
ಕರ್ನಾಟಕದ ಏಕೀಕರಣ-ಕನ್ನಡದ ವಿಕಾಸಕ್ಕಾಗಿ ಬದುಕು ಸಮರ್ಪಿಸಿದ ಪಾಟೀಲ್ ಪುಟ್ಟಪ್ಪ
(ಕರ್ನಾಟಕ ಏಕೀಕರಣ ಟ್ರಸ್ಟ್ (ರಿ) ಮೈಸೂರು ದಿನಾಂಕ 6-9-2025 ರಂದು ನೃಪತುಂಗ ಕನ್ನಡ ಶಾಲೆಯಲ್ಲಿ ಆಯೋಜಿಸಿದ್ದ ಏಕೀಕರಣ ಹೋರಾಟಗಾರರ ಜೀವನ ಪರಿಚಯ ಸರಣಿ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನಾ ಭಾಷಣ- ಲೇಖನ ರೂಪ)
ಭಾಗ 2
ಸಾಹಿತಿಯಾಗಿ ಪಾಪು
· ನಮ್ಮ ದೇಶ ನಮ್ಮ ಜನ
· ನನ್ನದು ಈ ಕನ್ನಡ ನಾಡು
· ಕರ್ನಾಟಕದ ಕಥೆ
· ಪಾಪು ಪ್ರಪಂಚ
· ಶಿಲಾಬಾಲಿಕೆ ನುಡಿದಳು ಕಥಾಸಂಕಲನ
· ಗವಾಕ್ಷ ತೆರೆಯಿತು
· ಸಾವಿನ ಮೇಜವಾನಿ
· ಸರ್ ಸಿದ್ದಪ್ಪ ಕಂಬಳಿ, ಹೊಸಮನಿ ಸಿದ್ದಪ್ಪನವರು- ಜೀವನ ಚರಿತ್ರೆ ;
· ನನ್ನೂರು ಈ ನಾಡು,
· ಹೊಸದನ್ನ ಕಟ್ಟೋಣ,
· ಬದುಕುವ ಮಾತು-ಪ್ರಬಂಧ ಸಂಕಲನಗಳು
ಈ ಕೃತಿಗಳನ್ನು ರಚಿಸಿದ ಪಾಪು ಅವರ ಬರಹ ಲೋಕ ಅವರ ವ್ಯಕ್ತಿತ್ವದಷ್ಟೇ ವೈವಿಧ್ಯಮಯ ಮತ್ತು ಗಂಭೀರ. ಕನ್ನಡ ಭಾಷೆ ಮತ್ತು ಕರ್ನಾಟಕದ ಬೆಳವಣಿಗೆಗಳನ್ನು ಕುರಿತ ಅವರ ಬರಹಗಳು ಕವಿರಾಜಮಾರ್ಗದಿಂದ 21ನೆ ಶತಮಾನದವರೆಗೂ ಕನ್ನಡಿಗರ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ-ಭಾಷಿಕ ಜೀವನವನ್ನು ಪರಿಚಯಿಸುತ್ತವೆ.
1930 ರಲ್ಲಿ `ನಹಿ ರಖನಾ ನಹಿ ರಖನಾ ಅಂಗ್ರೇಜ್ ಸರಕಾರ’ ಎಂದು ಹೇಳುತ್ತಾ ಮದ್ಯದ ಅಂಗಡಿಗಳ ಮುಂದೆ ಪಿಕೆಟಿಂಗ್ ಮಾಡಿದ್ದು, ಜವಾಹರಲಾಲ್ ನೆಹರೂ ಹುಬ್ಬಳ್ಳಿಗೆ ಬಂದಾಗ ಅವರನ್ನು ನೋಡಿ ಪ್ರಭಾವಿತರಾದದ್ದು. 1930 ರಿಂದ ಸಂಪೂರ್ಣ ಖಾದಿ ಧಾರಣೆ. 1934 ರಲ್ಲಿ ಮಹಾತ್ಮ ಗಾಂಧೀಜಿ ಹರಿಜನ ಪ್ರವಾಸ ಕೈಕೊಂಡು ಬ್ಯಾಡಗಿಗೆ ಬಂದಾಗ ಸ್ವಯಂ ಸೇವಕನಾಗಿದ್ದಾಗ ಅವರಿಂದ ಬೆನ್ನು ತಟ್ಟಿಸಿಕೊಂಡ ಅನುಭವ ಪಾಟೀಲ್ ಪುಟ್ಟಪ್ಪ ಅವರಿಗಿದೆ. 1937 ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.
ಏಕೀಕರಣ-ಕನ್ನಡ ಚಳುವಳಿಯಲ್ಲಿ ಪಾಪು
ದಾವಣಗೆರೆಯಲ್ಲಿ ಕನ್ನಡಿಗರ ಪ್ರಥಮ ಮಹಾಧಿವೇಶನ ಕೂಡಿಸುವ ಕಾರ್ಯ ಮಾಡಿದ ಇವರು, ಕಾರ್ಯದರ್ಶಿಯಾಗಿ ಮಹಾಧಿವೇಶನ ಕೆಲಸ ಮಾಡಿದ್ದರು. 1946 ಆಗಸ್ಟ್ನಲ್ಲಿ ಮುಂಬಯಿ ಮಂತ್ರಿ ಎಂ. ಪಿ. ಪಾಟೀಲರು ಅಧ್ಯಕ್ಷರಾಗಿದ್ದರು. ಮದ್ರಾಸ್ ಪ್ರಾಂತ್ಯದ ಮಂತ್ರಿ ಕೆ. ಆರ್. ಕಾರಂತರು ಉದ್ಘಾಟಕರಾಗಿದ್ದರು.

1949ರ ಆರಂಭದಲ್ಲಿ ಕಲ್ಬುರ್ಗಿಯಲ್ಲಿ ಕರ್ನಾಟಕ ಏಕೀಕರಣ ಪರಿಷತ್ತು ಮೈಸೂರು ಸಹಿತ ಕರ್ನಾಟಕವಾಗಬೇಕೆಂದು ಪಾಟೀಲ ಪುಟ್ಟಪ್ಪ ಮಂಡಿಸಿದ ಗೊತ್ತುವಳಿ ಕೋ. ಚೆನ್ನಬಸಪ್ಪನವರ ಅನುಮೋದನೆ ಪಡೆದು ಸ್ವೀಕೃತವಾಯಿತು. 1949 ರ ಕೊನೆಯಲ್ಲಿ ಪತ್ರಿಕೋದ್ಯಮ ಅಭ್ಯಾಸಕ್ಕಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಪ್ರಯಾಣ ಮಾಡಿದ ಪಾಟೀಲರು, ಅಮೆರಿಕದಲ್ಲಿ ವಿಲ್ ಡುರ್ಯಾಂಟ್, ರಾಬರ್ಟ್ ಹಚಿನ್ಸ್, ಜಸ್ಟೀಸ್ ಫ್ರ್ಯಾಂಕ್ ಫರ್ಟರ್, ಐನ್‍ಸ್ಟಾಯಿನ್ ಮೊದಲಾದವರನ್ನು ಭೇಟಿ ಮಾಡಿ ಪತ್ರಿಕೋದ್ಯಮದ ಆಳ ಅಗಲವನ್ನು ತಿಳಿದರು. ಅಧ್ಯಯನ ಮುಗಿಸಿ ಹೊರ ಬರುವಾಗ ಹಡಗಿನಲ್ಲಿ ಸರ್ ಎಂಥನೀ ಈಡನ್‍ರ ಸಂದರ್ಶನ ಮಾಡಿ ಗಮನ ಸೆಳೆದರು.
1982 ರಲ್ಲಿ ಗೋಕಾಕ್ ವರದಿಯ ಬಗ್ಗೆ ನಡೆದ ಹೋರಾಟದಲ್ಲಿ ನಾಯಕತ್ವ ವಹಿಸಿ ರಾಜ್ಯವ್ಯಾಪಿ ಹೋರಾಟ ಮಾಡಿದ್ದರು. ಆಂದೋಲನ, ಸಂಘಟನೆ ಮೂಲಕ ಗೋಕಾಕ್ ವರದಿಯನ್ನು ಸರ್ಕಾರ ಒಪ್ಪುವಂತೆ ಮಾಡಿದ್ದರು. 1985 ರಲ್ಲಿ ಕರ್ನಾಟಕ ಸರಕಾರವು ಕನ್ನಡ ಕಾವಲು ಹಾಗೂ ಗಡಿ ಸಲಹಾ ಸಮಿತಿಯನ್ನು ಸಮಿತಿ ರಚಿಸಿ, ಇವರನ್ನೇ ಅಧ್ಯಕ್ಷರನ್ನಾಗಿ ಮಾಡಿತ್ತು. ಈ ಸಂದರ್ಭದಲ್ಲಿ ಅವರು ಕಚೇರಿಗಳಲ್ಲಿ ಕನ್ನಡ ತರುವ ಪ್ರಯತ್ನ ಮಾಡಿ ಭಾರೀ ಯಶಸ್ಸು ಕಂಡಿದ್ದರು ಎಂಬುದು ಗಮನಾರ್ಹ.
ಏಕೀಕರಣ ಚಳುವಳಿಯಲ್ಲಿ ಆರಂಭದಿಂದಲೂ ಮುಂಚೂಣಿಯಲ್ಲಿದ್ದ ಪಾಪು ನೇರ ನಿಷ್ಠುರ ನುಡಿಗೆ ಹೆಸರಾದವರು. ತಮ್ಮ ಚಳುವಳಿಯುದ್ದಕ್ಕೂ ಅನೇಕ ತೊಡಕುಗಳನ್ನು ಎದುರಿಸಿದ್ದೂ ಉಂಟು. ಕರ್ನಾಟಕ ಏಕೀಕರಣ ಚಳುವಳಿಯ ರೂವಾರಿಗಳಲ್ಲಿ ಒಬ್ಬರು ಎನ್ನಬಹುದಾದ ಪಾಪು, ಕರ್ನಾಟಕ ಪದವನ್ನು ಮೊದಲು ಬಳಸಿದವರು ಅಲೂರು ವೆಂಕಟರಾಯರು ಅಲ್ಲ, ಶಾಂತಕವಿ ಕಾವ್ಯನಾಮದ ಸಕ್ಕರಿ ಬಾಳಾಚಾರ್ಯ ಅವರು ರಕ್ಷಿಸು ಕರ್ನಾಟಕದ ದೇವಿ ಎಂಬ ಹಾಡು ಬರೆದದ್ದನ್ನು ಉಲ್ಲೇಖಿಸುತ್ತಾರೆ. 1890ರಲ್ಲಿ ಸ್ಥಾಪನೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಕರು ಇದೇ ಶಾಂತಕವಿ ಅವರು.
1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿ ಗಾಂಧಿ ಪಾಲ್ಗೊಂಡಿದ್ದರು, ಇದಕ್ಕೂ ಮುನ್ನ ಸಿದ್ಧಪ್ಪ ಕಂಬಳಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಏಕೀಕರಣ ಪರಿಷತ್ ಅಧಿವೇಶನವೂ ನಡೆದಿದ್ದನ್ನು ಪಾಪು ಸ್ಮರಿಸುತ್ತಾರೆ. ಕರ್ನಾಟಕ ಆಗಬೇಕೆನ್ನುವವರಿಗೂ ಎಷ್ಟು ಪ್ರದೇಶವನ್ನು ಒಳಗೊಂಡಿರಬೇಕು ಎಂಬ ಸ್ಪಷ್ಟ ಕಲ್ಪನೆ ಇಲ್ಲದಿದ್ದುದನ್ನು ಉಲ್ಲೇಖಿಸುವ ಪಾಪು, ಆಲೂರು ಅವರೂ ಈ ವಿಚಾರದಲ್ಲಿ ಏನನ್ನೂ ಹೇಳದಿದ್ದರೂ ಅವರಿಗೆ ಕರ್ನಾಟಕ ಕುಲಪುರೋಹಿತ ಎಂಬ ಬಿರುದು ಯಾರು ಕೊಟ್ಟರು, ಏಕೆ ಎಲ್ಲಿ ಯಾವಾಗ ಕೊಟ್ಟರು ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ. ಪಾಪು ಇದನ್ನು ಲಿಖಿತವಾಗಿ ದಾಖಲಿಸುತ್ತಾರೆ. ಇದು ಅವರ ದಿಟ್ಟ , ನಿರ್ಭಿಡೆಯ ಗುಣಕ್ಕೆ ಒಂದು ನಿದರ್ಶನ ಎನ್ನಬಹುದು. ತಮಗನ್ನಿಸಿದ್ದನ್ನು, ವಸ್ತುನಿಷ್ಠವಾಗಿ, ನೇರವಾಗಿ ನುಡಿಯುವ ಅವರ ಗುಣವೇ ಅವರ ವ್ಯಕ್ತಿತ್ವದ ಲಕ್ಷಣವೂ ಆಗಿತ್ತು.

1946ರಲ್ಲಿ ನಿಜಲಿಂಗಪ್ಪ ಅವರು ಮೈಸೂರು ಸಂಸ್ಥಾನದಿಂದ ಹೊರಬಂದು ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಏಕೀಕರಣದ ಕಲ್ಪನೆಗೆ ಹೊಸ ದನಿ ಬಂದಿದ್ದನ್ನು ಸ್ಮರಿಸುತ್ತಾರೆ. ಮೈಸೂರು ಪ್ರಾಂತ್ಯದ ಬಹುತೇಕ ನಾಯಕರು ಏಕೀಕರಣದ ಪರವಾಗಿ ಇರಲಿಲ್ಲ ಎನ್ನುವುದನ್ನೂ ಖಾರವಾಗಿಯೇ ಪ್ರಸ್ತಾಪಿಸುವ ಪಾಪು, ಕೆಂಗಲ್ ಹನುಮಂತಯ್ಯ ಅವರೊಬ್ಬರೆ ಅಪವಾದವಾಗಿದ್ದರು ಎಂದು ನೆನೆಯುತ್ತಾರೆ. 1948ರಲ್ಲಿ ಏಕೀಕರಣದ ಸಲುವಾಗಿ ಮೈಸೂರಿಗರ ಮನಸ್ಸು ಬದಲಿಸುವ ಸಲುವಾಗಿ ಕನ್ನಡ ಯುವಜನ ಸಮ್ಮೇಳನ ದಾವಣಗೆರೆಯಲ್ಲಿ ಆಯೋಜಿಸಲಾಗಿತ್ತು.ಇದು ಪಾಪು ಅವರ ಏಕೀಕರಣ ಹೋರಾಟದ ಪ್ರಾರಂಭಿಕ ಹೆಜ್ಜೆ ಎನ್ನಬಹುದು.
1937ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಪಾಪು ಅವರ ಧ್ಯೇಯ ದೇಶದ ಸ್ವಾತಂತ್ರ್ಯ, ಕರ್ನಾಟಕ ಏಕೀಕರಣ ಆಗಿತ್ತು. ತದನಂತರ 1953ರಲ್ಲಿ ಏಪ್ರಿಲ್ ಒಂದರಿಂದ 23ರವರೆಗೆ ಶಂಕರಗೌಡರ ಅವರ ನೇತೃತ್ವದಲ್ಲಿ ನಡೆದ ಉಪವಾಸ ಸತ್ಯಾಗ್ರಹ ಮತ್ತು ಆಗ ರೂಪುಗೊಂಡ ಜನಾಂದೋಲನ ಪಾಪು ಅವರ ಹೋರಾಟದ ಬದುಕಿನ ಪ್ರಮುಖ ಹೆಜ್ಜೆಯಾಗಿತ್ತು. ಈ ನಿರಶನದ ಸುದ್ದಿ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದರೂ ಸ್ಥಳೀಯ ಸಂಯುಕ್ತ ಕರ್ನಾಟಕ ವರದಿ ಮಾಡಲಿಲ್ಲ, ಈ ಸಂದರ್ಭದಲ್ಲಿ ಸಹ ಆಲೂರು ಅವರು ಮುಷ್ಕರದ ಜಾಗಕ್ಕೆ ಬಂದು ಶುಭಾಶಯ ಸಲ್ಲಿಸಲಿಲ್ಲ ಎಂದೂ ಪಾಪು ಆಕ್ಷೇಪಿಸುತ್ತಾರೆ. ಈ ದಿಟ್ಟ ಮನೋಭಾವ ಮತ್ತು ನೇರ ನುಡಿಯೇ ಪಾಪು ಅವರ ಬದುಕಿನುದ್ದಕ್ಕೂ ಗುರುತಿಸಬಹುದಾದ ವಿಶಿಷ್ಟ ಲಕ್ಷಣವಾಗಿತ್ತು.
ನೇರ ನಿಷ್ಠುರ ನುಡಿಯ ಪಾಪು
ಕುವೆಂಪು ಅವರು ಬಾರಿಸು ಕನ್ನಡ ಡಿಂಡಿಮವ ಎಂಬ ಕವಿತೆ ಬರೆದರೂ ಮೈಸೂರಿನಲ್ಲಿ ಯಾರೂ ಏಕೀಕರಣದ ಪರ ಡಿಂಡಿಮ ಬಾರಿಸಲಿಲ್ಲ ಎಂದು ವ್ಯಂಗ್ಯವಾಗಿ ಪಾಪು ಖಂಡಿಸುತ್ತಾರೆ. ಏಕೀಕರಣ ಹೋರಾಟವು 1945 ರಿಂದ 1957ರವರೆಗೆ ಉಗ್ರರೀತಿಯಲ್ಲಿ ನಡೆಯಿತು. ಮೈಸೂರು ಪ್ರಾಂತ್ಯದ ಅನಕೃಮ ಕೀರ್ತನ ಕೇಸರಿ ಶಿವಮೂರ್ತಿ ಶಾಸ್ತ್ರಿ, ಎನ್ ಆರ್ ರುದ್ರಯ್ಯ, ಖಾದ್ರಿ ಶಾಮಣ್ಣ, ಹಾರನಹಳ್ಳಿ ರಾಮಸ್ವಾಮಿ, ಶಾಂತವೇರಿ ಗೋಪಾಲಗೌಡ, ಆರ್ ಎಸ್ ಆರಾಧ್ಯ ಗಾಂಜಿ ವೀರಪ್ಪ, ಬಳ್ಳಾರಿ ಸಿದ್ದಮ್ಮ, ಕೆಂಗಲ್ ಹನುಮಂತಯ್ಯ ಇವರು ಮಾತ್ರ ಏಕೀಕರಣದ ಪರ ಇದ್ದರು ಎಂದು ಪಾಪು ದಾಖಲಿಸುತ್ತಾರೆ.

ಹುಯಿಲಗೋಳು ಅವರ ಉದಯವಾಗಲಿ ಹಾಡನ್ನು ಏಕೀಕೃತ ಕನ್ನಡ ನಾಡನ್ನು ಪ್ರಚೋದಿಸುವ ಗೀತೆ ಎಂದು ಬಣ್ಣಿಸುವ ಪಾಪು, 1956ರ ನವಂಬರ್ ಒಂದರಂದು ಕಾಳಿಂಗರಾವ್ ಇದನ್ನೇ ಹಾಡಿದ್ದನ್ನು ಪ್ರಸ್ತಾಪಿಸುತ್ತಾ, ಇದನ್ನು ಹಿಂದಕ್ಕೆ ತಳ್ಳಿ ಕುವೆಂಪು ಅವರು ತದನಂತರ ರಚಿಸಿದ ಜಯ ಭಾರತ ಜನನಿಯ ಹಾಡನ್ನು ನಾಡಗೀತೆಯನ್ನಾಗಿ ಆಯ್ಕೆ ಮಾಡಿದ್ದನ್ನೂ ನಿಷ್ಠುರವಾಗಿ ಖಂಡಿಸುವ ಪಾಪು ಅದರಲ್ಲಿ ಗಾಂಧಿ ಹೆಸರಿಲ್ಲ,ಒಬ್ಬ ಮಹಿಳೆಯ ಹೆಸರೂ ಇಲ್ಲ ಹಾಗಿದ್ದರೂ ಏಕೆ ಇದು ಆಯ್ಕೆಯಾಯಿತು ಎಂದು ಪ್ರಶ್ನಿಸುತ್ತಾರೆ. ಕುವೆಂಪು ಸುದೈವಿಗಳಾದುದರಿಂದ ಅವರ ಬಗ್ಗೆ ಯಾರೂ ಏನೂ ಮಾತನಾಡುವಂತಿರಲಿಲ್ಲ ಎಂದು ವ್ಯಂಗ್ಯವಾಗಿ ಹೇಳುತ್ತಾರೆ. ಆದರೆ ಈಗಿನ ತಲೆಮಾರು ಗಮನಿಸಬೇಕಿರುವುದು ಪಾಪು ಅವರ ಭಾಷಾ ಸೌಜನ್ಯ ಮತ್ತು ಸಭ್ಯತೆ. ತಮಗೆ ಸರಿ ಎನಿಸಿದ್ದನ್ನು ಹೇಳುವಾಗ, ಮತ್ತೊಬ್ಬರಿಗೆ ನೋವಾಗದಂತೆ ಮಾತನಾಡುವುದು ಭಾಷಾ ಸೌಜನ್ಯದ ಒಂದು ಲಕ್ಷಣ. ಇದನ್ನು ಪಾಪು ಅವರ ವಿಮರ್ಶಾತ್ಮಕ ನುಡಿಗಳಲ್ಲಿ ಗಮನಿಸಬಹುದು. ವರ್ತಮಾನದ ಸಮಾಜವೂ ಇದರಿಂದ ಪಾಠ ಕಲಿಯಬೇಕಿದೆ.
ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಕನ್ನಡದ ತಾಯಿ, ಸಾಹಿತ್ಯ ಪರಿಷತ್ತನ್ನು ಮಗಳು ಎಂದು ಬಣ್ಣಿಸುವ ಪಾಪು, ಬೆಳಗಾವಿಯ ಎಪ್ಪತ್ತನೆಯ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ಆಗ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣ ತಮ್ಮ ಭಾಷಣ ಬೇಗನೆ ಮುಗಿಸಿ ಹೊರಡುವ ತರಾತುರಿಯಲ್ಲಿದ್ದಾಗ, ಅವರು ತುರ್ತು ಇದ್ದರೆ ಹೋಗಲಿ, ನಾನು ಮಾತು ಮೊಟಕುಗೊಳಿಸುವುದಿಲ್ಲ ಎಂದು ಹೇಳಿದ್ದು, ಈ ಕಾಲದಲ್ಲಿ ಊಹಿಸಲಾಗದ ಪ್ರಸಂಗ. ವಿದ್ಯಾವರ್ಧಕ ಸಂಘದೊಂದಿಗೆ ಇದ್ದಂತೆಯೇ ಪಾಪು ಕೊನೆಯ ಉಸಿರಿನವರೆಗೂ ಕನ್ನಡ ಕಾವಲು ಸಮಿತಿಯಲ್ಲೂ ಸಕ್ರಿಯವಾಗಿದ್ದರು. 50 ವರ್ಷಗಳ ಕಾಲ ನಿರಂತರವಾಗಿ ಸಂಸ್ಥೆಯ ಅಧ್ಯಕ್ಷರಾಗಿ ದುಡಿದ ಪಾಪು, ಕರ್ನಾಟಕದ ಯಾವುದೇ ಕನ್ನಡ ಶೈಕ್ಷಣಿಕ-ಸಾಂಸ್ಕೃತಿಕ ಸಂಸ್ಥೆಗಳಿಗೆ ಒಂದು ಮಾದರಿಯನ್ನು ಅಲ್ಲಿ ರೂಪಿಸಿದ್ದಾರೆ.
ಪಾಟೀಲ್ ಪುಟ್ಟಪ್ಪ ಅವರ ಈ ಬಹುಮುಖಿ ವ್ಯಕ್ತಿತ್ವ, ಸಮಾಜಮುಖಿ ಧೋರಣೆ ಮತ್ತು ಕನ್ನಡ ಮುಖಿ ಚಿಂತನಾ ಕ್ರಮಗಳು ಕರ್ನಾಟಕದ ಕನ್ನಡ ಪರ ಸಂಘಟನೆಗಳಿಗೆ ಮತ್ತು ಭವಿಷ್ಯದಲ್ಲಿ ಕನ್ನಡವನ್ನು ಕಾಪಾಡುವ ಜವಾಬ್ದಾರಿ ಇರುವ ಯುವ ತಲೆಮಾರಿಗೆ ಆದರ್ಶಪ್ರಾಯವಾಗಿ ಕಾಣುತ್ತವೆ. ನಮ್ಮನ್ನು ಅಗಲಿ ಹೋದ ಮೇರು ಚಿಂತಕರನ್ನು ಸ್ಮರಿಸುವ ಔಪಚಾರಿಕ ಹುಟ್ಟುಹಬ್ಬ-ಪುಣ್ಯತಿಥಿ ಮುಂತಾದ ಆಚರಣೆಗಳನ್ನೂ ದಾಟಿ, ಅವರ ಬದುಕು, ವ್ಯಕ್ತಿತ್ವ ಮತ್ತು ಆಲೋಚನೆಗಳನ್ನು ಸಮಾಜಕ್ಕೆ ಪರಿಚಯಿಸುವ ತುರ್ತು ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಈ ಉಪನ್ಯಾಸ ಒಂದು ಪುಟ್ಟ ಹೆಜ್ಜೆಯಷ್ಟೇ ಆಗಿದ್ದು, ಪಾಪು ಅವರ ಪೂರ್ಣ ಜೀವನವನ್ನು ಪರಿಚಯಿಸುವುದಿಲ್ಲ ಎಂಬ ಅರಿವಿನೊಂದಿಗೇ, ನನಗೆ ಈ ಅವಕಾಶ ಮಾಡಿಕೊಟ್ಟ ಸುಜಾತಾ ಅಕ್ಕಿ, ಎನ್ ಎಸ್ ಗೋಪಿನಾಥ್ ಮತ್ತು ಕರ್ನಾಟಕ ಏಕೀಕರಣ ಟ್ರಸ್ಟ್‌ನ ಎಲ್ಲ ಸದಸ್ಯರಿಗೂ ನಾನು ಅಭಾರಿ.
(ವಿ.ಸೂ.: ಇದು ನನ್ನ ಸೀಮಿತ ಓದಿನ ವ್ಯಾಪ್ತಿಗೆ ದಕ್ಕಿದ ವಿಚಾರ ಮಂಡನೆ- ಉಪನ್ಯಾಸದ ಲೇಖನ ರೂಪ- ಹಾಗಾಗಿ ಹೆಚ್ಚಿನ ಯಾವುದೇ ಮಾಹಿತಿ-ವಿಚಾರಗಳನ್ನೂ ಇದರಲ್ಲಿ ಸೇರಿಸಲಾಗಿಲ್ಲ.)