ಪೂರ್ವ ಲಡಾಖ್ ಗಡಿಯಿಂದ ಉಭಯ ದೇಶಗಳು ಸೇನೆಯನ್ನು ಹಿಂತೆಗೆಯುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಸಂಬಂಧ ಭಾರತ–ಚೀನಾ ನಡುವೆ ಸುದೀರ್ಘ 16 ಗಂಟೆಗಳ ಕಾಲ 10 ನೇ ಸುತ್ತಿನ ಮಾತುಕತೆ ನಡೆದಿದೆ ಎಂಬ ಮಾಹಿತಿಯನ್ನು ಸೇನಾ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
” ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಬಳಿ ಮೊಲ್ಡೊ ಗಡಿ ಕೇಂದ್ರದ ಬಳಿ ಫೆ.20 ರಂದು (ಶನಿವಾರ) ಬೆಳಿಗ್ಗೆ 10 ಕ್ಕೆ ಪ್ರಾರಂಭವಾದ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ರಾತ್ರಿ 2 ಗಂಟೆ ವರೆಗೆ ಮುಂದುವರೆಯಿತು” ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಾಟ್ ಸ್ಪ್ರಿಂಗ್ಸ್, ಗೋಗ್ರಾ ಹಾಗೂ ಡೆಪ್ಸಾಂಗ್ನಲ್ಲಿ ಸಂಘರ್ಷವನ್ನು ಶಮನಗೊಳಿಸುವ ಕುರಿತು ಚರ್ಚಿಸಲಾಯಿತು ಎಂದು ಮೂಲಗಳು ಹೇಳಿವೆ. ಆದರೆ ಮಾತುಕತೆಯ ಬಗ್ಗೆ ಈ ವರೆಗೂ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಚೀನಾ-ಭಾರತದ ಎತ್ತರದ ಪ್ರದೇಶದಲ್ಲಿರುವ ಪ್ಯಾಂಗಾಂಗ್ ತ್ಸೋದ ಉತ್ತರ ಹಾಗೂ ದಕ್ಷಿಣ ತೀರಗಳಿಂದ ಸೇನಾ ಹಿಂತೆಗೆತ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬೆನ್ನಲ್ಲೇ 10 ನೇ ಸುತ್ತಿನ ಮಾತುಕತೆ ನಡೆದಿದೆ.
ಪ್ರಕ್ಷುಬ್ಧ ಸ್ಥಿತಿಯನ್ನು ತಿಳಿಗೊಳಿಸುವುದಕ್ಕಾಗಿ ಹಾಟ್ ಸ್ಪ್ರಿಂಗ್ಸ್, ಗೋರ್ಗಾ ಹಾಗೂ ಡೆಪ್ಸಾಂಗ್ ಗಳಲ್ಲಿ ವೇಗವಾಗಿ ಸೇನಾ ಹಿಂತೆಗೆತ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯಬೇಕೆಂದು ಭಾರತ ಚೀನಾಗೆ ಸಭೆಯಲ್ಲಿ ಒತ್ತಾಯಿಸಿದೆ.
ಕಳೆದ ಜನವರಿ 24ರಂದು ಪೂರ್ವ ಲಡಾಕ್ ನ ಭಾರತೀಯ ಕುಶುಲ್ ವಲಯದ ಗಡಿ ವಾಸ್ತವ ರೇಖೆಯ ಚೀನಾದ ಭಾಗ ಮೊಲ್ಡೊದಲ್ಲಿಯೇ ಕಳೆದ ಬಾರಿ 9ನೇ ಸುತ್ತಿನ ಮಾತುಕತೆ ನಡೆದಿದ್ದು, ಅದು ನಿರೀಕ್ಷಿತ ಫಲಿತಾಂಶ ನೀಡಿರಲಿಲ್ಲ.