ಪ್ರತಿ ಹುದ್ದೆಗೂ ರೇಟ್ ಫಿಕ್ಸ್ ಮಾಡಿರುವ ರಾಜ್ಯ ಸರ್ಕಾರವು ‘ಉದ್ಯೋಗ ವ್ಯಾಪಾರೀಕಣʼವನ್ನೇ ‘ಅಧಿಕೃತ ಕಸುಬುʼ ಮಾಡಿಕೊಂಡಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಹೌದು, ರಾಜುದಲ್ಲಿ PSI ಅಕ್ರಮ ನೇಮಕಾತಿ ಹಗರಣದ ಕುರಿತು ದಾಖಲೆ ಕೇಳಿದ ಬಿಜೆಪಿಗೆ ಖಾಸಗಿ ಪತ್ರಿಕೆಯ ಸುದ್ದಿಯನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ಸರ್ಕಾರಿ ಕೆಲಸದ ರೇಟ್ ಕಾರ್ಡ್ʼ ಬಗ್ಗೆ ನಾನು ಪದೆಪದೇ ಹೇಳುತ್ತಲೇ ಇದ್ದೆ. ಕೆಪಿಎಸ್‍ಸಿ ಹುದ್ದೆಗಳ ‘ಮುಕ್ತ ಮಾರಾಟʼದ ಬಗ್ಗೆಯೂ ಹೇಳಿದ್ದೆ. ಆದರೆ, ಸರ್ಕಾರದ್ದು ಜಾಣನಿದ್ದೆ’ ಎಂದು ಟೀಕಿಸಿದ್ದಾರೆ.
‘ಸರ್ಕಾರಿ ನೇಮಕದ ಅಕ್ರಮವನ್ನು ಮಾಧ್ಯಮಗಳು ಕಣ್ಣಿಗೆ ಕಟ್ಟುವಂತೆ ವರದಿ ಮಾಡಿವೆ. ರಾಜ್ಯ ಸರ್ಕಾರಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕೆ? ಸರ್ಕಾರಿ ಕೆಲಸಗಳ ‘ಕಾಸ್ʼಗೀಕರಣ ಎಗ್ಗಿಲ್ಲದೆ ನಡೆದಿದೆ ಎನ್ನುವುದು ಇದರಿಂದ ವೇದ್ಯವಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ, ಸ್ವಜನ ಪಕ್ಷಪಾತ, ಕಳ್ಳಮಾರ್ಗ, ಭ್ರಷ್ಟಾಚಾರಗಳು ತಾಂಡವವಾಡುತ್ತಿವೆ. ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಪೊಲೀಸ್ ನೇಮಕಾತಿ ಮಂಡಳಿಗಳು ಲಂಚಗುಳಿತನದ ಕೂಪಗಳಾಗಿವೆ’ ಅಂತಾ ಕಿಡಿಕಾರಿದ್ದಾರೆ.
‘ನಾನು 2 ಬಾರಿ ಸಿಎಂ ಆಗಿದ್ದಾಗ ಕೆಪಿಎಸ್‍ಸಿ ಅಕ್ರಮಗಳಿಗೆ ಕಡಿವಾಣ ಹಾಕಿದ್ದೆ. ಕೆಪಿಎಸ್‍ಸಿಯನ್ನು ತೊಳೆಯುತ್ತೇನೆಂದ ‘ಸಿದ್ದಹಸ್ತʼರೊಬ್ಬರು ಬಿಡಿಎಯನ್ನು ಗುಡಿಸಿಗುಂಡಾಂತರ ಮಾಡಿದ್ದ, ‘ರೀಡೂ ಋಣʼದ ‘ತಿಮಿಂಗಿಲʼವನ್ನೇ ತಂದು ಕೆಪಿಎಸ್‍ಸಿಯಲ್ಲಿ ಕೂರಿಸಿದ್ದರು. ಆದರೆ, ನಾನು ಭಷ್ಟರು ಉದ್ಯೋಗಸೌಧದ ಮೆಟ್ಟಿಲು ಹತ್ತಲು ಬಿಟ್ಟಿರಲಿಲ್ಲ’ವೆಂದು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಎಚ್‍ಡಿಕೆ ಟಾಂಗ್ ನೀಡಿದ್ದಾರೆ.
‘2018ರಲ್ಲಿ ನಾನು ಸಿಎಂ ಆಗಿದ್ದಾಗ ‘ಸಿದ್ದಹಸ್ತರುʼ ತಮಗೆ ಬೇಕಾದವರ ಹೆಸರನ್ನು ಶಿಫಾರಸು ಮಾಡಿ, ಕೆಪಿಎಸ್ಸಿಯಲ್ಲಿ ಪ್ರತಿಷ್ಠಾಪಿಸಿ ಎಂದು ಒತ್ತಡ ಹೇರಿದ್ದರು. 2006ರಲ್ಲೂ ಕೆಲ ಶಾಸಕರು ತಮ್ಮ ಸಮುದಾಯದವರನ್ನು ಕರೆತಂದು ಕೆಪಿಎಸ್ಸಿ ಸದಸ್ಯರನ್ನಾಗಿ ಮಾಡಿ ಎಂದು ದುಂಬಾಲು ಬಿದ್ದಿದ್ದರು. ಅವರಿಗೆ ಬುದ್ಧಿ ಹೇಳಿ ವಾಪಸ್ ಕಳಿಸಿದ್ದೆ. ನನ್ನ ಅಧಿಕಾರಾವಧಿಯಲ್ಲಿ ಒಮ್ಮೆಯೂ ಯಾವುದೇ ಇಲಾಖೆಯಲ್ಲಿ ನೇಮಕದ ಅಕ್ರಮ ನಡೆದಿಲ್ಲ. ಸಚ್ಛಾರಿತ್ರ್ಯ, ಅರ್ಹತೆ ಇದ್ದವರನ್ನೇ ಕೆಪಿಎಸ್‍ಸಿಗೆ ನೇಮಕ ಮಾಡಿದ್ದೆ. ಅಂಥ ನೇಮಕಾತಿ ಅಥವಾ ಉದ್ಯೋಗ ನೀಡಿಕೆಯಲ್ಲಿ ಸಣ್ಣ ಲೋಪವೂ ಆಗಿಲ್ಲ. ಒಂದು ವೇಳೆ ಲೋಪವಾಗಿದ್ದರೆ ಯಾವುದೇ ತನಿಖೆಗೂ ನಾನು ಸಿದ್ಧ’ವೆಂದು ಎಚ್‍ಡಿಕೆ ಸವಾಲು ಹಾಕಿದ್ದಾರೆ.
‘ನೇಮಕಾತಿ ಸಂಸ್ಥೆಗಳು ಹುಟ್ಟಿದಾಗಿನಿಂದಲೂ ರಾಜಕೀಯ ಕಾರಣಗಳಿಗೆ ಕೆಲವರು ಉದ್ಯೋಗ ಗಿಟ್ಟಿಸುತ್ತಿದ್ದರು. ‘ಸಾಧ್ಯವಾದರೆ ಸಹಾಯ ಮಾಡಿʼ ಎಂದು ಶಾಸಕರೋ, ಮತ್ತ್ಯಾರೋ ಮನವಿ ಮಾಡುತ್ತಿದ್ದರು. ಅಂಥ ಅಭ್ಯರ್ಥಿಗಳು ಅರ್ಹ ಅಂಕ ಪಡೆದಿದ್ದರೆ ಮಾತ್ರ ಆಯ್ಕೆ ಆಗುತ್ತಿದ್ದರು. ಹಿಂದೆ ಶಿಫಾರಸು ಅಭ್ಯರ್ಥಿಗಳಿಗೆ ಅರ್ಹತೆ ಇಲ್ಲದಿದ್ದರೆ ಸಿಎಂ ಹೇಳಿದರೂ ಕೆಲಸ ಆಗುತ್ತಿರಲಿಲ್ಲ. ಯಾವಾಗ ಹಣ, ಜಾತಿಗಳ ಪ್ರಭಾವ ಹೆಚ್ಚಾಯಿತೋ ‘ಸರ್ಕಾರಿ ಕೆಲಸಗಳ ‘ಕಾಸ್ʼಗೀಕರಣʼವೂ ಶುರುವಾಯಿತು’ ಎಂದು ಎಚ್‍ಡಿಕೆ ಟ್ವೀಟ್ ಮಾಡಿದ್ದಾರೆ.
‘ಪಿಎಸ್ಐ ಅಕ್ರಮದ ಬಗ್ಗೆ ಕಹಿಸತ್ಯಗಳನ್ನು ಹೇಳಿದ ನನ್ನನ್ನೇ ದಾಖಲೆ ಕೊಡಿ ಎನ್ನುವ ಸರ್ಕಾರಕ್ಕೆ ‘ಸಾಚಾತನʼದ ಕೊರತೆ ಇದೆ. ಹಿಟ್ ಆಂಡ್ ರನ್ ಎನ್ನುವ ಮೂಲಕ ಕೆಲವರು ಅಕ್ರಮದ ಬಲೆಯಿಂದ ಅಕ್ಕಪಕ್ಕ ಸರಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಎಚ್‍ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮದಲ್ಲಿ ಪ್ರಭಾವಿಗಳ ಪಾತ್ರ ಇದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಆರೋಪ ಮಾಡುವವರು ಆಧಾರವಿಲ್ಲದೇ ಮಾತನಾಡಬಾರದು. ಯಾರು ಏನು ಬೇಕಾದರೂ ಹೇಳಿಕೆ ಕೊಡಲಿ. ಆದರೆ, ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ನೀಡಲಿ’ ಎಂದಿದ್ದರು. ಈ ಕುರಿತು ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡಿ ಕಿಡಿ ಕಾರಿದ್ಧಾರೆ.