ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ದ್ವಿಸದಸ್ಯ ಪೀಠ ನಕಾರ
ನವದೆಹಲಿ: ಮಣಿಪುರದ ನಿರ್ಧಿಷ್ಟ ಪ್ರದೇಶಗಳಲ್ಲಿ ನಿರ್ಬಂಧನಾತ್ಮಕ ಸ್ವರೂಪದ ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸಲು ಅವಕಾಶ ನೀಡುವಂತೆ ಇಲ್ಲಿನ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಜೂನ್ 16ರ ಶುಕ್ರವಾರದಂದೇ ಆದೇಶಿಸಿರುವ ವಿಚಾರ ಜೂನ್ 20ರಂದು ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಇಂಟರ್ನೆಟ್ ಸಂಪರ್ಕವನ್ನು ಮರುಸ್ಥಾಪಿಸುವಂತೆ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಂತೆಮ್ ಬಿಮಲ್ ಸಿಂಗ್ ಮತ್ತು ಎ. ಗುಣೇಶ್ವರ ಶರ್ಮ ಅವರಿದ್ದ ಪೀಠವು ಸರಕಾರಕ್ಕೆ ಈ ನಿರ್ದೇಶನವನ್ನು ನೀಡಿದೆ, ಜೂನ್ 20ರವರೆಗೆ ರಾಜ್ಯ ಸರಕಾರವು ಮಣಿಪುರದಲ್ಲಿ ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಿತ್ತು ಮತ್ತು ಅದನ್ನು ಮುಂದಿನ ಇನ್ನಷ್ಟು ದಿನಗಳವರೆಗೆ ವಿಸ್ತರಿಸಲಿದೆಯೇ ಎಂಬುದು ಸದ್ಯದ ಮಟ್ಟಿಗೆ ಸ್ಪಷ್ಟವಾಗಿಲ್ಲ.
ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು ಮುಂದುವರೆಸುವಂತಹ ‘ತುರ್ತು ಮತ್ತು ಪ್ರಮುಖ ಕಾರ್ಯಗಳಿಗೆ’ ಇಂಟರ್ನೆಟ್ ಅಗತ್ಯ ಎಂಬ ಅಭಿಪ್ರಾಯವನ್ನು ಹೈಕೋರ್ಟಿನ ದ್ವಿಸದಸ್ಯ ಪೀಠ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದೆ.
ಅರ್ಜಿಯ ತುರ್ತು ವಿಚಾರಣೆಗೆ ‘ನೋ’ ಎಂದ ಸುಪ್ರೀಂ ಕೋರ್ಟ್!
ಇನ್ನೊಂದೆಡೆ ಮಣಿಪುರದಲ್ಲಿ ಹಿಂಸಾಚಾರವನ್ನು ಮಟ್ಟಹಾಕಲು ಸೇನೆಯನ್ನು ನಿಯೋಜಿಸುವಂತೆ ಕೋರಿ ಮಣಿಪುರ ಬುಡಕಟ್ಟು ವೇದಿಕೆ ಸಲ್ಲಿಸಿದ್ದ ಮಧ್ಯಸ್ಥಿಕೆ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಸಲು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಎಂ ಎಂ ಸುಂದರೇಶ್ ಅವರಿದ್ದ ಸುಪ್ರೀಂ ಕೋರ್ಟಿನ ರಜಾಕಾಲದ ಪೀಠವು ನಿರಾಕರಿಸಿದೆ ಮತ್ತು ಈ ವಿಷಯದ ಕುರಿತಾಗಿರುವ ವಿಚಾರಣೆ ಜುಲೈ 3ರಂದು ನಡೆಯಲಿದೆ.
ಭದ್ರತಾ ಪಡೆಗಳ ಆಶ್ವಾಸನೆಯ ಹೊರತಾಗಿಯೂ, 70 ಬುಡಕಟ್ಟು ಜನರನ್ನು ಉದ್ದೇಶಪೂರ್ವಕವಾಗಿ ಕೊಲ್ಲಲಾಗಿದೆ. ಇದೀಗ ಉಚ್ಛನ್ಯಾಯಲಯವೊಂದೇ ಈ ಬುಡಕಟ್ಟು ಜನರ ಕೊನೆಯ ಆಶಾಕಿರಣವಾಗಿದೆ, ಎಂದು ಹಿರಿಯ ನ್ಯಾಯವಾದಿ ಕೊಲಿನ್ ಗೊನ್ಸಾಲ್ವೇಸ್ ಅವರು ಪೀಠದ ಗಮನ ಸೆಳೆದು ಅರ್ಜಿಯ ತುರ್ತು ವಿಚಾರಣೆಗೆ ಕೇಳಿಕೊಂಡರು.
ಈ ಅರ್ಜಿಯಲ್ಲಿ, ಚುರಾಚನ್ ಪುರ್, ಚಾಂದೇಲ್, ಕಂಗ್ ಪೋಕ್ಪಿ, ಇಂಫಾಲ್ ಈಸ್ಟ್ ಮತ್ತು ಇಂಫಾಲ್ ವೆಸ್ಟ್ ಜಿಲ್ಲೆಗಳಲ್ಲಿ ತುರ್ತಾಗಿ ಸೇನಾ ಪಡೆಗಳನ್ನು ನಿಯೋಜಿಸುವಂತೆ ಹಾಗೂ ಹಿಂಸಾಚಾರವನ್ನು ಮತ್ತು ಇದಕ್ಕೆ ಕಾರಣರಾದವರನ್ನು ಪತ್ತೆಹಚ್ಚಲು ಒಂದು ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಕೋರಲಾಗಿತ್ತು ಮಾತ್ರವಲ್ಲದೇ ಪ್ರಾಥಮಿಕ ಮಾಹಿತಿ ವರದಿಗಳನ್ನು ಅರಂಭಾಯ್ ತೆಂಗೋಳ್ ಪಂಗಡದ ಕೌರುನ್ ಗಂಭ ಖುಮಾನ್ ಮತ್ತು ಮೆಯಿಟಾಯ್ ಲೀಪುನ್ ಗುಂಪಿನ ಅಧ್ಯಕ್ಷ ಎಂ ಪ್ರಮೋತ್ ಸಿಂಗ್ ಮುಂದೆ ಇರಿಸುವಂತೆಯೂ ಈ ಅರ್ಜಿಯಲ್ಲಿ ಆಗ್ರಹಿಸಲಾಗಿತ್ತು.
ಮೈಟಿ-ಎಸ್.ಟಿ ಆದೇಶ ಪರಿಶೀಲನೆ ಬಗ್ಗೆ ಸರಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್
ಇದೇ ಸಂದರ್ಭದಲ್ಲಿ, ಮೈಟಿ ಸಮುದಾಯವನ್ನು ಬುಡಕಟ್ಟು ಪಂಗಡಕ್ಕೆ (ಎಸ್.ಟಿ) ಸೇರ್ಪಡೆಗೊಳಿಸುವ ರಾಜ್ಯ ಸರ್ಕಾರದ ಮೇ 27ರ ವಿವಾದಾತ್ಮಕ ಪ್ರಸ್ತಾವನೆಗೆ ತಿದ್ದುಪಡಿ ಕೋರಿ ಸಲ್ಲಿಸಲಾದ ಪರಿಶೀಲನಾತ್ಮಕ ದೂರು ಅರ್ಜಿಯನ್ನು ಪರಿಶೀಲಿಸಲು ಮಣಿಪುರ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ.