• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕಾರ್ಪೋರೇಟ್-ಹಿಂದುತ್ವ ಕಾರ್ಯಸೂಚಿಗೆ ಪರ್ಯಾಯ ಬೇಕಿದೆ

ನಾ ದಿವಾಕರ by ನಾ ದಿವಾಕರ
September 11, 2021
in ಕರ್ನಾಟಕ
0
ಕಾರ್ಪೋರೇಟ್-ಹಿಂದುತ್ವ ಕಾರ್ಯಸೂಚಿಗೆ ಪರ್ಯಾಯ ಬೇಕಿದೆ
Share on WhatsAppShare on FacebookShare on Telegram

ಕರ್ನಾಟಕದ ಅಧಿಕಾರ ರಾಜಕಾರಣದ ವಲಯದಲ್ಲಿ ನಡೆದ ಹಸ್ತಾಂತರದ ಪ್ರಹಸನ ಇಡೀ ರಾಜ್ಯದ ಗಮನ ಸೆಳೆಯಲು ಕಾರಣವಾಗಿದ್ದು, ರಾಜ್ಯದ ಸಾಮಾಜಿಕಾರ್ಥಿಕ ಸ್ಥಿತ್ಯಂತರಗಳಲ್ಲ. ಬದಲಾಗಿ ಜಾತಿ ರಾಜಕಾರಣದ ಏಳುಬೀಳುಗಳು. ರಾಜ್ಯದಲ್ಲಿ ಇಂದು ಜಾತಿವಾದ ಎನ್ನುವುದು ಒಪ್ಪಿತ ರಾಜಕೀಯ ಸಂಸ್ಕೃತಿಯಾಗಿದ್ದು, ಜಾತಿ ಸಮೀಕರಣದಿಂದಾಚೆಗಿನ ಯಾವುದೇ ಸಂಕಥನಗಳು ನಗಣ್ಯ ಎನಿಸುತ್ತದೆ. ಯಡಿಯೂರಪ್ಪ ಸರ್ಕಾರದ ಪತನ ಈ ನಿಟ್ಟಿನಲ್ಲಿ ಸ್ಪಷ್ಟ ಉದಾಹರಣೆಯಾಗಿ ಕಾಣುತ್ತದೆ. ಲಿಂಗಾಯತ ಸಮುದಾಯದ ರಾಜಕೀಯ ಪ್ರಾಬಲ್ಯ ಮತ್ತು ಈ ಸಮುದಾಯವನ್ನು ಪ್ರತಿನಿಧಿಸುವ ‘ ಜನಪ್ರತಿನಿಧಿಗಳ ’ ಅಧಿಕಾರ ದಾಹ ಈ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ನಿಯಂತ್ರಿಸುತ್ತದೆ. ಬಸವರಾಜ ಬೊಮ್ಮಾಯಿ ಅವರ ಆಯ್ಕೆಯಲ್ಲಿ ಇದು ಸ್ಪಷ್ಟವಾಗಿ ಕಾಣುತ್ತದೆ.

ADVERTISEMENT

ರಾಜ್ಯ ರಾಜಕಾರಣವನ್ನು ದೆಹಲಿಯಿಂದ ನಿಯಂತ್ರಿಸುವ ಪರಂಪರೆ ಹೊಸತೇನೂ ಅಲ್ಲ. ಇದನ್ನು ರಾಜಕೀಯ ಪರಿಭಾಷೆಯಲ್ಲಿ ಹೈಕಮಾಂಡ್ ಸಂಸ್ಕೃತಿ ಎಂದು ಕರೆಯಲಾಗುತ್ತದೆ. ಒಂದು ರಾಜ್ಯದ ಪ್ರಾದೇಶಿಕ ಅಸ್ಮಿತೆಗಳು ಮತ್ತು ಹಿತಾಸಕ್ತಿಗಳನ್ನು, ನಿರ್ದಿಷ್ಟ ರಾಜಕೀಯ ಸಿದ್ಧಾಂತಕ್ಕೆ ಅನುಗುಣವಾಗಿ ಬಳಸಿಕೊಳ್ಳುವ ನಿರಂಕುಶ ಪ್ರಭುತ್ವದ ಧೋರಣೆಯನ್ನು ಈ ಹೈಕಮಾಂಡ್ ಸಂಸ್ಕೃತಿಯಲ್ಲಿ ಗುರುತಿಸಬಹುದು. ಇದು ಕಾಂಗ್ರೆಸ್ ಪಕ್ಷ ದೇಶಕ್ಕೆ ನೀಡಿರುವ ಒಂದು ಕೊಡುಗೆ ಎಂದರೂ ತಪ್ಪಾಗಲಾರದು. ಇಂದು ಬಿಜೆಪಿ ಕಾಂಗ್ರೆಸ್ ಪಕ್ಷವನ್ನೂ ಮೀರಿ ಈ ಸಂಸ್ಕೃತಿಗೆ ವ್ಯಕ್ತಿಕೇಂದ್ರಿತ ಸ್ವರೂಪವನ್ನು ನೀಡಿದೆ. ರಾಜ್ಯ ರಾಜಕಾರಣದ ಹಿತಾಸಕ್ತಿಗಳನ್ನು ಕೇವಲ ಇಬ್ಬರು ರಾಷ್ಟ್ರೀಯ(?) ನಾಯಕರು ನಿರ್ಧರಿಸುತ್ತಾರೆ. ಇದು ಜಾತಿ ರಾಜಕಾರಣಕ್ಕಿಂತಲೂ ಅಪಾಯಕಾರಿಯಾದುದು ಎನ್ನುವುದನ್ನು ಗಮನಿಸಬೇಕಿದೆ.

ಈ ಪ್ರಕ್ರಿಯೆಯಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯ ಬುನಾದಿಯೇ ಶಿಥಿಲವಾಗುತ್ತಿರುವುದನ್ನು ಗಮನಿಸದೆ ಹೋದರೆ, ಬಹುಶಃ ಹಿಂದುತ್ವ ರಾಜಕಾರಣ, ಅಖಂಡ ರಾಷ್ಟ್ರದ ಕನಸನ್ನು ಸಾಕಾರಗೊಳಿಸುವ ನೆಪದಲ್ಲಿ ರಾಜ್ಯಗಳನ್ನು ಕೇಂದ್ರದ ಬಾಲಂಗೋಚಿಗಳನ್ನಾಗಿ ಮಾಡಿಬಿಡುತ್ತದೆ. ಕಾಂಗ್ರೆಸ್ ಮುಕ್ತ ಭಾರತ ಅಥವಾ ವಿರೋಧ ಪಕ್ಷ ಮುಕ್ತ ಭಾರತವನ್ನು ತನ್ನ ಅಂತಿಮ ಗುರಿಯಾಗಿರಿಸಿಕೊಂಡಿರುವ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಈ ಹಾದಿಯಲ್ಲಿ ಪ್ರಬಲ ಅಸ್ತ್ರಗಳಾಗಿ ನೆರವಾಗುವುದು ರಾಜ್ಯಗಳಲ್ಲಿ ಬೇರೂರಿರುವ ಒಬಿಸಿ ರಾಜಕಾರಣ ಮತ್ತು ಮೂಲತಃ ಜಾತಿ ರಾಜಕಾರಣದ ಸಮೀಕರಣಗಳು. ನವ ಉದಾರವಾದದ ಮಾರುಕಟ್ಟೆ ಆರ್ಥಿಕ ನೀತಿ ಮತ್ತು ಕಾರ್ಪೋರೇಟ್ ಕೆಂದ್ರಿತ ಅಭಿವೃದ್ಧಿ ಪಥದಲ್ಲಿ, ಹಣಕಾಸು ಬಂಡವಾಳದ ಮೇಲೆ ಮತ್ತು ಬಂಡವಾಳ ಹೂಡಿಕೆಯ ಮೂಲ ಆಕರಗಳ ಮೇಲೆ ಪ್ರಾಬಲ್ಯ ಸಾಧಿಸಿರುವ ಎಲ್ಲ ಜಾತಿ ಸಮುದಾಯಗಳೂ ಈ ಹೊಸ ಸಮೀಕರಣಕ್ಕೆ ಸುಲಭವಾಗಿ ಬಲಿಯಾಗುತ್ತವೆ. ಒಂದೆಡೆ ಜಾತಿ ಅಸ್ಮಿತೆಯನ್ನು ಕಾಪಾಡಿಕೊಂಡೇ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸುಭದ್ರ ಬುನಾದಿಯನ್ನು ನಿರ್ಮಿಸಿಕೊಂಡಿರುವ ಒಬಿಸಿ ಸಮುದಾಯಗಳು ಈ ಮಾರುಕಟ್ಟೆ ಆರ್ಥಿಕತೆಗೆ ರಾಯಭಾರಿಗಳಾಗಿಬಿಡುತ್ತವೆ. ಇದರ ಒಂದು ಆಯಾಮವನ್ನು ಕರ್ನಾಟಕದ ಲಿಂಗಾಯತ ರಾಜಕಾರಣದಲ್ಲಿ ನೋಡುತ್ತಿದ್ದೇವೆ.

ಲಿಂಗಾಯತ ಮತಬ್ಯಾಂಕುಗಳನ್ನು ಸುರಕ್ಷಿತವಾಗಿರಿಸಿಕೊಂಡೇ ರಾಜ್ಯದ ಪ್ರಬಲ ಲಿಂಗಾಯತ ನಾಯಕರಾದ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡುವಲ್ಲಿ ಸಂಘಪರಿವಾರ ನಿಯಂತ್ರಿತ ಬಿಜೆಪಿ ಹೈಕಮಾಂಡ್ ಯಶಸ್ವಿಯಾಗಿದೆ. ಬಸವರಾಜ ಬೊಮ್ಮಾಯಿ ಅವರ ಆಯ್ಕೆಯ ಹಿಂದೆ ಜಾತಿ ಸಮೀಕರಣವನ್ನು ಹೊರತುಪಡಿಸಿ ಮತ್ತಾವುದೇ ಬಲವಾದ ಕಾರಣಗಳು ಇಲ್ಲ ಎನ್ನುವುದೂ ನೂತನ ಸರ್ಕಾರದ ಕಾರ್ಯವೈಖರಿಯಿಂದಲೇ ಸ್ಪಷ್ಟವಾಗುತ್ತಿದೆ. ಹಿಂದುತ್ವ ರಾಜಕಾರಣದ ಸಂಘ ಪ್ರೇರಿತ ಕಾರ್ಯಸೂಚಿಯನ್ನು ತೆರೆಮರೆಯಲ್ಲಿ ಜಾರಿಗೊಳಿಸುತ್ತಿದ್ದ ಯಡಿಯೂರಪ್ಪ ಸರ್ಕಾರಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಬೊಮ್ಮಾಯಿ ಸರ್ಕಾರ ನೇರವಾಗಿಯೇ ಈ ಹೆಜ್ಜೆ ಇಟ್ಟಿದೆ. ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಿರುವುದು ಲಿಂಗಾಯತ ಸಮುದಾಯಕ್ಕೆ ಆತಂಕಕಾರಿಯಾಗಿ ಕಂಡರೂ, ಈ ಸಮುದಾಯದ ಆಂತರ್ಯದಲ್ಲಿರುವ ಬಂಡವಾಳದ ಆಧಿಪತ್ಯ ಮತ್ತು ಔದ್ಯಮಿಕ ಹಿತಾಸಕ್ತಿಗಳು ಬೊಮ್ಮಾಯಿಯವರಿಗೆ ಶ್ರೀರಕ್ಷೆಯಾಗುತ್ತವೆ.

ಏಕೆಂದರೆ ಬೊಮ್ಮಾಯಿಯವರ ಮುಂದಿನ ಹಾದಿಯ ನೀಲನಕ್ಷೆ ದೆಹಲಿಯಲ್ಲಿ ಮತ್ತು ನಾಗಪುರದಲ್ಲಿ ಈಗಾಗಲೇ ಸಿದ್ಧವಾಗಿದೆ. 2024ರ ಒಳಗೆ ಭಾರತದ ಅರ್ಥವ್ಯವಸ್ಥೆಯನ್ನು ಸಂಪೂರ್ಣವಾಗಿ ಕಾರ್ಪೋರೇಟ್ ಮಾರುಕಟ್ಟೆಗೆ ಒಪ್ಪಿಸಿ, ಹಣಕಾಸು ಬಂಡವಾಳದ ನವಉದಾರವಾದದ ಕಾರ್ಯಸೂಚಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಕೇಂದ್ರ ಬಿಂದುವಾಗಿದೆ. ಅತಿ ಹೆಚ್ಚಿನ ಸಾರ್ವಜನಿಕ ಉದ್ದಿಮೆಗಳು ರಾಜ್ಯದಲ್ಲಿವೆ, ಅತಿ ದೀರ್ಘ ರೈಲು ಮಾರ್ಗಗಳು ಕರ್ನಾಟಕದ ಮೂಲಕ ಹಾದು ಹೋಗುತ್ತವೆ, ಸರ್ಕಾರಿ ಸ್ವಾಮ್ಯದಲ್ಲಿರುವ ಉತ್ಪಾದನಾ ಘಟಕಗಳ ಸಂಖ್ಯೆಯೂ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಶೈಕ್ಷಣಿಕ ವಲಯದಲ್ಲಿ ರಾಜ್ಯದ ಐಐಎಸ್‍ಸಿ ಮತ್ತಿತರ ವಿದ್ಯಾ ಸಂಸ್ಥೆಗಳು ಜಾಗತಿಕ ಮನ್ನಣೆ ಗಳಿಸಿವೆ. ಈ ಶೈಕ್ಷಣಿಕ ಸಂಸ್ಥೆಗಳ ಖಾಸಗೀಕರಣ ಮತ್ತು ಕಾರ್ಪೋರೇಟೀಕರಣಕ್ಕೆ ಪೂರಕವಾದ ಹೊಸ ಶಿಕ್ಷಣ ನೀತಿಯನ್ನು ಕರ್ನಾಟಕ ಸರ್ಕಾರ ಅವಸರದಿಂದಲೇ ಜಾರಿಗೊಳಿಸಿರುವುದನ್ನೂ ಗಮನಿಸಬೇಕು.

ಭಾರತದ ಸಾಮಾಜಿಕ ಸನ್ನಿವೇಶದಲ್ಲಿ ಈ ದೇಶದ ಶೋಷಿತ, ಅವಕಾಶವಂಚಿತ, ಅಂಚಿಗೆ ತಳ್ಳಲ್ಪಟ್ಟ, ತುಳಿತಕ್ಕೊಳಪಟ್ಟ ಜನಸಮುದಾಯಗಳು ಭೂಮಿಗಾಗಿ ಹೋರಾಡಬೇಕಿತ್ತು. ಮನುಷ್ಯ ಮತ್ತು ಭೂಮಿಯ ನಡುವಿನ ಸಂಬಂಧಗಳನ್ನು ಭಾವನಾತ್ಮಕವಾಗಿ ಮಾತ್ರವೇ ನೋಡಲಾಗುವುದಿಲ್ಲ. ತಮ್ಮ ಜೀವನೋಪಾಯದ ಮಾರ್ಗಗಳನ್ನು ಕಂಡುಕೊಳ್ಳಲು ಜನಸಾಮಾನ್ಯರಿಗೆ ಭೂಮಿ ಮತ್ತು ಅದರೊಡಗಿನ ಉತ್ಪಾದನಾ ಸಂಬಂಧಗಳು ಹೆಚ್ಚು ಅಪ್ಯಾಯಮಾನವಾಗಿರಬೇಕು. ಹಾಗಾಗಿಯೇ ಶತಮಾನಗಳಿಂದಲೂ, ಎಲ್ಲ ದೇಶಗಳಲ್ಲೂ ಭೂಮಿಗಾಗಿ ನಡೆದ ಹೋರಾಟಗಳೇ ಆ ದೇಶಗಳ ಇತಿಹಾಸವನ್ನೇ ಬದಲಿಸಿರುವುದನ್ನು ನೋಡಿದ್ದೇವೆ. ಭಾರತದಲ್ಲೂ ಸಹ ಭೂಮಿಯೊಡಗಿನ ದುಡಿಯುವ ವರ್ಗಗಳ, ಶ್ರಮಜೀವಿಗಳ ಒಡನಾಟವನ್ನು ಮನಗಂಡಿದ್ದರಿಂದಲೇ ಡಾ ಬಿ ಆರ್ ಅಂಬೇಡ್ಕರ್ ಸಹ ಭೂಮಿಯ ರಾಷ್ಟ್ರೀಕರಣಕ್ಕಾಗಿ ಒತ್ತಾಯಿಸಿದ್ದರು.

ಆದರೆ ಸ್ವತಂತ್ರ ಭಾರತದಲ್ಲಿ ಭೂ ಹೋರಾಟಗಳು ಮೂಲತಃ ಎಡಪಂಥೀಯ ಹೋರಾಟಗಳೊಡನೆಯೇ ಬೆಳೆದುಬಂದಿವೆ. ಒಂದು ಹಂತದಲ್ಲಿ ದಲಿತ ಚಳುವಳಿ ದೇಶಾದ್ಯಂತ ಪ್ರಬಲವಾದ ಸಂದರ್ಭದಲ್ಲಿ ದಲಿತ ಸಮುದಾಯಗಳನ್ನೂ ಭೂಹೋರಾಟಗಳಲ್ಲಿ ತೊಡಗಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿತ್ತು. ದಲಿತರಿಗೆ ಇಂದಿಗೂ ಸಹ ಭೂಮಿಯ ಪ್ರಶ್ನೆಯೇ ಪ್ರಧಾನವಾಗಬೇಕಿದೆ. ಏಕೆಂದರೆ ದೇಶದ ಬಹುಸಂಖ್ಯಾತ ದಲಿತರು ಗ್ರಾಮೀಣವಾಸಿಗಳಾಗಿದ್ದಾರೆ ಮತ್ತು ಗ್ರಾಮೀಣ ಆರ್ಥಿಕತೆಯನ್ನೇ ನಂಬಿ ಬದುಕುತ್ತಿದ್ದಾರೆ. ಭೂರಹಿತ ಕೃಷಿ ಕಾರ್ಮಿಕರ ಕ್ರಾಂತಿಕಾರಿ ಚಳುವಳಿಗಳು ಬಿಹಾರ, ಒರಿಸ್ಸಾ, ಆಂಧ್ರಪ್ರದೇಶ, ಜಾರ್ಖಂಡ್, ಛತ್ತಿಸ್‍ಘಡ ಮುಂತಾದ ರಾಜ್ಯಗಳಲ್ಲಿ ಇಂದಿಗೂ ಚಾಲ್ತಿಯಲ್ಲಿವೆ. ಆದರೆ ಮುಖ್ಯವಾಹಿನಿಯ ದಲಿತ ಚಳುವಳಿಗಳು ಭೂಹೋರಾಟದಿಂದ ವಿಮುಖವಾದ ಪರಿಣಾಮ, ಇಂದು ದಲಿತ ಸಮುದಾಯಗಳು ಸಾಂವಿಧಾನಿಕ ಸವಲತ್ತುಗಳನ್ನೇ ಆಧರಿಸಿ ತಮ್ಮ ಬದುಕು ರೂಪಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿವೆ.

ಕರ್ನಾಟಕದಲ್ಲಿನ ಭೂ ಸಂಬಂಧಗಳನ್ನು ತುಲನಾತ್ಮಕವಾಗಿ ನೋಡುವಾಗ ಈ ಅಂಶಗಳನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಇಂದು ದೇಶಾದ್ಯಂತ ಮತ್ತು ಕರ್ನಾಟಕದಲ್ಲೂ ಸಹ ಭೂಮಿಗಾಗಿ ಹೋರಾಡುತ್ತಿರುವುದು ಕಾರ್ಪೋರೇಟ್ ಉದ್ಯಮಿಗಳು, ರಿಯಲ್ ಎಸ್ಟೇಟ್ ಮಾಫಿಯಾಗಳು ಮತ್ತು ರಾಜಕೀಯವಾಗಿ ಪ್ರಬಲವಾಗಿರುವ ಈ ಎರಡು ವರ್ಗಗಳಿಗೆ ಆಶ್ರಯ, ಶ್ರೀರಕ್ಷೆ ನೀಡುವ ಬಂಡವಳಿಗ ವರ್ಗದ ರಾಜಕೀಯ ನಾಯಕರು. ಕಳೆದ ಮೂರು ದಶಕಗಳ ನಗರೀಕರಣ ಮತ್ತು ರಸ್ತೆ, ಮೇಲ್ಸೇತುವೆ, ಕಾರಿಡಾರ್ ಮತ್ತು ಚತುಷ್ಪಥದಿಂದ ದಶಪಥದವರೆಗಿನ ಹೆದ್ದಾರಿಯ ವಿಸ್ತರಣೆಯಲ್ಲಿ ಭೂಮಿಯನ್ನು ಕಳೆದುಕೊಂಡ ಲಕ್ಷಾಂತರ ರೈತರು ಇಂದು ಕೃಷಿ ಕಾರ್ಮಿಕರಾಗಿ, ಗ್ರಾಮೀಣ ಶ್ರಮಜೀವಿಗಳಾಗಿ, ನಗರಗಳಲ್ಲಿ ದಿನಗೂಲಿಗಳಾಗಿ ಬದುಕು ಸವೆಸುತ್ತಿದ್ದಾರೆ.

ಈ ಅವಕಾಶವಂಚಿತ ನವ  ಶ್ರಮಜೀವಿಗಳ ಗುಂಪಿಗೆ ಮತ್ತಷ್ಟು ರೈತಾಪಿಯನ್ನು, ಗ್ರಾಮೀಣ ಬಡಜನತೆಯನ್ನು ತಳ್ಳುವ ನಿಟ್ಟಿನಲ್ಲಿ ಯಡಿಯೂರಪ್ಪ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಇನ್ನು ಕರ್ನಾಟಕದಲ್ಲಿ ಕೃಷಿ ಭೂಮಿಯನ್ನು ಕೊಳ್ಳಲು ಮತ್ತು ಕ್ರೋಢೀಕರಿಸಲು ಯಾವುದೇ ಅಡ್ಡಿ ಆತಂಕಗಳಿಲ್ಲದೆ, ಕೆಲವು ಸೂಕ್ಷ್ಮ ನಿರ್ಬಂಧಗಳಿರುವ ನೂತನ ಭೂ ಸ್ವಾಧೀನ ಕಾಯ್ದೆ ರಾಜ್ಯದಲ್ಲಿ ಜಾರಿಯಲ್ಲಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕರಾಳ ಕೃಷಿ ಕಾಯ್ದೆಗಳು ಕೃಷಿ ಕ್ಷೇತ್ರದ ಖಾಸಗೀಕರಣ ಮತ್ತು ಔದ್ಯಮೀಕರಣಕ್ಕೆ ಪ್ರಶಸ್ತ ಭೂಮಿಕೆಯನ್ನು ಒದಗಿಸಿದೆ. ನೈಸರ್ಗಿಕ ಸಂಪತ್ತು, ಸಂಪನ್ಮೂಲ ಮತ್ತು ಉತ್ಪಾದನೆಯ ಮೂಲಗಳನ್ನು ಕಾರ್ಪೋರೇಟ್ ಮಾರುಕಟ್ಟೆಗೆ ಒಪ್ಪಿಸುವ #ಆತ್ಮನಿರ್ಭರ ಭಾರತದ ಯೋಜನೆಗಳಿಗೆ ಕರ್ನಾಟಕ ಪ್ರಸ್ತಭೂಮಿಯಾಗಿ ಪರಿಣಮಿಸಲಿದೆ.

ಹಾಗಾಗಿ ಶಿಕ್ಷಣ, ಉದ್ಯಮ, ಉತ್ಪಾದನೆ, ವಿಜ್ಞಾನ, ತಂತ್ರಜ್ಞಾನ, ಡಿಜಿಟಲ್ ವೇದಿಕೆ, ರಸ್ತೆ ಮತ್ತು ರೈಲು ಸಾರಿಗೆ, ವಿಮಾನಯಾನ ಹೀಗೆ ನವ ಉದಾರವಾದ ಕಾರ್ಪೋರೇಟ್ ಜಗತ್ತಿಗೆ ಅತ್ಯಮೂಲ್ಯ ತಳಹದಿಯನ್ನು ಒದಗಿಸಬಹುದಾದ ಎಲ್ಲ ವಲಯಗಳಲ್ಲೂ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಪ್ರತಿರೋಧವಿಲ್ಲದೆ ಅನುಷ್ಟಾನಗೊಳಿಸಲು ಕರ್ನಾಟಕದ ನೂತನ ಬೊಮ್ಮಾಯಿ ಸರ್ಕಾರ ನೆರವಾಗಲಿದೆ. ಈ ಕಾರ್ಪೋರೇಟ್ ಪ್ರಕ್ರಿಯೆಗೆ ಲಿಂಗಾಯತ ಧರ್ಮ ಅಥವಾ ಲಿಂಗಾಯತ ಮತಬ್ಯಾಂಕುಗಳು ಅಡ್ಡಿಯಾಗುವುದೂ ಇಲ್ಲ. ಏಕೆಂದರೆ ಇಲ್ಲಿ ಲಿಂಗಾಯತ ಸಮುದಾಯದ ಔದ್ಯಮಿಕ ಹಿತಾಸಕ್ತಿಗಳ ರಕ್ಷಣೆಯಾಗಿರುತ್ತದೆ. ಹಾಗಾಗಿಯೇ ಮೂಲೆಗುಂಪಾಗಿರುವ ಯಡಿಯೂರಪ್ಪ ಒಂದು ಪ್ರಾದೇಶಿಕ ಶಕ್ತಿಯಾಗಿಯೂ ರೂಪುಗೊಳ್ಳಲಾಗದಂತೆ ಬಿಜೆಪಿ ನಾಯಕತ್ವ ತನ್ನ ರಾಜಕೀಯ ಹೆಜ್ಜೆಗಳನ್ನಿಟ್ಟಿದೆ.

Ford Restructures India Operations: To cease vehicle manufacturing in Chennai & Sanand; Progressively wind-down manufacturing of vehicles for export at Sanand plant by Q4 2021 & Chennai engine/vehicle assembly plants by Q2, 2022; To continue engine manufacturing for export. pic.twitter.com/E1PXmW7Rgq

— Ford India (@FordIndia) September 9, 2021

ನವ ಉದಾರವಾದದ ಸಾಮ್ರಾಜ್ಯ ವಿಸ್ತರಣೆಗೆ ನೆರವಾಗುವುದರೊಂದಿಗೇ , ಬಿಜೆಪಿಯ ಹಿಂದುತ್ವ ರಾಜಕಾರಣವೂ ಊರ್ಜಿತವಾಗಬೇಕಾದರೆ ರಾಜ್ಯಗಳಲ್ಲಿ ಹಿಂದುತ್ವ ಕಾರ್ಯಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತಹ ಸರ್ಕಾರಗಳು, ಮುಖ್ಯಮಂತ್ರಿಗಳು ಅತ್ಯವಶ್ಯವಾಗಿ ಬೇಕಾಗುತ್ತಾರೆ. ಬಸವರಾಜ ಬೊಮ್ಮಾಯಿ ಅಂತಹ ಒಂದು ಮೃದು ಹಿಂದುತ್ವ ಮುಖವಾಡದ ನಾಯಕರಾಗಿ ಹೊರಹೊಮ್ಮಿದ್ದಾರೆ. 1998ರ ವಾಜಪೇಯಿಯವರಂತೆ ವಿರೋಧಿಗಳಿಂದಲೂ ಸ್ವೀಕರಿಸಲ್ಪಡುವ ಬೊಮ್ಮಾಯಿ ತಮ್ಮ ಪೂರ್ವಾಶ್ರಮದ ಅಥವಾ ಪೂರ್ವಿಕರ ಸಮಾಜವಾದಿ ತತ್ವಗಳಿಂದ ಬಹುದೂರ ಸಾಗಿ ಬಂದಿರುವುದು ಮುಂಬರುವ ದಿನಗಳಲ್ಲಿ ಸ್ಪಷ್ಟವಾಗಲಿದೆ. ಈಗಾಗಲೇ ಇತಿಹಾಸ ಪಠ್ಯಗಳಿಂದ ಹೊಸ ಧರ್ಮಗಳ ಉದಯದ ಬಗ್ಗೆ ಇರುವ ಪಾಠಗಳನ್ನು ಪರಿಷ್ಕರಿಸಲು ಸರ್ಕಾರ ಸಮಿತಿಯೊಂದನ್ನು ನೇಮಿಸಿದ್ದು, ಶಿಕ್ಷಣದ ಕೇಸರೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ರಾಜ್ಯದ ನೂತನ ಗೃಹ ಸಚಿವರೂ ತಮ್ಮ ಬಾಲವಾಡಿಯ ಪಾಠಗಳನ್ನು ಇನ್ನೂ ಮರೆತಿಲ್ಲ ಎನ್ನುವುದನ್ನು ಮೈಸೂರು ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲಿ ಸಾಬೀತುಪಡಿಸಿದ್ದಾರೆ.

ರಾಜ್ಯದ ಜನಸಾಮಾನ್ಯರ ಹಿತಾಸಕ್ತಿಗಳು, ಪ್ರಾದೇಶಿಕ ಸಮಸ್ಯೆಗಳು, ಭಾಷಾ ಸಮಸ್ಯೆ ಮತ್ತು ಕರ್ನಾಟಕದ ಆಂತರಿಕ ಸಾಮಾಜಿಕಾರ್ಥಿಕ ವಲಯದಲ್ಲಿನ ಜಟಿಲ ಸಮಸ್ಯೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಅಥವಾ ಸಚಿವ ಸಂಪುಟವನ್ನು ಬದಲಾಯಿಸುವ ಒಂದು ಪರಂಪರೆಗೆ ಬಿಜೆಪಿ ತಿಲಾಂಜಲಿ ನೀಡಿದೆ. ಇಂದು ಎಂತಹುದೇ ಕಡು ಭ್ರಷ್ಟಾಚಾರದ ಆರೋಪ ಹೊತ್ತಿದ್ದರೂ, ಎಂತಹುದೇ ಸುಡು ವಾಸ್ತವಗಳು ರಾಜ್ಯವನ್ನು ಬಾಧಿಸುತ್ತಿದ್ದರೂ ಅದು ಮುಖ್ಯಮಂತ್ರಿಗಳ ಮತ್ತು ಸ್ಥಾಪಿತ ಅಧಿಕಾರಪೀಠಗಳನ್ನು ಅಲುಗಾಡಿಸುವುದಿಲ್ಲ. ರಾಜ್ಯ ಮಟ್ಟದ ಪ್ರಾದೇಶಿಕ ಹಿತಾಸಕ್ತಿಗಳನ್ನೂ ಮೀರಿದ ಅಖಂಡ ರಾಷ್ಟ್ರದ ಹಿತಾಸಕ್ತಿ, ನರೇಂದ್ರ ಮೋದಿ ಸರ್ಕಾರಕ್ಕೆ ಹೆಚ್ಚು ಮುಖ್ಯವಾಗಿ ಕಾಣುತ್ತದೆ. ಹಾಗಾಗಿ ಪಾರದರ್ಶಕ ಆಡಳಿತ, ಪ್ರಾಮಾಣಿಕ ಆಡಳಿತ ನೀತಿಗಳಿಗಿಂತಲೂ ಹೆಚ್ಚಾಗಿ ನವ ಉದಾರವಾದದ ಕಾರ್ಪೋರೇಟ್ ಆರ್ಥಿಕ ನೀತಿ ಮತ್ತು ಹಿಂದುತ್ವ ಯೋಜನೆಯ ಕಾರ್ಯಸೂಚಿಗಳನ್ನು ಶ್ರದ್ಧಾಭಕ್ತಿಗಳಿಂದ ಅನುಷ್ಟಾನಗೊಳಿಸುವುದು ನೂತನ ಬೊಮ್ಮಾಯಿ ಸರ್ಕಾರದ ಆದ್ಯತೆಯಾಗಿ , ಪ್ರಥಮ ಆಯ್ಕೆಯಾಗಿ, ಉಳಿಯುತ್ತದೆ.

ಇದನ್ನೂ ಮೀರಿ ನಡೆಯುವ ಧೀಶಕ್ತಿಯನ್ನೂ ರಾಜ್ಯ ಬಿಜೆಪಿ ನಾಯಕರು ಕಳೆದುಕೊಂಡಿದ್ದಾರೆ ಎನ್ನುವುದು ಮುಖ್ಯಮಂತ್ರಿಯ ಬದಲಾವಣೆಯ ಸಂದರ್ಭದಲ್ಲೇ ಸ್ಪಷ್ಟವಾಗಿದೆ. ಒಂದೆಡೆ ಜಾತಿ ಸಮುದಾಯದ ರಾಜಕೀಯ ಪ್ರಾಬಲ್ಯ ಮತ್ತೊಂದೆಡೆ ಕಾರ್ಪೋರೇಟ್ ವಲಯದ ಪ್ರಭಾವ ಕರ್ನಾಟಕದ ಆಡಳಿತ ನೀತಿಗಳನ್ನು ನಿಯಂತ್ರಿಸುತ್ತವೆ. ಈ ಪ್ರವೃತ್ತಿಯನ್ನು ಪ್ರಬಲವಾಗಿ ವಿರೋಧಿಸಬಹುದಾದ ಏಕೈಕ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾ ದಳ (ಜೆಡಿಎಸ್) ಅಧಿಕಾರ ಪೀಠಕ್ಕಾಗಿ ಯಾವುದೇ ತನ್ನೆಲ್ಲಾ ತತ್ವ ಸಿದ್ಧಾಂತಗಳನ್ನೂ (?) ಬಲಿಕೊಟ್ಟು ಅಧಿಕಾರ ಅನುಭವಿಸಲು ಸಜ್ಜಾಗಿದೆ. ಮೈಸೂರು ಮತ್ತು ಕಲಬುರ್ಗಿಯ ಮೇಯರ್ ಚುನಾವಣೆಗಳು ನಿದರ್ಶನವಷ್ಟೇ. ತನ್ನ ರಾಜಕೀಯ ಅಸ್ತಿತ್ವವೊಂದನ್ನೇ ಪ್ರಧಾನವಾಗಿ ಪರಿಗಣಿಸುವ ಜೆಡಿಎಸ್ ತನ್ನ ಪ್ರಾದೇಶಿಕ ಸೊಗಡನ್ನೂ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ನಿರೀಕ್ಷೆಗಳೂ ವ್ಯರ್ಥವಾದೀತು.

ಈ ಅಪಾಯಕಾರಿ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರದ ಕಾರ್ಪೋರೇಟ್ ಆರ್ಥಿಕ ನೀತಿಗಳ ವಿರುದ್ಧ, ಕರಾಳ ಕೃಷಿ ಕಾಯ್ದೆಗಳ ವಿರುದ್ಧ, ದಮನಕಾರಿ ಕರಾಳ ಶಾಸನಗಳ ವಿರುದ್ಧ, ರಾಜ್ಯ ಸರ್ಕಾರದ ಕರಾಳ ಭೂಸ್ವಾಧೀನ ಕಾಯ್ದೆಯ  ವಿರುದ್ಧ ಮತ್ತು ಕ್ಷಿಪ್ರಗತಿಯಲ್ಲಿ ಸಾಗುತ್ತಿರುವ ಶಿಕ್ಷಣದ ಕೇಸರೀಕರಣದ ವಿರುದ್ಧ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ವಿರುದ್ಧ ಜನಾಂದೋಲನಕ್ಕೆ ಪ್ರೇರಕವಾಗುವಂತಹ ಒಂದು ಕಾರ್ಯ ಯೋಜನೆಯನ್ನು, ಹೋರಾಟದ ನೀಲನಕ್ಷೆಯನ್ನು ಸಿದ್ಧಪಡಿಸುವಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಸೋತಿದೆ. ಬಹುಶಃ ತನ್ನದೇ ಆರ್ಥಿಕ ನೀತಿಗಳನ್ನು ಬಿಜೆಪಿ ಜಾರಿಗೊಳಿಸುತ್ತಿದೆ ಎಂಬ 1999ರ ಕಾಂಗ್ರೆಸ್ ಪಕ್ಷದ ಆತ್ಮರತಿಯ ಧ್ವನಿ ಇಂದಿಗೂ ಸಹ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ ಎನಿಸುತ್ತದೆ. ಹಾಗಾಗಿಯೇ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ವಿರೋಧಿಸುವ ಒಂದು ಪ್ರಖರ ದನಿ ಕಾಂಗ್ರೆಸ್ ಪಕ್ಷದಿಂದ ಮೂಡುತ್ತಿಲ್ಲ.

ಈ ಸಂದಿಗ್ಧತೆಯ ನಡುವೆಯೇ ಕರ್ನಾಟಕದ ಜನತೆ, ನವ ಉದಾರವಾದದ ವಿರುದ್ಧ, ಬಲಪಂಥೀಯ ರಾಜಕಾರಣದ ವಿರುದ್ಧ, ಜಾತಿ ರಾಜಕಾರಣದ ವಿರುದ್ಧ, ಕೋಮುವಾದಿ ಫ್ಯಾಸಿಸಂನ ಧಾಳಿಯ ವಿರುದ್ಧ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಕರಾಳ ಶಾಸನಗಳ ವಿರುದ್ಧ ಒಂದು ಪ್ರಬಲ ಪ್ರಾದೇಶಿಕ ಅಸ್ಮಿತೆಯ ಹೊರಾಟದ ಕನಸು ಕಟ್ಟಬೇಕಿದೆ.  ಉಡುಪಿಯಲ್ಲಿ ಕ್ರೈಸ್ತ ದೇವಾಲಯದ ಮೇಲೆ ನಡೆದಿರುವ ಧಾಳಿ 2024ರ #ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ನೆರವಾಗುವ ಒಂದು ಇಟ್ಟಿಗೆಯಾದರೂ ಹೆಚ್ಚೇನಿಲ್ಲ. ಈ ಗಂಭೀರತೆಯನ್ನು ಗ್ರಹಿಸುವ ಬೌದ್ಧಿಕ ಸಾಮಥ್ರ್ಯವನ್ನು ರಾಜ್ಯ ಕಾಂಗ್ರೆಸ್ ನಾಯಕರೂ ಕಳೆದುಕೊಂಡಿರುವುದರಿಂದ, ಇಂದು ಎಡಪಂಥೀಯ ಪಕ್ಷಗಳ ಮತ್ತು ಸಂಘಟನೆಗಳ, ದಲಿತ ಚಳುವಳಿಗಳ ಮತ್ತು ಇತರ ಜನಪರ ಚಳುವಳಿಗಳ ಮುಂದಿನ ಸವಾಲುಗಳು ಮತ್ತಷ್ಟು ಜಟಿಲವಾಗಿವೆ. ಈ ಸವಾಲುಗಳನ್ನು ಎದುರಿಸಲು ಬೇಕಾದ ಪ್ರೋತ್ಸಾಹಕರ ಬೌದ್ಧಿಕ ಚಿಂತನ ಮಂಥನಗಳು ಇಂದು ಅನಿವಾರ್ಯವಾಗಿದೆ.

ಪ್ರಸ್ತುತ ಸಂದರ್ಭದಲ್ಲಿ ಕರ್ನಾಟಕದ ಮಟ್ಟಿಗಾದರೂ, ನವ ಉದಾರವಾದ ಮತ್ತು ಕಾರ್ಪೋರೇಟ್ ಮಾರುಕಟ್ಟೆ ನೀತಿಗಳನ್ನು ತಿರಸ್ಕರಿಸುವ, ಜಾತಿ ರಾಜಕಾರಣವನ್ನು ಮೀರಿದ, ಮತೀಯ ರಾಜಕಾರಣ ಮತ್ತು ಮತಾಂಧತೆಯನ್ನು ಹಿಮ್ಮೆಟ್ಟಿಸುವ, ಕೋಮುವಾದಿ ಫ್ಯಾಸಿಸ್ಟರ ಧಾಳಿಯನ್ನು ಸಮರ್ಥವಾಗಿ ಎದುರಿಸುವ ಹಾಗೂ ರಾಜ್ಯದ ಜನತೆ ಎದುರಿಸುತ್ತಿರುವ  ನಿತ್ಯ ಬದುಕಿನ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಒಂದು ಪರ್ಯಾಯ ರಾಜಕೀಯ ವೇದಿಕೆ ಇಂದು ಅತ್ಯವಶ್ಯವಾಗಿದೆ. ಈ ರಾಜಕೀಯ ಪರ್ಯಾಯಕ್ಕೆ ಒಂದು ಸೈದ್ಧಾಂತಿಕ ತಳಹದಿಯೂ ಮುಖ್ಯವಾಗುತ್ತದೆ. ಈ ಪರ್ಯಾಯದ ಪ್ರಯತ್ನಗಳಿಗೆ ನಾಯಕತ್ವ ಒದಗಿಸಲು ಅಸಮರ್ಥವಾಗಿರುವ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು, ಕನಿಷ್ಟ ಪಕ್ಷ ಇದಕ್ಕೆ ಪೂರಕವಾದ ಕಾರ್ಯಸೂಚಿಗಳನ್ನು ಹೊಂದಿದ್ದರೆ, ಹಿಂದುತ್ವ ಕಾರ್ಯಸೂಚಿಯನ್ನು ಮತ್ತು ಕಾರ್ಪೋರೇಟ್ ಆರ್ಥಿಕತೆಯನ್ನು ಹಿಮ್ಮೆಟ್ಟಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕೊಂಚ ಪ್ರಬುದ್ಧತೆಯಿಂದ ಯೋಚಿಸೋಣವೇ ?

Tags: BJPCongress PartyCovid 19JDSLingayat Communityಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಇಂಧನ ಬೆಲೆ ಏರಿಕೆಯ ಹಿಂದೆ ತಾಲಿಬಾನ್ ಕೈವಾಡವಿದೆಯೇ? ಕರ್ನಾಟಕ BJP ಶಾಸಕರ ಹೇಳಿಕೆಯ ಕುರಿತು Fact Check

Next Post

ಸಿಎಂ ಬಸವರಾಜ್ ಬೊಮ್ಮಾಯಿ ಟಾರ್ಗೆಟ್; ಅಧಿವೇಶನದಲ್ಲಿ ಜಾತಿಗಣತಿ ಗುರಾಣಿ ಪ್ರಯೋಗಕ್ಕೆ ಮುಂದಾದ ಸಿದ್ದರಾಮಯ್ಯ

Related Posts

ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?
Top Story

ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

by ಪ್ರತಿಧ್ವನಿ
April 13, 2026
0

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಉಪಚುನಾವಣೆಯ ಬಳಿಕ ಇದೀಗ ಮತ್ತೆ ಸಂಪುಟ ವಿಸ್ತರಣೆಯ ಕೂಗು ಜೋರಾಗಿದೆ. ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ರಂಗ ಪ್ರವೇಶ ಮಾಡಿದ...

Read moreDetails
ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

April 13, 2026
ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ

ಬೇಸಿಗೆಯಲ್ಲಿ ಸಂಚಾರ ಪೊಲೀಸರಿಗೆ ಸೌಲಭ್ಯ ಒದಗಿಸಲು ಡಿಜಿಪಿಗೆ ಮನವಿ

April 13, 2026
ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

April 13, 2026
ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

April 12, 2026
Next Post
ಸಿಎಂ ಬಸವರಾಜ್ ಬೊಮ್ಮಾಯಿ ಟಾರ್ಗೆಟ್; ಅಧಿವೇಶನದಲ್ಲಿ ಜಾತಿಗಣತಿ ಗುರಾಣಿ ಪ್ರಯೋಗಕ್ಕೆ ಮುಂದಾದ ಸಿದ್ದರಾಮಯ್ಯ

ಸಿಎಂ ಬಸವರಾಜ್ ಬೊಮ್ಮಾಯಿ ಟಾರ್ಗೆಟ್; ಅಧಿವೇಶನದಲ್ಲಿ ಜಾತಿಗಣತಿ ಗುರಾಣಿ ಪ್ರಯೋಗಕ್ಕೆ ಮುಂದಾದ ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada