ಮಾಜಿ ಸಿಎಂ ಕುಮಾರಸ್ವಾಮಿ ಈ ಸರ್ಕಾರ ಲೋಕಸಭೆ ತನಕ ಅಷ್ಟೇ ಎಂದಿದ್ದರು. ಇದೀಗ ಕುಮಾರಸ್ವಾಮಿ ಕುಟುಂಬ ಸಮೇತ ಯೂರೋಪ್ ಒಕ್ಕೂಟಗಳಿಗೆ ಪ್ರವಾಸ ತೆರಳಿದ್ದಾರೆ. ಇದರ ಬೆನ್ನಲ್ಲೇ ಆಪರೇಷನ್ ಕಮಲದ ವಿಚಾರ ಸದ್ದು ಮಾಡಿದೆ. ವಿದೇಶದಲ್ಲಿ ಕುಳಿತು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರ್ಕಾರ ಬೀಳಿಸೋ ಪ್ರಯತ್ನ ನಡೆಯುತ್ತಿದೆ ಎನ್ನುವ ವಿಚಾರಕ್ಕೆ ಸ್ವತಃ ಡಿಸಿಎಂ ಸಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಆಪರೇಷನ್ ಸಿಂಗಾಪುರ ಅಂತ ಡಿಸಿಎಂ ಸಿಡಿಸಿರುವ ಹೊಸ ಬಾಂಬ್ ಕಾಂಗ್ರೆಸ್ನಲ್ಲೇ ತಲ್ಲಣ ಸೃಷ್ಟಿಸಿದೆ. ಬರೋಬ್ಬರಿ 136 ಕ್ಷೇತ್ರದಲ್ಲಿ ಗೆದ್ದು ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಸಾಧ್ಯವೇ ಎನ್ನವ ಮಾತುಗಳು ವಿಧಾನಸೌಧದ ಕಾರಿಡಾರ್ನಲ್ಲಿ ಹರಿದಾಡಿದೆ.
ಸಿಎಂ ಸ್ಥಾನಕ್ಕೆ ಹತ್ತಿಸುವುದು ಗೊತ್ತು ಇಳಿಸುವುದು ಗೊತ್ತು..!
ಇತ್ತೀಚಿಗೆ ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ವಿಧಾನಪರಿಷತ್ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್, ನಮಗೆ ಸಿಎಂ ಮಾಡುವುದು ಗೊತ್ತು, ಸಿಎಂ ಆದವರನ್ನು ಕೆಳಕ್ಕೆ ಇಳಿಸುವುದು ಗೊತ್ತು ಎನ್ನುವ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದರು. ಬಿ.ಕೆ ಹರಿಪ್ರಸಾದ್ ಡಿ.ಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕನಾಗಿದ್ದು, ಸಚಿವ ಸ್ಥಾನ ಸಿಗದ್ದಕ್ಕೆ ಆಕ್ರೋಶದಲ್ಲಿ ಹೀಗೆ ಹೇಳಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದೀಗ ಸ್ವತಃ ಡಿ.ಕೆ ಶಿವಕುಮಾರ್ ಆಪರೇಷನ್ ಕಮಲದ ಬಗ್ಗೆ ಮಾತನಾಡಿದ್ದಾರೆ. ವಿದೇಶದಲ್ಲಿ ಕುಳಿತು ಆಪರೇಟ್ ಮಾಡುವ ಮಾಹಿತಿಗಳು ನಮಗೂ ಬಂದಿವೆ ಎಂದಿದ್ದಾರೆ. ಇದು ಸಂಚಲನ ಸೃಷ್ಟಿಸಿದೆ. ಒಂದು ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿರುವ ಡಿ.ಕೆ ಶಿವಕುಮಾರ್ಗೆ ಮಾಹಿತಿ ಇದ್ದೇ ಹೇಳಿದ್ದಾರೋ..? ಅಥವಾ ತಮ್ಮ ಸರ್ಕಾರದಲ್ಲಿ ಹಿಡಿತ ಸಾಧಿಸುವ ಉದ್ದೇಶದಿಂದ ಹೇಳಿದ್ದಾರೋ..? ಅನ್ನೋ ಮಾತುಗಳು ಕೇಳಿಬಂದಿವೆ.
ಕುಮಾರಸ್ವಾಮಿ ಆಪರೇಷನ್ ಮಾಡ್ತಾರೆ ಅನ್ನೋದೇ ಸುಳ್ಳು..!
ಭರ್ಜರಿ ಬಹುಮತ ಪಡೆದು ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಇರಲ್ಲ ಅಂತ ಬಿಜೆಪಿಯ ಘಟಾನುಘಟಿಗಳು ಹೇಳಿದ್ದಾರೆ. ಆದರೂ ಸ್ಪಷ್ಟ ಬಹುಮತ ಪಡೆದ ಸರ್ಕಾರವನ್ನ ಅಲುಗಾಡಿಸಲು ಕಷ್ಟ ಸಾಧ್ಯ ಅಂತಾನೇ ಹೇಳಬಹುದು. ಆದರೂ ಕಾಂಗ್ರೆಸ್ ಒಳಗೆ ಅಧಿಕಾರ ಹಂಚಿಕೆ ವಿಚಾರ ಆಗಾಗ ಸದ್ದು ಮಾಡಲಿದ್ದು, ಬಿಕೆ ಹರಿಪ್ರಸಾದ್ ಬಳಿಕ ಸಿದ್ದರಾಮಯ್ಯ ಅಂಡ್ ಟೀಂಗೆ ಡಿ.ಕೆ ಶಿವಕುಮಾರ್ ಅವರೇ ಟೆಸ್ಟ್ ಡೋಸ್ ನೀಡಲು ಮುಂದಾಗಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದೆ ಹೋದರೆ ರಾಜ್ಯ ರಾಜಕಾರಣದಲ್ಲಿ ಸ್ಥಾನ ಪಲ್ಲಟ ಆಗುವುದು ಶತಸಿದ್ದ ಎಂದು ಸಿದ್ದರಾಮಯ್ಯಗೆ ಸಂದೇಶ ಕಳುಹಿಸುವ ಉದ್ದೇಶ ಎನ್ನಲಾಗ್ತಿದೆ. ಆದರೂ ಬಿಜೆಪಿಯನ್ನು ನಂಬುವುದಕ್ಕೆ ಸಾಧ್ಯವಿಲ್ಲ ಅನ್ನೋ ಚರ್ಚೆಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.
ಕಾಂಗ್ರೆಸ್ಗೆ ಗೊತ್ತಾಗಿದೆಯಾ ಸರ್ಕಾರ ಪತನ ಸಂಚು..!?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿರೋದನ್ನು ಒಪ್ಪಿಕೊಳ್ಳಲು ಭಾರತೀಯ ಜನತಾ ಪಾರ್ಟಿ ಸುತರಾಂ ಸಿದ್ಧವಿಲ್ಲ. ಬಿಜೆಪಿ ಹಾಗು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡರೆ 66 ಮತ್ತು 19 ಸೇರಿದರೆ 85 ಬಲ ಆಗುತ್ತದೆ. ಕಾಂಗ್ರೆಸ್ನ ಸುಮಾರು 26 ಶಾಸಕರನ್ನು ಸೆಳೆದರೆ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಬಹುದು. ಕಳೆದ ಬಾರಿ 18 ಶಾಸಕರನ್ನು ಸೆಳೆದು ಅಧಿಕಾರ ಹಿಡಿದಿರುವ ಬಿಜೆಪಿ ಇನ್ನುಳಿದ ಶಾಸಕರನ್ನು ಸೆಳೆಯುವುದು ದೊಡ್ಡ ಮಾತಲ್ಲ ಅನ್ನೋ ಚರ್ಚೆ ನಡುವೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿರುವುದು ಹಾಗು ಈ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಭಾಗಿಯಾಗ್ತಿರೋ ಗುಟ್ಟೇನು ಅನ್ನೋ ಮಾತುಗಳು ಕೇಳಿಬರುತ್ತಿವೆ. ನಾಳೆ ಜುಲೈ 27 ರಂದು ಸಂಜೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿದ್ದು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎನ್ನಲಾಗ್ತಿದೆ. ಆದರೂ ಪ್ರವಾಸಕ್ಕೆ ಹೋಗಿರುವ ಕುಮಾರಸ್ವಾಮಿ ಅವರನ್ನು ಬಳಸಿಕೊಂಡು ಬೆದರಿಕೆ ತಂತ್ರವೇ ಆಗಿದೆ ಅನ್ನೋದು ಕಾಂಗ್ರೆಸ್ ಶಾಸಕರ ಮೂಲಗಳ ಮಾಹಿತಿ.
ಕೃಷ್ಣಮಣಿ