ಕೆದಕಿದಷ್ಟು ಕೆರಳುತ್ತಿರುವ ಬುರ್ಖಾ-ಹಿಜಾಬ್ ವಿವಾದ, ಸಂಘ ಪರಿವಾರ ನಿರ್ದೇಶಿತ ಯೋಜನೆಯಂತೆಯೇ ನಡೆಯುತ್ತಿದೆ. ಆಗಲೇ ಟಿವಿ ಚಾನೆಲ್ ಗಳು ಬೆಂಕಿ, ಭುಗಿಲು, ಕಾಡ್ಗಿಚ್ಚು ಎಂದೆಲ್ಲ ಬೊಬ್ಬಿಡತೊಡಗಿವೆ. ಧರ್ಮದ ಅಫೀಮ್ ತಲೆಗೇರಿಸಿಕೊಂಡ ಒಂದಷ್ಟು ಕಿಡಿಗೇಡಿಗಳು ಹುಟ್ಟು ಹಾಕಿದ ವಿವಾದದ ಕಿಡಿಯನ್ನು ಬೆಂಕಿಯನ್ನಾಗಿಸಿ ರಾಜ್ಯದಾದ್ಯಂತ ಹರಡುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ.
ನನ್ನ ಪ್ರಕಾರ ರಾಜ್ಯ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಲು ಇದೊಂದು ಫಿಟ್ ಕೇಸ್. ಯಾಕೆಂದರೆ ಈ ವಿವಾದ ಹುಟ್ಟಿಕೊಂಡದ್ದೇ, ಸಂವಿಧಾನದ ಉಲ್ಲಂಘನೆಯ ಮೂಲಕ. ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುವುದು ಪ್ರತಿಯೊಂದು ಸರ್ಕಾರದ ಮೂಲಭೂತ ಕರ್ತವ್ಯ. ಅದರಲ್ಲಿ ವಿಫಲವಾದರೆ ಅದು ಸಂವಿಧಾನದ ಉಲ್ಲಂಘನೆಯಲ್ಲದೆ ಮತ್ತೇನು?
ಶಿಕ್ಷಣ ಸಚಿವರಾಗಿರುವ ಬಿಜೆಪಿ ‘ಇಮ್ಮಡಿ ಸಜ್ಜನ’ ಸಚಿವ ಬಿ.ಸಿ.ನಾಗೇಶ್ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಅವರೂ ತಮ್ಮ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಶುರುಮಾಡಿದ್ದಾರೆ. ಸಂವಿಧಾನವನ್ನು ಸಾಕ್ಷಿಯಾಗಿಟ್ಟುಕೊಂಡು ಪ್ರಮಾಣ ಮಾಡಿ ಸಚಿವರಾದ ಇವರ ನಡವಳಿಕೆ ಸಂವಿಧಾನದ ವಿರೋಧಿಯಲ್ಲವೇ?
ಸಂವಿಧಾನದ ಪರಿಚ್ಚೇದ 25ರ ಪ್ರಕಾರ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಯಾವುದೇ ಧರ್ಮವನ್ನು ಸ್ವೀಕರಿಸುವ, ಆಚರಿಸುವ ಮತ್ತು ಪ್ರಸಾರ ಮಾಡುವ ಹಕ್ಕು ಇದೆ. ಧರ್ಮದ ಆಚರಣೆ ಎಂದರೆ ದೇವರ ಪೂಜೆ, ಆರಾಧನೆ ಮಾತ್ರವಲ್ಲ ಧಾರ್ಮಿಕ ಚಿಹ್ನೆ-ಲಾಂಛನಗಳನ್ನು ಧರಿಸುವ ಹಕ್ಕು ಕೂಡಾ ಆಗಿದೆ
ಸಂವಿಧಾನದ ಒಪ್ಪಿಗೆಯ ಹಿನ್ನೆಲೆಯಲ್ಲಿ ನೋಡಿದರೆ ಹಿಜಾಬ್ ಧರಿಸಿ ಶಾಲೆ-ಕಾಲೇಜುಗಳಿಗೆ ಹೋಗುವುದು ಮುಸ್ಲಿಮ್ ವಿದ್ಯಾರ್ಥಿನಿಯರ ಮೂಲಭೂತ ಹಕ್ಕು. ಇದನ್ನೇ ನ್ಯಾಯಾಲಯಗಳು ಕೂಡಾ ಹೇಳಿವೆ. ಕೇರಳ ಹೈಕೋರ್ಟ್ 2015ರಲ್ಲಿಯೇ ಈ ಬಗ್ಗೆ ತೀರ್ಪು ನೀಡಿದೆ.
2015ರಲ್ಲಿ ಕೇರಳದಲ್ಲಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಕೂರಲು ಅವಕಾಶ ನಿರಾಕರಿಸಿದಾಗ ಆಕೆ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಆಗ ಕೇರಳ ಹೈಕೋರ್ಟ್ “ನಿರ್ದಿಷ್ಠವಾದ ವಸ್ತ್ರಸಂಹಿತೆ ಪಾಲಿಸಿದರೆ ಮಾತ್ರ ಪರೀಕ್ಷಾ ಕೊಠಡಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂಬ ಶಿಕ್ಷಣ ಸಂಸ್ಥೆಯ ಷರತ್ತನ್ನು ಒಪ್ಪಲಾಗದು“ಎಂದು ತನ್ನ ಆದೇಶದಲ್ಲಿ ಹೇಳಿತ್ತು.
ಮರು ವರ್ಷ ಇದೇ ಪ್ರಕರಣ ವಿಚಾರಣೆಗೆ ಬಂದಾಗ ಕೇರಳ ಹೈಕೋರ್ಟ್ “…ಕುರಾನ್ ಮತ್ತು ಹದೀಸ್ ಪ್ರಕಾರ ಹಿಜಾಬ್ ಮತ್ತು ತುಂಬುತೋಳಿನ ಉಡುಗೆಯನ್ನು ಮಹಿಳೆಯರು ಧರಿಸಬೇಕಾಗಿರುವುದು ಇಸ್ಲಾಂ ಧರ್ಮದ ಕರ್ತವ್ಯವಾಗಿದೆ. ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶ ಮಾಡಬಹುದಾದರೆ ಆ ವಿದ್ಯಾರ್ಥಿನಿ ಕಾಲೇಜಿನ ತರಗತಿಗಳಿಗೆ ಯಾಕೆ ಹೋಗಬಾರದು ಎಂದು ಕೇಳಿತ್ತು..
ಅದೇ ವರ್ಷ ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅರ್ಜಿದಾರರನ್ನು ‘ ಯಾಕೆ ವಿದ್ಯಾರ್ಥಿನಿಗಳು ಮೂರು ಗಂಟೆಗಳ ಕಾಲ (ಪರೀಕ್ಷಾ ಸಮಯ) ಹಿಜಾಬ್ ತೆಗೆಯಬಾರದು? ಎಂದು ಕೇಳಿ ಅರ್ಜಿಯನ್ನು ಹಿಂದಕ್ಕೆ ಪಡೆಯುವಂತೆ ಅರ್ಜಿದಾರರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.
ಸೇನೆಯಲ್ಲಿ ಸಿಖ್ ಗಳ ಟರ್ಬನ್ ಬಿಟ್ಟರೆ ಬೇರೆ ಯಾವುದೇ ಧರ್ಮಗಳ ಚಿಹ್ನೆ-ಲಾಂಛನಗಳನ್ನು ಧರಿಸುವಂತಿಲ್ಲ. ಇದಕ್ಕಾಗಿ ಸಂಸತ್ ಪ್ರತ್ಯೇಕ ಕಾನೂನನ್ನು ಅಂಗೀಕರಿಸಿದೆ. ಹಿಂದೂ ಧರ್ಮೀಯರು ಕುಂಕುಮ, ಶಿಲುಬೆ, ಬಳೆ, ಕಾಲುಂಗರ, ಮಂಗಳಸೂತ್ರವನ್ನು ಧರಿಸಲು ಇರುವ ಸ್ವಾತಂತ್ರ್ಯ ಮುಸ್ಲಿಮ್ ಮಹಿಳೆಗೆ ಹಿಜಾಬ್-ಬುರ್ಖಾ ಧರಿಸಲು ಇದೆ ಎನ್ನುವುದು ಈಗಿನ ನ್ಯಾಯಾಂಗದ ಅಭಿಪ್ರಾಯವಾಗಿದೆ. ಇದರ ಸರಿ-ತಪ್ಪುಗಳ ವಿಶ್ಲೇಷಣೆ ನಂತರದ್ದು.
ಈಗ ಉಳಿದಿರುವುದು ಒಂದೇ ದಾರಿ ಅದು ನ್ಯಾಯಾಲಯ. ಈ ದೇಶದಲ್ಲಿ ಮನಪರಿವರ್ತನೆಯ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯ ಎನ್ನುವುದು ಅರ್ಧ ಭ್ರಮೆ, ಅದು ಸಾಧ್ಯವಾಗುವುದು ಕಾನೂನಿನ ಮೂಲಕ ಎನ್ನುವುದು ಮತ್ತೆ ಮತ್ತೆ ಸಾಬೀತಾಗಿದೆ. ಸಮಾಜದಲ್ಲಿ ಅಸ್ಪೃಶ್ಯತೆ ಕಡಿಮೆಯಾಗಿದ್ದರೆ ಮುಖ್ಯ ಕಾರಣ ಅಸ್ಪೃಶ್ಯತಾ ವಿರೋಧಿ ಕಾಯಿದೆಯೇ ಹೊರತು ಜನರ ಮನಪರಿವರ್ತನೆ ಅಲ್ಲ ಎನ್ನುವುದು ಕೂಡಾ ಸತ್ಯ. ಬಚ್ಚಿಟ್ಟುಕೊಂಡದ್ದು ಆಗಾಗ ಹೊರಬರುವುದನ್ನು ನಾವು ನೋಡುತ್ತಲೇ ಇದ್ದೇವೆ.
ಈ ಹಿಜಾಬ್ ವಿವಾದಕ್ಕೆ ತೆರೆಎಳೆಯುವ ಶಕ್ತಿ ಮತ್ತು ಅವಕಾಶ ಇರುವುದು ಸಂವಿಧಾನಕ್ಕೆ ಮಾತ್ರ. ಅದು ನ್ಯಾಯಾಲಯದ ಮೂಲಕ ಆಗಬೇಕಾಗಿದೆ. ಈಗಾಗಲೇ ಒಬ್ಬಳು ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾಳೆ. ಶೀಘ್ರವಾಗಿ ಆಕೆಯ ಮೂಲಕ ಹಿಜಾಬ್ ಧರಿಸಿದ ಹೆಣ್ಣುಮಕ್ಕಳಿಗೆಲ್ಲರಿಗೂ ನ್ಯಾಯ ಸಿಗಲಿ ಎಂದು ಹಾರೈಸುತ್ತೇನೆ. ಈ ಕಾನೂನಿನ ಹೋರಾಟಕ್ಕೆ ರಾಜ್ಯದ ಹಿರಿಯ ವಕೀಲರು ಸಹಕಾರ ನೀಡಬೇಕು.
ಮುಸ್ಲಿಮ್ ಹೆಣ್ಣುಮಕ್ಕಳ ಮೇಲಿನ ಪ್ರಾಮಾಣಿಕವಾದ ಕಾಳಜಿಯಿಂದಲೇ ಹಿಜಾಬ್-ಬುರ್ಕಾಗಳನ್ನು ತೆಗೆದಿಡಿ ಎಂದು ಯಾರಾದರೂ ಹೇಳಿದರೆ ನಾನೂ ದನಿಗೂಡಿಸಲು ತಯಾರಿದ್ದೇನೆ.
ಹೌದು, ಇಷ್ಟು ಹೇಳಿದ ಕೂಡಲೇ ನನ್ನ ಕೆಲವು ಮುಸ್ಲಿಮ್ ಮಿತ್ರರು ನನ್ನ ಮೇಲೇರಿ ಬರುತ್ತಾರೆಂದು ನನಗೆ ಗೊತ್ತು. ಪರವಾಗಿಲ್ಲ ಕಾದಾಡೋಣ.
ಆದರೆ ಈಗಿನ ವಿವಾದ ಹುಟ್ಟಿಕೊಂಡಿರುವುದು ಮುಸ್ಲಿಮ್ ಹೆಣ್ಣುಮಕ್ಕಳ ಮೇಲಿನ ಕಾಳಜಿಯಿಂದಲ್ಲ, ಮುಸ್ಲಿಮರ ವಿರುದ್ದ ಹಿಂದೂಗಳನ್ನು ಎತ್ತಿಕಟ್ಟುವ ದುರುದ್ದೇಶದಿಂದ. ಮನೆಯೊಳಗೆ ಗುದ್ದಾಡಿ, ಹೋರಾಡಿ ಹೇಗೋ ಶಾಲೆಯ ಮೆಟ್ಟಿಲು ಹತ್ತಿರುವ ಮುಸ್ಲಿಮ್ ಹೆಣ್ಣುಮಕ್ಕಳನ್ನು ಈ ದುಷ್ಟ ಯೋಜನೆಗಾಗಿ ಆಯುಧವನ್ನಾಗಿ ಮಾಡಲಾಗಿದೆ. ಇದು ನೀಚತನ, ಅಲ್ಪತನ ಮಾತ್ರವಲ್ಲ ಹೇಡಿತನವೂ ಹೌದು.
ಹೀಗಾಗಿ…
ಮುಸ್ಲಿಮ್ ಧರ್ಮದೊಳಗೆ ಸುಧಾರಣೆಯಾಗಬೇಕೆಂದು ಪ್ರಾಮಾಣಿಕವಾಗಿ ಬಯಸುವವರು ತಮ್ಮ ಸದ್ಬುದ್ದಿಯನ್ನು ಸಂಘರ್ಷದ ಕಾಲದಲ್ಲಿ ವ್ಯರ್ಥಮಾಡಬಾರದು. ಇವೆಲ್ಲವೂ ಶಾಂತಿ ಕಾಲದಲ್ಲಿ ಪರಸ್ಪರ ಚರ್ಚೆ-ಸಂವಾದದ ಮೂಲಕ ನಡೆಯಬೇಕಾದ ಕೆಲಸ.
ಕೇಸರಿ ಪಡೆಗೆ ಇದಿರಾಗಿ ಅಂಜದೆ, ಅಳುಕದೆ ನೆಲಕಚ್ಚಿ ನಿಂತಿರುವ ಹೆಣ್ಣುಮಕ್ಕಳಿದ್ದರಲ್ಲಾ, ಅವರೊಳಗೆ ಈಗಾಗಲೇ ಹೋರಾಟಗಾರ್ತಿಯರು ಹುಟ್ಟು ಪಡೆದಿದ್ದಾರೆ. ನಾವು ಬಯಸುವ ಸುಧಾರಣೆಗೆ ಈ ಧೀರ ವಿದ್ಯಾರ್ಥಿನಿಯರಲ್ಲೇ ಕೆಲವರು ಸ್ವಯಂಸೇವಕರಾಗಬಹುದು. ದೂರದಲ್ಲಿ ನಿಂತು ಸಲಹೆ ನೀಡುವ ನಮ್ಮ ಅಗತ್ಯವೂ ಆಗ ಇರಲಾರದು. ಯಾರಿಗೆ ಗೊತ್ತು ಈ ವಿದ್ಯಾರ್ಥಿನಿಯರ ಗುಂಪಲ್ಲೇ ನಾಳಿನ ಬೆನಜೀರ್ ಭುಟ್ಟೋ, ಶೇಖ್ ಹಸೀನಾ ಇದ್ದರೂ ಇರಬಹುದು.
ಈಗ ತುರ್ತಾಗಿ ಈ ಹೆಣ್ಣುಮಕ್ಕಳಿಗೆ ಬೇಕಾಗಿರುವುದು ನಮ್ಮ ಬೆಂಬಲ, ಹಾರೈಕೆ ಮತ್ತು ಸಹಕಾರ ಅಷ್ಟೆ.
ಆ ಭರವಸೆಯನ್ನಷ್ಟೇ ನಾವು ನೀಡೋಣ.
ಕ್ರಾಂತಿಗಾಗಿ ಕಾಯೋಣ.