
ಚಾಮರಾಜನಗರ: ಕೊಟ್ಟ ಮಾತಿನಂತೆ ನಡೆಯುವ ಸರ್ಕಾರ ನಮ್ಮದು ಎಂದು ಸಿಎಂ ಸಿದ್ದರಾಮಯ್ಯ ಪದೇ ಪದೇ ಹೇಳುತ್ತಲೇ ಇರುತ್ತಾರೆ. ಆದರೆ ಕೊಟ್ಟ ಮಾತಿಗೆ ತಪ್ಪಿದ ಸರ್ಕಾರ ಎಂದು ಜನಾಕ್ರೋಶ ವ್ಯಕ್ತವಾಗಿದೆ. ಕೊರೊನಾ ಸಮಯದಲ್ಲಿ ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದ್ದ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದೀಗ ಸರ್ಕಾರ ಮರೆತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಚಾಮರಾಜನಗರದಲ್ಲಿ ಸಂತ್ರಸ್ತರೊಂದಿಗೆ ಎಸ್‌ಡಿಪಿಐ ಪ್ರತಿಭಟನೆ ಮಾಡಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಲಾಗಿದೆ. ಜಿಲ್ಲಾಡಳಿತ ಭವನದ ಮುಂದೆ ಧರಣಿ ಮಾಡಿದ್ದು. 2021 ರ ಮೇ ತಿಂಗಳಲ್ಲಿ ಆಕ್ಸಿಜನ್ ಸಿಗದೆ ದುರ್ಘಟನೆ ನಡೆದು ಜಿಲ್ಲಾಸ್ಪತ್ರೆಯಲ್ಲಿ 37 ಮಂದಿ ಮೃತಪಟ್ಟಿದ್ದರು. ಅಧಿಕಾರಕ್ಕೆ ಬಂದರೆ ಸಂತ್ರಸ್ತರಿಗೆ ಸರ್ಕಾರ ಉದ್ಯೋಗದ ಭರವಸೆ ನೀಡಿತ್ತು ಕಾಂಗ್ರೆಸ್.
ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಜೊತೆಗೆ ಸಂವಾದ ಏರ್ಪಡಿಸಲಾಗಿತ್ತು. ಆ ವೇಲೆಯಲ್ಲಿ ರಾಹುಲ್ ಗಾಂಧಿ ಎದುರಲ್ಲೂ ಭರವಸೆ ಬಂದಿತ್ತು. ಆದರೆ ಸರ್ಕಾರ ಬಂದು ಒಂದೂವರೆ ವರ್ಷವಾದರೂ ಕಾಂಗ್ರೆಸ್ ಭರವಸೆ ಈಡೇರಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ಭರವಸೆ ಈಡೇರಿಸಬೇಕು ಎಂದು ಹೋರಾಟಗಾರರು ಆಗ್ರಹ ಮಾಡಿದ್ದಾರೆ. ಜೊತೆಗೆ ಆ ದುರ್ಘಟನೆಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ನಟ ಚೇತನ್ ಅಹಿಂಸ ಸೇರಿದಂತೆ ಮೊದಲಾದವರು ಭಾಗಿಯಾಗಿದ್ದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಭರವಸೆ ನೀಡೋದ್ರಲ್ಲಿ ಎತ್ತಿದ ಕೈ ಎಂದಿರುವ ನಟ ಚೇತನ್ ಅಹಿಂಸ, ಕೇವಲ ಅಧಿಕಾರಕ್ಕೆ ಬರಲು ಸುಳ್ಳು ಭರವಸೆ ನೀಡಲಾಗಿತ್ತು ಎಂದು ವಾಗ್ದಾಳಿ ಮಾಡಿದ್ದಾರೆ. ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡಲಿಲ್ಲ, ಜಾತಿಗಣತಿ ವರದಿ ಬಿಡುಗಡೆ ಮಾಡಲಿಲ್ಲ. ರೈತ ವಿರೋಧಿ ಕಾನೂನು ತೆಗೆಯಲಿಲ್ಲ. ಯಾವುದಕ್ಕೂ ನ್ಯಾಯ ಸಿಗುತ್ತಿಲ್ಲ, ಯಾರು ಹೇಳೋರಿಲ್ಲ, ಕೇಳೋರಿಲ್ಲ ಎಂದಿದ್ದಾರೆ.

ಕೋಮುವಾದ ಅಂತ ವಿರೋಧಿಸಿ ಅಧಿಕಾರಕ್ಕೆ ಬಂದ್ರು. ಕರ್ನಾಟಕಕ್ಕೆ ಪರ್ಯಾಯ ಬೇಕಿದೆ, ಜನರ ಆಕ್ರೋಶ ಹೆಚ್ಚಾಗುತ್ತಿದೆ. ನಮಗೆ ಅಧಿಕಾರದ ಬಗ್ಗೆ ಕಾಳಜಿ ಇರೋ ಸರ್ಕಾರ ಬೇಕಿಲ್ಲ . ಜನರ ಬಗ್ಗೆ ಕಾಳಜಿ ಇರೋ ಸರ್ಕಾರ ಬೇಕಿದೆ ಎಂದಿದ್ದಾರೆ ನಟ ಚೇತನ್ ಅಹಿಂಸ.