ಬೆಂಗಳೂರು(Bengaluru): ಓವರ್ ಟೇಕ್ ಮಾಡುವಾಗ ದಾರಿ ಬಿಡಲಿಲ್ ಎಂಬ ಕಾರಣಕ್ಕೆ ಬೈಕ್ ಸವಾರನೊಬ್ಬ ಕಾರಿನ ಮೇಲೆ ದಾಳಿ ನಡೆಸಿರುವ ಘಟನೆಯೊಂದು ನಡೆದಿದೆ.
ದಂಪತಿ ಮತ್ತು ಅವರ ಮೂರು ವರ್ಷದ ಮಗಳು ತೆರಳುತ್ತಿದ್ದ ಕಾರಿನ ಮೇಲೆ ಬೈಕ್ ಸವಾರ ದಾಳಿ ನಡೆಸಿದ್ದಾನೆ. ಈ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಓವರ್ ಟೇಕ್ (Over Take) ಗೆ ಜಾಗ ಬಿಡಲಿಲ್ಲ ಎಂದು ಏಕಾಏಕಿ ದಾಳಿ ನಡೆಸಿದ್ದಾನೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ(Police Station) ಪ್ರಕರಣ ದಾಖಲಾಗಿದೆ.
ಕೇರಳ(Kerala) ಮೂಲದ ಐಟಿ ವೃತ್ತಿಪರ ಅಖಿಲ್ ಸಾಬು ಎಂಬುವವರು ತಮ್ಮ ಪತ್ನಿ ಹಾಗೂ ಮೂರು ವರ್ಷದ ಮಗಳ ಜೊತೆ ಸರ್ಜಾಪುರ ರಸ್ತೆಯಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ಚಾಲಕ ಕಾರಿನ ಗ್ಲಾಸ್ ಒಡೆದು ಹಾಕಿದ್ದು ಕಾರಿನೊಳಗಿದ್ದ ಮಗಳಿಗೆ ಗಾಯಗಳಾಗಿವೆ ಎಂದು ಅಖಿಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಸ್ಥಳೀಯ ನಿವಾಸಿ ಜಗದೀಶ್ ಎಂದು ಗುರುತಿಸಲಾಗಿದೆ.
ಈ ದೃಶ್ಯಗಳು ಸಿಸಿಟಿವಿಯಲ್ಲಿ(CCTV) ಸೆರೆಯಾಗಿವೆ. ಕಾರಿನ ಹಿಂಬದಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಜಗದೀಶ್ ಓವರ್ ಟೇಕ್ ಮಾಡಲು ಕಾರು ಅಡ್ಡ ಬರುತ್ತಿದೆ ಎಂದು ಹೇಳಿ ಕಾರನ್ನು ಅಡ್ಡಗಟ್ಟಿ ತನ್ನ ಹೆಲ್ಮೆಟ್ನಿಂದ ಕಾರಿನ ಗಾಜಿಗೆ ಒಡೆದಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರೂ ಬಡಿದಾಡಿಕೊಂಡಿದ್ದಾರೆ. ಪರಿಣಾಮ ಕಾರು ಚಾಲಕನ ಕಣ್ಣು, ಮೂಗು, ಕೆನ್ನೆಗೆ ಗಾಯಗಳಾಗಿವೆ. 3 ವರ್ಷದ ಮಗುವಿಗೆ ಕೈಗೆ ಗಾಯವಾಗಿವೆ.