ಮೋದಿ ಓರ್ವ ಸಂತ ಎನ್ನುವ ಮಾತು ಇಂದು ನಿನ್ನೆಯದಲ್ಲ. 2013ರಲ್ಲೇ ದೇಶಕ್ಕೊಬ್ಬ ʻಸಂತ ರಾಜಕಾರಣಿʼ ದೊರಕಿಬಿಟ್ಟ ಎನ್ನುವ ಭ್ರಮೆ ಕಟ್ಟಿಕೊಡುವಲ್ಲಿ ಆರ್‌ಎಸ್‌ಎಸ್ ಯಶಸ್ವಿಯಾಗಿದೆ. ಮುಂದುವರೆದ ಭಾಗವಾಗಿ ದೇಶದ ದೃಶ್ಯ ಮಾಧ್ಯಮಗಳು ಮೋದಿ ಭಜನೆ ಮಾಡಿದ ಪರಿಣಾಮ ಮೋದಿಯೋರ್ವ ಪ್ರಧಾನಿಯಾಗಿ ದೇಶ ಕಂಡು ಕೇಳರಿಯದ ಪ್ರಶ್ನಾತೀತ ರಾಜಕಾರಣಿ ಎನ್ನುವಂತೆ ಚಿತ್ರಿತವಾಗಿದೆ.
ನಿನ್ನೆ ಮೊನ್ನೆಯಷ್ಟೇ ದೇಶದ ಇಡೀ ದೃಶ್ಯ ಮಾಧ್ಯಮಗಳು ʻಹರ್ ಹರ ಮಹಾದೇವʼ ಎನ್ನುವುದರ ಬದಲು ʻಹರ್ ಹರ್ ಮೋದಿʼ ಎಂದು ಜಪಿಸುತ್ತಾ ಕುಂತಿದ್ದನ್ನು ದೃಶ್ಯ ಮಾಧ್ಯಮಗಳಲ್ಲಿ ಕಂಡಿದ್ದೇವೆ. ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇವಸ್ಥಾನದ ಕಾರಿಡಾರ್ ಉದ್ಘಾಟಿಸಲು ಆಗಮಿಸಿದ ಮೋದಿಗೆ ಭವ್ಯ ಸ್ವಾಗತದ ಜೊತೆಗೆ ದೃಶ್ಯ ಮಾಧ್ಯಮಗಳ ಕೊಟ್ಟಿದ್ದು ಸಂತನೆಂಬ ಬಿರುದು. ವಾರಣಾಸಿಯಿಂದ ಕಿಲೋಮೀಟರ್‌ಗಟ್ಟಲೇ ದೂರವಿರುವ ನೋಯ್ಡಾದ ಸ್ಟುಡಿಯೋದಲ್ಲೇ ಕೂತು ದೃಶ್ಯ ಮಾಧ್ಯಮಗಳು ಮೋದಿಯೊಬ್ಬ ಸಂತ ಎಂಬ ಭ್ರಮೆ ಕಟ್ಟಿಕೊಡುವಲ್ಲಿ ಎಂದಿನಂತೆ ಯಶಸ್ವಿಯಾದರು.
ʻಹರ್ ಹರ್ ಮೋದಿʼ : ಭಕ್ತಿಯಲ್ಲಿ ಮಿಂದೆದ್ದ ಮಾಧ್ಯಮಗಳು!
ಕಾಶಿ ವಿಶ್ವನಾಥ ದೇವಸ್ಥಾನಿಂದ ಗಂಗಾ ಘಾಟ್‌ಗೆ ಒಂದೇ ಸ್ಟ್ರೆಚ್‌ನಲ್ಲಿ ಸಂಪರ್ಕಿಸುವ ಕಾರಿಡಾರ್ ಗೆ ಚಾಲನೆ ನೀಡಿದ ಮೋದಿಯನ್ನು ಸರ್ಕಾರದ ಅಧೀನದಲ್ಲಿರುವ ಡಿಡಿ ನ್ಯೂಸ್ ನಿಂದ ಹಿಡಿದು ಉಳಿದೆಲ್ಲಾ ಖಾಸಗಿ ಚಾನೆಲ್‌ಗಳ ಟಾಪ್ ಬ್ಯಾಂಡ್, ಬ್ರೇಕಿಂಗ್ ಸ್ಲಾಟ್, ಸ್ಕ್ರಾಲ್, ಎಲ್‌ಬ್ಯಾಂಡ್ ಸೇರಿದಂತೆ ಎಲ್ಲಾ ನಿರೂಪಕರು ಹಾಗೂ ವರದಿಗಾರರು ʻಹರ್ ಹರ್ ಮೋದಿʼ ಎಂದು ಜಪ ಮಾಡಿ ಕುಂತಿತ್ತು. ಆಗಾಗ್ಗೆ Non Stop Coverage ಎಂಬ ವೈಪ್ ಬೇರೆ. ನಿಜಕ್ಕೂ ಟಿವಿ ಪರದೆ ಮೋದಿ ಭಕ್ತಿ ಪರಕಾಷ್ಠೆ ತಡೆದುಕೊಳ್ಳಲಾಗದೆ ಹರಿದು ಬಿದ್ದಿತ್ತು!
ತಲೆ ಬುಡವಿಲ್ಲದ ತಲೆ ಬರಹ : ಪತ್ರಕರ್ತರಲ್ಲಿ ಉಕ್ಕಿ ಹರಿದ ಭಕ್ತಿ
ಮೋದಿ ತನ್ನ ಲೋಕಸಭಾ ಕ್ಷೇತ್ರಕ್ಕೆ ಆಗಮಿಸಿದ ದಿನದಂದು ದೃಶ್ಯ ಮಾಧ್ಯಮಗಳು ದೇಶದ ಪ್ರಭುತ್ವಕ್ಕೆ ಮಾಡಿದ ಘಾಸಿ ಬಹಳ ದೊಡ್ಡದು. ಮೋದಿ ಮೇಲಿನ ಅಭಿಮಾನಕ್ಕೆ ಹಾಗೂ ತಾವು ಪತ್ರಕರ್ತರೆಂಬುವುದನ್ನು ಮರೆತು ಆಡಿದ ಮಾತುಗಳು, ನೀಡಿದ ತಲೆ ಬರಹಗಳು ಚಾಕಿರಿ ಮಾಡುವ ರೀತಿಯ ಪರಮಾವಧಿ. ʻʻDazzling Temple City & Glorious Kashi is Backʼʼ ಎಂದು ನ್ಯೂಸ್ 18 ನೆಟ್ವರ್ಕ್ ಅಧೀನದ ಸುದ್ದಿ ಸಂಸ್ಥೆಗಳು ಒಕ್ಕಣೆ ನೀಡಿ ಸಂಭ್ರಮಿಸಿತ್ತು. ʻʻWhat Modi did is Nothing Short of Dazzlingʼʼ (ಚಮತ್ಕಾರ) ಎಂದು ಟೈಮ್ಸ್ ನೌ ನವಭಾರತ್ ಸುದ್ದಿ ಪ್ರಸಾರ ಮಾಡಿತ್ತು. ಮುಂದುವರೆದ ಭಾಗವಾಗಿ ಎನ್‌ಡಿವಿ ʻʻSpectacular Achievement’’ ಎಂಬ ತಲೆ ಬರಹ ಟಿವಿ ಪರದೆ ಮೇಲೆ ಮೂಡಿ ಬರುತ್ತಿದ್ದಂತೆ ಹಿಂಬದಿಯಿಂದ ನಿರೂಪಕರ ಧ್ವನಿಯಲ್ಲಿ ʻʻRebirth Of Kashi’’, Modi Fullfils Dream Project’’ ಎಂಬ ಮಾತುಗಳು ಕೇಳಿ ಬಂದಿದ್ದವು.
ಹೀಗೆ ಕಾಶಿ ಕಾರಿಡಾರ್ ಉದ್ಘಾಟನೆಯೊಂದರಲ್ಲೇ ಮೋದಿ ಓರ್ವ ಸಂತನಾಗಿ, ಸೋಲಿಲ್ಲದ ಸರದಾರನಾಗಿ, ಬ್ರಹ್ಮಾಂಡ ನಾಯಕನಾಗಿ ಮೂಡಿ ಬಂದರು. ಆದರೆ ಇದುವರೆಗೂ ಪ್ರಶ್ನೆಗೆ ಎದೆಯೊಡ್ಡದ, ಜನರ ಅಹವಾಲು ಖುದ್ದಾಗಿ ಕೇಳಿಸಿಕೊಳ್ಳದ, ಜನರ ಬವಣೆಗೆ ಸ್ಪಂದಿಸಿದ ಪ್ರಧಾನಿ ಸಂತನಾದರು ಹೇಗೆಯಾದರು? ಅಷ್ಟಕ್ಕೂ ಸಂತ ಎಂದರೆ ಯಾರು? ಎಂಬ ಪ್ರಶ್ನೆಯೇ ನಮ್ಮೆದುರಿದೆ.
ಮನ್ ಕಿ ಬಾತ್ : ಮೋದಿ ರೇಡಿಯೋ ಜಾಕಿಯೇ?
ನಿಮಗೆ ಗೊತ್ತಿದೆ. 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ, ನೀವು ಇದನ್ನು ಓದುತ್ತಿರುವ ಕ್ಷಣದವರೆಗೆ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿದ ಉದಾಹರಣೆ ಇಲ್ಲ. ಆದರೂ ಮೋದಿ ಓರ್ವ ಪರಾಕ್ರಮಿ, ಮೋದಿ ಓರ್ವ ಧೈರ್ಯಶಾಲಿ. ವ್ಯಂಗ್ಯವಾದರೂ ಇದು ಸತ್ಯ. ಆರಂಭದಿಂದಲೂ ಸನ್ಮಾನ್ಯ ಪ್ರಧಾನಿ ಮೋದಿಯವರು ಮಾಧ್ಯಮಗೋಷ್ಠಿಗೆ ಬದಲು ಮನ್ ಕಿ ಬಾತ್ ಎಂಬ ಒನ್ ಸೈಡಡ್ ಟಾಕ್ ಶೋ ನಡೆಸಿಕೊಡುತ್ತಾರೆ. ಈ ಮನ್ ಕಿ ಬಾತ್‌ನ ಪ್ರಾಮುಖ್ಯತೆ ದೇಶವಾಸಿಗಳಿಗೆ ಗೊತ್ತಾಗಿದ್ದು 2016ರ ನವೆಂಬರ್ 8 ರಂದು. ಏಕಾಏಕಿಯಾಗಿ ರೇಡಿಯೋ ಜಾಕಿಗಳ ರೀತಿಯಲ್ಲಿ ಬಂದು ಬ್ಯಾನ್.. ಬ್ಯಾನ್.. ಬ್ಯಾನ್.. ಎಂದು ಹಿಂದು ಮುಂದು ನೋಡದೆ ಆದೇಶಿಸಿದ ಮೋದಿಗೆ ಕನಿಷ್ಠ ಅದರ ಸಾಧಕ ಬಾಧಕಗಳ ಚರ್ಚೆಗಳಿಗೂ ಆಸ್ಪದ ಕೊಡದೆ ಮಾತು ಮುಗಿಸಿ ಬಿಟ್ಟರು.
ಇದು ಥೇಟ್, ರೇಡಿಯೋದಲ್ಲಿ ಜಾಕಿಗಳು ನಡೆಸುವ ಕಾರ್ಯಕ್ರದ ರೂಪವಲ್ಲದೆ ಇನ್ನೇನು ಅಲ್ಲ. ವಿಪರ್ಯಾಸ ಎಂದರೆ, ರೇಡಿಯೋಗಗಳಲ್ಲಿ ಆಗಾಗ್ಗೆ ಫೋನ್ ಇನ್ ವ್ಯವಸ್ಥೆಯಾದರೂ ನೀಡಲಾಗುತ್ತದೆ. ಜನರಿಗೆ ಈ ಮನ್ ಕಿ ಬಾತ್ ನಲ್ಲಿ ಅದಕ್ಕೂ ಅವಕಾಶವಿಲ್ಲದೆ ಹೋಗಿದ್ದು ದುರಂತ! ಕನಿಷ್ಠ ಪಕ್ಷ ಪತ್ರಿಕಾಗೋಷ್ಠಿ ನಡೆಸುವಂತೆ ಮಾಧ್ಯಮಗಳಾದರೂ ಹಠ ಹಿಡಿಯ ಬೇಕಿತ್ತು. ಅದನ್ನೂ ಮಾಡದೆ, ರೇಡಿಯೋದಲ್ಲಿ ಮೋದಿ ಬಂದು ಹೇಳುವ ಮಾತುಗಳಿಗೆ ʻಬಂಪರ್ ಆಫರ್ʼ, ʻಮಾಸ್ಟರ್ ಸ್ಟ್ರೋಕ್ʼ, ʻಎದುರಾಳಿಗಳಿಗೆ ಮೋದಿ ಶಾಕ್ʼ ಎಂಬಂತಹ ಬಾಲಿಶ ತಲೆ ಬರಹಗಳನ್ನು ಬಿತ್ತರಿಸುತ್ತಿದೆ. ಹೀಗೆ ಮೋದಿಯನ್ನು ಸಂತನೆಂದು ಬಿಂಬಿಸಿ ಪ್ರಭುತ್ವದ ಅಸಲಿ ಮೌಲ್ಯಗಳಿಗೆ ಧಕ್ಕೆ ತರುತ್ತಿರುವ ದೇಶದ ಮಾಧ್ಯಮ ಸಂಸ್ಥೆಗಳು ತಮ್ಮ ಮುಂದಿನ ದಿನಗಳ ಬಗ್ಗೆಯಾಗಲಿ, ದೇಶದ ಭವಿಷ್ಯದ ಬಗ್ಗೆಯಾಗಲಿ ಯೋಚಿಸುತ್ತಿಲ್ಲ ಎಂಬುವುದು ಮಾತ್ರ ಈ ಎಲ್ಲಾ ಬೆಳವಣಿಗೆಗಳಿಂದ ನಿಚ್ಚಳವಾಗಿಸಿದೆ.