ಮೊದಲ ಹಾಗೂ ಎರಡನೇ ಅಲೆಯಲ್ಲಿ ಲಸಿಕೆಗೆ ತುಂಬಾ ಡಿಮ್ಯಾಂಡ್ ಜೋರಾಗಿತ್ತು. ಕೊರೊನಾದಿಂದ ಪಾರಾಗಲು ರಾತ್ರಿಯಿಂದಲೇ ಜನರು ಕ್ಯೂ ನಿಂತು ತೆಗೆದುಕೊಳ್ಳುತ್ತಿದ್ದರು. ಬಳಿಕ ಕೊರೋನಾ ಕಮ್ಮಿಯಾಯ್ತು ಅಂತ ಬಹುತೇಕ ಜನರು ಎಡರು ಡೋಸ್ ನಿರ್ಲಕ್ಷ್ಯ ಮಾಡಿದ್ದರು. ಆದರೆ ಅದ್ಯಾವಾಗ ಒಮಿಕ್ರಾನ್ ಚೊಚ್ಚಲ ಕೇಸ್ ಬೆಂಗಳೂರಿನಲ್ಲಿ ಪತ್ತೆಯಾಯಿತೋ ಆ ಕ್ಷಣದಿಂದಲೇ ಬೆಂಗಳೂರು ನಗರದಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಾಗಿದೆ.
ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಬಾಗಿಲಿಗೆ ಹೋಗಿ ಮನವಿ ಮಾಡಿದರೂ ಕೋವಿಡ್–19 ಲಸಿಕೆ ಹಾಕಿಸಿಕೊಳ್ಳಲು ತಾತ್ಸಾರ ತೋರುತ್ತಿದ್ದವರು ಈಗ ಲಸಿಕೆ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಗಳತ್ತ ಮುಗಿಬೀಳುತ್ತಿದ್ದಾರೆ. ಇದು ಕೋವಿಡ್ ರೂಪಾಂತರಿ ಒಮೈಕ್ರಾನ್ ವೈರಾಣು ಸೃಷ್ಟಿಸಿರುವ ಭೀತಿ. ಸೋಂಕಿನಿಂದ ಗರಿಷ್ಠ ಸುರಕ್ಷತೆ ಪಡೆಯಲು ಪ್ರತಿಯೊಬ್ಬರೂ 2 ಡೋಸ್ ಲಸಿಕೆ ಪಡೆಯುವುದು ಅಗತ್ಯ ಎಂದು ತಜ್ಞರು ಹೇಳುತ್ತಾ ಬಂದಿದ್ದರು. ಆದರೆ ಜನರು ಮಾತ್ರ ಉದಾಸಿನ ಮಾಡಿದ್ದರು. ಇದರ ನಡುವೆ ಸರ್ಕಾರದ ಆದೇಶದಂತೆ ಎಲ್ಲಾ ಮಾಲ್, ಶಾಲೆ ಮುಂತಾದ ಕಡೆ ಓಡಾಡ ಬೇಕು ಎಂದರೆ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡಿದ್ದು ಜನರಲ್ಲಿ ಮತ್ತಷ್ಟು ತಳಮಳ ಸೃಷ್ಟಿಸಿತು. ಹಾಗೂ ಓಮಿಕ್ರಾನ್ ಕೂಡ ಕಾಣಿಸಿಕೊಂಡ ಹಿನ್ನೆಲೆ ಲಸಿಕೆ ಹಾಕಿಸಿಕೊಳ್ಳದವರ ನಿದ್ದೆ ಗೆಡಿಸಿದೆ. ಇದುವರೆಗೂ ಒಂದೂ ಡೋಸ್ ಲಸಿಕೆ ತೆಗೆದುಕೊಳ್ಳದವರು ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ.
ಇನ್ನು ದೇಶದಲ್ಲೇ ಒಮಿಕ್ರಾನ್ ಕೇಸ್ ಪತ್ತೆಯಾಗಿದ್ದು ಬೆಂಗಳೂರಲ್ಲಿ, ಹೀಗಾಗಿ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ . ಡಿಸೆಂಬರ್ 2 ಬಳಿಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಡಿಸೆಂಬರ್ 2ರ ನಂತರದ ಒಂಬತ್ತು ದಿನಗಳ ಅವಧಿಯಲ್ಲಿ ನಗರದಲ್ಲಿ ಒಟ್ಟು 5 ಲಕ್ಷಕ್ಕೂ ಅಧಿಕ ಡೋಸ್ ಬಿಬಿಎಂಪಿಯಿಂದ ವಿತರಣೆಯಾಗಿದೆ. ಈ ಪೈಕಿ ಲಸಿಕೆ ಪಡೆಯುವಲ್ಲಿ ಯುವ ಜನರದ್ದೇ ಸಿಂಹಪಾಲು ಆಗಿದ್ದು, ಶೇಕಡಾ 40 ರಷ್ಟು ಮಂದಿ ಯುವಜನರು ಲಸಿಕೆ ಈ ಅವಧಿಯಲ್ಲಿ ಪಡೆದಿದ್ದಾರೆ. ಇನ್ನೂ ಕೆಲವರು ಮಾಲ್ , ಪಾರ್ಕ್ ಹಾಗೂ ಕೆಲಸಕ್ಕೆ ಹೋಗಬೇಕು ಎಂದರೆ ವ್ಯಾಕ್ಸಿನ್ ಬೇಕು ಅಂತ ಪಡೆಯಲು ಮುಂದಾಗಿದ್ದಾರೆ. ಲಸಿಕೆ ಪಡೆಯಲು ಜನರ ಉತ್ಸಾಹ ನೋಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ 390 ಸರ್ಕಾರಿ ಹಾಗೂ 93 ಖಾಸಗಿ ಲಸಿಕಾ ಕೇಂದ್ರಳನ್ನು ಪಾಲಿಕೆ ತೆರೆದಿದೆ.
ಲಸಿಕೆ ಪಡೆಯುವಂತೆ ಉತ್ತೇಜಿಸಲು ನಟರ & ಕ್ರಿಕೆಟಿಗರ ಮೊರೆ ಹೋದ ಬಿಬಿಎಂಪಿ
ಇನ್ನು ಮೊದಲ ಡೋಸ್ ಲಸಿಕೆಯನ್ನು ನಗರದ ಶೇಖಡ 80ಕ್ಕೂ ಅಧಿಕ ಮಂದಿ ಪಡೆದುಕೊಂಡಿದ್ದಾರೆ. ಅದರೆ ಎರಡನೇ ಡೋಸ್ ಲಸಿಕೆ ಇನ್ನೂ ನಿರೀಕ್ಷಿತ ಮಟ್ಟದಲ್ಲಿ ನೀಡಲು ಪಾಲಿಕೆಗೆ ಸಾಧ್ಯವಾಗಿಲ್ಲ. ಇದಕ್ಕೆ ಜನರ ನಿರ್ಲಕ್ಷ್ಯ ಕೂಡ ಒಂದು ಕಾರಣ. ಇದೀಗ ಜನರು ಓಮಿಕ್ರಾನ್ ಭೀತಿಯಿಂದ ಲಸಿಕೆ ಪಡೆಯಲು ಮುಂದೆ ಬಂದಿದ್ದರೂ, ಮತ್ತಷ್ಟು ಜನರನ್ನು ಲಸಿಕೆ ಪಡೆಯುವಂತೆ ಉತ್ತೇಜಿಸಲು ಪಾಲಿಕೆ ಸ್ಯಾಂಡಲ್ವುಡ್ನ ಸ್ಟಾರ್ ನಟರ ಹಾಗೂ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮೊರೆ ಹೋಗಿದೆ. ವ್ಯಾಕ್ಸಿನ್ ತಗೋಳಿ ಜೀವ ಊಳಿಸಿಕೊಳ್ಳಿ, ಮಾಸ್ಕ್ ಧರಿಸಿ .ಸಮಾಜಿಕ ಅಂತರ ಕಾಪಾಡಿಕೊಂಡು ಜೀವ ರಕ್ಷಿಸಿಕೋಳ್ಳಿ, ಎರಡು ಡೋಸ್ ವ್ಯಾಕ್ಸಿನ್ ಪಡೆದು ವೈರಸ್ ನಿಂದ ಮುಕ್ತಿ ಪಡೆಯಿರಿ ಎಂಬ ಉದ್ದೇಶದಿಂದ ವೈರಸ್ ತಡೆಗಟ್ಟಲು ವ್ಯಾಕ್ಸಿನ್ ಒಂದೇ ದಾರಿ ಎಂಬ ಸ್ಲೋಗನ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಪಾಲಿಕೆ ಮುಂದಾಗಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಚ್ಚ ಸುದೀಪ್ ರವರಿಂದ ಜಾಗೃತಿ ಗೆ ಒಪ್ಪಿಗೆ ಬಿಬಿಎಂಪಿ ಪಡೆದಿದೆ. ಇದರ ಜೊತೆಗೆ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಗೂ ಈ ಬಗ್ಗೆ ಮನವಿ ಮಾಡಿಕೊಂಡಿದ್ದು, ಅವರ ಒಪ್ಪಿಗೆಗಾಗಿ ಪಾಲಿಕೆ ಕಾಯುತ್ತಿದೆ.
ಒಟ್ಟಾರೆ ಜನರು ಲಸಿಕೆ ಪಡೆಯಲೇ ಬೇಕು ಎಂಬ ಉದ್ದೇಶ ಹೊಂದಿರುವ ಬಿಬಿಎಂಪಿ ಮೂರನೇ ಅಲೆ ಬಂದರೂ ತೀವ್ರತೆ ಕಡಿಮೆ ಇರಲಿದೆ ಎಂಬ ಲೆಕ್ಕವನ್ನು ಹಾಕಿಕೊಂಡಿದೆ. ಇದರ ನಡುವೆ ಜನರೇ ಸ್ವಯಂ ಪ್ರೇರಿತವಾಗಿ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿದ್ದು, ಒಮಿಕ್ರಾನ್ ಪತ್ತೆಯಾದ ಬಳಿಕ 40% ದಷ್ಟು ಜನರು ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಒಮಿಕ್ರಾನ್ ಹಾಗೂ ಸರ್ಕಾರದ ಎರಡು ಡೋಸ್ ಪಡೆದವರಿಗೆ ಮಾತ್ರ ಎಂಟ್ರಿ ಆದೇಶ ಜನರ ನಿದ್ದೆಗೆಡಿಸಿದ್ದು ಹೀಗಾಗಿ ಜನರು ಲಸಿಕೆ ಪಡೆಯುವತ್ತ ಚಿತ್ತ ಹರಿಸುತ್ತಿದ್ದಾರೆ.