ಮೈಸೂರು: ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು 12 ವರ್ಷಗಳಿಂದ ಗೃಹಬಂಧನದಲ್ಲಿ ಇರಿಸಿರುವ ಪ್ರಕರಣವೊಂದು ಮೈಸೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಎಚ್. ಮಟಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಗೃಹಿಣಿ ಸುಮ ಎಂಬುವವರೇ 12 ವರ್ಷದಿಂದ ಅಜ್ಞಾತವಾಸದಲ್ಲಿದ್ದವರು. ಈಕೆಯ ಪತಿ ಸಣ್ಣಾಲಯ್ಯ ಎಂಬಾತನೇ ಈ ಘಟನೆಯ ಹಿಂದಿನ ರುವಾರಿ.
ಪತ್ನಿಯ ಶೀಲ ಶಂಕಿಸಿ ಪತಿ ಸಣ್ಣಾಲಯ್ಯ ಮನೆ ಬಾಗಿಲಿಗೆ ಮೂರು ಬೀಗ ಹಾಕಿ ಪತ್ನಿ ಸುಮ ಅವರನ್ನು ಬಂಧನದಲ್ಲಿರಿಸಿದ್ದುದು ಗೊತ್ತಾಗಿದೆ. 12ವರ್ಷದ ಹಿಂದೆ ಸುಮಾ ಸಣ್ಣಾಲಯ್ಯನನ್ನು ವಿವಾಹವಾಗಿದ್ದರು. 3ನೇ ಪತ್ನಿ ಸುಮಾಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಪತ್ನಿಯರು ಸಣ್ಣಾಲಯ್ಯನ ಕಾಟದಿಂದ ಬೇಸತ್ತು ಪತಿಯಿಂದ ದೂರಾಗಿದ್ದರು.
ಈ ನಡುವೆ ಪತ್ನಿಯ ಶೀಲ ಶಂಕಿಸಿ ಮನೆಯ ಕಿಟಕಿಗಳನ್ನೂ ಭದ್ರಪಡಿಸಿ ಮನೆಯಿಂದ ಯಾರೊಂದಿಗೂ ಮಾತನಾಡದಂತೆ ಪತಿ ಸಣ್ಣಾಲಯ್ಯ ಎಚ್ಚರ ವಹಿಸಿದ್ದ. ಶೌಚಾಲಯ ಇಲ್ಲದ ಕಾರಣ ಬಕೆಟ್ ಇರಿಸಿ ರಾತ್ರಿ ವೇಳೆ ಮಲ, ಮೂತ್ರವನ್ನ ಪಾಪಿ ಪತಿ ಹೊರಗೆ ಸುರಿಸುತ್ತಿದ್ದ. ವಿಷಯ ತಿಳಿದು ವಕೀಲ ಸಿದ್ದಪ್ಪಾಜಿ ಸಾಂತ್ವನ ಕೇಂದ್ರದ ಜಯಶೀಲ, ಎಎಸ್ ಐ ಸುಭಾನ್ ಇತರರ ತಂಡ ಸುಮಾ ಮನೆಗೆ ಭೇಟಿ ನೀಡಿ ಆಕೆಯನ್ನು ಬಂಧಮುಕ್ತಗೊಳಿಸಿದೆ.
ಈ ಮಧ್ಯೆ ಸಣ್ಣಾಲಯ್ಯ ಘಟನೆ ಕುರಿತು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಈತನ ವರ್ತನೆಯಿಂದ ಗ್ರಾಮಸ್ಥರಲ್ಲೂ ಭಯದ ವಾತಾವರಣ ಉಂಟಾಗಿ ಘಟನೆ ಕುರಿತು ಮಾಹಿತಿ ನೀಡಲು ಗ್ರಾಮಸ್ಥರು ಹಾಗೂ ನೆರೆಹೊರೆಯವರು ಹಿಂಜರಿಯುತ್ತಿದ್ದರು ಎನ್ನಲಾಗಿದೆ. ಈ ಕುರಿತು ಹಲವಾರು ಬಾರಿ ಗ್ರಾಮದಲ್ಲಿ ನ್ಯಾಯ ಪಂಚಾಯ್ತಿ ನಡೆದಿತ್ತಾದರೂ ಸಣ್ಣಾಲಯ್ಯ ತನ್ನ ತಪ್ಪು ತಿದ್ದಿಕೊಳ್ಳದೆ ಚಾಳಿ ಮುಂದುವರೆಸಿದ್ದ. ಈ ನಡುವೆ ಬುಧವಾರ ತಡರಾತ್ರಿ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ರಾತ್ರೋ ರಾತ್ರಿ ಭೇಟಿ ನೀಡಿ ಸುಮಾ ಮತ್ತು ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ. ಮನೆಯ ಬೀಗ ಮತ್ತು ಬಾಗಿಲು ಮುರಿದು ಮಹಿಳೆಯನ್ನು ರಕ್ಷಿಸಿದ್ದು, ಮಹಿಳೆ ಒಪ್ಪಿಗೆಯಂತೆ ತವರು ಮನೆಯಲ್ಲಿ ಆಶ್ರಯ ಕೊಡಿಸಿದ್ದಾರೆ. ಈ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
#Crime #HDKote #Mysore #Husbend #Wife