕಂಪನಿಗಳು, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ಹೆಚ್ಚುವರಿ ಲಾಭಾಂಶ ಪಡೆಯುತ್ತಿದೆ. ಜತೆಗೆ ಸಾರ್ವಜನಿಕ ವಲಯದ ಉದ್ಯಮಗಳನ್ನು ಪೂರ್ಣವಾಗಿ ಅಥವಾ ಭಾಗಷಃ ಮಾರಾಟ ಮಾಡಲಾಗುತ್ತಿದೆ. ಸರ್ಕಾರದ ಆರ್ಥಿಕ ನಿರ್ವಹಣೆ ಎಷ್ಟರ ಮಟ್ಟಿಗೆ ಕುಸಿದಿದೆ ಎಂದರೆ, ವಿತ್ತೀಯ ಕೊರತೆ ಪ್ರಮಾಣ ತಗ್ಗಿಸುವ ಹೆಸರಿನಲ್ಲಿ ರೈಲುಮಾರ್ಗಗಳು, ವಿಮಾನ ನಿಲ್ದಾಣಗಳನ್ನು ಮಾರಾಟ ಮಾಡಲಾಗುತ್ತಿದೆ.
ವಾಸ್ತವಿಕ ಮತ್ತು ದುಖಃದ ಸಂಗತಿ ಎಂದರೆ ಅಪನಗದೀಕರಣೋತ್ತರ ಭಾರತವು ನಿಧಾನಗತಿಯಲ್ಲಿ ಬಡತನದತ್ತ ಜಾರುತ್ತಿದೆ. ಆಡಳಿತಾರೂಢ ಪಕ್ಷಗಳ ಮುಖಂಡರು ಮತ್ತು ಅವರೊಂದಿಗೆ ಆಪ್ತವಾಗಿರುವ ಉದ್ಯಮಿಗಳ ಸಂಪತ್ತು ಮಾತ್ರ ವೃದ್ಧಿಸುತ್ತಲೇ ಇದೆ.
ದೇಶ ಎಂತಹದೇ ಆರ್ಥಿಕ ವಿಪ್ಲವ ಎದುರಿಸಿದರೂ ಆರ್ಥಿಕ ನಿರ್ವಹಣೆ ಸಮರ್ಥವಾಗಿದ್ದರೆ, ಜನತೆಯ ಆದಾಯ ಮಟ್ಟ ಕುಸಿಯುವುದಿಲ್ಲ. ಈಗ ಜನರ ಆದಾಯ ಕುಗ್ಗುತ್ತಿದೆ, ಆರ್ಥಿಕತೆ ಮಟ್ಟ ಕುಸಿಯುತ್ತಿದೆ. ಬಡತನವೆಂಬ ವಿಷವೃತ್ತ ಹಿಗ್ಗುತ್ತಿದೆ ಎಂದಾದರೆ ಅದಕ್ಕೆ ಸರ್ಕಾರದ ಅಸಮರ್ಥ ಆರ್ಥಿಕ ನಿರ್ವಹಣೆಯೇ ಕಾರಣ. ಐದು ವರ್ಷಗಳ ಹಿಂದೆ ಜಾರಿಗೆ ತಂದ ಅಪನಗದೀಕರಣ ಅಂತಹ ಒಂದು ಅಸಮರ್ಥ ಮತ್ತು ವಿವೇಕಯುತವಲ್ಲದ ನಿರ್ಧಾರ.