ಬೆಂಗಳೂರು ಮತ್ತು ಸುತ್ತಮುತ್ತಲಿನ ನಗರಗಳಿಗೆ ಕುಡಿಯುವ ನೀರು ಸರಬರಾಜು ಉದ್ದೇಶದ ಮೇಕೆದಾಟು ಯೋಜನೆಯನ್ನು ವಿರೋಧಿಸಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ನೇತೃತ್ವದ ಸರ್ವಪಕ್ಷ ನಿಯೋಗ ಕೇಂದ್ರ ಜಲ ಸಂಪನ್ಮೂಲ ಸಚಿವರ ಭೇಟಿಗೆ ಸಜ್ಜಾಗಿದೆ.
ಕಾವೇರಿ ಕೊಳ್ಳದ ಈ ನೀರು ಬಳಕೆಗೆ ಸಂಬಂಧಿಸಿದಂತೆ 2018ರ ಸುಪ್ರೀಂಕೋರ್ಟಿನ ಪರಿಷ್ಕೃತ ತೀರ್ಪಿನ ಪ್ರಕಾರವೇ ತಾನು ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವುದಾಗಿಯೂ, ಆ ಯೋಜನೆಯಡಿ ತನ್ನ ಪಾಲಿನ ನೀರನ್ನು ಮಾತ್ರ ಬಳಸಿಕೊಳ್ಳುವುದಾಗಿಯೂ ಮತ್ತು ತಮಿಳುನಾಡು ಸೇರಿದಂತೆ ಇನ್ನಾವುದೇ ಪಾಲುದಾರ ರಾಜ್ಯಗಳ ನೀರಿನಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿಯೂ ಕರ್ನಾಟಕ ಸರ್ಕಾರ ಮತ್ತೆ ಮತ್ತೆ ಭರವಸೆ ನೀಡುತ್ತಲೇ ಇದೆ. ಆದರೆ, ಕಳೆದ ಹತ್ತು ವರ್ಷಗಳಿಂದ ಈ ಯೋಜನೆಯ ವಿಷಯದಲ್ಲಿ ತಮಿಳುನಾಡು ಪ್ರಬಲ ವಿರೋಧ ವ್ಯಕ್ತಪಡಿಸುತ್ತಲೇ ಇದೆ.
ತಮಿಳುನಾಡು ಗಡಿಗೆ ನಾಲ್ಕು ಕಿ.ಮೀ ಹಿಂದೆ ಮೇಕೆದಾಟುವಿನಲ್ಲಿ ಸುಮಾರು 9 ಸಾವಿರ ಕೋಟಿ ರೂ. ಅಂದಾಜು ವೆಚ್ಚದಲ್ಲಿ 67.1 ಟಿಎಂಸಿ ಅಡಿ ಸಾಮರ್ಥ್ಯದ ಅಣೆಕಟ್ಟು ನಿರ್ಮಾಣ ಮಾಡಿ, 45 ಟಿಎಂಸಿ ಅಡಿ ನೀರನ್ನು ಬೆಂಗಳೂರು ಮತ್ತು ಸುತ್ತಮುತ್ತಲ ನಗರಗಳ ಕುಡಿಯುವ ನೀರಿನ ಕೊರತೆ ನೀಗಿಸುವುದು ಮತ್ತು ಸುಮಾರು 400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಉದ್ದೇಶ ರಾಜ್ಯ ಸರ್ಕಾರದ್ದು. ಜೊತೆಗೆ ಕಾವೇರಿ ಅಂತಿಮ ತೀರ್ಪಿನ ಪ್ರಕಾರ ತಮಿಳುನಾಡಿಗೆ ಪ್ರತಿವರ್ಷ ನೀಡಬೇಕಾದ 404.25 ಟಿಎಂಸಿ ಅಡಿ ನೀರು ನೀಡಲು ಕೂಡ ಈ ಅಣೆಕಟ್ಟು ಪೂರಕವಾಗಿ ಕೆಲಸ ಮಾಡಲಿದೆ. ಈ ಯೋಜನೆಯಿಂದಾಗಿ ಕರ್ನಾಟಕದ ಪಾಲಿನ 284.75 ಟಿಎಂಸಿ ನೀರು ಸದ್ಬಳಕೆಯ ಜೊತೆಗೆ ಕಾವೇರಿನ ನೀರಿನ ಪಾಲುದಾರರ ಪ್ರಮುಖ ರಾಜ್ಯವಾಗಿರುವ ತಮಿಳುನಾಡಿಗೂ ಅಗತ್ಯಪ್ರಮಾಣದ ನೀರನ್ನು, ಸಕಾಲದಲ್ಲಿ ನೀಡಲು ಸಹಕಾರಿಯಾಗುತ್ತದೆ ಎಂಬುದು ಕರ್ನಾಟಕದ ವಾದ.

ಆದರೆ, ಎಂದಿನಂತೆ ಈ ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಇದೀಗ ಯೋಜನೆಯ ಕಾಮಗಾರಿಯಿಂದಾಗಿ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಲಯದ ವಿಭಾಗೀಯ ಪೀಠ ಮಾಧ್ಯಮಗಳ ವರದಿಗಳ ಹಿನ್ನೆಲೆಯಲ್ಲಿ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ದೂರನ್ನು ಇತ್ತೀಚೆಗೆ ವಾಸ್ತವಾಂಶಗಳ ಮನವರಿಕೆಯ ಬಳಿಕ ಕೈಬಿಟ್ಟಿದೆ. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಯೋಜನೆಯ ಕುರಿತ ವಿವರ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿ, ಶೀಘ್ರವೇ ಕಾಮಗಾರಿ ಆರಂಭಿಸುವುದಾಗಿ ಹೇಳಿಕೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತೊಮ್ಮೆ ಯೋಜನೆಯ ವಿರುದ್ಧ ಟೊಂಕ ಕಟ್ಟಿ ನಿಂತಿದೆ.
ಇತ್ತ ಸಿಎಂ ಯಡಿಯೂರಪ್ಪ ಯೋಜನೆಯ ಪ್ರಸ್ತಾಪ ಮಾಡುತ್ತಲೇ ಎಚ್ಚೆತ್ತ ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್, ಜ.7ರಂದೇ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿಯಾಗಿ ಯೋಜನೆ ತಡೆಯುವಂತೆ ಮನವಿ ಮಾಡಿದ್ದರು. ಈಗಾಗಲೇ ಯೋಜನೆಯನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಿದೆ. ಆ ಪ್ರಕರಣದ ವಿಚಾರಣೆ ಪೂರ್ಣಗೊಂಡು ತೀರ್ಪು ಹೊರಬೀಳುವವರೆಗೆ ಕರ್ನಾಟಕ ಯೋಜನೆಯನ್ನು ಕೈಗೆತ್ತಿಕೊಳ್ಳದಂತೆ ಸೂಚನೆ ನೀಡಿ. ಇಲ್ಲವಾದಲ್ಲಿ ಉಭಯ ರಾಜ್ಯಗಳ ನಡುವಿನ ಸಂಘರ್ಷಕ್ಕೆ ಮತ್ತೊಮ್ಮೆ ಈ ಯೋಜನೆ ಕಾರಣವಾಗಬಹುದು ಎಂದು ದೊರೈ ಮುರುಗನ್ ಹೇಳಿದ್ದರು. ಅದರ ಬೆನ್ನಲ್ಲೇ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಸರ್ವಪಕ್ಷ ಸಭೆ ಕರೆದು, ಪ್ರಮುಖ ಮೂರು ತೀರ್ಮಾನಗಳನ್ನು ಕೈಗೊಂಡಿದ್ದರು. ಮೇಕೆದಾಟು ಯೋಜನೆಗೆ ಪಕ್ಷತೀತವಾಗಿ ವಿರೋಧ ವ್ಯಕ್ತಪಡಿಸುವುದು, ಸರ್ವಪಕ್ಷ ನಿಯೋಗ ತೆರಳಿ ಕೇಂದ್ರ ಸಚಿವರ ಮೂಲಕ ಕರ್ನಾಟಕದ ಮೇಲೆ ಒತ್ತಡ ಹೇರುವುದು ಮತ್ತು ಕೇಂದ್ರ ಸರ್ಕಾರದ ಮೇಲೆಯೂ ಒತ್ತಡ ತರುವುದು. ಅಲ್ಲದೆ ಸುಪ್ರೀಂಕೋರ್ಟ್ನಲ್ಲಿ ಆರಂಭಿಸಿರುವ ಕಾನೂನು ಹೋರಾಟವನ್ನು ತೀವ್ರಗೊಳಿಸುವುದು ಎಂಬುದು ಆ ಮೂರು ಪ್ರಮುಖ ತೀರ್ಮಾನ.
ಆ ತೀರ್ಮಾನದ ಬೆನ್ನಲ್ಲೇ ಇದೀಗ, ಗುರುವಾರ ದೆಹಲಿಯಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವ ಶೆಖಾವತ್ ಅವರನ್ನು ಭೇಟಿ ಮಾಡಲು ತಮಿಳುನಾಡಿನ ಸರ್ವಪಕ್ಷ ನಿಯೋಗ ದೆಹಲಿಗೆ ತೆರಳಿದೆ. ಅಲ್ಲಿನ ಡಿಎಂಕೆ ಸರ್ಕಾರದ ಜೊತೆಗೆ ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ಒಟ್ಟು 13 ಪಕ್ಷಗಳು ಮೇಕೆದಾಟು ವಿರೋಧಿಸಿ ಅಲ್ಲಿನ ಸರ್ಕಾರದ ಹೋರಾಟಕ್ಕೆ ಕೈಜೋಡಿಸಿವೆ. ಈ ನಡುವೆ, ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಬಿ ಎಸ್ ಯಡಿಯೂರಪ್ಪ ಅವರ ಪಕ್ಷವಾದ ಬಿಜೆಪಿಯ ತಮಿಳುನಾಡು ಘಟಕದ ನೂತನ ಅಧ್ಯಕ್ಷ ಹಾಗೂ ಕರ್ನಾಟಕ ಕೇಡರ್ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಕೂಡ ಕರ್ನಾಟಕದ ವಿರುದ್ಧ ದನಿ ಎತ್ತಿದ್ದು, ಅಲ್ಲಿನ ಡಿಎಂಕೆ ಸರ್ಕಾರಕ್ಕೆ ಅಣೆಕಟ್ಟು ವಿರೋಧದ ವಿಷಯದಲ್ಲಿ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
ಹಾಗೆ ನೋಡಿದರೆ, ಕಾವೇರಿ ನೀರಿನಲ್ಲಿ ತನ್ನ ಪಾಲಿನ 404.25 ಟಿಎಂಸಿ ನೀರನ್ನು ನ್ಯಾಯಾಲಯದ ತೀರ್ಪಿನಂತೆ ಪಡೆಯುವ ತಮಿಳುನಾಡು, ಆ ನೀರಲ್ಲದೆ, ಯಾವುದೇ ರಾಜ್ಯದ ಅಧೀನಕ್ಕೆ ಒಳಪಡದ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಿಂದ ಹರಿದು ಹೋಗುವ ಸುಮಾರು 80 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಪಡೆಯುತ್ತಿದೆ. ಆದರೆ, ಮೇಕೆದಾಟು ಯೋಜನೆ ಜಾರಿಗೆ ಬಂದು, ಅಣೆಕಟ್ಟು ನಿರ್ಮಾಣವಾದರೆ, ಕಬಿನಿ ಅಣೆಕಟ್ಟು, ಕೆಆರ್ ಎಸ್ ಮತ್ತು ತಮಿಳುನಾಡಿನ ಬಿಲ್ಲಿಗೊಂಡಲು ನಡುವಿನ ಪ್ರದೇಶದಿಂದ ಯಾವ ಲೆಕ್ಕಕ್ಕೂ ಸಿಗದೆ ಅನಾಯಾಸವಾಗಿ ತನಗೆ ಹರಿದುಬರುತ್ತಿದ್ದ ಈ 80 ಟಿಎಂಸಿ ನೀರು ಖೋತಾ ಆಗುತ್ತದೆ ಎಂಬುದು ತಮಿಳುನಾಡಿನ ವಿರೋಧದ ಹಿಂದಿನ ಅಸಲೀ ಸಂಗತಿ. ಆ ಕಾರಣಕ್ಕಾಗಿಯೇ ಆ ರಾಜ್ಯ ಯೋಜನೆಗೆ ಇಷ್ಟೊಂದು ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದೆ. ಅದಕ್ಕಾಗಿ ಕಾವೇರಿ ಅಂತಿಮ ತೀರ್ಪಿನಲ್ಲಿ ಈ ಯೋಜನೆಯ ಪ್ರಸ್ತಾಪವಾಗಿಲ್ಲ ಎಂಬ ಅಂಶವನ್ನೇ ಮುಂದಿಟ್ಟುಕೊಂಡು, ಈ ಯೋಜನೆ ತೀರ್ಪಿನ ಉಲ್ಲಂಘನೆ. ಅದರಿಂದಾಗಿ ತಮಿಳುನಾಡಿನ ಪಾಲಿನ ನೀರು ಖೋತಾ ಆಗಲಿದೆ ಎಂದು ತಮಿಳುನಾಡು ಕಾನೂನು ಹೋರಾಟದ ಜೊತೆಗೆ ರಾಜಕೀಯ ಒತ್ತಡ ಹಾಕುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ.

ಈ ನಡುವೆ ಕಾವೇರಿ ಪಾಲುದಾರ ರಾಜ್ಯಗಳಲ್ಲಿ ಒಂದಾದ ಪಾಂಡಿಚೇರಿ ಕೂಡ ಇದೀಗ ಮೇಕೆದಾಟು ಯೋಜನೆಯ ವಿರುದ್ಧ ದನಿ ಎತ್ತಿದ್ದು, ಇದು ಕಾವೇರಿ ತೀರ್ಪಿಗೆ ವಿರುದ್ಧ ಮತ್ತು ತನ್ನ ಪಾಲಿನ ನೀರಿನಲ್ಲಿ ಖೋತಾ ಆಗಲಿದೆ ಎಂದು ಹೇಳಿದೆ.
ಈ ನಡುವೆ ಕರ್ನಾಟಕ ಸರ್ಕಾರ, ಕಾವೇರಿ ತೀರ್ಪಿನ ಉಲ್ಲಂಘನೆಯ ಪ್ರಶ್ನೆಯೇ ಇಲ್ಲ. ತೀರ್ಪಿನ ಅನ್ವಯ ರಾಜ್ಯದ ಪಾಲಿನ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಲೆಂದೇ ಈ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಈ ಯೋಜನೆ ಕುರಿತು ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸಿ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದಿದೆ.
ಆದರೆ, ಯೋಜನೆಯ ವಿಷಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಪತ್ರ ಬರೆದು ಅನಗತ್ಯವಾಗಿ ವಿವಾದವನ್ನು ಮೈಮೇಲೆ ಎಳೆದುಕೊಂಡರು. ಪತ್ರ ಬರೆಯದೇ, ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿದ್ದರೆ, ಈ ವಿಷಯ ತಮಿಳುನಾಡಿನಲ್ಲಿ ರಾಜಕೀಯ ಪ್ರತಿಷ್ಠೆಯ ವಿಷಯವಾಗುವ ಅಪಾಯ ಎದುರಾಗುತ್ತಿರಲಿಲ್ಲ. ಯಡಿಯೂರಪ್ಪ ಈ ಹಿಂದೆಯೂ 2008-09ರಲ್ಲಿ ಅಂದಿನ ಡಿಎಂಕೆ ಸಿಎಂ ಕರುಣಾನಿಧಿಯವರಿಗೆ ನೇರ ಪತ್ರಬರೆದು ‘ಚಿನ್ನತಂಬಿ’ ವರಸೆಯಲ್ಲಿ ವಿವಾದ ಬಗೆಹರಿಸಲು ಮುಂದಾಗಿದ್ದರು. ಆಗಲೂ ಅವರ ಲೆಕ್ಕಾಚಾರಗಳು ತಲೆಕೆಳಗಾಗಿದ್ದವು. ಈ ಬಾರಿ ಕೂಡ ಮತ್ತದೇ ಯಡವಟ್ಟು ಮಾಡಿಕೊಂಡಿದ್ದಾರೆ. ಪತ್ರ ಬರೆಯದೇ ಇದ್ದಿದ್ದರೆ, ಈ ವಿಷಯ ತಮಿಳುನಾಡು ರಾಜಕೀಯ ಪಕ್ಷಗಳ ನಡುವೆ ಮತ ಬ್ಯಾಂಕ್ ಉಳಿಸಿಕೊಳ್ಳುವ ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿ ಬೆಳೆಯುತ್ತಲೇ ಇರಲಿಲ್ಲ. ಇದೀಗ ಎಲ್ಲವೂ ಕೈಮೀರಿ ಹೋಗಿದೆ. ಈ ನಡುವೆ ತಮಿಳುನಾಡಿನಲ್ಲಿ ಯೋಜನೆ ವಿರುದ್ಧ ಅಲ್ಲಿನ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ಘೋಷಿಸಿರುವ ಕಾಂಗ್ರೆಸ್, ರಾಜ್ಯದಲ್ಲಿ ಸಿಎಂ ಅವರಿಗೆ ಯೋಜನೆಯ ಪರ ಬೆಂಬಲ ಘೋಷಿಸಿದ್ದು, ಕೂಡಲೇ ಸರ್ವಪಕ್ಷ ಸಭೆ ಕರೆದು ತಮಿಳುನಾಡು ವಿರುದ್ಧ ಕಾನೂನು ಹೋರಾಟ ಮತ್ತಿತರ ವಿಷಯಗಳ ಚರ್ಚೆಗೆ ಆಗ್ರಹಿಸಿದೆ. ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಇಬ್ಬಂದಿತನ ಇದು.

ಈ ನಡುವೆ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದು ಕರ್ನಾಟಕದ ಪಾಲಿಗೆ ವರವಾಗುವುದೇ, ಅಥವಾ ಮತ್ತೊಮ್ಮೆ ಶಾಪವಾಗುವುದೇ ಎಂಬುದಕ್ಕೂ ಈ ವಿವಾದ ಸಾಕ್ಷಿಯಾಗಲಿದೆ. ಆದರೆ, ಸ್ಟಾಲಿನ್ ಮತ್ತು ಅವರ ಡಿಎಂಕೆ, ಈಗಾಗಲೇ ಹಲವು ವಿಷಯಗಳಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿಯವರ ಆಡಳಿತದ ವಿರುದ್ಧ ಸೆಡ್ಡು ಹೊಡೆದಿರುವುದರಿಂದ ಕೇಂದ್ರ ಸರ್ಕಾರ, ಕರ್ನಾಟಕದ ಪರ ವಕಾಲತು ವಹಿಸಿದರೆ, ಅನುಕೂಲಕ್ಕಿಂತ ಅಪಾಯವೇ ಹೆಚ್ಚಾಗುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು.
ಆ ಎಲ್ಲಾ ಹಿನ್ನೆಲೆಯಲ್ಲಿ ನೋಡಿದರೆ, ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಮೇಕೆದಾಟು ವಿಷಯದಲ್ಲಿ ಚಾಣಾಕ್ಷ ಹೆಜ್ಜೆ ಇಡುವಲ್ಲಿ ಎಡವಿದೆ. ಧಾವಂತದಲ್ಲಿ ಮತ್ತು ತೀರಾ ಹುಂಬ ವಿಶ್ವಾಸದಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೆ ಪತ್ರ ಬರೆದು ವಿವಾದ ಕಗ್ಗಂಟಿನ ಸ್ವರೂಪ ಪಡೆಯಲು ಪರೋಕ್ಷವಾಗಿ ತಾನೇ ಕಾರಣವಾಗಿದೆ. ಇದು ಒಂದು ರೀತಿಯಲ್ಲಿ ಅಗಣಿ ತೆಗೆಯಲು ಹೋಗಿ ಬಾಗಿಲನ್ನೇ ಮೈಮೇಲೆ ಕೆಡವಿಕೊಂಡಂತಹ ಕಥೆ ಎಂಬ ಮಾತುಗಳು ಕೇಳಿಬರುತ್ತಿವೆ.