
ಚಿಕ್ಕಮಗಳೂರ:ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನಿಗೆ ಖಾಸಗಿ ಕ್ಲಿನಿಕ್ ವೈದ್ಯ ನೀಡಿದ ಇಂಜೆಕ್ಷನ್ನಿಂದ ಬಾಲಕ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಸೋನೇಶ್ (7) ಮೃತ ಬಾಲಕ. ಜಿಲ್ಲೆಯ ಅಜ್ಜಂಪುರ ಸಮೀಪದ ಕೆಂಚಾಪುರ ಗ್ರಾಮದ ಅಶೋಕ್ ಅವರ ಮಗ ಸೋನೇಶ್ ಕಳೆದ ನಾಲ್ಕು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ.

ಹೀಗಾಗಿ ಪೋಷಕರು ಸೋನೇಶ್ನನ್ನು ಅಜ್ಜಂಪುರ ಪಟ್ಟಣದ ಖಾಸಗಿ ಕ್ಲಿನಿಕ್ ವೈದ್ಯ ವರುಣ್ ಬಳಿ ಸೆಪ್ಟೆಂಬರ್ 24 ರಂದು ಚಿಕಿತ್ಸೆಗಾಗಿ ಕರೆದೊಯ್ದಿದ್ದರು.
ವೈದ್ಯ ವರುಣ್, ಬಾಲಕ ಸೋನೇಶ್ ಅವರ ಸೊಂಟಕ್ಕೆ ಇಂಜೆಕ್ಷನ್ ಮಾಡಿದ್ದಾರೆ. ಇದೇ ಇಂಜೆಕ್ಷನ್ ಓವರ್ ಡೋಸ್ ಆಗಿ ಸೋನೇಶ್ನ ಸೊಂಟದ ಭಾಗದಲ್ಲಿ ಬೊಬ್ಬೆಗಳು ಕಾಣಿಸಿಕೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸೋನೇಶ್ ಮೃತಪಟ್ಟಿದ್ದಾರೆ. ಶವ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಸರ್ಕಾರಿ ಆಸ್ಪತ್ರೆಗೆ ಸೋನೇಶ್ನ ಮೃತದೇಹ ರವಾನೆ ಮಾಡಲಾಗಿದೆ. ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಡಾ ವರುಣ್ ವಿರುದ್ಧ ಪ್ರಕರಣ ದಾಖಲಾಗಿದೆ.
BAMS ವ್ಯಾಸಂಗ ಮಾಡಿರುವ ವರುಣ್ ಮಕ್ಕಳಿಗೆ ಇಂಜೆಕ್ಷನ್ ಮಾಡುವಂತಿಲ್ಲ ಎಂಬ ನಿಯಮವಿದ್ದರೂ ಇಂಜೆಕ್ಷನ್ ನೀಡಿರುವುದಕ್ಕೆ ಅಜ್ಜಂಪುರ ತಾಲೂಕಿನಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.